Tuesday, 27th July 2021

ಕನಸು ದೊಡ್ಡದಾದರೆ, ಅಂತರಿಕ್ಷವೂ ಕೈಗೆಟುಕದೇ ಇರದು !

ವಿರಾಜಯಾನ

ವಿರಾಜ್ ಕೆ ಅಣಜಿ

virajkVishwavani@gmail.com

ಮಂಗನಿಂದ ಮಾನವನ ವಿಕಾಸ ಆದ ನಂತರ, ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವುದನ್ನು ಕಲಿತ. ಮೀನಿನಷ್ಟೇ ಸರಾಗವಾಗಿ ಈಜುವುದನ್ನು
ಕಲಿತ. ಗುಡ್ಡ, ತೊರೆಗಳನ್ನು ದಾಟಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದನ್ನು ಕಲಿತ. ಇದರಿಂದಾಗಿ ಭೂ ಮಂಡಲದ ಮೂಲೆಮೂಲೆ ಯನ್ನೂ ಹುಡುಕಲು ಆರಂಭಿಸಿದ. ಈ ಯಾನವೆಲ್ಲವೂ ಮೊದಲು ಅನ್ವೇಷಕರಿಂದ ಆರಂಭವಾಯಿತು.

ನಂತರ ವಾಸ್ಕೋ ಡಿಗಾಮ, ಅಮೆರಿಗೋ ವೆಸ್ಪುಸಿಯಂಥ ನಾವಿಕರು ಹೊಸ ಜಗತ್ತನ್ನು ಹುಡುಕಿ ಹೊರಟರು. ನಂತರ ವ್ಯಾಪಾರಿಗಳು ತಮ್ಮ ಸರಂಜಾಮು ಹೇರಿಕೊಂಡು ಸಮುದ್ರಗಳನ್ನು ದಾಟಿ ಹೊರಟರು. ಜಗತ್ತನ್ನು ಗೆಲ್ಲಬೇಕು ಎಂದು ಚಕ್ರವರ್ತಿಗಳು ಎನಿಸಿಕೊಂಡ ಹಲವರು ಭೂಮಂಡಲದ ಪ್ರದಕ್ಷಿಣೆ ಆರಂಭಿಸಿ ದರು. ಜಲಮಾರ್ಗಗಳ ನಂತರ ತಂತ್ರಜ್ಞಾನದ ಬಲದಿಂದ ವಾಯುಯಾನ ಆರಂಭವಾಯಿತು. ತಂತ್ರಜ್ಞಾನ, ವಿಜ್ಞಾನದ ಬಹುದೊಡ್ಡ ಕ್ರಾಂತಿಯಿಂದಾಗ ಅಂತರಿಕ್ಷಕ್ಕೂ ಲಗ್ಗೆ ಇಡುವ ಪ್ರಯತ್ನ ಪ್ರಾರಂಭವಾದವು, ಅದರ ಲ್ಲಿಯೂ ನಾವು ಸೈ ಎನಿಸಿಕೊಂಡೆವು. ಭೂಮಿಯನ್ನು ಬಿಟ್ಟು ಆಚೆ ಏನಿದೆ, ಜಗತ್ತಿನ ಸೃಷ್ಟಿಯ ಗುಟ್ಟುಗಳೇನು ಎಂದು ಅರಿಯಲು ಇಸ್ರೊ, ನಾಸಾದಂತಹ ಸಂಸ್ಥೆಗಳು ಮುಂದಾದವು.

