Friday, 19th August 2022

‌ಐಟಿ ದಾಳಿ ಹೇಗೆ ನಡೆಯುತ್ತದೆ ಗೊತ್ತಾ ?

ವಿಶ್ಲೇಷಣೆ

ಡಾ.ಜಗದೀಶ್‌ ಮಾನೆ

ಐಟಿ, ಇಡಿ ಅನ್ನೋ ಹೆಸರು ಕೇಳುತ್ತಿದ್ದಂತೆ ಭ್ರಷ್ಟರ ಎದೆಯಲ್ಲಿ ನಡುಕ ಉಂಟಾಗಲು ಶುರುವಾಗಿ ಬಿಡುತ್ತದೆ. ಸದ್ಯಕ್ಕಂತೂ ದೇಶದಾದ್ಯಂತ ಐಟಿ ದಾಳಿಯದ್ದೇ ಸದ್ದು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ, ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ತೀರಾ ಇತ್ತೀಚೆಗೆ ಪಶ್ಚಿಮಬಂಗಾಳ ಸಚಿವ ಪಾರ್ಥ ಚಟರ್ಜಿ… ಹೀಗೆ ಹಲವರ ಮೇಲೆ ಐಟಿ, ಇಡಿ ದಾಳಿ ಆಗಿದೆ. ಇದರ ಬೆನ್ನ ಕಾಂಗ್ರೆಸ್ ಕಾರ್ಯಕರ್ತರು, ಸುಖಾ ಸುಮ್ಮನೆ ಈ ದಾಳಿಯನ್ನು ಖಂಡಿಸಿ, ಕಾನೂನನ್ನು ವಿರೋಧಿ ಸುತ್ತ, ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ.

ಅಲ್ಲಿ ಐಟಿ ದಾಳಿ ಆಯಿತು, ಇಲ್ಲಿ ಇಡಿ ರೇಡ್ ಆಯಿತು, ಅವರ ಮನೆಮೇಲೆ, ಇವರ ಕಚೇರಿಯ ಮೇಲೆ, ಲಾಕರ್‌ಗಳಲ್ಲಿ ಸೂಟ್ಕ್ಸ್ ತುಂಬಾ ಹಣ ಸಿಕ್ತು, ಮನೆಯ ಪೈಪುಗಳಲ್ಲಿ, ಶೌಚಾಲಯದಲ್ಲಿ ಕೋಟಿ ಕೋಟಿ ಗಟ್ಟಲೆ ಹಣ ತುಂಬಿಟ್ಟು ಐಟಿ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರಂತೆಲ್ಲ ಸುದ್ದಿಗಳನ್ನು ಆಗಾಗ ನಾವು ನೀವೆಲ್ಲ ಕೇಳುತ್ತಲೇ ಇರುತ್ತೇವೆ. ಭ್ರಷ್ಟ ರನ್ನು ಬಗ್ಗುಬಡಿದು ಅವರ ಹೆಡೆಮುರಿ ಕಟ್ಟಿ, ಅಕ್ರಮವಾಗಿ ಸಂಪಾದಿಸಿದ ಸಂಪತ್ತನ್ನೆಲ್ಲ ವಶಪಡಿಸಿಕೊಂಡು ಅವರನ್ನು ಶಿಕ್ಷಿಸಲು ದೇಶದ ಅನೇಕ ಕಡೆಗಳಲ್ಲಿ ಐಟಿ, ಇಡಿಯಂತಹ ದಾಳಿಗಳು ನಡೆಯುತ್ತಲೇ ಇವೆ.

ಈ ದಾಳಿ ಹೇಗೆಲ್ಲ ನಡೆಯುತ್ತದೆ? ಆದಾಯ ತೆರಿಗೆ ಇಲಾಖೆಯು ಕೈಗೊಳ್ಳುವ ಸಮೀಕ್ಷೆ (ಸರ್ವೆ), ಪರಿಶೀಲನೆ (ಸರ್ಚ್) ಹಾಗೂ ಅಧಿವೇಶನ(ಸೆಷನ್) ಈ ಮೂರು ರೀತಿಯ ಆಪರೇಷನ್ನನ್ನೇ ಐಟಿ ದಾಳಿ ಎಂದು ಕರೆಯುತ್ತಾರೆ. ಯಾವೆಲ್ಲ ವ್ಯಕ್ತಿ ಹಾಗೂ ಕಂಪನಿಗಳ ಬಳಿ ಕಪ್ಪು ಹಣ ಇದೆ ಎಂಬ ಅನುಮಾನ ಐಟಿ, ಇಡಿ ಅಧಿಕಾರಿಗಳಿಗೆ ಬರುತ್ತದೆಯೋ ಅಂಥವರ ವಿರುದ್ಧ ಮೊದಲು ಸಮೀಕ್ಷೆ ನಡೆಯುತ್ತದೆ.

