Friday, 7th May 2021

ಇಡ್ಲಿ ಅಜ್ಜಿಯ ಕಾಯಕ ನಿಷ್ಠೆ

ಸುರೇಶ ಗುದಗನವರ

ಕಳೆದ ನಾಲ್ಕು ದಶಕಗಳಿಂದ ಏಕಾಂಗಿಯಾಗಿ ಇಡ್ಲಿ ತಯಾರಿಸಿ, ಮಾರುವ ಅಜ್ಜಿಯ ಕಥನ ಇಂದು ಪ್ರಸಿದ್ಧಿ ಗಳಿಸಿದೆ. ಒಂದು ರುಪಾಯಿಗೆ ಇಡ್ಲಿ, ಚಟ್ನಿ ನೀಡುವ ಈ ಅಜ್ಜಿಯ ಕೈಂಕರ್ಯವು, ಶ್ರದ್ಧೆ, ಕಾಯಕ ನಿಷ್ಠೆ ಮತ್ತು ಏಕಾಗ್ರತೆಗೆ ಒಂದು ಉತ್ತಮ ಉದಾಹರಣೆ!

ಜೀವನದಲ್ಲಿ ಉತ್ಸಾಹ ಎಂಬುದೊಂದು ಇರುತ್ತಲ್ಲಾ, ಅದನ್ನು ಮೈಗೂಡಿಸಿ ಕೊಂಡವರಿಗೆ ಎಂದಿಗೂ ಬೇಸರ ಇಲ್ಲ, ರೇಜಿಗೆ ಇಲ್ಲ, ಕಷ್ಟಗಳು ಬಂದರೂ ಚಿಂತೆ ಕಾಡುವುದಿಲ್ಲ. ಹಿಡಿದ ಕೆಲಸವನ್ನು ವೃತದಂತೆ ಮಾಡುವ ಹಲವರನ್ನು ನೀವು ನೋಡಿರ ಬಹುದು. ಅವರ ಜೀವನೋತ್ಸಾಹ ಎಲ್ಲರಿಗೂ ಮಾದರಿ. ಅವರಿಗೆ ಕಷ್ಟ ಇರಬಹುದು ಆದರೆ ಅವರಿಗೆ ಚಿಂತೆ ಇಲ್ಲ, ಬದುಕಿನಲ್ಲಿ ನೆಮ್ಮದಿ ಗೆ ಕೊರತೆ ಇಲ್ಲ.

ಪ್ರಸ್ತುತ ಕಾಲದಲ್ಲಿ ಒಂದು ಇಡ್ಲಿಗೆ ಸರಾಸರಿ ಹತ್ತು ರೂ. ಬೆಲೆ. ಹಳ್ಳಿಗಳಲ್ಲೂ ಈ ಬೆಲೆ ತೀರ ಕಡಿಮೆ ಏನಿಲ್ಲ. ಆದರೆ, 80 ವರ್ಷದ ಅಜ್ಜಿಯೊಬ್ಬರು ಕಳೆದ ಹಲವಾರು ವರ್ಷಗಳಿಂದ ಇಡ್ಲಿಯನ್ನು ಒಂದು ರೂಪಾಯಿಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹವ್ಯಾಸಕ್ಕಾಗಿ ಬಡಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುವ ಅಜ್ಜಿಯದು ಒಂದು ಮಾದರಿ ಎನಿಸುವ ವೃತ್ತಿ. ಇಡ್ಲಿ ಅಜ್ಜಿ ಎಂದೇ ಖ್ಯಾತರಾದ ಇವರ ಹೆಸರು ಎಂ.ಕಮಲಥಾಳ್. ಇಡ್ಲಿ ಪಾಟಿ ತಮಿಳುನಾಡಿನ ಕೊಯಮತ್ತೂರಿನ ಸಣ್ಣ ಕುಗ್ರಾಮದ
ವಾಡಿವೇಲಂಪಲಯದವರಾದ ಎಂ.ಕಮಲಥಾಳ್ ಅವರು ಹುಟ್ಟಿದ್ದು ಕೃಷಿ ಕುಟುಂಬದಲ್ಲಿ. ಅವಿಭಕ್ತ ಕುಟುಂಬ.

ಇಡ್ಲಿ ತಯಾರಿಸಿ ಮಾರುವುದು ಒಂದು ಉಪ ಕಸುಬು. ಕಮಲಥಾಳ್ ಅದಕ್ಕೆ ಬೇಕಾದ ನೈಪುಣ್ಯತೆಯನ್ನು ಕರಗತ ಮಾಡಿ ಕೊಂಡರು.

