Tuesday, 27th September 2022

ಕರೋನಾ ಭೀತಿ ನಡುವೆ ಹೇಗೆ ಪ್ರಚಾರಕ್ಕೆ ಅನುಮತಿ ನೀಡಿದ್ರಿ? ನೀವೇನು ಅನ್ಯಗ್ರಹದಲ್ಲಿ ಇದ್ದೀರಾ?

ನವದೆಹಲಿ: ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆಯೂ ಹೇಗೆ ನೀವು ಪ್ರಚಾರಕ್ಕೆ ಅನುಮತಿ ನೀಡಿದ್ದೀರಿ. ನೀವೇನು ಅನ್ಯಗ್ರಹದಲ್ಲಿ ಇದ್ದೀರಾ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ಅಲ್ಲದೇ, ನಿಮ್ಮ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿಕೊಳ್ಳುವುದಕ್ಕೂ ಅವಕಾಶವಿದೆ ಎಂದು ಎಚ್ಚರಿಕೆ ಹೇಳಿದೆ.

ಕರೋನಾ ವೈರಸ್ ಶಿಷ್ಟಾಚಾರ ಪಾಲನೆ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟ ದಾಖಲೆ ನೀಡದಿದ್ದಲ್ಲಿ ಮೇ.2ರಂದು ಮತ ಎಣಿಕೆಗೆ ಅವಕಾಶ ನೀಡುವುದಿಲ್ಲ ಎಂದೂ ಎಚ್ಚರಿಕೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾ.ಸೆಂಥಿಲ್ ಕುಮಾರ್ ರಾಮಮೂರ್ತಿ ನೇತೃತ್ವದ ಪೀಠ ಅರ್ಜಿ ವಿಚಾ ರಣೆ ನಡೆಸಿತು. ದೇಶಾದ್ಯಂತ ಕೊವಿಡ್-19 ಎರಡನೇ ಅಲೆ ವೇಗ ಹೆಚ್ಚಿರುವುದರ ಮಧ್ಯೆ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಅನುಮತಿ ನೀಡಿರುವ ಆಯೋಗದ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.

ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಮತ ಎಣಿಕೆ ಮೇ 2ರಂದು ನಡೆಯಲಿದೆ. ಈ ವೇಳೆಯಲ್ಲಿ ಕರೋನಾ ವೈರಸ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನೋಡಿಕೊಳ್ಳುವಂತೆ ಕೋರಿ ಸಾರಿಗೆ ಸಚಿವ ಎಂ.ಆರ್.ವಿಜಯ್ ಭಾಸ್ಕರ್ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ಎಚ್ಚರಿಕೆ ನಡುವೆಯೂ ಸುರಕ್ಷತೆಗೆ ಸೂಕ್ತ ರೀತಿಯ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ವಾದಿಸಿತು. ಕೊವಿಡ್-19 ಸುರಕ್ಷತೆ ಬಗ್ಗೆ ಅಫಿಡವಿಟ್ ಸಲ್ಲಿಸುವುದಾಗಿ ಭರವಸೆ ನೀಡಿದೆ.