Friday, 7th May 2021

ಗೌಡಾ, ಪುರಸ್ಕಾರ ಮತ್ತು ನಾಡೋಜಗಳು

ಅಭಿಮತ

ಸಿದ್ದು ಯಾಪಲಪರವಿ

ರಾಜ್ಯ ರಾಜಕಾರಣದ ಸಿ.ಡಿ. ಘಟನೆಯ ಬೆನ್ನ ವಿಶ್ವವಿದ್ಯಾಲಯಗಳ ಅನಾಹುತಗಳು ಮುನ್ನೆಲೆಗೆ ಬಂದಿವೆ.

ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ ಸೇವೆಗಳಿಗೆ ಮೀಸಲಾಗಿದ್ದ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಈಗ ಉಳ್ಳವರ ಪಾಲಾಗುತ್ತಿವೆ. ಒಂದು ಕಾಲಕ್ಕೆ ವಿಶ್ವವಿದ್ಯಾಲಯದ ಡಾಕ್ಟರೇಟ್ ಪಡೆದವರನ್ನು ನೋಡಿದರೆ ಪುಳಕವಾಗುತ್ತಿತ್ತು. ಕುವೆಂಪು ಬೇಂದ್ರೆಯವರಿಗಿಂತ ಮೊದಲು ಗೌರವ ಡಾಕ್ಟರೇಟ್(ಗೌಡಾ) ಗೌರವಕ್ಕೆ ಪಾತ್ರರಾಗಿದ್ದರು. ಆಗ ಕೆಲವರು ಬೇಂದ್ರೆ ಅವರನ್ನು ಕೆಣಕಿದಾಗ ‘ನನ್ನ ಹೆಸರಿನ್ಯಾಗ ‘ಡಿಆರ್’ ಐತಿ ಹೋಗೋ’ ಅಂದಿದ್ದರು. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಎಂಬ ಹೆಸರಿನ ಇನ್ಷಿಯಲ್ ಡಿ.ಆರ್. ಇರುವುದನ್ನು ಬೇಂದ್ರೆ ನೋವಿನಿಂದ ಹೇಳಿಕೊಂಡಿದ್ದರು.

ಆಗಲೂ ಈ ತಾರತಮ್ಯ ಇತ್ತಾದರೂ ಈಗಿನಷ್ಟು ಕೆಟ್ಟದಾಗಿರಲಿಲ್ಲ. ಕಳೆದ ಮೂರು ದಶಕಗಳ ಹಿಂದೆ ಗುಲಬರ್ಗಾ ವಿಶ್ವವಿದ್ಯಾ ಲಯ ಅತ್ಯಂತ ಸೂಕ್ತ ಮಠಾಧೀಶರೊಬ್ಬರಿಗೆ ಗೌಡಾ ನೀಡಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿತ್ತು. ಆದರೆ ನಂತರ ನಾಡಿನ
ಬಹುಪಾಲು ಮಠಾಧೀಶರು ಸಾಮರ್ಥ್ಯ ಇರದಿದ್ದರೂ ವಿಶ್ವವಿದ್ಯಾಲಯಗಳ ಮೇಲೆ ಒತ್ತಡ ಹೇರಿ ಗೌಡಾ ಖರೀದಿಸಿಕೊಂಡರು.

ಕನ್ನಡದ ಮೇರು ನಟ ರಾಜಕುಮಾರ ಅವರಿಗೆ ನೀಡಿದ ಗೌಡಾ ಕೂಡ ಅಷ್ಟೇ ಅರ್ಥಪೂರ್ಣ ಎನಿಸಿತ್ತು. ಮುಗ್ಧ ಮನಸಿನ ಡಾ.ರಾಜ್ ‘ಅನಕ್ಷರಸ್ಥನಿಗೆ ಡಾಕ್ಟರ್ ಎನ್ನುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ’ ಎಂದು ಆನಂದ ಭಾಷ್ಪ ಸುರಿಸಿದ್ದರು. ಅನೇಕ ಕವಿಗಳಿಗೆ ನೀಡುವ ಪ್ರಶಸ್ತಿ ಮೊತ್ತಗಳು ಮತ್ತು ಉಡುಗೊರೆಗಳು ಅವರ ಕಷ್ಟಗಳನ್ನು ದೂರ ಮಾಡುತ್ತಿದ್ದವು. ಕೆ.ಎಸ್. ನರಸಿಂಹಸ್ವಾಮಿ ಮತ್ತು ಬೇಂದ್ರೆ ಅವರ ಬದುಕಿನ ಕಷ್ಟ ಕೋಟಲೆಗಳ ನೆನೆದಾಗ ಮನಸು ಆರ್ದ್ರವಾಗುತ್ತದೆ.

ಕಳೆದ ಎರಡು ದಶಕಗಳಿಂದ ನಮ್ಮ ವಿಶ್ವವಿದ್ಯಾಲಯಗಳು ತಮ್ಮ ಘನತೆ ಕಳೆದುಕೊಳ್ಳಲು ಹತ್ತಾರು ಕಾರಣಗಳಿವೆ. ವಾಮ ಮಾರ್ಗದಿಂದ ಕುಲಪತಿಗಳ ನೇಮಕ, ರಾಜಕೀಯ ಹಿನ್ನೆಲೆ ಉಳ್ಳವರಿಗೆ ಸಿಂಡಿಕೇಟ್ ಸ್ಥಾನ ವಿಶ್ವವಿದ್ಯಾನಿಲಯಗಳ ಘನತೆಯನ್ನು ನಾಶ ಮಾಡಿದವು. ಅಂದು ಸ್ವತಃ ಶಿಕ್ಷಣ ಮಂತ್ರಿಗಳು ವಿಶ್ವವಿದ್ಯಾಲಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ.

