Tuesday, 29th September 2020

ಈ ಮನೆ ಮುರಿಯುವ ಪರಿ, ಎಷ್ಟು ಸರಿ?

ದೇಶವಾಸಿ

ಕಿರಣ್‍ ಉಪಾಧ್ಯಾಯ ಬಹ್ರೈನ್

ಕಂಗನಾ ರಾಣಾವತ್ ಮತ್ತು ಶಿವಸೇನೆಯ ಯುದ್ಧ ತಾರಕಕ್ಕೇರಿದೆ ಎಂದು ತಿಳಿದರೆ ಅದು ತಪ್ಪು. ನನ್ನ ಪ್ರಕಾರ ಈ ಜಗಳ ಈಗಷ್ಟೇ
ಆರಂಭವಾಗಿದೆ. ಒಬ್ಬರು ಸ್ವಾಭಿಮಾನದ ಮೂಟೆ, ಇನ್ನೊಬ್ಬರು ಸ್ವಪ್ರತಿಷ್ಠೆೆಯ ಗುಡ್ಡೆ. ಬಗ್ಗುವ ಮಾತು ಇಬ್ಬರ ಜಾಯಮಾನ ದಲ್ಲೂ ಇಲ್ಲ. ಕೆಲವರಿಗೆ ವಿವಾದಾತ್ಮಕ ಎಂದೆನಿಸಿದರೂ ಕಳೆದ ಐದಾರು ವರ್ಷಗಳಿಂದ ತನ್ನ ನೇರ ನುಡಿಗಳಿಂದ ಸದ್ದು ಮಾಡು ತ್ತಿರುವ ಕಂಗನಾ ಒಂದು ಕಡೆ. ತಮ್ಮ ವಿರುದ್ಧ ಯಾರು ಏನೇ ಹೇಳಿಕೆ ನೀಡಿದರೂ, ಪ್ರತೀಕಾರ ತೀರಿಸಿಕೊಳ್ಳುವ ಶಿವಸೇನೆ ಇನ್ನೊೊಂದು ಕಡೆ.

ಸುಶಾಂತ್ ಸಿಂಗ್ ರಾಜಪೂತ್ ಸಾವಿನ ವಿಷಯದಲ್ಲಿ ಮಾತನಾಡಿದ ಕಂಗನಾ ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ವಿಷಯ ಹೇಳಿ ಸಾಕಷ್ಟು ಜನರ ನಿದ್ದೆ ಕೆಡಿಸಿದ್ದಳು. ಹಿಂದಿ ಚಿತ್ರರಂಗದ ಹೆಸರಾಂತ ವ್ಯಕ್ತಿಗಳು, ಪ್ರಭಾವಿ ರಾಜಕಾರಣಿಗಳ ಮಕ್ಕಳು ಇದರಲ್ಲಿ ಭಾಗಿಯಾಗಿರಬಹುದು, ಅದಕ್ಕಾಗಿಯೇ ಈ ಸಾವಿನ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಹೇಳಿಕೆ ನೀಡಿ ಸರಕಾರದ ವಕ್ರದೃಷ್ಟಿಗೆ ಗುರಿಯಾಗಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವಾಗ ಬಾಲಿವುಡ್‌ನ ಮಾದಕ ದ್ರವ್ಯದ ಕರಾಳ ಮಗ್ಗುಲು ಕಳಚಿಕೊಂಡಿತು. ಆಗ ಮತ್ತಿಷ್ಟು ಹೇಳಿಕೆ ನೀಡಿದ್ದಳು ಕಂಗನಾ. ಅದಕ್ಕೆ ಪ್ರತಿಕ್ರಿಯೆಯೆಂಬಂತೆ ಯಾರೋ ಮುಂಬೈನ ರಸ್ತೆಯಲ್ಲಿ ಮಲದ ಚಿತ್ರ ಬಿಡಿಸಿ ಕಂಗನಾ ಮತ್ತು ಅವಳ ಪರವಾಗಿರುವ ಕೆಲವರ ಹೆಸರು ಬರೆದರು. ಅದನ್ನು ಪ್ರಶ್ನಿಸಿ ಕಂಗನಾ ‘ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾ?’ ಎಂದು ಟ್ವೀಟ್ ಮಾಡಿದಳು.

ಇದು ಮಹಾರಾಷ್ಟ್ರಕ್ಕೆ ಕಂಗನಾ ಮಾಡಿದ ಅಪಮಾನ ಎಂದ ಶಿವಸೇನೆಯ ವಕ್ತಾರ ಸಂಜಯ ರಾವತ್ ಮಾಧ್ಯಮದವರ ಮುಂದೆ ಕಂಗನಾ ಕುರಿತು ಒಂದೆರಡು ಅಸಂಸ್ಕಾರಿ ಶಬ್ದಗಳನ್ನು ಬಳಸಿ ಮುಂಬೈಗೆ ಬರದಂತೆ ಧಮಕಿ ಹಾಕಿದ್ದು ಕಂಗನಾಳನ್ನಷ್ಟೇ ಅಲ್ಲ,
ಬಹಳಷ್ಟು ಭಾರತೀಯರ ಅದರಲ್ಲೂ ಮಹಿಳೆಯರನ್ನು ಕೆರಳಿಸಿತು. ಇದೆಲ್ಲ ನಡೆದದ್ದು ಸೆಪ್ಟೆೆಂಬರ್ ಮೊದಲ ವಾರದಲ್ಲಿ. ನಂತರ ಕಂಗನಾ ತಾನು ಸೆಪ್ಟೆೆಂಬರ್ ಒಂಬತ್ತನೆಯ ತಾರೀಖಿನಂದು ಮುಂಬೈಗೆ ಬರುವುದಾಗಿಯೂ, ಸಾಧ್ಯವಾದರೆ ತಡೆಯಿರಿ ಎಂದು ಸವಾಲು ಹಾಕಿದ್ದು, ಕೇಂದ್ರ ಸರಕಾರ ಅವಳಿಗೆ ವೈ- ಪ್ಲಸ್ ಸೆಕ್ಯೂರಿಟಿ ನೀಡಿದ್ದು, ಅದರ ನಡುವೆ ನ್ಯೂಸ್ ಚಾನೆಲ್
ಗಳು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉರಿಯುವ ಬೆಂಕಿಗೆ ತುಪ್ಪ ಸುರಿದದ್ದು, ಇಬ್ಬರ ವಿಷಯದಲ್ಲೂ, ಪರ – ವಿರೋಧ ದ ಹೇಳಿಕೆಗಳು, ಎಲ್ಲವೂ ಆದವು. ಇವೆಲ್ಲ ಹೇಳಿಕೆಗಳಿಗಷ್ಟೇ ಸೀಮಿತವಾಗಿರದೇ, ಸೆಪ್ಟೆೆಂಬರ್ ಒಂಬತ್ತರಂದು ಶಿವಸೇನೆಯ ಆಡಳಿತ ವ್ಯಾಪ್ತಿಯಲ್ಲಿರುವ BMC (ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್, ಬೆಂಗಳೂರಿನಲ್ಲಿ ಬಿಬಿ ಎಂಪಿ ಇದ್ದಂತೆ) ಕಂಗನಾಳ ಕಚೇರಿಯ ಶೇಕಡಾ ಎಂಬತ್ತರಷ್ಟು ಭಾಗವನ್ನು ಒಡೆದು ಹಾಕಿತು.