ಆಮೇಲೆ ಪರಿಶೀಲಿಸಿ ಈ ರೀತಿಯ ದಾಳಿಗಳನ್ನು ಮಾಡಲಾಗುತ್ತದೆ. ಅಕ್ರಮ ಸಂಪತ್ತಿಗೆ ಆದಾಯ ತೆರಿಗೆ ಅಥವಾ ಬೇರೆ ಯಾವುದೇ ರೀತಿಯ ತೆರಿಗೆಗಳನ್ನು ಕಟ್ಟದೇ ಇರುವುದರ ಬಗ್ಗೆ ಮೊದಲು ಅಧಿಕಾರಿಗಳು ಕೆಲ ಹಂತಗಳಲ್ಲಿ ಪರಿಶೀಲಿಸುತ್ತಾರೆ. ಕಪ್ಪು ಹಣ, ಅಕ್ರಮ ಸಂಪತ್ತು ಇರುವ ಮಾಹಿತಿ ಇದ್ದು, ಆ ವ್ಯಕ್ತಿ ತನ್ನಲ್ಲಿರುವ ಆ ಅಕ್ರಮ ಸಂಪತ್ತಿಗೆ ತೆರಿಗೆಯನ್ನು ವಂಚಿಸಿರುವು ದಾಗಲಿ, ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಹೊಂದಿರುವುದಾಗಲೀ ಗಮನಕ್ಕೆಬಂದಾಗ ಅಥವಾ ಅನುಮಾನ ಮೂಡಿದಾಗ, ಐಟಿ ವಿಭಾಗದಲ್ಲಿರುವ ಗುಪ್ತಚರ ಮಾಹಿತಿ ವಿಭಾಗ ಮಾಹಿತಿಯನ್ನು ಸಂಗ್ರಹಿಸುತ್ತದೆ. ಸರಕಾರದ ವಿವಿಧ ಇಲಾಖೆಗಳಿಂದ ಮಾಹಿತಿ ಕಲೆಹಾಕಲಾಗುತ್ತದೆ.

ತೆರಿಗೆದಾರರ ಅಸೆಸ್‌ಮೆಂಟ್ ರೆಕಾರ್ಡ್‌ಗಳಲ್ಲಿ ತೆರಿಗೆ ವಂಚನೆಯ ಬಗ್ಗೆ ಕೆಲವೊಂದಿಷ್ಟು ಸುಳಿವುಗಳನ್ನು ಕ್ರೋಡೀಕರಿಸುತ್ತಾರೆ. ಹೀಗೆ ವ್ಯಕ್ತಿಯು ತನ್ನ ಆದಾಯಕ್ಕಿಂತ ಹೆಚ್ಚಿನ ಖರ್ಚನ್ನು ಮಾಡುತ್ತಿದ್ದು, ಆ ವ್ಯಕ್ತಿ ತನ್ನ ಆದಾಯವನ್ನು  ಕಡಿಮೆ ತೋರಿಸುತ್ತ ಐಶಾರಾಮಿ ಬದುಕು ಬದುಕುತ್ತಿದ್ದರೆ, ಅಕ್ರಮ ಬಂಡವಾಳ ಹೂಡಿಕೆ ಮಾಡಿರುವುದು ಇತ್ಯಾದಿ ಕಂಡು ಬಂದರೆ ಸರ್ಚ್ ಕೈಗೊಂಡು, ನಿಯಮಗಳೊಂದಿಗೆ ದಾಳಿ ನಡೆಸಲಾಗುತ್ತದೆ.