ದೇಶದ ಗಡಿ ರಕ್ಷಣೆ, ಟೆಲಿ ಕಮ್ಮೂನಿಕೇಷನ್ ವಿಚಾರದಲ್ಲಿ ಒಂದರ ಹಿಂದೊಂದು ಸ್ಯಾಟಲೈಟ್‌ಗಳನ್ನು ಅಂತರಿಕ್ಷದಲ್ಲಿ ಕೂರಿಸಿ ಬರಲಾಯಿತು. ಇದೆಲ್ಲದರ ಫಲ ವಾಗಿಯೇ ಇಡೀ ಜಗತ್ತು ನಮ್ಮ ಪಕ್ಕದ ಮನೆಯಷ್ಟೇ ಹತ್ತಿರದಲ್ಲಿದೆ ಎನ್ನುವಷ್ಟು ಆಪ್ತವಾಯಿತು. ಜಗತ್ತಿನ ಯಾವ ಮೂಲೆಯನ್ನು ಬೇಕಾದರೂ ಕುಳಿತಲ್ಲಿಯೇ
ನೋಡುವ, ಅಲ್ಲಿದ್ದವರೊಂದಿಗೆ ಮಾತನಾಡುವ ಅವಕಾಶ ಪ್ರಾಪ್ತವಾಯಿತು. ಇಷ್ಟೆಲ್ಲ ಆದರೂ, ಮಾನವನ ಅಂತರಂಗದಲ್ಲಿ ಅಂತರಿಕ್ಷ ಒಂದು ಕೌತುಕವನ್ನು ಹುಟ್ಟು ಹಾಕುತ್ತಲೇ ಇತ್ತು. ಬಾಹಾಕಾಶ್ಯ ಹೇಗಿದೆ ಎಂಬುದನ್ನು ಫೀಲ್ ಮಾಡಬೇಕು ಎಂಬುದು ಹಲವರ ಕನಸಾಗಿತ್ತು. ಸದ್ಯ ನಾವಿರುವೆಡೆ ಮೂವತ್ತು- ನಲವತ್ತು ಅಳತೆಯ ಒಂದು ಸೈಟ್ ತೆಗೆದುಕೊಳ್ಳುವುದೂ ದುಸ್ತರ ಎನಿಸುವಂಥ ಕಾಲದಲ್ಲಿ ಅಂತರಿಕ್ಷವನ್ನು ನೋಡಿ ಬರಬೇಕು ಎಂಬ ಕನಸು ಕಾಣಲೂ ಕೂಡ ಗುಂಡಿಗೆ ಬೇಕಿತ್ತು.

ಆದರೆ, ಅದನ್ನೆಲ್ಲ ಮೀರಿ ತಾನು ಅಂತರಿಕ್ಷಕ್ಕೆ ಟೂರ್ ಹೋಗಬೇಕು ಎಂದುಕೊಂಡಿದ್ದೇನೆ. ಇದು ನನ್ನ ಜೀವಮಾನದ ಪರಮ ಗುರಿ ಎಂದು 2004ರಲ್ಲಿ
ವರ್ಜಿನ್ ಸಂಸ್ಥೆಯ ಮಾಲೀಕ ರಿಚರ್ಡ್ ಬ್ರಾನ್ಸನ್ ಘೋಷಿಸಿದ್ದರು. ಆಗ ಅದು ನಿಜಕ್ಕೂ ಸಾಧ್ಯವೇ ಅನಿಸಿದ್ದುಂಟು. ಆದರೆ, ಬ್ರಾನ್ಸನ್ ಅವರೇನು ಸುಮ್ಮನೇ ಈ ಮಾತನ್ನು ಹೇಳಿರಲಿಲ್ಲ. ಅವರಿಗೆ ದೊಡ್ಡ ಕನಸು ಕಾಣುವುದು ಹೇಗೆ ಎಂಬುದು ಗೊತ್ತಿತ್ತು. ಅದಕ್ಕಿಂತ ಮಿಗಿಲಾಗಿ, ಕಂಡ ಕನಸನ್ನು ನನಸಾಗಿಸಿಕೊಳ್ಳಲು ಎಂಥ ರಿಸ್ಕ್ ಬೇಕಾದರೂ ತೆಗೆದುಕೊಂಡು, ಅಂದುಕೊಂಡಿದ್ದನ್ನು ಪೂರೈಸಿ ಕೊಳ್ಳಬಲ್ಲೆ ಎಂಬ ಸಿಂಹದಂಥ ಆತ್ಮಬಲವಿತ್ತು.

ಅದಕ್ಕಾಗಿಯೇ ತಾನು ಸ್ಪೇಸ್ ಟೂರ್ ಮಾಡಬೇಕು ಎಂದು ಘೋಷಣೆ ಮಾಡುವ ಮೊದಲಿನಿಂದಲೇ ಬ್ರಾನ್ಸನ್, ಈ ಬಗ್ಗೆ ಸತತ ಪ್ರಯೋಗ, ಪ್ರಯತ್ನ
ಆರಂಭಿಸಿದ್ದರು. ಆದರೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸದ್ಯದಲ್ಲಿ ಆಗುತ್ತಿರುವ ಬೆಳವಣಿಗೆ, ನಾಸಾ ಅಥವಾ ಯೂರೋಪ್ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆಗಳಿಂದ
ತನ್ನ ಆಸೆ ಈಡೇರಿಕೆ ಕಷ್ಟ ಸಾಧ್ಯ ಎಂಬುದನ್ನು ಬ್ರಾನ್ಸನ್ ಅಂದೇ ಅರಿತಿದ್ದರು. ಆದರೂ ತನ್ನ ಬಾಲ್ಯದ ಆಸೆಯನ್ನು ಸುಲಭವಾಗಿ ಕೈ ಚೆಲ್ಲಲು ಬ್ರಾನ್ಸನ್ ಅವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ವರ್ಜಿನ್ ಗ್ಯಾಲಕ್ಟಿಕ್ ಎಂಬ ಹೆಸರಿನಲ್ಲಿ ಸ್ವಂತದ್ದೊಂದು ಸ್ಪೇಸ್-ಪ್ಲೇನ್ ತಯಾರಿಕಾ ಕಂಪನಿಯನ್ನೇ ಆರಂಭಿಸಿಬಿಟ್ಟರು.

ತನ್ನ ಕನಸು-ನನಸು ಮಾಡಿಕೊಳ್ಳಲು ಯಾರೂ ಊಹಿಸಲಾಗದ ಕಠಿಣ ರಿಸ್ಕ್ ಮತ್ತು ದೊಡ್ಡ ಪ್ರಯತ್ನಕ್ಕೆ ಬ್ರಾನ್ಸನ್ ಕೈ ಹಾಕಿದ್ದರು! ಈ ಮೂಲಕ ಬಾಹ್ಯಾಕಾಶ ಪ್ರವಾಸೋದ್ಯಮದ ಯುಗದಲ್ಲಿ ಪ್ರಾರಂಭವಾದ ಖಾಸಗಿ ಒಡೆತನದ ವಿಶ್ವದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ವರ್ಜಿನ್ ಪಾತ್ರವಾಯಿತು. ತನ್ನದೊಂದು ಕನಸು ನನಸು ಮಾಡಿಕೊಳ್ಳಲು ಕೋಟಿ ಕೋಟಿ ಹಣವನ್ನು ಬ್ರಾನ್ಸನ್ ವ್ಯಯಿಸಿದರು. ಅದರಲ್ಲಿ ಅಪಾರ ಪರಿಶ್ರಮ, ಪ್ರಯತ್ನ, ಸಮಯ ಎಲ್ಲವೂ ಒಳಗೊಂಡಿತ್ತು. ಆದರೆ, ಎಲ್ಲ ಸಾಧನೆಗಳ ಮುನ್ನ ಸಹಜವೆಂಬಂತೆ, ವರ್ಜಿನ್ ಕೂಡ ದೊಡ್ಡ ಪೆಟ್ಟು, ಸೋಲುಗಳನ್ನು ಕಾಣಬೇಕಾಯಿತು.

2007ರಲ್ಲಿ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿ ರಾಕೆಟ್ ಮೋಟಾರ್ ಪರೀಕ್ಷೆ ಮಾಡುವಾಗ ಪ್ರಯೋಗ ವಿಫಲವಾಗಿ ಮೂವರು ಅಪ್ರತಿಮ ತಾಂತ್ರಿಕ ತಜ್ಞರು ಮೃತಪಟ್ಟರು. ಆಗ, ತಮ್ಮ ಯೋಜನೆಯಲ್ಲಿ ದೊಡ್ಡ ಹಿನ್ನಡೆಯಾದರೂ ಬ್ರಾನ್ಸನ್ ಕೈ ಚೆಲ್ಲದೆ ಮತ್ತದೆ ಜೋಶ್‌ನಲ್ಲಿ ಮುನ್ನಡೆದರು. ಆದರೆ ಮತ್ತೆ 2014ರಲ್ಲಿ ಸ್ಟಾರ್ ಟ್ರೆಕ್ ಹಡಗಿನ ಹೆಸರಿನ ಮತ್ತೊಂದು ಪ್ರಯೋಗಾರ್ಥ ಸ್ಪೇಸ್ ಶಿಪ್ ಕೂಡ ವಿಫಲವಾಗಿ ಪೈಲಟ್ ಮೃತಪಟ್ಟರು. ತನ್ನದೊಂದು ಕನಸಿನ ಪೂರೈಕೆಗಾಗಿ ಇಷ್ಟೆಲ್ಲ ಶ್ರಮ, ಹಣ ಪೋಲಾಗುತ್ತಿದ್ದರೂ ಕೂಡ ಬ್ರಾನ್ಸನ್ ಅವರಿಗೆ ಈ ಬಗ್ಗೆ ಚಿಂತೆಯಿರಲಿಲ್ಲ. ಅದೇನೇ ಕಷ್ಟವಾಗಲಿ, ನಷ್ಟವೂ ಆಗಲಿ ಅಂದು ಕೊಂಡದ್ದು ಆಗಲೇಬೇಕು.