ಯಾವುದೋ ಉಮೇದಿನಲ್ಲಿ ಹೋಗಿ ಕಟ್ಟಡವನ್ನು ಒಡೆದು ಹಾಕಿದ ಬೃಹತ್ ಮುಂಬೈ ಮಹಾನಗರ ಪಾಲಿಕೆ ಎಡವಟ್ಟು ಮಾಡಿ ಕೊಂಡಿದ್ದೇ ಅಲ್ಲಿ. ಕಂಗನಾಳನ್ನು ಬೀಳಿಸಲು ತೋಡಿದ ಖೆಡ್ಡಾದಲ್ಲಿ ಈಗ ಪಾಲಿಕೆ ತಾನೇ ಬಿದ್ದಿದೆ. ಯಾಕೆಂದು ಹೇಳುವ ಮುನ್ನ ಕಟ್ಟಡ ನಿರ್ಮಾಣದ ಕುರಿತಾಗಿ ಕಳೆದ ಕಾಲು ಶತಮಾನದ ಕೊಲ್ಲಿ ರಾಷ್ಟ್ರಗಳಲ್ಲಿಯ ನನ್ನ ಅನುಭವ ಹೇಳುತ್ತೇನೆ. ಕೊಲ್ಲಿ ರಾಷ್ಟ್ರಗಳೂ ಸೇರಿದಂತೆ ಬಹುತೇಕ ಮುಂದುವರಿದ ರಾಷ್ಟ್ರಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವಷ್ಟು ನಿಯಮ ಗಳು, ನಿಬಂಧನೆಗಳು ಅಥವಾ ನಿರ್ಬಂಧಗಳಿವೆ. ಯಾರೇ ಮನೆ ಕಟ್ಟುವುದಿದ್ದರೂ ಸಂಬಂಧಪಟ್ಟ ಪಾಲಿಕೆಯ (ಗ್ರಾಮ ಪ್ರದೇಶ ವಾದರೆ ಪಂಚಾಯತಿಯಿಂದ) ಪರವಾನಗಿ ಬೇಕು.

ಮನೆಯಾಗಲಿ, ಕಚೇರಿಯಾಗಲಿ, ಶಾಲೆಯಾಗಲಿ, ಅಂಗಡಿಯಾಗಲಿ, ವಾಣಿಜ್ಯ ಮಳಿಗೆ ಯಾಗಲಿ ಅಥವಾ ಇನ್ಯಾವುದೇ ಕಟ್ಟಡ ವಾಗಲಿ, ನಿರ್ಮಾಣಕ್ಕೂ ಮುನ್ನ ಪರವಾನಗಿ ಅವಶ್ಯಕ. ಕಟ್ಟಡ ನಿರ್ಮಾಣಗೊಳ್ಳಲಿರುವ ಸ್ಥಳದ ನಕ್ಷೆ, ನಿರ್ಮಾಣಗೊಳ್ಳಬೇಕಾದ ಕಟ್ಟಡದ ನೀಲನಕ್ಷೆಯನ್ನು ಪಾಲಿಕೆಗೆ ಸಲ್ಲಿಸಬೇಕು. ನೀಲನಕ್ಷೆಯಲ್ಲಿ ಕೊಠಡಿಯ ವಿಸ್ತೀರ್ಣ, ಗೋಡೆಯ ವಿವರ, ಕಿಟಕಿ – ಬಾಗಿಲುಗಳ ಆಯಾಮ, ಬಳಸುವ ವಸ್ತುಗಳು, ಎಲೆಕ್ಟ್ರಿಕಲ್ (ವಿದ್ಯುತ್) ಪ್ಲಂಬಿಂಗ್ ನೀರು ಸರಬರಾಜಿಗೆಂದು ಜೋಡಿಸುವ ಕೊಳಾಯಿಗಳು) ಒಳಚರಂಡಿಯ ವಿವರಗಳು, ಮಳೆಯ ನೀರು ಹರಿದು ಹೋಗುವ ವಿವರ, ಛಾವಣಿಯಿಂದ ನೀರು ಸೋರದಂತೆ ಮಾಡಲಾಗುವ ವಾಟರ್ ಪ್ರೂಫಿಂಗ್ ವಿವರ ಇತ್ಯಾದಿಗಳೆಲ್ಲ ಒಳಗೊಂಡಿರಬೇಕು. ಅಕ್ಕಪಕ್ಕದ ಕಟ್ಟಡಗಳ, ರಸ್ತೆಯ ಮಾಹಿತಿ ಇದರಲ್ಲಿರ ಬೇಕು. ರಸ್ತೆಯಿಂದ, ಅಕ್ಕ ಪಕ್ಕದ ಮನೆಯಿಂದ ಅಥವಾ ತಮ್ಮದೇ ನಿವೇಶನದ ಗಡಿಯಿಂದ ಕಟ್ಟಡದ ನಡುವೆ ಬಿಡಬೇಕಾದ ನಿಯಮಗಳನ್ನು ಪಾಲಿಸಬೇಕು.