ಅನುಮಾನ ಬಂದ ಯಾವುದೇ ವ್ಯಕ್ತಿ, ಅಥವಾ ಸಂಸ್ಥೆಯ ಮೇಲೆ ದಾಳಿಗೆ ಮುನ್ನ ಅವರ ಹೆಸರಿನ ಮೇಲೆ ಸರ್ಚ್ ವಾರೆಂಟನ್ನು ಪಡೆದುಕೊಳ್ಳಬೇಕಾಗುತ್ತದೆ. ಐಟಿ ಇಲಾಖೆಯ ಪ್ರಿನ್ಸಿಪಲ್ ಡೈರೆಕ್ಟರ್ ಜನರಲ್ ಅಥವಾ ಡೈರೆಕ್ಟರ್ ಜನರಲ್ ಅಥವಾ ಪ್ರಿನ್ಸಿಪಲ್ ಚಿಪ್ ಕಮಿಷನರ್, ಕಮಿಷನರ್ ಈ ಹುದ್ದೆಯಲ್ಲಿರುವಂತಹ ಅಧಿಕಾರಿಗಳು ಸರ್ಚ್ ವಾರೆಂಟೆನ್ನು ಹೊರಡಿಸಲು ಸಾಧ್ಯ ವಾಗುತ್ತದೆ. ಒಮ್ಮೆ ಸರ್ಚ್ ವಾರೆಂಟ್ ಹೊರಟಿತು ಅಂದ್ರೆ ಅವರ ಮೇಲೆ ಐಟಿ ದಾಳಿ ಆಗುತ್ತದೆ ಅಂತಲೆ ಅರ್ಥ. ಈ ವಾರೆಂಟ್ ಇಶ್ಯೂ ಆದ ಬೆನ್ನ, ರೇಡ್ ಮಾಡುವುದಕ್ಕೆ ಸರ್ಚ್ ಟೀಮ್ ಅನ್ನು ಐಟಿ ಇಲಾಖೆಯವರು ತಯಾರು ಮಾಡಿಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ಎಷ್ಟೊಂದು ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆಂದರೆ, ಯಾರ ಮೇಲೆ ದಾಳಿ ನಡೆಯುತ್ತಿದೆ ಎಂಬುದನ್ನು ದಾಳಿ ತಂಡದ ಸದಸ್ಯರಿಂದಲೂ ಮುಚ್ಚಿಡಲಾಗುತ್ತದೆ. ಬೆಳ್ಳಂಬೆಳಗ್ಗೆದ್ದು ದಾಳಿಗೆ ಹೊರಡುವಾಗಲೇ, ಮುಚ್ಚಿದ ಲಕೋಟೆ ಯೊಂದರಲ್ಲಿ ಸರ್ಚ್ ವಾರೆಂಟ್ ಅನ್ನು ಅವರ ಕೈಗೆ ಕೊಡಲಾಗುತ್ತದೆ. ಯಾರ ಮೇಲೆ ಐಟಿ ದಾಳಿ ನಡೆಯಬೇಕಿರುತ್ತದೋ ಆ ವ್ಯಕ್ತಿಯ ವಿಳಾಸ ಮತ್ತು ಇತರೆ ಮಾಹಿತಿಗಳು ಅದರಲ್ಲಿರುತ್ತವೆ. ಆ ಆಧಾರದ ಮೇಲೆ ಐಟಿ ದಾಳಿ ನಡೆಯುತ್ತದೆ.