ಅಂತರಿಕ್ಷಕ್ಕೆ ಟೂರಿಸ್ಟ್ ರೀತಿ ಹೋಗಿ ಭೂಮಿಯನ್ನು ಮೇಲಿನಿಂದ ಕಣ್ತುಂಬಿಕೊಳ್ಳಲೇ ಬೇಕು ಎಂದು ತಪಸ್ಸಿನ ರೀತಿ ಹಠ ಹಿಡಿದು ಬ್ರಾನ್ಸನ್ ಕುಳಿತಿದ್ದರು. ಸತತ ಸೋಲು, ಹಿನ್ನಡೆಯ ನಡುವೆ 2018-19ರಲ್ಲಿ ವರ್ಜಿನ್ ಗ್ಯಾಲಕ್ಟಿಕ್‌ನ ಒಂದು ಪ್ರಯೋಗಾರ್ಥ ಸ್ಪೇಸ್ ಶಿಪ್, ಭೂಮಿಯ ಗುರುತ್ವಾಕರ್ಷಣ ರೇಖೆಯ ಕಾಲ್ಪನಿಕ ಗಡಿಯನ್ನು ಮುಟ್ಟಿ ಬಂದಿತು. ಇದೊಂದು ಯಶಸ್ವಿ ಪ್ರಯೋಗದಿಂದ ತನ್ನ ಕನಸು ಈಡೇರಿಸಿಕೊಳ್ಳುವ ಸಮಯ ಹತ್ತಿರ ಬಂದ ಖುಷಿ ಬ್ರಾನ್ಸನ್ ಪಾಲಿಗೆ ಒದಗಿ ಬಂತು.

ಅದೆಲ್ಲದರ ಫಲವಾಗಿ, 2021ರ ಇದೇ ಜುಲೈ 11ರಂದು ವರ್ಜಿನ್ ಗಲಾಕ್ಟಿಕ್ ಎಂಬ ತಮ್ಮದೇ ಕಂಪನಿ ನಿರ್ಮಿಸಿದ ಖಾಸಗಿ ಸ್ಪೇಸ್ ಪ್ಲೇನ್‌ನಲ್ಲಿ ಅಂತರಿಕ್ಷಕ್ಕೆ
ಯಾತ್ರೆ ಮಾಡಿ ಬಂದಿದ್ದಾರೆ. ಅಂದರೆ, ಸತತ 17 ವರ್ಷಗಳ ಕಾಲ, ತಾನು ಆಡಿದ ಮಾತನ್ನು, ಬಾಲ್ಯದಲ್ಲಿ ಕಂಡಿದ್ದ ಕನಸನ್ನು 71ರ ಹರೆಯದ ಬ್ರಾನ್ಸನ್
ನನಸಾಗಿಸಿಕೊಂಡಿದ್ದಾರೆ. ಈ ಮೂಲಕ, ಖಾಸಗಿಯಾಗಿ ಅಂತರಿಕ್ಷ ಯಾನ ಮಾಡಿದ, ಆಸ್ಟ್ರೋನಾಟ್ ಅಲ್ಲದ ಜಗತ್ತಿನ ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಬ್ರಾನ್ಸನ್ ಪಾತ್ರರಾಗಿದ್ದಾರೆ. ಈ ಮನುಷ್ಯನ ಇಚ್ಛಾಶಕ್ತಿಯ ಬಲ ಇಷ್ಟು ಗಟ್ಟಿಯಿದ್ದೀತು ಎಂಬುದನ್ನು ಊಹಿಸಲು ಕಷ್ಟಸಾಧ್ಯ.

