Sunday, 3rd July 2022

ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾದ ಸಿದ್ದು-ಡಿಕೆಶಿ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ನವೆಂಬರ್ ಹೊತ್ತಿಗೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆಯೇ? ನಡೆದರೆ ಅದನ್ನು ಎದುರಿಸಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆಯೇ? ಇಂಥ
ದೊಂದು ಅನುಮಾನ ದೆಹಲಿಯ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದೆ. ಅಂದ ಹಾಗೆ ಈ ವರ್ಷದ ಅಂತ್ಯದಲ್ಲಿ ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆಯಲ್ಲ.

ಈ ಚುನಾವಣೆಯ ಹೊತ್ತಿಗೆ ಕರ್ನಾಟಕ ವಿಧಾನಸಭೆಗೂ ಚುನಾವಣೆ ನಡೆಯಬಹುದು ಎಂಬ ಮಾತು ಕೆಲ ತಿಂಗಳ ಹಿಂದೆ ಕೇಳಿ ಬಂದಿತ್ತು. ಆದರೆ ಈ ಮಾತು ತೇಲಿ ಬಂದಷ್ಟೇ ವೇಗವಾಗಿ ಕಣ್ಮರೆಯಾಗಿತ್ತು. ಯಾಕೆಂದರೆ ಇವತ್ತಿನ ಸ್ಥಿತಿಯಲ್ಲಿ ಚುನಾವಣೆಗಳನ್ನು ಎದುರಿಸಲು ಒಂದು ಪಕ್ಷದವರು ಅಂತಲ್ಲ, ಆಡಳಿತಾರೂಢ ಪಕ್ಷದ ಶಾಸಕರೂ ಸೇರಿದಂತೆ ಎಲ್ಲರೂ ಹಿಂಜರಿಯುತ್ತಾರೆ. ಕಾರಣ? ಮುಂಚಿನಂತೆ ಈಗ ವ್ಯಕ್ತಿ ವರ್ಚಸ್ಸಿನ ಮೇಲೆ, ಪಕ್ಷದ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸುವುದು ಕಷ್ಟ. ಒಂದು ವೇಳೆ ಅದರ ಬಲವಿದ್ದರೂ ಮತದಾರರ ಮುಂದೆ ಹೋಗುವಾಗ ದೊಡ್ಡ ಮಟ್ಟದ ದುಡ್ಡಿನ ಬಲ ಇರಬೇಕು.

ಹೀಗಾಗಿ ಯಾವುದೇ ಪಕ್ಷದ ಶಾಸಕರಿರಲಿ, ಅವಧಿ ಪೂರ್ವ ಚುನಾವಣೆಗೆ ಹೋಗಲು ಹಿಂಜರಿಯುತ್ತಾರೆ. ಹೀಗೆ ಚುನಾವಣೆಗೆ ಹೋಗಲು ಶಾಸಕರು ಹಿಂಜರಿಯು ತ್ತಿರುವಾಗ ಕೇಂದ್ರದ ಬಿಜೆಪಿ ನಾಯಕರಾದರೂ ಯಾಕೆ ಅವಧಿಪೂರ್ವ ಚುನಾವಣೆಗೆ ಒತ್ತಾಯ ಮಾಡುತ್ತಾರೆ? ಹಾಗೆಂಬ ಮಾತು ಚರ್ಚೆಗೆ ಬರುತ್ತಿದ್ದಂತೆಯೇ ಅವಧಿ ಪೂರ್ವ ಚುನಾವಣೆಯ ಮಾತುಗಳು ಕ್ಷೀಣವಾದವು. ಆದರೆ ಕಾಂಗ್ರೆಸ್ ವರಿಷ್ಠರ ಸದ್ಯದ ಅನುಮಾನವೆಂದರೆ ಕರ್ನಾಟಕದಲ್ಲಿ ನವೆಂಬರ್ ಹೊತ್ತಿಗೆ ವಿಧಾನಸಭೆ ಚುನಾವಣೆಗಳು ನಡೆಯುತ್ತವೆ ಮತ್ತು ಅದಕ್ಕೆ ಬೇಕಾದ ಸಿದ್ಧತೆಯನ್ನು ಬಿಜೆಪಿ ಮಾಡಿಕೊಳ್ಳುತ್ತಿದೆ.