ಕೆಲ ಸಂದರ್ಭದಲ್ಲಿ ಕೆಲ ವ್ಯಕ್ತಿಯ ವಿರುದ್ಧ ಹೊರಟ ಸರ್ಚ್ ವಾರೆಂಟ್ ಅವರಿಗೆ ಸಂಬಂಧಿಸಿದ ಮನೆ, ಕಚೇರಿ, ಸಂಬಂಧಿಕರ ಮನೆಗಳು ಸೇರಿದಂತೆ ಹಲೆವೆಡೆಗಳಿಗೆ ಒಮ್ಮೊಮ್ಮೆ ಏಕಕಾಲಕ್ಕೆ ಅನ್ವಯವಾಗುವಂತಿರುತ್ತದೆ. ಹಾಗೆಯೇ ಏಕಕಾಲಕ್ಕೆ  ದಾಳಿಗಳನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ನಸುಕಿನ ಜಾವವೇ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸುತ್ತದೆ. ಐಟಿ ತಂಡದ ಸದಸ್ಯರು, ತಮ್ಮ ಗುರುತು ಹೇಳಿ, ತಮ್ಮಲ್ಲಿನ ಸರ್ಚ್ ವಾರೆಂಟನ್ನು ಕಡ್ಡಾಯವಾಗಿ ತೊರಿಸಲೇಬೆಕಾಗುತ್ತದೆ. ಆಗ ಆ ಮನೆಯವರು ಅದು ಸರಿಯಾಗಿದೆಯಾ ಎಂಬುದಾಗಿ ಪರಿಶೀಲನೆ ಮಾಡುತ್ತಾರೆ. ಆ ಅಧಿಕಾರ ಕುಟುಂಬದವರಿಗಿರುತ್ತದೆ.

ಒಮ್ಮೆ ಐಟಿ ಅಧಿಕಾರಿಗಳು ಮನೆಯೊಳಗೆ ಪ್ರವೇಶಿಸದ ಮೇಲೆ ಮುಗಿಯಿತು. ಅವರ ಪರಿಶೀಲನೆ ಕಾರ್ಯವೆಲ್ಲವೂ ಪೂರ್ಣ ಗೊಳ್ಳುವವರೆಗೂ ಮನೆಯಿಂದ ಯಾರೊಬ್ಬರೂ ಹೊರ ಹೊಗುವಂತಿಲ್ಲ. ಹೊರಗಿಂದ ಒಳ ಬರುವಂತಲೂ ಇಲ್ಲ. ಅಲ್ಲದೆ ಯಾವುದೇ ದೂರವಾಣಿ ಕರೆ, ಮೆಸೇಜಸ್ ಗಳು ಹೊಗದಂತೆ, ಬರದಂತೆ ಕಟ್ಟುನಿಟ್ಟಿನ ನಿರ್ಭಂಧಗಳನ್ನು ಅಧಿಕಾರಿಗಳು ಹಾಕುತ್ತಾರೆ. ಮನೆಯವರು ಶೌಚಾಲಯ ಬಳಕೆ ಮಾಡಬೇಕಾದರೂ ಕೂಡ ಅಧಿಕಾರಿಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕಾಗುತ್ತದೆ.

ಸಂದರ್ಭ ಬಂದರೆ ಐಟಿ ಅಧಿಕಾರಿಗಳು ಸ್ಥಳಿಯ ಪೋಲೀಸರ ನೆರವನ್ನೂ ಕೂಡ ಪಡೆದುಕೊಳ್ಳುತ್ತಾರೆ. ಕೆಲವೊಮ್ಮೆ ಕೇಂದ್ರದಲ್ಲಿ ಒಂದು ಸರಕಾರ, ರಾಜ್ಯದಲ್ಲಿ ಮತ್ತೊಂದು ಸರಕಾರಗಳು ಇದ್ದಲ್ಲಿ, ಸ್ಥಳಿಯ ಪೋಲಿಸ್ ಅಧಿಕಾರಿಗಳು ಮಾಹಿತಿಯನ್ನು ಬಿಟ್ಟುಕೊಡಬಹುದೆಂಬ ಅನುಮಾನ ಬಂದಲ್ಲಿ, ಕೇಂದ್ರೀಯ ಸಶಕ್ತ ಪಡೆಗಳ ಬೆಂಬಲದಿಂದ ಅವರ ರಕ್ಷಣೆಯೊಂದಿಗೆ ದಾಳಿಗಳನ್ನು ನಡೆಸುತ್ತಾರೆ. ಈ ತರಹದ ದಾಳಿಗಳಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದಿವೆ.

ಐಟಿ ತಂಡಕ್ಕೆ ಸಾಕಷ್ಟು ಅಧಿಕಾರ ಇರುತ್ತದೆ. ಯಾವುದೇ ವ್ಯಕ್ತಿಯ ಮನೆ, ಆತನ ವಾಹನ, ಕಚೇರಿ, ಬ್ಯಾಂಕ್ ಸೇರಿದಂತೆ ಅಕ್ರಮವಾಗಿ ಎಲ್ಲಿ ದುಡ್ಡು, ಚಿನ್ನ ಅಮೂಲ್ಯವಾದಂತಹ ವಸ್ತುಗಳು ಆಸ್ತಿ ಪತ್ರಗಳನ್ನು ಬಚ್ಚಿಟ್ಟಿರಬಹುದೆಂಬ ಅನುಮಾನ ಬರುತ್ತದೆಯೋ ಅ ಹೋಗಿ ಪರಿಶೀಲಿಸುವ ಅಧಿಕಾರ ಅವರಿಗಿರುತ್ತದೆ. ಮನೆಯಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ಕೂಡ ವೈಯಕ್ತಿಕವಾಗಿ ವಿಚಾರಣೆಗೊಳಪಡಿಸಬಹುದು.

ಯಾವುದೇ ಲಾಕರ್ ಅಥವಾ ಕೊಠಡಿಗಳ ಬಾಗಿಲು-ಬೀಗವನ್ನು ಅಧಿಕಾರಿಗಳು ಮುರಿದು ತೆಗೆಯಲೂ ಬಹುದು. ದಾಳಿಯ ವೇಳೆ
ಸಿಕ್ಕಂತಹ ನಗದು, ಚಿನ್ನ ಆಭರಣ, ಅಮೂಲ್ಯವಾದ ವಸ್ತುಗಳು, ಆಸ್ತಿ ಪತ್ರಗಳಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು
ಮನೆಯವರು ಕೊಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆ ಸಂಪತ್ತನ್ನು ಮುಟ್ಟುಗೋಲು ಹಾಕುವುದು ಸಾಮಾನ್ಯ. ಇದರಲ್ಲಿ ಅಘೋಷಿತವಾದ ಚಿನ್ನ-ನಗದು, ಅಮೂಲ್ಯ ವಸ್ತುಗಳು ಬುಕ್ಸ್ ಆಫ್ ಅಕೌಂಟ್ಸ್, ಚಲನ್, ಡೈರಿಗಳು, ಆಸ್ತಿ ಪತ್ರಗಳು ಇತರೆ ದಾಖಲೆ ಪತ್ರಗಳು, ಕಂಪ್ಯೂಟರ್, ಲ್ಯಾಪ್ ಟಾಪ್, ಪೆಂನ್ ಡ್ರೈವ್ ಮುಂತಾದವುಗಳೂ ಸೇರುತ್ತವೆ.

ಇನ್ನು ಕೆಲವೊಂದು ಸಂಪತ್ತುಗಳನ್ನು ಸೀಜ್ ಮಾಡುವಂತಿಲ್ಲ. ಘೋಷಿತ ಆದಾಯ, ಆಸ್ತಿ, ವಿವಾಹಿತ ಮಹಿಳೆ ಆಗಿದ್ದರೆ ಅರ್ಧ ಕೆಜಿಯಷ್ಟು ಚಿನ್ನ, ಅವಿವಾಹಿತ ಮಹಿಳೆ ಯಾಗಿದ್ದರೆ ಕಾಲ ಕೆಜಿ ಚಿನ್ನ, ಮನೆಯ ಪುರುಷ ಸದಸ್ಯ ಆಗಿದ್ದರೆ ನೂರು ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು. ಇವುಗಳಿಗೆ ರೆಕಾರ್ಡ್ ಇಲ್ಲದಿದ್ದರೂ ಇವುಗಳನ್ನು ಯಾವುದೇ ಕಾರಣಕ್ಕೂ ಜಪ್ತಿ ಮಾಡುವ ಹಾಗಿಲ್ಲ. ಇಷ್ಟು ಪ್ರಮಾಣದ ಚಿನ್ನವನ್ನು ಇಟ್ಟುಕೊಳ್ಳಬಹುದೆಂಬ ಕಾನೂನು ಕೂಡ ಇದೆ.