ಸಾಮಾನ್ಯವಾಗಿ ಈ ನಕ್ಷೆ ತಯಾರಿಸುವುದು, ಪರವಾನಗಿ ಪಡೆಯುವುದು ಕನ್ಸಲ್ಟಂಟ್ (ಸಲಹೆ ಗಾರರು) ಮುಖಾಂತರ ನಡೆಯ ಬೇಕಾದ ಕೆಲಸ. ನೀಲಿನಕ್ಷೆಯೊಂದಿಗೆ ಸರ್ವೆ ಸರ್ಟಿಫಿಕೇಟ್, ಲ್ಯಾಾಂಡ್ ಡೀಡ್ ಇತ್ಯಾದಿ ಅಗತ್ಯ ಕಾಗದ ಪತ್ರಗಳನ್ನು ಪಾಲಿಕೆಗೆ ಸಲ್ಲಿಸಬೇಕು. ಮುಂಚೆ ಕಡತಗಳನ್ನು ಪಾಲಿಕೆಗೆ ಕೊಂಡೊಯ್ಯುವ ಪದ್ಧತಿ ಇತ್ತಾದರೂ ಈಗ ಎಲ್ಲವೂ ಆನ್‌ಲೈನ್‌ ನಲ್ಲಿಯೇ ಅಪ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಅಪ್ಲೋಡ್ ಮಾಡಿದ ದಾಖಲೆ ಪತ್ರಗಳನ್ನೆಲ್ಲ ಪಾಲಿಕೆಯು ವಿದ್ಯುತ್, ನೀರು, ಒಳಚರಂಡಿ, ಅಗ್ನಿಶಾಮಕ,  ದೂರವಾಣಿ, ಸಂಚಾರ, ಪಟ್ಟಣ ಯೋಜನೆ ಹೀಗೆ ಎಲ್ಲಾ ಸಂಬಂಧಪಟ್ಟ ಇಲಾಖೆಯ ಕಚೇರಿಗೂ ಈ ಮೇಲ್ ಮೂಲಕ ಕಳಿಸಿ ಕೊಡುತ್ತದೆ. ಎಲ್ಲಾ ಕಚೇರಿಯ ಒಪ್ಪಿಗೆ ಸಿಕ್ಕ ನಂತರವೇ ಪಾಲಿಕೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುತ್ತದೆ. ಪರವಾನಗಿ ಸಿಕ್ಕ ನಂತರ ಕಟ್ಟಡ ನಿರ್ಮಾಣದಲ್ಲಿ ಬಳಸುವ ವಸ್ತುಗಳ ಗುಣಮಟ್ಟ ಪರಿಶೀಲಿಸುವುದು, ನಿರ್ಮಾಣದ ಕಾರ್ಯ ನಕ್ಷೆಗೆ ತಕ್ಕಂತೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯೇ ಎಂದು ನೋಡುವುದು, ಕಾರ್ಯ ಪೂರ್ಣಗೊಂಡ ನಂತರ ಪೂರಕವಾದ ಪ್ರಮಾಣಪತ್ರ ನೀಡುವುದು ಎಲ್ಲವೂ ಸಲಹೆಗಾರರ ಜವಾಬ್ದಾರಿ.

ಏಕೆಂದರೆ, ಕಟ್ಟಡ ನಿರ್ಮಾಣಗೊಂಡು ಪರವಾನಗಿ ದೊರೆತ ನಂತರವೂ ಕಾಮಗಾರಿಯಲ್ಲಿ ದೋಷ ಕಂಡು ಬಂದಲ್ಲಿ ಅದಕ್ಕೆ ಸಲಹೆಗಾರರೇ ಜವಾಬ್ದಾರಿ. ಕಟ್ಟಡದ ಗಾತ್ರಕ್ಕೆ ಅನುಗುಣವಾಗಿ ಐದು ವರ್ಷದಿಂದ 20 ವರ್ಷಗಳವರೆಗೆ ಸಲಹೆಗಾರರು ಜವಬ್ದಾರಿ ಹೊರಬೇಕಾಗುತ್ತದೆ. ಒಂದು ವೇಳೆ ನಿಗದಿತ ಅವಧಿಗೆ ಮುಂಚೆಯೇ ಕಟ್ಟಡ ಅಥವಾ ಅದರ ಒಂದು ಭಾಗ ಕುಸಿದು ಬಿದ್ದರೆ ಸಲಹೆ ಗಾರರ ಪರವಾನಗಿ ರದ್ದುಪಡಿಸಲಾಗುತ್ತದೆ. ಆ ಕಾರಣದಿಂದಲೇ ಗುತ್ತಿಗೆದಾರರರು ಮತ್ತು ಮನೆಯ ಮಾಲೀಕರಿಗಿಂತಲೂ ಸಲಹೆಗಾರರು ಎಚ್ಚರಿಕೆಯಿಂದಿರುವುದು.