ಅವರ ಪತಿ ಅವರನ್ನು ತೊರೆದ ಬಳಿಕ ಏಕಾಂಗಿಯಾಗಿ ಇಡ್ಲಿ ಮಾರಾಟ ಮಾಡಲು ತೊಡಗಿದರು. ಅಕ್ಕಿ, ಬೇಳೆ, ತರಕಾರಿಗಳು ಎಲ್ಲದರ ಬೆಲೆಯೂ ಗಗನಕ್ಕೇದಿದ್ದರೂ ಈ ಅಜ್ಜಿ -ಇಂದಿಗೂ ಕೇವಲ ಒಂದು ರೂಪಾಯಿಗೆ ಒಂದು ಇಡ್ಲಿಯನ್ನು ಕಳೆದ 35 ವರ್ಷಗಳಿಗೂ ಅಧಿಕ ಸಮಯದಿಂದ ನಿಸ್ವಾರ್ಥವಾಗಿ ಮಾರುತ್ತಿರುವದು ನಿಜಕ್ಕೂ ಆಶ್ಚರ್ಯವಾಗಿದೆ.

ಮೊದಲು ನಾಲ್ಕಾಣೆ, ಎಂಟಾಣೆಗೆ ಇಡ್ಲಿ ಮಾರುತ್ತಿದ್ದು, ಈಚೆಗೆ ಒಂದು ರುಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರು, ಶ್ರಮ ಜೀವಿಗಳು, ಸ್ಥಳೀಯರೇ ಈಕೆಯ ಗ್ರಾಹಕರು. ಇವರು ನೀಡುವ ಇಡ್ಲಿ, ಕಾಯಿ ಚಟ್ನಿಯ ತಿಂಡಿ ಕೊಯ ಮತ್ತೂರಿನಲ್ಲಿ ಸಣ್ಣ ಸೆನ್ಸೇಷನ್ ಉಂಟು ಮಾಡಿದೆ!

ಆದ್ದರಿಂದಲೇ ಸ್ಥಳೀಯರು ಇವರನ್ನು ಇಡ್ಲಿ ಪಾಟಿ (ಇಡ್ಲಿ ಅಜ್ಜಿ)ಎನ್ನುತ್ತಾರೆ. ಇವರು ತಯಾರಿಸಿ, ಒಂದು ರುಪಾಯಿಗೆ ಮಾರು ಇಡ್ಲಿಗೆ ‘ಪಾಟಿ ಇಡ್ಲಿ’  ಎಂಬ ಅಡ್ಡ ಹೆಸರು ಹುಟ್ಟಿಕೊಂಡಿದೆ! ಅಜ್ಜಿಯ ಉಪಹಾರ ಗೃಹ ನೋಡಲು ಅಷ್ಟೇನೂ ಆಕರ್ಷ
ಣೀಯವಾಗಿರದೇ ಹಳ್ಳಿಗಳಲ್ಲಿರುವ ಹಳೆಯ ಗುಡಿಸಲನ್ನು ಹೋಲುತ್ತದೆ. ಆದರೆ ಬೆಳಗ್ಗೆ ಅಲ್ಲಿ ಜನಸಂದಣಿ.

ಅಜ್ಜಿಯ ಇಡ್ಲಿ, ಸಾಂಬಾರ್ ಮತ್ತು ಚಟ್ನಿಯ ರುಚಿಯನ್ನು ಸವಿಯಲು ಜನರು ಹುಡುಕಿಕೊಂಡು ಬರುತ್ತಾರೆ. ಕಮಲಥಾಳ್ ಅಜ್ಜಿಯ ದೈನಂದಿನ ಚಟುವಟಿಕೆ ಬೆಳಿಗ್ಗೆೆ 5ಗಂಟೆಗೆ ಆರಂಭಗೊಳ್ಳುತ್ತದೆ. ಇಂದಿಗೂ ಅಂದಾಜು ಎಂಟು ಕೆ.ಜಿ. ಅಕ್ಕಿಯನ್ನು ಬಳಸಿ ಇಡ್ಲಿ ಹಿಟ್ಟನ್ನು ತಯಾರಿಸಿ, ಪ್ರತಿ ದಿನ 600 ಬಿಸಿ ಬಿಸಿ ಯಾದ ಇಡ್ಲಿಗಳನ್ನು ತಯಾರಿಸುತ್ತಾರೆ. ತಾವೇ ಸ್ವತಃ ರುಬ್ಬಿ ಚಟ್ನಿ ತಯಾರಿಸು ತ್ತಾರೆ. ಈಚೆಗೆ ಮಗ, ಸೊಸೆ ಸಹಾಯ ದೊರಕಿದೆ. ಬೆಳಿಗ್ಗೆ 6ಗಂಟೆಗೆ ಗ್ರಾಹಕರಿಗೆ ಆರಂಭವಾಗುವ ಈ ಉಪಹಾರಗೃಹ ಮಧ್ಯಾಹ್ನದವರೆಗೂ ತೆರೆದಿರುತ್ತದೆ. ಅವರ ಹೆಚ್ಚಿನ ಗ್ರಾಹಕರು ಕಾರ್ಮಿಕರು, ಸ್ಥಳೀಯ ಕೆಳ ಮಧ್ಯಮ ವರ್ಗದ ಶ್ರಮಿಕರು.