ಆದರೆ ಇದೇ ಹೊತ್ತಲ್ಲೇ, ಹತ್ತು ಬ್ರಾನ್ಸನ್‌ಗಳಿಗೆ ಸಮ ಎನ್ನುವಂತೆ ಲಕ್ಷ್ಮಿ ಪುತ್ರನೇ ಆಗಿರುವ ಅಮೆಜಾನ್‌ನ ಸಿಇಒ ಜೆಫ್ ಬಿಜೋಸ್ ಕೂಡ ಬ್ರಾನ್ಸನ್ ರೀತಿಯೇ ಗುರಿ ಇಟ್ಟುಕೊಂಡೇ ಕೆಲಸ ಆರಂಭಿಸಿದ್ದರು. ಅಂತರಿಕ್ಷ ಯಾನವು ಬ್ರಾನ್ಸನ್ ರೀತಿ ಬಿಜೋಸ್ ಅವರಿಗೆ ಬಾಲ್ಯದ ಕನಸಾಗಿರಲಿಲ್ಲ. ಇದನ್ನು ಅವರು ಒಂದು ವ್ಯವಹಾರವಾಗಿ ನೋಡುತ್ತಿದ್ದರು. ಸದ್ಯಕ್ಕಂತೂ ಎಲ್ಲ ಕ್ಷೇತ್ರ ಮತ್ತು ರಂಗದಲ್ಲಿ ಎಲ್ಲೆಡೆಯೂ ಭಾರಿ ಪೈಪೋಟಿಯಿದೆ. ಈಗ ಸದ್ಯ ಖಾಲಿ ಇರುವುದು ಎಂದರೆ ಅಂತರಿಕ್ಷ ಮಾತ್ರ. ಈ ಕ್ಷೇತ್ರದಲ್ಲಿ ತಾನೇಕೆ ಹೊಸದೊಂದು ಪ್ರಯತ್ನ ಮಾಡಬಾರದು ಎಂದು ಬಿಜೋಸ್ ತಾಲೀಮು ನಡೆಸುತ್ತಲೇ ಇದ್ದರು.

ಅದಕ್ಕಾಗಿಯೇ ಬ್ಲೂ ಒರಿಜಿನ್ ಹೆಸರಿನ ರಾಕೆಟ್ ರೆಡಿ ಮಾಡಿಕೊಂಡರು. ತನ್ನೆಲ್ಲ ಸಿದ್ಧತೆಯ ನಂತರ ಅಂತಿಮವಾಗಿ ಎರಡು ದಿನದ ಹಿಂದಷ್ಟೇ (ಜುಲೈ 20)
ಬಿಜೋಸ್ ಕೂಡ ತಮ್ಮ ಮೊದಲ ಅಂತರಿಕ್ಷ ಯಾನವನ್ನು ಯಶಸ್ವಿಯಾಗಿ ಪೂರೈಸಿ ಬಂದರು. ಈಗ ಇವರ ಹಿಂದೆಯೇ ಟೆಸ್ಲಾದ ಇಲಾನ್ ಮಸ್ಕ್ ಕೂಡ
ಸ್ಪೇಸ್ ಎಕ್ಸ್ ಎಂಬ ತಮ್ಮದೇ ಸಂಸ್ಥೆಯ ಮೂಲಕ ಸ್ಪೇಸ್ ನಲ್ಲಿ ರೇಸ್ ಆಡಲು ಸಿದ್ಧವಾಗಿದ್ದಾರೆ. ಬಹುಶಃ ಒಂದು ದಶಕದ ಒಳಗೆಯೇ ಅಂತರಿಕ್ಷದಲ್ಲೂ ಕೂಡ ಟ್ರಾಫಿಕ್ ಜಾಮ್ ಆದರೂ ಅಚ್ಚರಿ ಪಡಬೇಕಿಲ್ಲ.

