Wednesday, 5th October 2022

ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್‌ ಕಂಪನಿಗಳಿಗೆ ನಿರಾಣಿ ಆಹ್ವಾನ

-ಸಿಎಂ ಮತ್ತು ಕೈಗಾರಿಕಾ ಸಚಿವರನ್ನು ಭೇಟಿ ಮಾಡಿದ ತೈವಾನ್ ನಿಯೋಗ
-ಬೆಂಗಳೂರಿನಲ್ಲಿ ಇಂಡಸ್ಟ್ರಿಯಲ್‌ ಪಾರ್ಕ್‌ ಅಭಿವೃದ್ಧಿ ಪಡಿಸುತ್ತಿರುವ ತೈವಾನ್‌ ಮೂಲದ ಸಿಡಿಸಿ ಕಂಪನಿ

ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ತೈವಾನ್ ಕಂಪನಿಗಳನ್ನು ಆಹ್ವಾನಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸರ್ಕಾರದಿಂದ ಎಲ್ಲಾ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಗುರುವಾರ ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ರಾಯಭಾರಿ ಬಾಶುವಾನ್ ನೇತೃತ್ವದ ನಿಯೋಗವನ್ನು ಭೇಟಿ ಮಾಡಿದ ಸಚಿವ ನಿರಾಣಿ, ಹೂಡಿಕೆಗೆ ಕರ್ನಾಟಕ ಸೂಕ್ತ ಸ್ಥಳ ಹೇಗೆ ಮತ್ತು ಅದಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ಉನ್ನತ ಮಟ್ಟದ ನಿಯೋಗವು, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಇಲ್ಲಿ ಭೇಟಿ ಮಾಡಿ ಹೂಡಿಕೆ ಅವಕಾಶಗಳ ಕುರಿತು ಮಾತುಕತೆ ನಡೆಸಿತು.

“ಕರ್ನಾಟಕ ಮತ್ತು ತೈವಾನ್‌ ನಡುವೆ ಹಲವು ಸಾಮತ್ಯೆಗಳಿದ್ದು, ಇಎಸ್‌ಡಿಎಂ, ಎಲೆಕ್ಟ್ರಿಕ್ ವೆಹಿಕಲ್ಸ್, ಆಟೋ ಮತ್ತು ಆಟೋ ಕಾಂಪೊ ನೆಂಟ್ಸ್, ಹೆಲ್ತ್‌ಕೇರ್, ಇಂಜಿನಿ ಯರಿಂಗ್ ಮತ್ತು ಮೆಷಿನ್ ಟೂಲ್‌ ಮುಂತಾದ ಪ್ರಮುಖ ಉದ್ಯಮಗಳಲ್ಲಿ ಮುಂಚೂಣಿ ಸಾಧಿಸಿವೆ,” ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

“ವಿಸ್ಟ್ರಾನ್ ಕಾರ್ಪೊರೇಶನ್, ಮೀಡಿಯಾಟೆಕ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಮತ್ತು ಡಿ-ಲಿಂಕ್ ಸೇರಿದಂತೆ ಪ್ರಮುಖ ತೈವಾನಿ ಕಂಪನಿಗಳಿಗೆ ಕರ್ನಾಟಕ ನೆಲೆಯಾಗಿದೆ. ಇತರ ತೈವಾನ್‌ ಕಂಪನಿಗಳೂ ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಬಹುದು, ಅದಕ್ಕೆ ಅಗತ್ಯ ಸೌಲಭ್ಯ ಒದಗಿಸ ಲಾಗುವುದು,”ಎಂದು ವಿವರಿಸಿದರು.

ಕೈಗಾರಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ನೀತಿಗಳು ಹಾಗೂ ಕೈಗೊಂಡಿರುವ ವಿವಿಧ ಉಪಕ್ರಮ ಗಳ ಬಗ್ಗೆ ಸಚಿವರು ಮಾಹಿತಿ ನೀಡಿದರು.

“ನೂತನ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮದಲ್ಲಿನ ತಿದ್ದುಪಡಿಗಳಿಂದ ನಮ್ಮ ರಾಜ್ಯ ಉದ್ಯಮ ಸ್ನೇಹೀ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಭೂ ಸುಧಾರಣೆ ಕಾಯಿದೆ ತಿದ್ದುಪಡಿ, ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ (ಎಬಿಸಿ) ಯೋಜನೆ ಇತ್ಯಾದಿ ಕ್ರಮಗಳಿಂದ ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ,”ಎಂದು ಹೇಳಿದರು.

“ತೈವಾನ್ ಹೂಡಿಕೆದಾರರಿಗೆ ಕೈಗಾರಿಕೆ ಇಲಾಖೆವತಿಯಿಂದ ಎಲ್ಲ ಸಹಕಾರ ನೀಡಲಾಗುವುದು. ಸರ್ಕಾರದ ಹಲವು ಸುಧಾರಣಾ ಕ್ರಮಗಳಿಂದಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ಹಣಕಾಸು ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 45ರಷ್ಟು ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ,” ಎಂದು ಕೈಗಾರಿಕಾಭಿವೃದ್ದಿ ಆಯುಕ್ತರಾದ ಗುಂಜನ್ ಕೃಷ್ಣ ತಿಳಿಸಿದರು.

ತೈವಾನ್ ಮೂಲದ ಉದ್ಯಮಗಳಿಗೆ ಅನುಕೂಲ ಕಲ್ಪಿಸಿರುವ ಕರ್ನಾಟಕ ಸರ್ಕಾರಕ್ಕೆ ಬಾಶುವಾನ್ ಕೃತಜ್ಞತೆ ವ್ಯಕ್ತಪಡಿಸಿದರು. ತೈವಾನ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರದ ದಕ್ಷಿಣ – ಚೆನ್ನೈನ ಮಹಾನಿರ್ದೇಶಕ ಬೆನ್ ವಾಂಗ್ ಹಾಗೂ ಕೇಂದ್ರದ ಸಿಬ್ಬಂದಿ, ಇನ್ವೆಸ್ಟ್ ಇಂಡಿಯಾ ಫೋರಂನ ಪ್ರಾದೇಶಿಕ ಮುಖ್ಯಸ್ಥೆ ಸಾಯಿ ಸುಧಾ, ತೈವಾನ್ ಡೆಸ್ಕ್ ಲೀಡ್ ಅಜು ಆಂಟೋನಿ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಎನ್‌ ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಉಪಸ್ಥಿತರಿದ್ದರು.

ಸಿಡಿಸಿ ಮಾಸ್ಟರ್‌ ಪ್ಲ್ಯಾನ್‌: ಬೆಂಗಳೂರಿನಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸಲು ಮುಂದಾಗಿರುವ ತೈವಾನ್ ಮೂಲದ ಸೆಂಚುರಿ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಸಿಡಿಸಿ), ಈ ಸಂಬಂಧ ಮಾಸ್ಟರ್ಪ್ಲಾನ್‌ ಅಂತಿಮಗೊಳಿಸಿದೆ. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ಬಳಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ 70 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಅಲ್ಲಿ ತೈವಾನ್‌ನ 100 ಕಂಪನಿಗಳಿಗೆ ಸ್ಥಳಾವಕಾಶ ಕಲ್ಪಿಸಲಿದೆ. ಟಿಇಎಂಐಸಿಓ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಪಾರ್ಕ್‌ನಲ್ಲಿ ಕಾರ್ಖಾನೆ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ.