Friday, 7th May 2021

ಹೋಟೆಲ್‌ ಉದ್ಯಮಕ್ಕೆ ಮತ್ತೆ ಪೆಟ್ಟು

ರಾತ್ರಿ ಕರ್ಫ್ಯೂನಿಂದ ಮತ್ತೊಮ್ಮೆ ಸಂಕಷ್ಟ

ರಾತ್ರಿ 11ರವರೆಗೆ ಅವಕಾಶ ನೀಡಲು ಮನವಿ

ವಿಶೇಷ ವರದಿ: ಅಪರ್ಣಾ ಎ.ಎಸ್. ಬೆಂಗಳೂರು

ಕರೋನಾ ನಿಯಂತ್ರಣಕ್ಕೆ ರಾಜ್ಯ ಸರಕಾರ ರಾತ್ರಿ ಕರ್ಫ್ಯೂೂ ಜಾರಿಗೊಳಿಸಿದ್ದರೆ, ಈ ನಿರ್ಧಾರದಿಂದ ಹೋಟೆಲ್ ಮಾಲೀಕರು ಬೀದಿಗೆ ಬೀಳಲಿದ್ದಾರೆ ಎನ್ನುವ ಆತಂಕದ ಮಾತುಗಳು ಹೋಟೆಲ್ ವಲಯದಲ್ಲಿ ಕೇಳಿಬಂದಿದೆ.

ಈಗಾಗಲೇ ಕರೋನಾ ಮಹಾಮಾರಿಯಿಂದ ರಾಜಧಾನಿ ಬೆಂಗಳೂರಿನ ಶೇ.30ಕ್ಕೂ ಹೆಚ್ಚು ದರ್ಶಿನಿಗಳು ಮುಚ್ಚಿದ್ದವು. ಲಾಕ್‌ ಡೌನ್ ತೆರವಿನ ಬಳಿಕ ಹಂತಹಂತವಾಗಿ ಲಾಭದತ್ತ ವಾಲುತ್ತಿದ್ದ ಹೋಟೆಲ್ ಉದ್ಯಮಕ್ಕೆ ರಾತ್ರಿ ಕರ್ಫ್ಯೂ ಪುನಃ ಆತಂಕವನ್ನು ಸೃಷ್ಟಿಸಿದೆ.

ಈ ಮೊದಲೇ ಕರೋನಾದ ಹೊಡೆತದಿಂದ ತತ್ತರಿಸಿ ಹೋಗಿದ್ದ ಹೋಟೆಲ್ ಉದ್ಯಮ ಮತ್ತೆ ಜಿಗಿತುಕೊಳ್ಳಲು ಸಾಕಷ್ಟು ಸಮಯವೇ ಬೇಕಾಗಿತ್ತು. ಶೇ.50ರಷ್ಟು ಆದಾಯ ಗಳಿಸುತ್ತಿದೆ ಎನ್ನುವಾಗಲೇ ಮತ್ತೆ ಕರೋನಾ ಎರಡನೇ ಅಲೆಯಿಂದ ಮತ್ತೆ ಹೋಟೆಲ್, ರೆಸ್ಟೋರೆಂಟ್‌ಗಳು ತಮ್ಮ ಆದಾಯದಲ್ಲಿ ಕುಸಿತ ಕಾಣುವ ಭಯದಿಂದ ದಿನದೂಡುತ್ತಿದ್ದಾರೆ.

ಮೊದಲ ಬಾರಿಯ ಕರೋನಾ ಲಾಕ್‌ಡೌನ್ ವೇಳೆ ಉತ್ತರ ಪ್ರದೇದಿಂದ ಆಗಮಿಸಿದ್ದ ಕಾರ್ಮಿಕರು ವಾಪಸು ಹೋಗಿದ್ದರು. ಆದರೆ ಅವರಲ್ಲಿ ಶೇ.50ರಷ್ಟು ಮಂದಿ ವಾಪಸಾಗಿರಲಿಲ್ಲ. ಆದರೆ ಅನ್‌ಲಾಕ್ ಪ್ರಕ್ರಿಯೆ ಆರಂಭವಾದ ಬಳಿಕ ವಿವಿಧ ಜಿಲ್ಲೆಗಳಿಂದ ಕೆಲವರು ವಾಪಸಾಗಿದ್ದರು. ಆದರೆ ಇದೀಗ ರಾತ್ರಿ ಕರ್ಫ್ಯೂ ಹೇರಿರುವುದರಿಂದ, ಪುನಃ ಲಾಕ್ ಡೌನ್ ಗುಮ್ಮ ಸಾರ್ವಜನಿಕರಲ್ಲಿ ಹಾಗೂ ಕಾರ್ಮಿಕರು ಪುನಃ ತಮ್ಮೂರಿಗೆ ಹೋಗುವತ್ತ ಸಜ್ಜಾಗಿದ್ದಾರೆ. ಈ ರೀತಿ ಮಾಡಿದರೆ, ಕಾರ್ಮಿಕರ ಸಮಸ್ಯೆಯಾಗಿಯೂ ಕೆಲ
ಹೋಟೆಲ್ ಮುಚ್ಚುವ ಆತಂಕವನ್ನು ಕೆಲವರು ಹೊರಹಾಕಿದ್ದಾರೆ.