ಕಾಂಗ್ರೆಸ್ ಪಕ್ಷ ಚುನಾವಣೆಗೆ ಇನ್ನೂ ಕಾಲಾವಕಾಶವಿದೆ ಎಂದು ಮೈ ಮರೆತಿರುವ ಕಾಲದ ಇದ್ದಕ್ಕಿದ್ದಂತೆ ಚುನಾವಣೆ ಎದುರಾಗುವಂತೆ ಮಾಡುವುದು, ಎದುರಾಳಿ ಕಕ್ಕಾಬಿಕ್ಕಿಯಾಗಿರುವ ಕಾಲದ ಮೇಲೆರಗಿ ಅಡ್ಡ ಮಲಗಿಸುವುದು ಬಿಜೆಪಿಯ ತಂತ್ರ ಎಂಬುದು ಕಾಂಗ್ರೆಸ್ ವರಿಷ್ಠರ ಅನುಮಾನ. ಅದರ ಈ ಅನುಮಾನದ ಮತ್ತೊಂದು ಮುಖವೆಂದರೆ, ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ನಡೆದರೆ ಅದನ್ನೆದುರಿಸಲು ರಾಜ್ಯ ಕಾಂಗ್ರೆಸ್ ಸಿದ್ಧವೇ? ಎಂಬುದು. ಯಾಕೆಂದರೆ ಏನೇ ಮಾಡಿದರೂ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಹೊಯ್ದಕ್ಕಿ ಬೇಯುತ್ತಿಲ್ಲ. ಇಬ್ಬರ ನಡುವೆ ಇರುವ ಬಿಕ್ಕಟ್ಟು ಒಂದೇ. ಅದೆಂದರೆ ಪಕ್ಷ ಅಧಿಕಾರಕ್ಕೆ ಬಂದರೆ ತಾವೇ ಸಿಎಂ ಆಗಬೇಕು ಎಂಬುದು.

ಇಂಥ ಮಹತ್ವಾಕಾಂಕ್ಷೆ ಇರುವ ಕಾರಣಕ್ಕಾಗಿ ಉಭಯ ನಾಯಕರು ಪಕ್ಷದಲ್ಲಿ ತಮ್ಮದೇ ಸೇನಾ ಶಿಬಿರಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಸೇನಾ ಶಿಬಿರಗಳು ಕೂಡ ಸಮಯ ಸಿಕ್ಕಾಗಲೆಲ್ಲ ಎದುರಾಳಿ ಶಿಬಿರದ ನಾಯಕನ ಮೇಲೆ ದಾಳಿ ನಡೆಸುತ್ತಿರುತ್ತವೆ. ಇಂತಹ ದಾಳಿ ಎಲ್ಲಿಯವರೆಗೆ ತಲುಪಿದೆ ಎಂದರೆ ಸಿದ್ದರಾಮಯ್ಯ ಅವರ ವಿರುದ್ಧ ಡಿಕೆಶಿ ಗುಂಪು, ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅವರ ಗುಂಪು ಹೈಕಮಾಂಡ್‌ಗೆ ದೂರು ಸಲ್ಲಿಸುತ್ತಲೇ ಇವೆ. ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರು ಆಡಳಿತಾರೂಢ ಬಿಜೆಪಿಯ ವಿರುದ್ಧ ಪರಿಪೂರ್ಣ ಹೋರಾಟ ನಡೆಸುತ್ತಿಲ್ಲ.

ಬದಲಿಗೆ ಬಿಜೆಪಿಯಲ್ಲಿ ವೈಯಕ್ತಿಕವಾಗಿ ತಮಗಾಗದವರ ವಿರುದ್ಧ ವ್ಯವಸ್ಥಿತ ಹೋರಾಟ ನಡೆಸುತ್ತಾರೆ. ಇದಕ್ಕಾಗಿ ಪಕ್ಷವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಡಿಕೆಶಿ ವಿರುದ್ಧ ಇತ್ತೀಚೆಗೆ ಸಲ್ಲಿಕೆಯಾದ ಲೇಟೆಸ್ಟ್ ದೂರು. ಅದರ ಪ್ರಕಾರ ಡಿಕೆಶಿ ಇತ್ತೀಚಿನ ದಿನಗಳಲ್ಲಿ ಪ್ರಮುಖವಾಗಿ ನಡೆಸಿದ ಹೋರಾಟಗಳು ಮೂರು. ಒಂದು, ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧದ್ದು, ಮತ್ತೊಂದು ಕೆ.ಎಸ್. ಈಶ್ವರಪ್ಪ ವಿರುದ್ಧದ್ದು. ಮೂರನೇ ಹೋರಾಟ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧದ್ದು.