ಈ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ-ಆಭರಣ ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ, ಅದೆಲ್ಲದಕ್ಕೂ ದಾಖಲೆ
ಕೊಡಬೇಕು. ಮುಟ್ಟುಗೋಲು ಹಾಕಿಕೊಂಡ ಚಿನ್ನ-ಆಭರಣ, ಆಸ್ತಿ, ಹಣದ ಬಗ್ಗೆ ಅಧಿಕಾರಿಗಳು ಕೂಡಲೇ ಸ್ಟೇಟ್‌ಮೆಂಟೊಂ
ದನ್ನು ತಯಾರಿಸುತ್ತಾರೆ. ಸರ್ಚ್ ಆಪರೇಷನ್ ಮುಗಿಯುವ ಮೊದಲು ಮನೆಯವರ ಹೇಳಿಕೆಯನ್ನೂ ಪಡೆದುಕೊಂಡು, ಆ ಮಹಜರು ಪತ್ರಕ್ಕೆ ಮನೆಯವರ ಸಹಿ ಪಡೆದು ಸಾರ್ವಜನಿಕವಾಗಿ ಅದನ್ನು ಬಿಡುಗಡೆ ಮಾಡುತ್ತಾರೆ.

ಮುಟ್ಟುಗೋಲು ಆದಂತಹ ಆಸ್ತಿ ಪತ್ರಗಳೆಲ್ಲವೂ ಆದಾಯ ತೆರಿಗೆ ಕಚೇರಿಯ ಸ್ಟ್ರಾಂಗ್ ರೂಮ್ ಸೇರಿರುತ್ತವೆ. ಒಂದು ವೇಳೆ ಈ ಸಂಪತ್ತು ತನ್ನದೆಂಬುದಕ್ಕೆ ಆ ವ್ಯಕ್ತಿ ದಾಖಲೆಗಳನ್ನು ತೊರಿಸಿ ಸಾಬೀತು ಪಡಿಸಿದರೆ, ಅದಕ್ಕೂ ಮುನ್ನ ಆ ದಾಖಲೆಗಳ ಕುರಿತಾಗಿ ಅದಕ್ಕೆಲ್ಲ ತೆರಿಗೆ ಸಂದಾಯ ಆಗಿದೆಯೋ ಅಥವಾ ಇಲ್ಲವೆಂಬುದನ್ನು ಪರಿಶೀಲಿಸುವ, ಅದಕ್ಕೆ ತೆರಿಗೆ ಕಟ್ಟದೆ ಇದ್ದರೆ, ಅದೇ ಹಣದಲ್ಲಿ ಅದರ ತೆರಿಗೆ ಮೊತ್ತ ಕಡಿತ ಮಾಡಿಕೊಳ್ಳುವ ಅಧಿಕಾರ ಇದೆ. ಮಿಕ್ಕುಳಿದರೆ ವಾಪಸ್ ಕೊಡುತ್ತಾರೆ.

ದಾಳಿಗೊಳಗಾದ ವ್ಯಕ್ತಿ, ಸಂಸ್ಥೆ, ಕಚೇರಿ ಇತ್ಯಾದಿ ಇವರಿಗೂ ಕೂಡ ಕೆಲವು ಹಕ್ಕುಗಳಿರುತ್ತವೆ. ಮನೆಯಲ್ಲಿ ಮಹಿಳೆಯರನ್ನು ವೈಯಕ್ತಿಕವಾಗಿ ಪರಿಶೀಲನೆಗೆ ಒಳಪಡಿಸುವಾಗ ಮಹಿಳಾ ಸಿಬ್ಬಂದಿಯೇ ಆ ಕೆಲಸವನ್ನು ಮಾಡಬೇಕಾಗುತ್ತದೆ. ಜತೆಗೆ ಇಡಿ, ಐಟಿ ದಾಳಿ ನಡೆಯುವ ಸಂದರ್ಭದಲ್ಲಿ ಆ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಹೊರಗಿನ ಅಕ್ಕ ಪಕ್ಕದ ಇಬ್ಬರನ್ನು ಸಾಕ್ಷಿಯಾಗಿ ಕರೆಸುವ ಅಧಿಕಾರ ದಾಳಿಗೊಳಗಾದ ವ್ಯಕ್ತಿಗಿರುತ್ತದೆ.