ಇದು ನಿರ್ಮಾಣ ಪೂರ್ವ ಮತ್ತು ನಿರ್ಮಾಣದ ಹಂತದಲ್ಲಿನ ಚಿತ್ರಣವಾದರೆ, ಕಾರ್ಯ ಪೂರ್ಣಗೊಂಡ ನಂತರವೂ ಕೆಲವು ವಿಧಾನಗಳನ್ನು ಪಾಲಿಸಲಾಗುತ್ತದೆ. ಕಟ್ಟಡ ನಿರ್ಮಾಣ ಪೂರ್ಣಗೊಂಡ ಮೇಲೆ ಮಾಲೀಕರ ಪರವಾಗಿ ಸಲಹೆಗಾರರು ಪಾಲಿಕೆಗೆ ಕಟ್ಟಡದ ಒಳ-ಹೊರಗಿನ ಚಿತ್ರಗಳು, ಬಳಸಿದ ವಸ್ತುಗಳ ಗುಣಮಟ್ಟದ ಪ್ರಮಾಣಪತ್ರ ಇತ್ಯಾದಿಗಳನ್ನು ಅಪ್ಲೋಡ್ ಮಾಡಬೇಕು. ಪಾಲಿಕೆಯು ಪುನಃ ಅಗ್ನಿಶಾಮಕ, ಸಂಚಾರ ಇತ್ಯಾದಿ ಅವಶ್ಯಕ ಇಲಾಖೆ ಗಳು ಒಪ್ಪಿಗೆ ಸೂಚಿಸಿದ ನಂತರ, ಎಲ್ಲವೂ ಸರಿಯೆನಿಸಿ ದರೆ ವಾಸ್ತವ್ಯಕ್ಕೆ ಪರವಾನಗಿ ನೀಡುತ್ತದೆ. ಕಟ್ಟಡಕ್ಕೆ ಸಂಬಂಧಿಸಿದಂತೆ ಎಲ್ಲಾ ಕೆಲಸ ಕಾರ್ಯಗಳು ಮುಗಿದಿದ್ದರೂ ನೀರು ಮತ್ತು ವಿದ್ಯುತ್ ಸರಬರಾಜಿನ ಸಂಪರ್ಕ ದೊರೆಯುವುದು ಪಾಲಿಕೆಯಿಂದ ಪರವಾನಗಿ ದೊರೆತ ನಂತರವೇ.

ವಿದ್ಯುತ್ ಮತ್ತು ನೀರಿನ ಪೂರೈಕೆ ಆಗುತ್ತಿದೆ ಎಂದಾದರೆ ಅದಕ್ಕೆ ಪಾಲಿಕೆ ಒಪ್ಪಿಗೆ ಸೂಚಿಸಿದೆ, ಯಾವುದೇ ತಕರಾರಿಲ್ಲ ಎಂದೇ ಅರ್ಥ. ಅಲ್ಲಿಂದ ಪಾಲಿಕೆಯ ಕರವಸೂಲಿ, ವಿದ್ಯುತ್ ಮತ್ತು ನೀರು ಸರಬರಾಜಿನ ಕ್ರಯ ವಸೂಲಿ ಒಟ್ಟಿಗೇ ಆರಂಭವಾಗುತ್ತದೆ. ಈ ಮಾದರಿ ಕಟ್ಟಡ ಇರುವವರೆಗೂ ನಿರಂತರ ಮುಂದುವರಿಯುತ್ತದೆ. ಕಟ್ಟಡದ ಮಾಲೀಕರಿಗೆ ಮೂರು ತಿಂಗಳಿನವರೆಗೆ ಗಡುವು
ನೀಡಲಾಗುತ್ತದೆ. ಮೂರು ತಿಂಗಳಿನ ನಂತರ ಕ್ರಯ ಸಂದಾಯವಾಗದಿದ್ದಲ್ಲಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗುತ್ತದೆ, ಹಣ ಪಾವತಿಸಿದ ನಂತರ ಪುನಃ ಸಂಪರ್ಕ ಕಲ್ಪಿಸಲಾಗುತ್ತದೆ. ಪರವಾನಗಿಯ ನಂತರ ಯಾವುದೇ ಕನೂನುಬಾಹಿರ ನಿರ್ಮಾಣ ಕಾರ್ಯಗಳು ಪಾಲಿಕೆಯ ಗಮನಕ್ಕೆ ಬಂದರೆ ಸೂಚನೆ (ನೋಟೀಸ್) ನೀಡಲಾಗುತ್ತದೆ.

ಒಂದೆರಡು ಬಾರಿ ಸೂಚನೆಯ ನಂತರವೂ ಸರಿಪಡಿಸದಿದ್ದಲ್ಲಿ ವಿದ್ಯುತ್ ಪೂರೈಕೆ ನಿಲ್ಲಿಸಲಾಗುತ್ತದೆ ವಿನಃ ಕಟ್ಟಡವನ್ನು ಕೆಡವಿದ, ಧ್ವಂಸಗೊಳಿಸಿದ ಉದಾಹರಣೆ ಇಲ್ಲವೆಂದೇ ಹೇಳಬಹುದು. ಇದರಲ್ಲಿಯ ಬಹುತೇಕ ನಿಯಮಗಳು ಭಾರತದಲ್ಲಿಯೂ ಇವೆ. ಇಲ್ಲವಾದದ್ದು ಎಂದರೆ ಒಂದು, ಕಡ್ಡಾಯವಾಗಿ ಸಲಹೆಗಾರರು ಇರಬೇಕು ಎಂಬುದು ಮತ್ತು ಅವರ ಜವಾಬ್ದಾರಿಯ ಅಂಶ. ಇನ್ನೊೊಂದು ಸಂಬಂಧಪಟ್ಟ ಸಂಸ್ಥೆಗಳ ಪರವಾನಗಿಯನ್ನು ಮೊದಲೇ ಪಡೆದು ನಂತರ ವಾಸ್ತವ್ಯದ ಪರವಾನಗಿ ನೀಡುವುದು
ಮತ್ತೊೊಂದು, ಪಾಲಿಕೆ ಮತ್ತು ವಿದ್ಯುತ್ ಸರಬರಾಜು ಮಾಡುವ ಸಂಸ್ಥೆ ಒಟ್ಟಾಗಿ ಕಾರ್ಯನಿರ್ವಹಿಸದೆ ಇರುವುದು. ನಮ್ಮ ದೇಶದಲ್ಲಿ ಕಟ್ಟಡಗಳಿಗೆ ನೀರಿನ ಸರಬರಾಜಿಗೆಂದು ಬೇರೆ ಇಲಾಖೆ ಇಲ್ಲ, ಅದು ನಗರ ಪಾಲಿಕೆಯ ವ್ಯಾಪ್ತಿಗೇ ಒಳಪಟ್ಟಿರುತ್ತದೆ.