ಈ ಪೈಕಿ ರಮೇಶ್ ಜಾರಕಿಹೊಳಿ ಮತ್ತು ಡಿಕೆಶಿ ನಡುವೆ ವೈಯಕ್ತಿಕ ಕಾರಣಗಳಿಗಾಗಿ ದ್ವೇಷ ಬೆಳೆದಿತ್ತು. ಹೀಗಾಗಿ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಹೋರಾಟ ನಡೆಸಿ ಅವರ ಬಲಿ ಹಾಕಿದರು. ಇದೇ ರೀತಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿಧಾನಸಭೆಯಲ್ಲಿ ತಮ್ಮ ವಿರುದ್ಧ ಅಬ್ಬರಿಸಿದ ಬೆಳವಣಿಗೆಯಿಂದ ಕ್ರುದ್ಧಗೊಂಡ ಡಿಕೆಶಿ ವ್ಯವಸ್ಥಿತ ಹೋರಾಟ ರೂಪಿಸಿದರು. ಈ ಹೋರಾಟದಲ್ಲಿ ಪಕ್ಷದ ಬಲವನ್ನು ಬಳಸಿಕೊಂಡು ಯಶಸ್ವಿಯಾದರು. ಈಗ
ಸಚಿವ ಅಶ್ವತ್ಥನಾರಾಯಣ ಅವರು ತಮ್ಮ ಜಿಗೆ ನುಗ್ಗಿ ದಾಳಿ ಮಾಡುತ್ತಿರುವ ರೀತಿಯಿಂದ ಡಿಕೆಶಿ ಕೋಪಗೊಂಡಿದ್ದಾರೆ ಮತ್ತು ಪಿ.ಎಸ್.ಐ. ಹಗರಣದ ಬಲೆಯಲ್ಲಿ ಅವರನ್ನು ಸಿಲುಕಿಸಲು ಹೋರಾಡುತ್ತಿದ್ದಾರೆ.

ಇಂಥ ಹೋರಾಟಗಳನ್ನು ರೂಪಿಸುವ ವಿಷಯದಲ್ಲಿ ಅವರಿಗಿರುವ ಆಸಕ್ತಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿಷಯದಲ್ಲಿಲ್ಲ. ಸರಕಾರಿ ಕಾಮಗಾರಿ ಗಳನ್ನು ಪಡೆದರೆ ನಲವತ್ತು ಪರ್ಸೆಂಟ್ ಕಮಿಷನ್ ಕೊಡಬೇಕು ಎಂದು ರಾಜ್ಯ ಗುತ್ತಿಗೆದಾರರ ಸಂಘ ಸತತವಾಗಿ ಆರೋಪ ಮಾಡಿತಲ್ಲ? ಈ ಆರೋಪದ ಆಧಾರದ ಮೇಲೆ ಅವರು ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಹೋರಾಟ ಮಾಡಬೇಕಿತ್ತು. ಅದೇ ರೀತಿ ಯಡಿಯೂರಪ್ಪ ಅವರ ವಿರುದ್ಧ ಈ ಹಿಂದೆ ಕೇಳಿ ಬಂದ ಆರೋಪಗಳನ್ನು ಎತ್ತಿ ಹಿಡಿದು ಹೋರಾಟ ರೂಪಿಸಬಹುದಿತ್ತು. ಆದರೆ ಅವರು ಇಂಥ ಕೆಲಸಗಳ ಕಡೆ ಗಮನವನ್ನೇ ಕೊಡುವುದಿಲ್ಲ.