ಇದೆಲ್ಲದರ ನಡುವೆ ಬ್ರಾನ್ಸನ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಹಲವೆಡೆ ಟೀಕೆಗಳು ಕೇಳಿ ಬಂದವು. ಹಾಗೆ ನೋಡಿದರೆ, ಈ ವರ್ಷ ಅಂತರಿಕ್ಷಕ್ಕೆ ಹಾರುವ
ಯಾವುದೇ ಸಿದ್ಧತೆ ಮತ್ತು ಯೋಜನೆಗಳನ್ನು ಬ್ರಾನ್ಸನ್ ಹೊಂದಿರಲಿಲ್ಲ. ಆದರೆ, ಬಿಜೋಸ್ ಅವರು ಜುಲೈ ೨೦ಕ್ಕೆ ತಮ್ಮ ಯಾನದ ಟ್ರಿಪ್ ಟೈಂ ಟೇಬಲ್ ಇದೆ
ಎಂದು ಘೋಷಣೆ ಮಾಡಿದ್ದರ ಪರಿಣಾಮ ಬ್ರಾನ್ಸನ್ ಅವಸರಕ್ಕೆ ಬಿದ್ದರು. ಖಾಸಗಿಯಾಗಿ ಅಂತರಿಕ್ಷಕ್ಕೆ ಹಾರಿದ ಮೊದಲಿಗ ನಾನಾಗಬೇಕು ಎಂಬ ಅವಸರ, ಆತುರಕ್ಕೆ ಬಿದ್ದು ತರಾತುರಿಯಲ್ಲಿ ಯಾನ ಕೈಗೊಂಡಿದ್ದಾರೆ ಎಂದು ಅಪಹಾಸ್ಯಗಳೂ ಕೇಳಿ ಬಂದವು. ಹಾಗೆ ನೋಡಿದರೆ, ವರ್ಜಿನ್ ಗ್ಯಾಲಕ್ಟಿಕ್ ಭೂಮಿಯಿಂದ
ಹಾರಿದ್ದೇ ೮೫-೯೦ ಕಿಲೋ ಮೀಟರ್ ತನಕ ವಷ್ಟೇ.

ಇದು ಅಂತರಿಕ್ಷ(ಜೀರೋ ಗ್ರಾವಿಟಿ)ದ ಅನುಭವ ನೀಡುವುದೇ ಇಲ್ಲ. ಕರ್ಮನ್ ಲೈನ್ (atmosphere-space ನಡುವಿನ ಅಂತರ) ಇರುವುದೇ ೧೦೦ ಕಿಮೀ ನಂತರ ಎಂಬುದು ಅಮೆಜಾನ್ ಕಂಪನಿ ವಾದ. ಅಮೆರಿಕದ ನಾಸಾ ಪ್ರಕಾರ 85 ಕಿಮೀ ಅಂತರದಲ್ಲಿಯೇ ಕರ್ಮನ್ ಲೈನ್ ಇದೆ ಎಂಬುದು ವರ್ಜಿನ್ ಅವರ ಪ್ರತಿವಾದ. 2011ರ ಏಪ್ರಿಲ್‌ನಲ್ಲಿ, ಡೆನಿಸ್ ಟಿಟೋ ಎಂಬ ಅಮೆರಿಕದ ಕುಬೇರನೊಬ್ಬ 20ಮಿಲಿಯನ್ (ಇಂದಿನ ಸುಮಾರು 49 ಕೋಟಿ) ಹಣವನ್ನು ನೀಡಿ, ಆಸ್ಟ್ರೋನಾಟ್‌ಗಳ ಜತೆ ರಾಕೆಟ್‌ನಲ್ಲಿ ಕುಳಿತು ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್‌ನಲ್ಲಿ ಬರೋಬ್ಬರಿ ಎಂಟು ದಿನ ಕಳೆದು ಬಂದಿದ್ದಾರೆ.

ಹಾಗೆ ನೋಡಿದರೆ, ಟೂರ್‌ನಂತೆ ಅಂತರಿಕ್ಷಕ್ಕೆ ಹೋಗಿ ಬಂದ ಜಗತ್ತಿನ ಮೊದಲ ವ್ಯಕ್ತಿಯೆಂದು ಟಿಟೋರನ್ನೇ ಕರೆಯಬೇಕು ಎಂಬ ಮಾತುಗಳೂ ಕೇಳಿಬಂದಿವೆ.
ಇನ್ನಷ್ಟು ದಿನ ಈ ಹಗ್ಗಜಗ್ಗಾಟ ಇದ್ದದ್ದೇ. ಅದೆಲ್ಲವೂ ಸಹಜ, ಮುಂದುವರಿಯಲಿ ಕೂಡ. ಆದರೆ, ತಮ್ಮದೇ ಸ್ವಂತದ ಸ್ಪೇಸ್ ಪ್ಲೇನ್‌ನಲ್ಲಿ ಅಂತರಿಕ್ಷಕ್ಕೆ ಹೋಗಿ ಬಂದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನಂತೂ ರಿಚರ್ಡ್ ಬ್ರಾನ್ಸನ್ ಬರೆದಿದ್ದಾರೆ. ಈ ಮೂಲಕ ಜಗತ್ತನ್ನೆಲ್ಲ ಸುತ್ತಿ ಮುಗಿಸಿದವರಿಗೆ, ಗುಂಡಿಗೆ ಗಟ್ಟಿ ಇರುವವರಿಗೆ, ಭಾರಿ ದುಡ್ಡು ಹೊಂದಿರುವವರಿಗೆ ಹೊಸದೊಂದು ಲೋಕವಂತೂ ಈಗ ತೆರೆದು ಕೊಂಡಿದೆ.