ಹೀಗಿರುವಾಗ, ನಂತರದ ದಿನಗಳಲ್ಲಿ ಕಾನೂನುಬಾಹಿರ ನಿರ್ಮಾಣ ಕಾರ್ಯ ನಡೆದಿದೆಯೆಂದು ತಿಳಿದು ಬಂದಲ್ಲಿ ಕಟ್ಟಡವನ್ನೋ ಅಥವಾ ಅದರ ಒಂದು ಭಾಗವನ್ನೋ ಕೆಡವುದಕ್ಕಿಿಂತ ಮೊದಲು, ದಂಡ ವಿಧಿಸುವುದು, ವಿದ್ಯುತ್ ಮತ್ತು ನೀರಿನ ಸರಬರಾಜು ನಿಲ್ಲಿಸುವುದು ಸೂಕ್ತವಲ್ಲವೇ? ಬಹ್ರೈನ್‌ನಲ್ಲಿ ಸಲಹೆ ಗಾರರ ಸಂಸ್ಥೆಗೆ ಕೆಲಸ ಮಾಡುವ ನನ್ನ ಮಿತ್ರರೊಬ್ಬರು ‘ಕೊಲ್ಲಿ
ರಾಷ್ಟ್ರಗಳಲ್ಲಿ ಪಾಲಿಕೆಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಕ್ರಯ ವಸೂಲಿ ಮಾಡುತ್ತಾರೆ, ನಮ್ಮ ದೇಶದಲ್ಲಿ ಪಾಲಿಕೆಯವರು ಸರಿಯಾಗಿ ಕಾರ್ಯ ನಿರ್ವಹಿಸದೆ ಇರಲು ಹಣ ವಸೂಲಿ ಮಾಡುತ್ತಾರೆ’ ಎನ್ನುತ್ತಾರೆ. ತಕ್ಕ ಮಟ್ಟಿಗೆ ಅದು ಸತ್ಯವೂ ಹೌದು. ತನ್ನ
ಗಡಿಯಿಂದಾಚೆ ಅಥವಾ ನಿಗದಿತ ಸೆಟ್ಬ್ಯಾಕ್ ಬಿಡದೆ, ಶೇಕಡಾ ಐದೋ ಹತ್ತೋ ಇದ್ದ ಪರಿಮಿತಿಯನ್ನು ಪಾಲಿಕೆಯ ಅಧಿಕಾರಿಯ ಕೈ ಬೆಚ್ಚಗೆ ಮಾಡಿ ವಿಸ್ತರಿಸಿಕೊಳ್ಳುವುದು, ಅಧಿಕಾರಿಯ ಕಿಸೆ ತುಂಬಿಸಿ ನಿಗದಿತ ಅಂತಸ್ತುಗಳ ಮೇಲೆ ಮತ್ತೆ ಕಟ್ಟುವುದು, ಇವೆಲ್ಲ
ನಮ್ಮ ದೇಶದಲ್ಲಿ ಮಾಮೂಲು. ಇವರಲ್ಲಿ ಕೆಲವು ಅಮಾಯಕರು ತಿಳಿಯದೇ ಮಾಡಿದರೆ ಕೆಲವರು ತಿಳಿದೂ ಮಾಡುತ್ತಾರೆ. ಹೇಗೆ ಮಾಡಿದರೂ ಸುಧಾರಿಸಿಕೊಳ್ಳಬಹುದು ಎಂಬ ಭಂಡ ಧೈರ್ಯ.

ಹಾಗೆ ನೋಡಿದರೆ ಸಲಹೆಗಾರರು ಕಡ್ಡಾಯವಾಗಿ ಇರದಿದ್ದಲ್ಲಿ ಪಾಲಿಕೆಯ ಎಂಜಿನಿಯರ್ ಅಥವಾ ಅಧಿಕಾರಿಯ ಮೇಲೆ ಹೆಚ್ಚಿನ ಜವಾಬ್ದಾರಿಯಿರಬೇಕು, ಅವರೇ ಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಅದು ಬಿಟ್ಟು ಮಾಡುವಂತೆ ಮಾಡಲಿ, ಆಗುವಂತೆ ಆಗಲಿ ಎಂದು ಬಿಟ್ಟು ನಂತರ ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಹೇಳಿ ಒಡೆದು ಹಾಕುವುದು ಎಷ್ಟು ಸರಿ?
ಅಪರಾಧಿಗೆ ಗಲ್ಲು ಶಿಕ್ಷೆ ಹೇಗೆ ಘೋರ ಮತ್ತು ಕೊನೆಯ ಆಯ್ಕೆಯೋ ಹಾಗೆಯೇ ಒಡೆದು ಹಾಕುವುದು ಕಟ್ಟಡಕ್ಕೆ ನೀಡಬೇಕಾದ ಅಂತಿಮ ಶಿಕ್ಷೆ. ಇದೇ ಕಾರಣಕ್ಕೇ ಇರಬೇಕು, ಎಲ್ಲಿಯಾದರೂ ಕಟ್ಟಡ ಕುಸಿಯಿತು, ಕಟ್ಟಡವನ್ನು ಕೆಡವಲಾಯಿತು ಎಂಬ ವಿಷಯ ಕೇಳಿ ಬಂದರೆ ನೇರವಾಗಿ ಅಂತಃಕರಣಕ್ಕೆ ನಾಟುವುದು. ಈಗ ಕಂಗನಾಳ ಬಾಂದ್ರಾದ ಪ್ರತಿಷ್ಠಿತ ಪಾಲಿಹಿಲ್‌ನ ಮಣಿಕರ್ಣಿಕಾ ಪ್ರೊಡಕ್ಷನ್ ಕಚೇರಿಯಿರುವ ಕಟ್ಟಡದ ವಿಷಯದಲ್ಲಿ ಬಿಎಂಸಿ ಎಡವಿದ್ದು ಎಲ್ಲೆಲ್ಲಿ ಎಂದು ನೋಡಿ. ಕಟ್ಟಡದ ಮಾಲೀಕರು ಇಲ್ಲದಾಗ (ವಾಚ್ಮನ್ ಬಿಟ್ಟು) ಮಹಾನಗರ ಪಾಲಿಕೆಯ ಸಿಬ್ಬಂದಿ ಆ ಕಟ್ಟಡದ ಒಳಕ್ಕೆ ನುಗ್ಗಿದ್ದರು.