ಇಡ್ಲಿ ಕಥೆ ವೈರಲ್ ಆಯ್ತು!
ಇಳೀ ವಯಸ್ಸಿನ ಕಮಲಥಾಳ್ ಅಜ್ಜಿ ವಯೋಸಹಜವಾಗಿ ಸುಕ್ಕುಗಟ್ಟಿದ ಮುಖ, ಕಣ್ಣುಗಳು ಸಹ ಮಂಜಾಗಿವೆಯಾದರೂ
ಯಾವುದೇ ಮಧ್ಯವಯಸ್ಕ ಮಹಿಳೆಗಿಂತಲೂ ಅತ್ಯಂತ ಚುರುಕಾಗಿ ಕಾಣಿಸಿಕೊಳ್ಳುತ್ತಾರೆ.

ಕೇವಲ ಒಂದು ರುಪಾಯಿಗೆ ಒಂದು ಇಡ್ಲಿಯನ್ನು ಮಾರುತ್ತಿದ್ದ ಇವರ ಸಾಹಸವನ್ನು ಕೆಲವು ಉತ್ಸಾಹಿಗಳು ವಿಡಿಯೋ ಮಾಡಿ, ವೈರಲ್ ಮಾಡಿದ ನಂತರ ಇವರು ಸಾಕಷ್ಟು ಪ್ರಸಿದ್ಧರೂ ಆಗಿದ್ದರು. ಈಚೆಗೆ ಅವರ ಮೊಮ್ಮಗನ ಪತ್ನಿ ಪಿ.ಆರತಿ ಅಜ್ಜಿಯ ಜೊತೆ ಸಹಾಯಕರಾಗಿದ್ದಾರೆ. ಅಲ್ಲದೇ ಅಜ್ಜಿಯ ಈ ಮಹಾನ್ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿರುವದು ನಿಜಕ್ಕೂ ಮೆಚ್ಚಬೇಕಾದ ಸಂಗತಿಯೇ. ಸಾಂಪ್ರದಾಯಿಕ ವಾಗಿ ಇಡ್ಲಿ ತಯಾರಿಸುವುದಲ್ಲದೆ, ಪ್ರತಿ ದಿನವೂ ಬೇರೆ ಬೇರೆ ತರಹದ ಸಾಂಬಾರು ಮಾಡುವದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

‘ಇಂದಿಗೂ ಹಲವಾರು ಜನರಿಗೆ ಒಪ್ಪೊತ್ತಿನ ಊಟವು ಸಿಗದ ಪರಿಸ್ಥಿತಿ ಇದೆ. ಹಸಿದವರ ಹೊಟ್ಟೆ ತುಂಬಿಸಿವುದು ಒಂದು ಶ್ರೇಷ್ಠ ಕಾರ್ಯ. ಹಾಗಾಗಿ ಅಂಥವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುವ ಮನಸ್ಸಿನಿಂದ ಈ ಕಾಯಕವನ್ನು ಮುಂದುವರಿಸಿ ಕೊಂಡು ಹೋಗುತ್ತಿದ್ದೇನೆ. ನಾನೆಂದು ಇದನ್ನು ಒಂದು ವ್ಯಾಪಾರವೆಂದು ಯೋಚಿಸಿಯೇ ಇಲ್ಲ’ ಎಂದು ಅಜ್ಜಿಯ ಮನದಾಳದ ಮಾತುಗಳನ್ನು ಕೇಳಿದರೆ ಹೃದಯ ತುಂಬಿ ಬರುತ್ತದೆ. ದೇಶದ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು ಅಜ್ಜಿಯ ಸಮಾಜ ಮುಖಿ ಕಾರ್ಯ ನೋಡಿ ಬೆರಗಾಗಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಿದ್ದರು.

ಇದೇ ವೇಳೆ ಅಜ್ಜಿಗೆ ನಾನು ಏನಾದರೂ ಸಹಾಯ ಮಾಡುತ್ತೇನೆ ಎಂದು ಹೇಳಿದ್ದರು. ಇಂತಹ ಟ್ವೀಟ್ ಗಳಿಂದಾಗಿ ಬೆಳಗಾಗುವು ದರೊಳಗೆ ಅಜ್ಜಿ ಮತ್ತಷ್ಟು ಖ್ಯಾತಿಯನ್ನು ಪಡೆದುಕೊಂಡದ್ದೂ ನಿಜ.