ಶೇ.60ರಷ್ಟು ಉದ್ಯಮ ನಷ್ಟ: ಈಗಾಗಲೇ ಸಾಂಕ್ರಾಮಿಕದ ಭಯದಿಂದಾಗಿ ಸಾಮಾಜಿಕ ಅಂತರ, ಮಾಸ್ಕ್‌ ಧಾರಣೆಯಿಂದಾಗಿ ಜನರು ಹೋಟೆಲ್ ಕಡೆಗೆ ಹೋಗುವುದನ್ನೇ ಕಡಿತಗೊಳಿಸುತ್ತಿದ್ದು, ಅನಿವಾರ್ಯ ಕಾರಣಗಳಿಗಾಗಿ ಮಾತ್ರ ಹೋಟೆಲ್ ಕಡೆ ತಲೆ ಹಾಕುತ್ತಿದ್ದು, ಉಳಿದಂತೆ ಮನೆ ಊಟವನ್ನೇ ನೆಚ್ಚಿಕೊಂಡವರು ಅಥವಾ ಆನ್‌ಲೈನ್ ಆರ್ಡರ್ ಗಳಿಗೆ ಜನರು ಮನಸ್ಸು ಮಾಡು ತ್ತಿದ್ದಾರೆ.

ಇದರಿಂದಾಗಿ ದಿನವೊಂದಕ್ಕೆ ಹೆಚ್ಚು ಎಂದರೆ 200 ಮಂದಿ ಕಾಲಿಟ್ಟರೇ ಹೆಚ್ಚು ಎನ್ನುವ ಪರಿಸ್ಥಿತಿ ಎದುರಾಗಿದ್ದು, ಹೋಟೆಲ್,
ರೆಸ್ಟೋರೆಂಟ್‌ಗಳು ಶೇ.60ರಷ್ಟು ಆದಾಯ ಕುಸಿತ ಕಂಡಿದೆ ಎಂಬುದು ಅನೇಕ ಹೋಟೆಲ್ ಉದ್ಯಮಿಗಳ ಅಳಲಾಗಿದೆ. ಕರೋನಾ ಸೋಂಕಿಗೂ ಮುಂಚೆ ಹೆಚ್ಚಿನೆಲ್ಲಾ ಮೀಟಿಂಗ್ ಗಳು, ಪಾರ್ಟಿಗಳು, ಬರ್ತ್‌ಡೇ ಸೆಲೆಬ್ರೆಷನ್‌ಗಳು ಹೋಟೆಲ್ ರೆಸ್ಟೋರೆಂಟ್‌ಗಳಲ್ಲೇ ನಡೆಯುತ್ತಿದ್ದು, ಈ ಸಾಂಕ್ರಾಮಿಕದಿಂದಾಗಿ ಸೋಂಕಿನ ನಿಯಂತ್ರಣಕ್ಕಾಗಿ ಈ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಬಿದ್ದಿದ್ದು, ಪ್ರಸ್ತುತ ಆದಾಯದಲ್ಲೇ ಇಳಿಕೆ ಕಂಡಿದೆ.

ಸರಕಾರಕ್ಕೂ ಆದಾಯ ಖೋತಾ
ಇನ್ನು ರಾಜ್ಯ ಸರಕಾರ ಈಗ ಹೇರಿರುವ ಕರೋನಾ ಕರ್ಫ್ಯೂದಿಂದ ಕೇವಲ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೇ, ಸರಕಾರಕ್ಕೆ ಆದಾಯದಲ್ಲಿಯೂ ಭಾರಿ ಇಳಿಕೆಯಾಗಲಿದೆ. ಪ್ರಮುಖವಾಗಿ ರಾತ್ರಿ 9 ಗಂಟೆಗೆ ಬಾರ್‌ಗಳನ್ನು ಮುಚ್ಚುವುದಕ್ಕೆ ಆದೇಶ ನೀಡಿದರೆ,
ಅನೇಕರು ಮನೆಯಲ್ಲಿಯೇ ಉಳಿಯಲಿದ್ದಾರೆ.

***

ಕೋವಿಡ್ ವೈರಸ್‌ನಿಂದ ಹೋಟೆಲ್ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಈಗಾಗಲೇ ಲಾಕ್‌ಡೌನ್‌ನಿಂದ ಶೇ.30ರಷ್ಟು ನೆಲ ಕಚ್ಚಿದ್ದ ಹೋಟೆಲ್‌ಗಳು ಈಗ ಲಾಭವನ್ನು ಕಾಣುತ್ತಿದ್ದವು. ಆದರೀಗ ಪುನಃ ರಾತ್ರಿ ಕರ್ಫ್ಯೂ ಎಂದರೆ, ಪುನಃ ನಷ್ಟವಾಗಲಿದೆ. ರಾಜ್ಯ ಸರಕಾರ ರಾತ್ರಿ ಲಾಕ್ ಡೌನ್ ಹೇರಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಬದಲು, ಹೊಟೇಲ್ ಉದ್ಯಮದ ಅಭಿವೃದ್ಧಿಗೆ ಪೂರಕ ಯೋಜನೆ ಕಲ್ಪಿಸಬೇಕು.
– ಪಿ.ಸಿ ರಾವ್, ಬೆಂಗಳೂರು ಹೋಟೆಲ್ ಉದ್ದಿಮೆದಾರರ ಸಂಘದ ಅಧ್ಯಕ್ಷ

Leave a Reply

Your email address will not be published. Required fields are marked *