ಮಾಲೀಕರು ಮರುದಿನ ಬರುತ್ತಾರೆ ಎಂದು ತಿಳಿದೂ ಸೆಪ್ಟೆೆಂಬರ್ ಎಂಟರಂದು 10:30ಕ್ಕೆೆ 24 ಗಂಟೆಯ ಒಳಗೆ ತಪ್ಪುಗಳನ್ನು ಸರಿಪಡಿಸುವಂತೆ ನೋಟೀಸ್ ಅಂಟಿಸಿ ಹೋಗಿದ್ದರು. ಕಂಗನಾಳ ವಕೀಲರು ಅದೇ ದಿನ ನೋಟೀಸಿಗೆ ಉತ್ತರ ನೀಡಿದರೂ, ಗಡುವು
ಮುಗಿಯುವ ಕೆಲವೇ ನಿಮಿಷಗಳ ಮೊದಲು ಉತ್ತರ ಸಮರ್ಪಕವಾಗಿಲ್ಲ ವೆಂದು ತಿರಸ್ಕರಿಸಿದ್ದರು. ಸೆಪ್ಟೆೆಂಬರ್ ಒಂಬತ್ತರಂದು ಬೆಳಗ್ಗೆ ಏಳು ಗಂಟೆಯಿಂದಲೇ ಕಟ್ಟಡ ಒಡೆಯಲು ಯಂತ್ರೋಪಕರಣಗಳು, ಕೆಲಸಗಾರರು ಸಜ್ಜಾಗಿದ್ದರು. ಸರಿಯಾಗಿ 10:30ಕ್ಕೆ ಕಟ್ಟಡ ಒಡೆಯುವ ಕಾರ್ಯ ಆರಂಭವಾಗಿತ್ತು. ವಕೀಲರು ಸ್ಥಳಕ್ಕೆ ಹೋಗಿ ನ್ಯಾಯಾಲಯದಲ್ಲಿ ತುರ್ತು ಅರ್ಜಿ ಸಲ್ಲಿಸಿರುವುದಾಗಿ ಯೂ, ನ್ಯಾಯಾಲಯ 12:30ಕ್ಕೆ ವಿಚಾರಣೆಗೆ ಸಮಯ ನಿಗದಿ ಪಡಿಸಿರುವುದಾಗಿ ಹೇಳಿದರೂ ಪಾಲಿಕೆಯವರು ಒಡೆಯುವ ಕೆಲಸ
ನಿಲ್ಲಿಸಲಿಲ್ಲ. ಕೇವಲ ಕಟ್ಟಡವನ್ನಷ್ಟೇ ಅಲ್ಲದೆ ಎತ್ತಿ ಇಡಬಹುದಾದ (ಮೂವಬಲ್ ಐಟಮ್) ವಸ್ತುಗಳಾದ ಕುರ್ಚಿ, ಸೋಫಾ, ಟೇಬಲ್‌ಗಳನ್ನೆೆಲ್ಲ ಮುರಿದು ಹಾಕಿದ್ದರು. ಲಕ್ಷಗಟ್ಟಲೆ ರುಪಾಯಿ ಬೆಲೆಬಾಳುವ ಪೇಂಟಿಂಗ್‌ಗಳನ್ನು, ವಿದ್ಯುತ್ ತೂಗುದೀಪ ಗಳನ್ನು, ಅಲಂಕಾರಿಕ ವಸ್ತುಗಳನ್ನು ಧ್ವಂಸಗೊಳಿಸಿದ್ದರು.

ನ್ಯಾಯಾಲಯ ತಡೆಯಾಜ್ಞೆ ನೀಡುವವರೆಗೂ ಈ ಕೆಲಸ ನಡೆಯುತ್ತಲೇ ಇತ್ತು. ಕಂಗನಾಳ 15 ವರ್ಷದ ಹೋರಾಟದಿಂದ ಗಳಿಸಿದ 48 ಕೋಟಿ ರುಪಾಯಿ ಮೌಲ್ಯದ ಕಟ್ಟಡದ ಬಹುಭಾಗ ಕೆಲವೇ ನಿಮಿಷಗಳಲ್ಲಿ ಭಗ್ನಗೊಂಡಿತು. ತಾನು ಬರುವವರೆಗೆ ಕಾಯದೇ, ಅಕ್ಕಪಕ್ಕದ ಕಟ್ಟಡದವರಿಗೆ ಒಂದು ವಾರದ ಗಡುವು ನೀಡಿ ತನ್ನ ಮೂರಂತಸ್ತಿನ ಇಮಾರತಿಗೆ ಮಾತ್ರ 24 ಗಂಟೆಗಳ
ಸೂಚನೆ ಜಾರಿಗೊಳಿಸಿ ಕೆಡವಿ ಹಾಕಿದ್ದು ಕಂಗನಾಳನ್ನು ಕೆರಳಿಸಿತ್ತು. ಸಾಮಾನ್ಯದವರಾಗಿದ್ದರೆ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಿದ್ದರೋ ಏನೋ, ಕಂಗನಾ ಮಾತ್ರ ‘ಇಂದು ನನ್ನ ಮನೆ ಮುರಿದಿದೆ, ಮುಂದೊಂದು ದಿನ ನಿನ್ನ ಅಹಂಕಾರ ಮುರಿಯುತ್ತದೆ, ಇದು ನನ್ನೊೊಂದಿಗೆ ಆದದ್ದು ಒಳ್ಳೆಯದಾಯಿತು’ ಎಂದು ಮುಖ್ಯಮಂತ್ರಿಗೆ ಸಾಮಾಜಿಕ ಜಾಲತಾಣದ ಮುಖೇನ ಸಂದೇಶ ಕಳುಹಿಸಿದಳು.