ಹೀಗಾಗಿ ಅವರು ರೂಪಿಸುವ ಹೋರಾಟಗಳು ವೈಯಕ್ತಿಕವಾಗಿ ಅವರ ಶಕ್ತಿಯನ್ನು ಹೆಚ್ಚಿಸುತ್ತಿವೆಯೇ ಹೊರತು ಪಕ್ಷದ ಶಕ್ತಿಯನ್ನಲ್ಲ ಎಂಬುದು ಈಗ ಹೈಕಮಾಂಡ್ ಮುಂದೆ ಸಲ್ಲಿಕೆಯಾಗಿರುವ ದೂರಿನ ಸಾರಾಂಶ. ಹೀಗೆ ತಮ್ಮ ಮುಂದೆ ಸಲ್ಲಿಕೆಯಾಗಿರುವ ದೂರಿನ ಬಗ್ಗೆ ವರಿಷ್ಠರು ಚಿಂತಾಕ್ರಾಂತರಾಗಿರುವ ಕಾಲದ ಇನ್ನಷ್ಟು ವಿಷಯಗಳು ಡಿಕೆಶಿ ವಿರುದ್ದ ತಿರುಗಿಕೊಂಡಿವೆ. ಇದರಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತು ಮಾಜಿ ಸಂಸದೆ ರಮ್ಯಾ ಎಪಿಸೋಡುಗಳು ಮುಖ್ಯ ವಾದವು. ಅಂದ ಹಾಗೆ ಒಂದು ಸಂದರ್ಭದಲ್ಲಿ ಮಾಧ್ಯಮದ ವರದಿಗಾರರು, ಸಚಿವ ಅಶ್ವತ್ಥನಾರಾಯಣ ಅವರು ಕಾಂಗ್ರೆಸ್ ನಾಯಕ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದಾರಲ್ಲ? ಅಂತ ಕೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ಡಿಕೆಶಿ, ಭೇಟಿ ಮಾಡಿರಬಹುದು. ಅವರಿಗೂ ಈಗ ರಕ್ಷಣೆ ಬೇಕಲ್ಲ? ಎಂದಿದ್ದಾರೆ. ಸಾಮಾನ್ಯ ಸಂದರ್ಭದಲ್ಲಾಗಿದ್ದರೆ ಈ ಮಾತು ನಡೆದು ಬಿಡುತ್ತಿತ್ತೇನೋ? ಆದರೆ ಡಿಕೆಶಿ ಮಾತು ಎಂ.ಬಿ.ಪಾಟೀಲರ ಕಿವಿಗೆ ಬಿದ್ದ ಕೂಡಲೇ ಅದಕ್ಕಿರುವ ಡೈಮೆನ್ಷ ನ್ನುಗಳು ಕತ್ತಿಯ ರೂಪ ಪಡೆದಿವೆ. ಅಂದ ಹಾಗೆ ಈ ಹಿಂದೆ ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಮುಂದೆ ಒಂದು ಪ್ರಸ್ತಾಪ ಸಲ್ಲಿಸಿದ್ದರು. ರಾಜ್ಯದಲ್ಲಿ ಸಿಎಂ ಆಗಿರುವ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕೆಳಗಿಳಿಸುವುದು ನಿಶ್ಚಿತ.

ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿಯಲ್ಲಿ ಲಿಂಗಾಯತ ನಾಯಕ ಎಂ.ಬಿ.ಪಾಟೀಲರನ್ನು ನಿಲ್ಲಿಸೋಣ. ಹಾಗೆ ಮಾಡಿದರೆ ಲಿಂಗಾಯತ-ಕುರುಬ ಕಾಂಬಿನೇಶನ್ನು ವರ್ಕ್‌ಔಟ್ ಆಗುತ್ತದೆ. ಸಾಂಪ್ರದಾಯಿಕ ವೋಟುಗಳೂ ಸೇರಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲಲು ನಮಗೆ ಸಾಧ್ಯವಾಗುತ್ತದೆ ಎಂಬುದು ಸಿದ್ದರಾಮಯ್ಯ ಪ್ರಪೋಸಲ್ಲು.

ಆದರೆ ಅವತ್ತಿಗಾಗಲೇ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಡಿಕೆಶಿಯನ್ನು ಬಲೆಗೆ ಬೀಳಿಸಿ: ಅಧಿಕಾರವಿದ್ದಾಗ ಸೋನಿಯಾ ಗಾಂಧಿ ಅವರಿಗೆ ತಲುಪಿದ್ದೆಷ್ಟು? ಅನ್ನುವಂಥ ವೈಯಕ್ತಿಕ ಮಾಹಿತಿ ಕಲೆ ಹಾಕಲು ಹೊರಟಿತ್ತು. ಆದರೆ ತಿಹಾರ್ ಜೈಲು ಸೇರಿದರೂ ಡಿಕೆಶಿ ಬಾಯಿ ಬಿಡಲಿಲ್ಲ ಎಂಬುದು ಖುದ್ದು ಸೋನಿಯಾರ ಮೆಚ್ಚುಗೆಗೆ ಕಾರಣವಾಗಿತ್ತು. ಹೀಗಾಗಿ ಡಿಕೆಶಿಯನ್ನು ಮುಂದಿಟ್ಟುಕೊಂಡರೆ ಒಕ್ಕಲಿಗ ಸಮುದಾಯದ ಮತಗಳು ಸಾಲಿಡ್ಡಾಗಿ ಕಾಂಗ್ರೆಸ್ಸಿಗೆ ಬರುವುದಿಲ್ಲ ಎಂಬ ಮಾತುಗಳನ್ನೂ ಲೆಕ್ಕಿಸದೆ ಅವರು ಡಿಕೆಶಿಗೆ ಕೆ.ಪಿ.ಸಿ.ಸಿ. ಸಾರಥ್ಯವನ್ನು ವಹಿಸಿದ್ದರು.