ಸ್ವಾಯತ್ತ ಎಂಬ ಪದಕ್ಕೆ ಅಷ್ಟೇ ದೊಡ್ಡ ಸ್ವಾಯತ್ತತೆ ಇತ್ತು. ಅದನ್ನು ಕುಲಪತಿಗಳು ಮತ್ತು ರಾಜಕಾರಣಿಗಳು ಅರ್ಥ ಮಾಡಿ ಕೊಂಡಿದ್ದರು. ಡಾ.ಡಿ.ಎಂ.ನಂಜುಂಡಪ್ಪ ಅವರ ಘನತೆ, ಶಿಸ್ತು ಮತ್ತು ಪ್ರಾಮಾಣಿಕತೆ ನೆನಪಾದರೆ ಹೆಮ್ಮೆ ಎನಿಸುತ್ತದೆ. ಡಾ.ಎಂ.ಎಂ. ಕಲಬುರ್ಗಿಯವರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟ ದಲ್ಲಿತ್ತು.

ಆದ್ದರಿಂದ ಸೆನೆಟ್, ಸಿಂಡಿಕೇಟ್ ಸಭೆಗಳನ್ನು ಪದೇ ಪದೆ ನಡೆಸದೆ ಘಟನೋತ್ತರ ಅನುಮೋದನೆ ಪಡೆಯುತ್ತಿದ್ದರು. ಅದನ್ನು ಸದಸ್ಯರು ಕೂಡ ಅಷ್ಟೇ ಗೌರವದಿಂದ ಬೆಂಬಲಿಸುತ್ತಿದ್ದರು. ವಿಶ್ವವಿದ್ಯಾಲಯದ ಖರ್ಚಿನಲ್ಲಿ ಸದಸ್ಯರು ಮೋಜು ಮಸ್ತಿ ಮಾಡ ಬಾರದು ಎಂಬ ಸಣ್ಣ ಎಚ್ಚರಿಕೆ ನೀಡಿದ್ದನ್ನು ಎಂದಿಗೂ ಮರೆಯಲಾಗುವುದಿಲ್ಲ. ಇಂಥ ಅನೇಕ ಮಹನೀಯರು ಆಗ ಕುಲಪತಿ  ಗಳಾಗಿ ವಿಶ್ವವಿದ್ಯಾಲಯಗಳ ಘನತೆ ಗೌರವಗಳನ್ನು ಕಾಪಾಡಲು ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದರು.

ಜಾತಿ, ಧರ್ಮ, ಹಣ, ಅಧಿಕಾರ ಮತ್ತು ಕೋಟ್ಯಂತರ ವ್ಯವಹಾರ ನೋಡಿಕೊಳ್ಳುವುದು ಇಂದಿನ ಕುಲಪತಿಗಳ ಕೆಲಸವಾಗಿದೆ. ಶೈಕ್ಷಣಿಕ ಗುಣಮಟ್ಟದ ಮಾತೇ ಇಲ್ಲ. ಆವರಣದ ತುಂಬ ಕಟ್ಟಡಗಳ ಕಟ್ಟುವುದೇ ಅಭಿವೃದ್ಧಿ ಎಂದು ಭಾವಿಸಿದಂತಾಗಿದೆ.
ಪಿಎಚ್‌ಡಿ ನೆಪದಲ್ಲಿ ನಡೆಯುವ ಲೈಂಗಿಕ ಹಗರಣಗಳ ಮುಚ್ಚಿ ಹಾಕುವ ಜವಾಬ್ದಾರಿ ಕುಲಪತಿಗಳ ಹೆಗಲೇರಿರುವುದು ಅಷ್ಟೇ ವಿಷಾದನೀಯ. ಹಣ ಬಿಡುಗಡೆಯ ನೆಪದಲ್ಲಿ ರಾಜಕಾರಣಿಗಳನ್ನು ಕಾಣುವ ಕೆಟ್ಟ ಸಂಪ್ರದಾಯ ಆರಂಭವಾದ ಮೇಲೆ ರಾಜಕಾರಣಿಗಳು ವಿಶ್ವವಿದ್ಯಾಲಯದ ಅಂಗಳ ಪ್ರವೇಶ ಮಾಡಲಾರಂಭಿಸಿದರು.

ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಪಕ್ಷದ ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸಿದ ಮೇಲೆ ಗುತ್ತಿಗೆ ವ್ಯವಹಾರಗಳು, ಪರ್ಸೆಂಟೇಜ್ ಭಾಷೆ ಚಾಲ್ತಿಗೆ ಬಂದಿತು. ಕುಲಪತಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕಾರಣಿಗಳ ಜೊತೆಗೆ ಅಸಹ್ಯವಾಗಿ ಜಗಳಾಡುವ ವಾತಾ ವರಣ ಸೃಷ್ಟಿಯಾಯಿತು. ಜೈಲಿಗೆ ಕಳಿಸುವ ಮಟ್ಟದ ದ್ವೇಷಾಸೂಯೆ ಪ್ರಾರಂಭವಾದದ್ದು ಶೈಕ್ಷಣಿಕ ದುರಂತ.

Leave a Reply

Your email address will not be published. Required fields are marked *