ಮಹಾನಗರ ಪಾಲಿಕೆ, ಮುಖ್ಯಮಂತ್ರಿ, ರಾಜ್ಯ ಸರಕಾರ, ಆಡಳಿತ ಪಕ್ಷವಾದ ಶಿವಸೇನೆ ಎಲ್ಲರಿಗೂ ಸವಾಲು ಹಾಕಿ ಒಬ್ಬ ಮಹಿಳೆ
ನಿಲ್ಲುತ್ತಾಳೆಂದರೆ ಅವಳ ಕೆಚ್ಚು ಮೆಚ್ಚ ಬೇಕಾದದ್ದೇ. ಅಷ್ಟಕ್ಕೇ ನಿಲ್ಲದ ಶಿವಸೇನೆ ಮರುದಿನ ತನ್ನ ದಿನಪತ್ರಿಕೆಯಾದ ‘ಸಾಮ್ನಾ’ದ ಮುಖಪುಟದಲ್ಲಿ ‘ಉಖಾಡ್ ದಿಯಾ’ (ಕಿತ್ತು ಹಾಕಿದೆವು) ಎಂಬ ಶೀರ್ಷಿಕೆ ಅಡಿಯಲ್ಲಿ ಇದೇ ವಿಷಯದ ಕುರಿತು ದೊಡ್ದ
ಲೇಖನವನ್ನೇ ಪ್ರಕಟಿಸಿತು. ಏನನ್ನು ಕಿತ್ತು ಹಾಕಿದಿರೆಂದು ಪ್ರಶ್ನಿಸಿದಾಗ ಪಕ್ಷದ ವಕ್ತಾರರೊಬ್ಬರು ಕಂಗನಾಳ ಅಹಂಕಾರವನ್ನು ಕಿತ್ತು ಹಾಕಿದೆವು ಎಂದು ಬೀಗಿದರು.

ಇಂತಹ ಸಂದರ್ಭದಲ್ಲಿ ಆ ಶಬ್ದದ ಬಳಕೆ ದರ್ಪದ ಪ್ರದರ್ಶನವಲ್ಲದೆ ಇನ್ನೇನೂ ಆಗಿರಲಿಲ್ಲ. ಅಲ್ಲಿಗೆ, ಕಾನೂನುಬಾಹಿರ ಕಟ್ಟಡದ ನಿರ್ಮಾಣದ ನೆಪವೆಲ್ಲ ಬರೀ ಜೊಳ್ಳು, ಇದು ಅಹಂಭಾವದಿಂದ ಎಸಗಿದ ಕೃತ್ಯ ಎಂಬುದು ಲೋಕಕ್ಕೇ ತಿಳಿದಿತ್ತು. ಅದಕ್ಕೆ ಉತ್ತರವಾಗಿ ಕಂಗನಾ ‘ನಾನು ಕಟ್ಟಡವನ್ನು ದುರಸ್ತಿಗೊಳಿಸುವುದಿಲ್ಲ, ಈ ಅವಶೇಷಗಳಿಂದಲೇ ಕೆಲಸ ಮಾಡುತ್ತೇನೆ, ಈ
ಸ್ಥಳವನ್ನು ಜಗತ್ತಿನಲ್ಲಿ ಮೇಲೇರಲು ಧೈರ್ಯ ಮಾಡಿದ ಮಹಿಳೆಯ ಇಚ್ಛೆಯನ್ನು ಧ್ವಂಸ ಗೊಳಿಸಿದ ಸಂಕೇತವಾಗಿ ಹಾಗೆಯೇ ಬಿಡುತ್ತೇನೆ’ ಎಂದು ಟ್ವೀಟ್ ಮಾಡಿದಳು. ಅಲ್ಲಿಂದ ಇಲ್ಲಿಯವರೆಗೆ ಸಾಮ್ನಾ ಪತ್ರಿಕೆಯ ಮೊದಲ ಪುಟದಲ್ಲಿ ಪ್ರತಿ ನಿತ್ಯ ಕಂಗನಾ ವಿಷಯ ಪ್ರಕಟವಾಗುತ್ತಿದೆ. ಕಂಗನಾ ಕೂಡ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡುತ್ತಳೇ ಇದ್ದಾಳೆ.

ಈಗ ಜನಸಾಮಾನ್ಯರಲ್ಲಿ ಮೂಡಿದ ಪ್ರಶ್ನೆಯೆಂದರೆ, ಮುಂಬೈನಲ್ಲಿ ಇಂದು ಸುಮಾರು ಒಂದು ಲಕ್ಷ ಕಾನೂನುಬಾಹಿರವಾಗಿ ನಿರ್ಮಾಣಗೊಂಡ ಕಟ್ಟಡವಿದೆ. ಇದು ಗಮನಕ್ಕೆ ಬಂದಿರುವುದಾದರೆ ಇನ್ನು ಗಮನಕ್ಕೆ ಬಾರದ್ದು ಎಷ್ಟಿದೆಯೋ ಆ ಭಗವಂತನೇ ಬಲ್ಲ. ಅಂಥದ್ದರಲ್ಲಿ ಪಾಲಿಕೆಗೆ ಕಂಗನಾಳ ಕಚೇರಿಯೇ ಕಂಡಿದ್ದು ಏಕೆ? ಕಟ್ಟಡ ಗಡಿಯಿಂದ ಹೊರಗಿದೆ ಎಂದಾದರೆ ಮೊದಲೇ ಪರವಾನಗಿ ನೀಡಿದ್ದು ಏಕೆ? ಪಾಲಿಕೆಯವರು ಒಂದು ಕಡೆ 18 ತಿಂಗಳಿನ ಹಿಂದೆಯೇ ನೋಟೀಸ್ ನೀಡಿದ್ದೆವು ಎಂದು ಹೇಳುತ್ತಾರೆ,  ಇನ್ನೊೊಂದೆಡೆ ಕಟ್ಟಡದ ಒಳಗೆ ಪರವಾನಗಿ ಇಲ್ಲದೆಯೇ ನಿರ್ಮಾಣದ ಕಾರ್ಯ ನಡೆಯುತ್ತಿತ್ತು ಎನ್ನುತ್ತಿದ್ದಾರೆ.