ಸದ್ಯದ ವರ್ಜಿನ್ ಕಂಪನಿ ಹೇಳುವ ಪ್ರಕಾರ ಸುಮಾರು 600 ಜನರು ಸ್ಪೇಸ್ ಟೂರ್ ಮಾಡಲು ಸೀಟ್ ಬುಕ್ ಮಾಡಿಕೊಂಡಿದ್ದಾರೆ. ಆದರೆ, ಒಂದು ಟಿಕೆಟ್ ಬೆಲೆ ಸದ್ಯ 2ರಿಂದ 2.5 ಕೋಟಿಯಿದೆ. ಸದ್ಯಕ್ಕಿದು ಆರಂಭವಾಗಿರುವ ಕಾರಣ ಇಷ್ಟೊಂದು ತುಟ್ಟಿಯಿದ್ದು, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಮತ್ತು ಎದುರಾಳಿ ಕಂಪನಿಗಳ ದೆಸೆಯಿಂದಾಗಿ ಒಂದು ಟಿಕೆಟ್‌ಗೆ 30ರಿಂದ 35 ಲಕ್ಷದಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ. ಮುಂದೆ ನಾವು-ನೀವೂ ಕೂಡ ಸ್ಪೇಸ್ ಟ್ರಿಪ್ ಹೋಗಿ ಬಂದು, ಭೂಮಿಯನ್ನು ಮೇಲಿನಿಂದ ನೋಡಿಕೊಂಡು, ನಮ್ಮ ಮೈ ಭಾರವನ್ನೆಲ್ಲ ಕಳೆದುಕೊಂಡು ತೇಲುತ್ತ ಹೊಸ ಅನುಭವ ಪಡೆವ ದಿನಗಳು ದೂರವೇನಿಲ್ಲ.

ಇಷ್ಟೆಲ್ಲವೂ ಇಷ್ಟು ಬೇಗ ಸಾಧ್ಯ ಎನಿಸುತ್ತಿರುವುದು ಬಾಲಕನೊಬ್ಬ ತಾನು ಅಂತರಿಕ್ಷಕ್ಕೆ ಹೋಗಬೇಕು ಎಂದು ಕಂಡ ಕನಸಿನ ಪರಿಣಾಮದಿಂದ. ಕನಸುಗಳಿಗೆ
ಅಂಥದ್ದೊಂದು ಅವ್ಯಕ್ತ ಶಕ್ತಿಯಿದೆ. ಕನಸುಗಳು ಅರಳಿ ಮರದ ಬೀಜವಿದ್ದಂತೆ, ಬೀಜ ಮೊಳಕೆ ಒಡೆದು ಮರವಾದರೆ ಎಷ್ಟು ವಿಶಾಲವಾಗಬಹುದು ಎಂದು ಅಂದಾಜಿಸಿ ಹೇಳುವುದು ಕಷ್ಟ. ಬ್ರಾನ್ಸನ್‌ಗೆ ಬಾಲ್ಯದಲ್ಲಿಯೇ ತಾನು ಅಂತರಿಕ್ಷಕ್ಕೆ ಹೋಗಬೇಕು ಎಂಬ ಕನಸಿತ್ತು. ಆದರೆ, ಅದನ್ನು ಅಂದುಕೊಂಡ ಮಾತ್ರಕ್ಕೆ ಆಗಿಯೇ ಬಿಡುತ್ತದೆ ಎಂದು ಹೇಳಲಾಗದು ಎಂಬುದು ಬ್ರಾನ್ಸ್‌ಗೆ ಗೊತ್ತಿತ್ತು. ಆದ್ದರಿಂದಲೇ ಅವರು ಅವಸರ ಮಾಡಲಿಲ್ಲ. ಮೊದಲು ತನ್ನ ವರ್ಜಿನ್ ಕಂಪನಿಯನ್ನು ಬೆಳೆಸ ತೊಡಗಿದರು. ಕಂಪನಿಯೂ ಬೆಳೆಯುವ ಜತೆ ಜತೆಗೆ ತಮ್ಮೊಳಗಿದ್ದ ಹುಚ್ಚು ಸಾಹಸಿಯನ್ನೂ ಅವರು ಬೆಳಸ ತೊಡಗಿ ದರು. ಹಾಟ್ ಏರ್ ಬಲೂನ್‌ನಲ್ಲಿ ತಿರುಗಬೇಕು ಎನಿಸಿದರೆ ಹಿಂದೆ ಮುಂದೆ ಯೋಚನೆ ಮಾಡಲಿಲ್ಲ.