ಕೊಡುಗೆಗಳ ಮಹಾಪೂರ

ಕೊಯಮತ್ತೂರಿನ ಮಿಕ್ಸರ್ ಗ್ರೈಂಡರ್ ತಯಾರಿಕಾ ಕಂಪನಿಯೊಂದು ಅಜ್ಜಿಗೆ ಪ್ರೀತಿಯಿಂದ ಮಿಕ್ಸರ್ ಗ್ರೈಂಡರ್ ಉಡುಗೊರೆ ಯಾಗಿ ನೀಡಿದೆ. ಅಲ್ಲದೇ ಭಾರತ ಗ್ಯಾಸ್ ಕಂಪನಿಯವರು ಉಚಿತವಾಗಿ ಅಜ್ಜಿಯ ಮನೆಗೆ ಗ್ಯಾಸ್ ಕನೆಕ್ಷನ್ ನೀಡಿದೆ. ಆದರೆ ‘ನನಗೆ ಗ್ಯಾಸ್ ಉಪಯೋಗ ಗೊತ್ತಿಲ್ಲ!’ ಎಂದು ಈ ಅಜ್ಜಿ ಎಲ್ಲರನ್ನು ಅಚ್ಚರಿಗೆ ನೂಕಿದ್ದಳು!

ಅರೆಯುವ ಕಲ್ಲಿನಲ್ಲಿ ಹಿಟ್ಟನ್ನು ಅರೆದು, ಸೌದೆ ಒಲೆಯಲ್ಲೇ ಇಡ್ಲಿ ಮಾಡುವುದು ಆಕೆಯ ಅನುಗಾಲದ ಪದ್ಧತಿ! ಉದ್ಯಮಿ ಆನಂದ ಮಹೀಂದ್ರ ಅವರು ತಾವು ಕೊಟ್ಟ ಮಾತಿನಂತೆ ಇದೀಗ ಅಜ್ಜಿಗೆ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಅಜ್ಜಿಗೆ ನಿವೇಶನ ನೋಂದಣಿ ಮಾಡಿಸಿಕೊಡಲಾಗಿದೆ. ಇದೀಗ ಮನೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಕುರಿತು ಆನಂದ
ಮಹೀಂದ್ರ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಈ ಕಾಲದಲ್ಲೂ ಬಡವರಿಗಾಗಿ ಬದುಕುವ ಹಲವಾರು ಜೀವಗಳಿವೆ. ಅಜ್ಜಿ ಬಳಿ ಕೂಲಿ ಕಾರ್ಮಿಕರು, ಅಟೋ ಚಾಲಕರು, ಮಹಿಳಾ ಕಾರ್ಮಿಕರು ಹೀಗೆ ಅಸಂಘಟಿತ ವಲಯದವರು ಹೆಚ್ಚಾಗಿ ಇಡ್ಲಿಯನ್ನು ತೆಗೆದುಕೊಳ್ಳುತ್ತಾರೆ. ಒಟ್ಟಿನಲ್ಲಿ ಅನ್ನದಾನ ಮಹಾದಾನ ಎನ್ನುವಂತೆ 80 ವರ್ಷದ ಎಂ.ಕಮಲಥಾಳ್ ಅವರ ಇಡ್ಲಿ ವ್ಯಾಪಾರ ಮಾದರಿಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರ ವಾಗಿದೆ. ಒಂದು ರೀತಿಯಲ್ಲಿ ನೋಡಿದರೆ, ನಮ್ಮ ದೇಶದ ಹಳ್ಳಿಯ ಅಂತರಂಗವನ್ನು ಈ ಅಜ್ಜಿ ಪ್ರತಿನಿಧಿಸುತ್ತಿದ್ದಾರೆ.

ಲಾಭದ ಆಸೆ ಇಲ್ಲದೆ, ತನ್ನ ಪಾಡಿಗೆ ತಾನು ಗೊತ್ತಿದ್ದ ಕೆಲಸವನ್ನು ಮಾಡಿಕೊಂಡು ಹೋಗುವುದನ್ನು ಇವರು ತೋರಿಸಿ ಕೊಟ್ಟಿದ್ದಾರೆ. ಹಿಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಇಂದಿನ ಯುವಜನಾಂಗಕ್ಕೆ ತೋರಿಸಿಕೊಡುವಂತಿದೆ ಈ
ಅಜ್ಜಿಯ ಇಡ್ಲಿ ಉದ್ಯೋಗ!

Leave a Reply

Your email address will not be published. Required fields are marked *