ಯಾವಾಗ ತಮ್ಮ ಪ್ರಪೋಸಲ್ಲಿನ ಮಧ್ಯೆಯೂ ಡಿಕೆಶಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದರೋ? ಆಗಿನಿಂದ ಸಿದ್ದರಾಮಯ್ಯ ಅಪ್‌ಸೆಟ್ ಆಗಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಬನ್ನಿ, ಸೆಂಟ್ರಲ್ ಮಿನಿಸ್ಟರ್ ಆಗಿ ಎಂದು ಎಂ.ಬಿ. ಪಾಟೀಲರಿಗೆ ಆಫರ್ ಕೊಟ್ಟಾಗ ಅವರು ಸಿದ್ದರಾಮಯ್ಯ ಅವರಿಗೆ ವಿಷಯ
ತಿಳಿಸಿದರು. ಆಗ ಸಿದ್ದರಾಮಯ್ಯ ಯಾವ ಕಾರಣಕ್ಕೂ ಬಿಜೆಪಿ ಕಡೆ ಹೋಗಬೇಡಿ. ಇಲ್ಲೇ ನಿಮಗೆ ದೊಡ್ಡ ಅವಕಾಶ ಸಿಗುತ್ತದೆ ಎಂದು ಮನವೊಲಿಸಿದ್ದರು. ಆದರೆ ಈ ಮನವೊಲಿಕೆಗೆ ಒಪ್ಪಿದ ಎಂ.ಬಿ. ಪಾಟೀಲರಿಗೆ ಸಿಕ್ಕಿದ್ದು ರಾಜ್ಯ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ. ಹಾಗಂತ ಇದು ಎಂ.ಬಿ. ಪಾಟೀಲರಿಗೆ ತೃಪ್ತಿ ಯನ್ನೇನೂ ತಂದಿಲ್ಲ.

ವಾಸ್ತವವಾಗಿ ಅವರ ಕಣ್ಣಿದ್ದದ್ದು ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನದ ಮೇಲೆ. ಹೀಗಿರುವಾಗಲೇ ಡಿಕೆಶಿ ಆಡಿದ ಮಾತು ಎಂ.ಬಿ. ಪಾಟೀಲರ ತಲೆಯಲ್ಲಿ ಹಲವು ರೂಪ ಗಳನ್ನು ಪಡೆದು, ಇದು ತಮ್ಮ ಮುಖಕ್ಕೆ ಮಸಿ ಬಳಿಯುವ ಯತ್ನ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿತು. ಹೀಗಾಗಿ ಅವರು ರಾಜ್ಯ ಕಾಂಗ್ರೆಸ್‌ನ
ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಅವರಿಗೆ ಫೋನು ಮಾಡಿ ಕೆ.ಪಿ.ಸಿ.ಸಿ. ಅಧ್ಯಕ್ಷರು ನನ್ನನ್ನು ಅವಮಾನಿಸಿದ್ದಾರೆ ಎಂದು ದೂರಿದರು. ಹೀಗೆ ಒಂದು ಕಡೆ ಎಂ.ಬಿ. ಪಾಟೀಲರ ಎಪಿಸೋಡು ಅಮರಿಕೊಂಡರೆ ಮತ್ತೊಂದು ಕಡೆ ಮಾಜಿ ಸಂಸದೆ ರಮ್ಯಾ ಎಪಿಸೋಡು ಅಮರಿಕೊಂಡಿತು.