ಮೆಡಿಕಲ್ ಎಮರ್ಜೆನ್ಸಿ ಸಂದರ್ಭದಲ್ಲಿ ವೈದ್ಯರನ್ನು ಕರೆಸಬಹುದು. ಮಕ್ಕಳನ್ನು ಶಾಲೆಗೆ ಕಳುಹಿಸಬಹುದು. ದಾಳಿ ಮಾಡಿದ ಎಲ್ಲ ವಸ್ತುಗಳ ಮೇಲೆ ಸೀಲ್ ಹಾಕಿರುತ್ತಾರೆ. ಆ ಸೀಲ್ ಸರಿಯಾಗಿದೆಯೊ ಇಲ್ಲವೋ ಅನ್ನೊದನ್ನು ಪರಿಶೀಲನೆ ಮಾಡುವ ಹಾಗೂ
ಪಂಚನಾಮೆಯ ಪ್ರತಿ ಮತ್ತು ಮುಟ್ಟುಗೋಲು ಹಾಕಿರುವ ವಸ್ತುಗಳ ಪಟ್ಟಿಯ ಪ್ರತಿಯನ್ನು ಕೇಳುವ ಅಧಿಕಾರ ಕುಟುಂಬದ ಸದಸ್ಯರಿಗಿರುತ್ತದೆ.

ಐಟಿ ಅಧಿಕಾರಿಗಳು ತನ್ನ ಮೇಲೆ ಅನಗತ್ಯ ದಾಳಿ ಮಾಡಿ, ಸುಖಾ ಸುಮ್ಮನೆ ಕಿರಿ ಕಿರಿ ಮಾಡಿದ್ದಾರೆ. ಇದರಿಂದ ತನಗೆ ಅನ್ಯಾಯ ವಾಗಿದೆ ಅಂತ ಅನಿಸಿದರೆ ಅಂತವರು ಹೈ ಕೋರ್ಟ್ ಮೊರೆ ಹೊಗಿ ಮೇಲ್ಮನವಿ ಅರ್ಜಿ ಹಾಕಲು ಹಾಗೂ ಐಟಿ ದಾಳಿ ವಿರುದ್ದ ಕಮಿಷನರ್ ಆಫ್ ಇನಕಮ್ ಟ್ಯಾಕ್ಸ್ ಮುಂದೆ ಅಪೀಲ್ ಮಾಡೋದಕ್ಕೆ ಅಧಿಕಾರ ಇರುತ್ತದೆ. ಇದೆಲ್ಲದಕ್ಕೂ ಮೊದಲು ಐಟಿ ದಾಳಿಗೊಳಗಾದ ವ್ಯಕ್ತಿ ಐಟಿ ಅಧಿಕಾರಿಗಳಿಗೆ ಸಹಕರಿಸಬೇಕಾಗುತ್ತದೆ.

ಕೇಳಿದ ದಾಖಲೆಗಳನ್ನು ಸರಿಯಾಗಿ ಕೊಡಬೇಕು. ಯಾವುದೇ ಸಂಪತ್ತನ್ನು ಮುಚ್ಚಿಡಲು ಪ್ರಯತ್ನಿಸುವುದಾಗಲಿ, ಐಟಿ,
ಇಡಿ ದಾಳಿ ಆಯಿತು ಅಂತ ದಾಖಲೆಗಳನ್ನು ಸುಡುವುದು, ನಾಶ ಮಾಡುವುದು, ಸುಳ್ಳು ಹೇಳುವ ಗೋಜಿಗಂತೂ ಹೋಗಲೇ ಬಾರದು. ಹಾಗೆ ಮಾಡಿದವರನ್ನು ಕಾನೂನಿನ ಪ್ರಕಾರ ಶಿಕ್ಷಿಸಬಹುದು ಹಾಗೂ ದಂಡ ಹಾಕಬಹುದು. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಹೆಚ್ಚಾಗಿ ಪ್ರಯತ್ನಿಸಿದಷ್ಟೂ ಸಿಲುಕಿಕೊಳ್ಳುವುದಂತೂ ಪಕ್ಕಾ. ಹಾಗಾಗಿ ದಾಳಿ ನಡೆದ ಬಳಿಕ ಪಾಲೊ ಆಫ್ ಇನ್ವೇಸ್ಟಿಗೆಷನ್‌ಗೆ ಸಹಕಾರ ಕೊಡಬೇಕು. ಈ ರೀತಿಯಲ್ಲಿ ಐಟಿ ದಾಳಿಗಳು ನಡೆಯುತ್ತವೆ.