ತನ್ನ ಜೀವಕ್ಕೇನಾದರೂ ಅಪಾಯವಾದರೆ ಎಂದು ಭಯ ಪಡಲಿಲ್ಲ. ಆಳ ಸಮುದ್ರದಲ್ಲಿ ಸೀ- ಡೈವಿಂಗ್ ಹೋಗಿ ಒಂದೇ ಗುಟುಕಿಗೆ ಮನುಷ್ಯರನ್ನು ನುಂಗಿ ಹಾಕಬಲ್ಲ ಶಾರ್ಕ್, ವೇಲ್‌ನಂಥ ಜೀವಿಗಳನ್ನು ನೋಡಲು ಬ್ರಾನ್ಸನ್ ಹಿಂಜರಿಯಲಿಲ್ಲ. ಮಜವಾಗಿ ಕೆಲಸ ಮಾಡುವುದೇ ಯಶಸ್ಸಿನ ಗುಟ್ಟು. ನಾವು ಮಾಡುವ ಕೆಲಸವು ಯಶಸ್ವಿಯಾಗುತ್ತ ಹೋದಂತೆ, ನಾವು ಕಂಡ ಕನಸುಗಳ ಸಾಕಾರವು ಸುಲಭ ಸಾಧ್ಯ ಎಂಬುದನ್ನು ಬ್ರಾನ್ಸನ್ ಅರಿತಿದ್ದರು. ಬದುಕನ್ನು ಇಡಿಯಾಗಿ ಹೇಗೆ ಬದುಕಬೇಕು ಎಂಬುದನ್ನು ಅರಿತಿದ್ದರು. ಈಗೊಮ್ಮೆ ಸೋತಿದ್ದೇವೆ ಎಂದರೆ ಗೆಲುವನ್ನು ಪಡೆಯದೇ ಬಿಟ್ಟಿದ್ದೇವೆ.

ಮತ್ತೊಮ್ಮೆ, ಮಗದೊಮ್ಮೆ ಪ್ರಯತ್ನ ಪಟ್ಟರೆ ನಮ್ಮ ಕೈಗೆಟುಕದೇ ಇದ್ದ ಗೆಲುವೂ ಕೂಡ ನಮ್ಮದೇ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಬ್ರಾನ್ಸನ್ ಅವರ ಸಿದ್ಧಾಂತ. ತನ್ನ ನಂಬಿಕೆಯಂತೆಯೇ ಬದುಕಿ, ತನ್ನೆಲ್ಲ ಕನಸುಗಳನ್ನೂ ನನಸು ಮಾಡಿಕೊಳ್ಳುತ್ತಿರುವ 71 ವರ್ಷಗಳ ಚಿರ ಯುವಕ ರಿಚರ್ಡ್ ಬ್ರಾನ್ಸನ್ ನಮಗೆಲ್ಲರಿಗೂ ಜೀವನ ಪಾಠ ಹೇಳಿಕೊಡುತ್ತಿದ್ದಾರೆ. ಅದರಲ್ಲಿ ಒಂದಷ್ಟಾದರು ಪಾಲಿಸಿದರೆ ನಮ್ಮ ಕನಸುಗಳೇನು ಬರೀ ಹಗಲುಗನಸಾಗಿ ಉಳಿಯಲಾರವು. ಏನಂತೀರ?

Leave a Reply

Your email address will not be published. Required fields are marked *