ಶುರುವಿನಲ್ಲಿ ಎಂ.ಬಿ.ಪಾಟೀಲರನ್ನು ಸಮರ್ಥಿಸಿಕೊಂಡು ಮಾತನಾಡಿದ ರಮ್ಯಾ ತದನಂತರ ಡಿಕೆಶಿ ವಿರುದ್ಧವೇ ಮುಗಿಬಿದ್ದರು. ಪರಿಣಾಮ? ಈಗ ಡಿಕೆಶಿ ವಿಷಯ ದಲ್ಲಿ ಹೈಕಮಾಂಡ್ ವರಿಷ್ಠರು ಚಿಂತಿತರಾಗಿದ್ದಾರೆ. ಅವರಿಗೂ ಗೊತ್ತಿರುವುದೆಂದರೆ ಇಂಥ ವಿಷಯಗಳನ್ನು ಹಿಡಿದುಕೊಂಡು ಸಿದ್ದರಾಮಯ್ಯ ಮತ್ತವರ ಬೆಂಬಲಿ ಗರು ಡಿಕೆಶಿಯನ್ನು ಬಡಿಯುತ್ತಲೇ ಹೋಗುತ್ತಾರೆ ಎಂಬುದು. ಹೀಗೆ ಡಿಕೆಶಿಯನ್ನು ಬಡಿಯುವ ಕೆಲಸ ಸಿದ್ರಾಮಯ್ಯ ಬಣದಿಂದ ಮುಂದುವರಿದರೆ ರಾಜ್ಯದಲ್ಲಿ ಪಕ್ಷ ಮೇಲೆದ್ದು ನಿಲ್ಲುವುದು ಹೇಗೆ? ಎಂಬುದು ಅವರ ಆತಂಕ. ಅಂದ ಹಾಗೆ ಸಿದ್ದರಾಮಯ್ಯ ಅವರ ವಿರುದ್ಧ ಡಿಕೆಶಿ ಗ್ಯಾಂಗು ವರಿಷ್ಠರಿಗೆ ಕಂಪ್ಲೇಂಟು ಸಲ್ಲಿಸುವ ಕೆಲಸ ಮಾಡುತ್ತಿದೆಯಾದರೂ, ಒಟ್ಟಾರೆಯಾಗಿ ಇವೆಲ್ಲ ಸೇರಿ ಪಕ್ಷದ ಒಗ್ಗಟ್ಟನ್ನು ನಾಶ ಮಾಡುತ್ತಿವೆ ಎಂಬುದು ವರಿಷ್ಠರ ಯೋಚನೆ.

ಇಂಥ ಕಂಪ್ಲೇಂಟುಗಳ ಭಾರ ಜಾಸ್ತಿಯಾದಾಗ ಈ ಹಿಂದೆ ರಾಹುಲ್ ಗಾಂಧಿ ಅವರು ಸಿದ್ರಾಮಯ್ಯ ಮತ್ತು ಡಿಕೆಶಿಯನ್ನು ದಿಲ್ಲಿಗೆ ಕರೆಸಿ ಒಗ್ಗಟ್ಟಿನ ಮಂತ್ರ ಜಪಿಸಿ ದ್ದರು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ ಎಂಬುದು ಕಾಂಗ್ರೆಸ್ ವರಿಷ್ಠರಿಗೆ ಯಾವತ್ತೋ ಕನ್ ಫರ್ಮ್ ಆಗಿ ಹೋಗಿದೆ. ಇಂಥ ಕಾಲದ ಕರ್ನಾಟಕ ದಲ್ಲಿ ಅವಧಿಪೂರ್ವ ಚುನಾವಣೆ ನಡೆದರೆ ಸ್ವಯಂ ಬಲದ ಮೇಲೆ ಗೆಲ್ಲುವುದಿರಲಿ, ಕಳೆದ ಚುನಾವಣೆಯಲ್ಲಿ ಗೆದ್ದಷ್ಟು ಸ್ಥಾನಗಳನ್ನೂ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬುದು ಅವರ ಯೋಚನೆ.

ಹೀಗಾಗಿಯೇ ಕಳೆದ ವಾರ ರಾಜಸ್ಥಾನದ ಉದಯಪುರದಲ್ಲಿ ನಡೆದ ಪಕ್ಷದ ಕಾರ್ಯಾಗಾರದ ಸಂದರ್ಭದಲ್ಲಿ ಈ ಕುರಿತು ಡಿಕೆಶಿ-ಸಿದ್ರಾಮಯ್ಯ ಇಬ್ಬರಿಗೂ ವರಿಷ್ಠರು ಒಗ್ಗಟ್ಟಿನ ಅನಿವಾರ್ಯತೆಯ ಬಗ್ಗೆ ಟಿಪ್ಸ್ ಕೊಟ್ಟಿದ್ದಾರೆ. ಆದರೆ ಅದು ಎಷ್ಟರ ಮಟ್ಟಿಗೆ ವರ್ಕ್‌ಔಟ್ ಆಗುತ್ತದೋ ಗೊತ್ತಿಲ್ಲ