ನಿರ್ಮಾಣ ಪ್ರಗತಿಯಲ್ಲಿದ್ದರೆ 24 ಗಂಟೆಗಳ ಗಡುವು ನೀಡಿ ಸರಿಪಡಿಸಿ ಎಂದದ್ದು ಭಾರತದ ಇತಿಹಾಸ ದಲ್ಲಿಯೇ ಇರಲಿಕ್ಕಿಲ್ಲ.
ಕಂಗನಾಳ ವಕೀಲರ ಪ್ರಕಾರ 18 ತಿಂಗಳ ಹಿಂದೆಯೇ ಕಾಮಗಾರಿಗಳೆಲ್ಲ ಪೂರ್ಣ ಗೊಂಡು ಲೆಕ್ಕಪತ್ರಗಳನ್ನು ತೋರಿಸಲಾಗಿದೆ ಯಂತೆ. ಕಂಗನಾಳ ಪ್ರಕಾರ 18 ತಿಂಗಳ ಹಿಂದೆ ನೋಟೀಸ್ ನೀಡಿದ್ದು ಈ ಕಟ್ಟಡಕ್ಕಲ್ಲ, ಅವಳು ಉಳಿದುಕೊಂಡಿರುವ ಫ್ಲಾಟ್‌ಗೆ ಸಂಬಂಧಿಸಿಯಂತೆ. ಅಲ್ಲಿ ತನ್ನ ಮನೆಯಷ್ಟೇ ಅಲ್ಲ, ಇನ್ನೂ ಅನೇಕ ಮನೆಗಳಿವೆ, ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ಆಪ್ತ ಬಿಲ್ಡರ್ ನಿರ್ಮಿಸಿದ ಅಪಾರ್ಟ್ಮೆೆಂಟ್‌ನಲ್ಲಿ ನಾನು ಒಂದು ಮನೆ ಖರೀದಿಸಿದ್ದು ಮಾತ್ರ, ಅದರಲ್ಲಿ ನನ್ನ ತಪ್ಪೇನು?
ನೋಟೀಸ್ ಕೊಡುವುದಾದರೆ ಕಟ್ಟಡ ನಿರ್ಮಿಸಿದವರಿಗೆ ಕೊಡಿ ಎನ್ನುತ್ತಿದ್ದಾಳೆ ಕಂಗನಾ.

ಈಗಿರುವ ಪ್ರಶ್ನೆಯೆಂದರೆ, ಇಂದು ಕಂಗನಾಳಿಗೆ ಮಾಡಿದ್ದು ಸರಿ ಎಂದಾದರೆ ಮುಂದೊಂದು ದಿನ ಇದೇ ರೀತಿ ಬೇರೆಯವರಿಗೆ ಮಾಡಿದರೆ ಅದೂ ಸರಿಯೆ? ಸರಕಾರದ ಅಥವಾ ಕೆಲವು ವ್ಯಕ್ತಿಗಳ ವಿರುದ್ಧ ಮಾತನಾಡಿದ ಕಾರಣಕ್ಕೆ ಈ ಶಿಕ್ಷೆಯಾ? ಹಾಗಾದರೆ
ಭಾರತದ ಪ್ರಜೆಗೆ ವಾಕ್ ಸ್ವಾತಂತ್ರ್ಯ ಇಲ್ಲವಾ? ನ್ಯಾಯಾಲಯಕ್ಕೆೆ ಬೆಲೆ ಇಲ್ಲವಾ? ಕಂಗನಾ ಆಗಲೀ, ಶಿವಸೇನೆಯಾಗಲಿ, ಪಟ್ಟು ಬಿಡುವ ಜಾಯಮಾನ ಇಬ್ಬರಲ್ಲಿಯೂ ಇಲ್ಲ. ಗುರುತಿಸಬೇಕಾದ ಅಂಶ ವೆಂದರೆ, ಅಧಿಕಾರ ಇಂದುಂಟು, ನಾಳೆ ಇಲ್ಲ. ಅಧಿಕಾರದಲ್ಲಿ ಇರುವವರು ಸಣ್ಣ ತಪ್ಪು ಮಾಡಿದರೂ ಜನರ ಕೆಂಗಣ್ಣಿಗೆ ಗುರಿಯಾಗುವುದು ಸ್ವಾಭಾವಿಕ.

ಅದೇ ಸಮಾಜದ ಸುಧಾರಣೆಗಾಗಿ ಯಾರಾದರೂ ನಿಂತರೆ, ಸರಕಾರ ರಚಿಸಲು ಪ್ರತಿನಿಧಿಗಳನ್ನು ಆರಿಸಿ ಕಳಿಸಿದ ಅದೇ ಜನ
ವ್ಯಕ್ತಿಯ ಬೆಂಬಲಕ್ಕೆ ನಿಲ್ಲುತ್ತಾರೆ. ಅದರಲ್ಲೂ ವ್ಯಕ್ತಿ ವಯಸ್ಕರೋ, ಮಧ್ಯಮ ವರ್ಗದವರೋ, ಮಹಿಳೆಯೋ ಆದಲ್ಲಿ ಬಹು ಬೇಗ ಭಾವನಾತ್ಮಕ ಬಾಂಧವ್ಯಕ್ಕೆ ಒಳಗಾಗುತ್ತಾರೆ. ಆಡಳಿತ ದಲ್ಲಿರುವವರು ಇಂತಹ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳದಿದ್ದರೆ ಮುಖಭಂಗ ಖಚಿತ.

ಇಡೀ ಆಡಳಿತ ಯಂತ್ರವನ್ನೇ ಒಬ್ಬ ಮಹಿಳೆಯ ಹಿಂದೆ ಬಿಡುವ ಸ್ಥಿತಿಗೆ ಯಾರು ತಲುಪಿದರೂ ಅವರ ಅಧೋಗತಿ ಆರಂಭ ವಾಯಿತು ಎಂದೇ ಅರ್ಥ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬ ಹಳೇ ಗಾದೆ ಮಾತು ಇದೆಯಲ್ಲ; ಹಾಗೆಯೇ, ಕಂಗನಾಳಿಗೆ ಹದಿನೈದು ವರುಷ, ಬಿಎಂಸಿಗೆ ಹದಿನೈದು ನಿಮಿಷ ಎಂಬ ಮಾತೂ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *