Friday, 24th September 2021

ಇವರೂ ಅವರೇ ಆಗುತ್ತಿದ್ದಾರಾ ?

ಪ್ರಚಲಿತ

ಜಿ.ಪ್ರತಾಪ್ ಕೊಡಂಚ

ಮುಖ್ಯಮಂತ್ರಿಗಳ ಬದಲಾವಣೆಯಂತೆ! ಇಲ್ಲವಲ್ಲ, ಇದೆಲ್ಲ ಕಪೋಲ ಕಲ್ಪಿತ, ಮಾಧ್ಯಮ ಸೃಷ್ಟಿ. ಅವಧಿ ಪೂರ್ತಿ ಇವರೇ ಮುಖ್ಯಮಂತ್ರಿ ಎಂಬ ಅಂತೆ, ಕಂತೆಗಳ ಸಂತೆಯ ನಾಟಕಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಇದೀಗ ತೆರೆ ಎಳೆದು ಚೆಂದಗಾಣಿಸಿದ್ದಾರೆ.

ಪ್ರಪಂಚಕ್ಕೆ ಬಂದೆರಗಿದ ಕರೋನಾದಂತೆ, ಮುಖ್ಯಮಂತ್ರಿ ಬದಲಾವಣೆ ಕನ್ನಡಿಗರ ಪಾಲಿಗೆ ಬಂದೆರಗಿದ ಇನ್ನೊಂದು ವಿಪತ್ತು. ಯಡಿಯೂರಪ್ಪನವರು ಆಡಳಿತದ ಚುಕ್ಕಾಣಿ ಹಿಡಿದ ದಿನದಿಂದಲೂ, ಅಲೆ ಅಲೆಯಾಗಿ ಬಂದಪ್ಪಳಿಸುತ್ತಲೇ ಇದೆ ಬದಲಾವಣೆಯ ಬವಣೆ. ಅವರೇ ಹೇಳಿದಂತೆ, ಅವರ ರಾಜಕೀಯ ಜೀವನ ಪೂರ್ತಿ ಒಂದರ ಮೇಲೊಂದರಂತೆ ನಡೆದ ಸರಣಿ ಅಗ್ನಿಪರೀಕ್ಷೆ. ಅದ್ದಾಕಾರದಲ್ಲಿದ್ದ ಅವಧಿಯೂ ಈ ಸಂಕಟಗಳ ಹೊರತಾಗಿರಲಿಲ್ಲ.

ರಾಜಾಹುಲಿ, ಲಿಂಗಾಯತ ಸಮುದಾಯದ ಧೀಮಂತ ನಾಯಕ ಎಂಬೆಲ್ಲ ಬಿರುದಾಂಕಿತ ಯಡಿಯೂರಪ್ಪ ನವರು, ಈ ಸರಕಾರ ರಚಿಸಿಕೊಂಡಿದ್ದೇ ಸ್ವ ಸಾಮರ್ಥ್ಯ ದಿಂದ. ಅರಂಭದಲ್ಲಿ ಸರಕಾರ ರಚಿಸಲು ಉತ್ಸುಕತೆ ತೋರದ ಹೈಕಮಾಂಡ್, ಯಡಿಯೂರಪ್ಪನವರು ಅಂತಹ ಪ್ರಯತ್ನಕ್ಕೆ ತೊಡಗಿಕೊಂಡಾಗ ತಟಸ್ಥ ಬಾಹ್ಯ ಬೆಂಬಲ ನೀಡಿದಂತಿತ್ತು. ಸರಕಾರ ಬಂದರೆ ಬರಲಿ, ಕೈ ಕೆಸರು ಮಾಡಿಕೊಳ್ಳುವುದಿಲ್ಲ, ಸರಕಾರ ರಚನೆಯಾದ ಮೇಲೆ ನಮ್ಮ ನಿಯಂತ್ರಣಕ್ಕೆ ನೀವು ಒಳಪಡಲೇಬೇಕೆಂಬ ನಿಲುವು ಬಿಜೆಪಿ ಹೈಕಮಾಂಡ್ದು.

ಹಾಗಾಗಿ, ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಸಂಪುಟ ರಚಿಸಿಕೊಳ್ಳಲು ಹರ ಸಾಹಸ ಪಟ್ಟಿದ್ದರು. ಕ್ಷಿಗಮದುವೆಯಾಗಬೇಕು, ಆದರೆ ಆತ ಹುಡುಕಿ ಕೊಂಡ ಹುಡುಗಿಗೆ ಸಮ್ಮತಿಯಿಲ್ಲವೆಂಬ ವರನ ಮನೆಯವರ ನಿಲುವು ಹೈಕಮಾಂಡ್ದಾಗಿತ್ತು. ಮದುಮಗನೇನೋ ಮದುವೆ ಯಾದರೆ ಇದೇ ಹುಡುಗಿ. ಇಲ್ಲದಿದ್ದರೆ ಮದುವೆಯೇ ಬೇಡ ಎಂದಾಗಿತ್ತು! ಒಲ್ಲದ ಮನಸ್ಸಿನಿಂದಲೇ ಒಪ್ಪಿದ ಹೈಕಮಾಂಡ್, ಮಗನ ಮೇಲಿನ ಸಿಟ್ಟು ಸೊಸೆಯ ಮೇಲೆ ತೀರಿಸಿಕೊಂಡಂತೆ, ಕರ್ನಾಟಕದ ಜನರನ್ನು ಅಸಹಾಕಾರದಿಂದ ಕೇಂದ್ರ ಹೈರಾಣಾಗಿಸಿದ್ದ ಸಂದರ್ಭಗಳು ಯಡಿಯೂರಪ್ಪನವರ ಈ ಆಡಳಿತಾವಧಿಯಲ್ಲಿಯೂ ಇದ್ದವು.

ಹೆಂಡತಿ ಮಕ್ಕಳನ್ನು ಸಂತೈಸಿಕೊಳ್ಳುವ ಜತೆಗೆ ಮುನಿಸಿಕೊಂಡಿದ್ದ ತಂದೆ ತಾಯಿಯರನ್ನು ಸಮತೂಗಿಸಿಕೊಂಡು ಹೋಗಬೇಕಾದ ಒತ್ತಡ ಸದಾ ಮದುಮಗನ ಮೇಲಿತ್ತು! ಕಳೆದೆರಡು ವರ್ಷಗಳಿಂದ ಸರಕಾರ ನಡೆಸುತ್ತಿದ್ದ ಯಡಿಯೂರಪ್ಪನವರ ಸಂಕಟ ಹೀಗಿರುವಾಗ,ಯಡಿಯೂರಪ್ಪರ ಮುಖದಕೆ ನಗು ಕಾಣಿಸುವುದೇ ಇಲ್ಲ? ಎಂಬ ಕಳಕಳಿಯ ಪ್ರಶ್ನೆ ಕುಹಕದ್ದು ಎನಿಸುವುದಿಲ್ಲವೇ? ಅನಂತರವೂ, ನಮ್ಮದು ಡಬಲ್ ಇಂಜಿನ್! ಕೇಂದ್ರ ದಲ್ಲೂ, ರಾಜ್ಯದಲ್ಲೂ ಒಂದೇ ಪಕ್ಷದ ಸರಕಾರ, ರಾಜ್ಯವನ್ನು ಅಭಿವೃದ್ಧಿಯ ಮುಂಚೂಣಿಗೆ ಕೊಂಡೊಯ್ಯಲಿದೆ ಎಂಬ ಹೇಳಿಕೆಗಳನ್ನು ಬಿಟ್ಟರೆ, ವಾಸ್ತವದಲ್ಲಿ ಪ್ರಗತಿ ಕಂಡು ಬಂದಿದ್ದಿಲ್ಲ.

ಎರಡು ವರ್ಷಗಳ ಹಿಂದಿನ ಪ್ರವಾಹ ಸಂದರ್ಭದಲ್ಲೂ, ಕರೋನಾ ಆಪತ್ತಿನ ಕಷ್ಟದ ದಿನಗಳಲ್ಲೂ, ಕರ್ನಾಟಕಕ್ಕೇನೂ ವಿಶೇಷ ಪ್ರಾತಿನಿಧ್ಯ ದೊರೆತ ನಿದರ್ಶನ ಗಳಿಲ್ಲ. ಇಪ್ಪತೈದು ಸಂಸದರನ್ನು ಸಂಸತ್ತಿಗೆ ಆರಿಸಿ ಕಳುಹಿಸಿದ್ದರೂ, ನಮ್ಮ ಸಂಸದರೂ, ಕೇಂದ್ರದ ಮಂತ್ರಿಗಳೂ ಕರ್ನಾಟಕಕ್ಕೆ ಹೆಚ್ಚಿನ ನೆರವು, ಅನುದಾನ ಹರಿಸಿಕೊಳ್ಳುವಲ್ಲಿ ವಿಫಲರಾದರೆಂದರೂ ತಪ್ಪಾಗಲಿಕ್ಕಿಲ್ಲ. ವಿಶೇಷ ನೆರವು, ಅನುದಾನ ಬಿಡಿ, ಬರಬೇಕಾದ ಜಿಎಸ್‌ಟಿ ಪಾಲಿನಲ್ಲೂ ಅನ್ಯಾಯವಾಗಿದೆ ಎಂಬ ವಿಚಾರ ಕೂಡಾ ಚರ್ಚಿತವಾಗಿತ್ತು. ಏನಿದ್ದರೂ ಅತಿಥಿಗಳಿಗೆ ಉಪಚಾರ, ಮನೆಯವರಿಗೆ ಪಾಲಿಗೆ ಬಂದದ್ದೇ ಪಂಚಾಮೃತ ಎಂದು ತೃಪ್ತಿ ಪಟ್ಟುಕೊಳ್ಳಬೇಕಾದ
ಪಾಡು ಕನ್ನಡಿಗರದ್ದು.

ಒಟ್ಟಿನಲ್ಲಿ ಬಿಜೆಪಿಯವರ 25, 75 ನಡುವಿನ ಜೂಟಾಟದಲ್ಲಿ ಬಳಲಿ ಬೆಂಡಾಗಿದ್ದು ಕರ್ನಾಟಕ ಮತ್ತು ಕನ್ನಡಿಗರು. ಎಪ್ಪತೈದು ಮೀರಿದವರು ಅಧಿಕಾರದಲ್ಲಿರ ಬಾರದು ಎಂಬುದನ್ನು ಅಳವಡಿಸಿಕೊಂಡಿದ್ದೇವೆ, ಅದೇ ಕಾರಣಕ್ಕೆ ಯಡಿಯೂರಪ್ಪ ಗೌರವಯುತವಾಗಿ ನಿರ್ಗಮಿಸಬೇಕು ಎಂಬ ನಿಲುವು ಹೈಕಮಾಂಡ್ ಹೊಂದಿದೆ ಅನ್ನುತ್ತಾರೆ. ಹಾಗಾದರೆ ಮೊನ್ನೆ ತಾನೇ ಕೇರಳದಲ್ಲಿ ಎಂಬೊತ್ತೊಂಭತ್ತರ ಹರೆಯದ ಶ್ರೀಧರನ್ ಅವರನ್ನು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಚುನಾವಣೆಯ ಮುಂಚೆ ಘೋಷಿಸಿ, ಚುನಾವಣೆ ಸೆಣೆಸಿದ್ದು ಇದೆ ಬಿಜೆಪಿ ಹೈಕಮಾಂಡ್ ಅಲ್ಲವೇ? ಸದ್ಯ ಎಪ್ಪತ್ತೆಂಟರ ಹರೆಯದಲ್ಲಿರುವ ಮುಖ್ಯಮಂತ್ರಿಗಳು
ಸರಕಾರ ರಚಿಸುವಾಗಲೇ ಎಪ್ಪತ್ತಾರರಲ್ಲಿದ್ದರು.

ಹಾಗಿದ್ದೂ ಆಗ ಸುಮ್ಮನಿದ್ದ ಹೈಕಮಾಂಡ್, ಈಗ ಎಚ್ಚೆತ್ತಿರುವುದು ಸೋಜಿಗವೆನಿಸುತ್ತಿಲ್ಲವೇ? ಯಡಿಯೂರಪ್ಪನವರ ಹಿರಿತನ, ಪಕ್ಷ ಕಟ್ಟುವಲ್ಲಿ ಕೊಡುಗೆ ಗಮನಿಸಿ ವಿಶೇಷ ವಿನಾಯಿತಿ ನೀಡಿತ್ತೆಂಬ ಮಾತು ಯಡಿಯೂರಪ್ಪನವರೇ ಹೇಳಿದರೂ, ಬಿಜೆಪಿ ಹೈಕಮಾಂಡ್, ಸ್ವತಃ ಯಡಿಯೂರಪ್ಪನವರೂ ಮೊನ್ನೆಯ ತನಕ, ಅವರೇ ಪೂರ್ಣಾವಽಯ ಮುಖ್ಯಮಂತ್ರಿ ಅನ್ನುತ್ತಿದ್ದುದು ವಿಶೇಷ! ಮುಖ್ಯಮಂತ್ರಿಗಳೇ ನಾನು ಹೈಕಮಾಂಡ್ ಅಣತಿಯಂತೆ ನಡೆಯುತ್ತೇನೆ, ಪ್ರತಿರೋಧ ಒಡ್ಡುವುದಿಲ್ಲ ಎಂಬ ಮಾತುಗಳನ್ನು ಆಡಿದಾಗಲೂ ಹೈಕಮಾಂಡ್ ತನ್ನ ಸ್ಪಷ್ಟ ನಿಲುವನ್ನು ಹೊರಹಾಕದಿರುವುದು ವಿಸ್ಮಯ.

ರಾಜಕೀಯದ ಚದುರಂಗದಲ್ಲಿ ಹೇಳದೆ ಮಾಡಿಸುವುದು ಸಾಮಾನ್ಯ! ಯಡಿಯೂರಪ್ಪನವರು ತನ್ನ ಸ್ವಂತ ನಿರ್ಧಾರ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಘಟನಾವಳಿ ಗಳು ಮಾತ್ರ, ಸುತ್ತಲಿನವರ ಕಿರುಕುಳ ಸಹಿಸದೇ, ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟು ಜೀವ ಕಳೆದುಕೊಂಡ ಮದುಮಗನ ಪ್ರಕರಣಕ್ಕೆ ಕಾಕತಾ ಳೀಯವಾಗಿ ಹೋಲುತ್ತಿದೆ!

ನಾಯಕತ್ವದ ಬದಲಾವಣೆಯ ತುಸು ಆಳಕ್ಕಿಳಿದರೆ ಕಾಣಿಸುವುದು, ಸ್ವಪಕ್ಷೀಯರ ನಾಯಕತ್ವದ ವಿರುದ್ಧದ ಅಪಸ್ವರ. ಮಂತ್ರಿ ಪದವಿ ಸಿಗದ ಅತೃಪ್ತಿ, ಮೂಲ, ವಲಸಿಗ ಭಿನ್ನಾಭಿಪ್ರಾಯದ ಆಧಾರದಲ್ಲಿ ಹುಟ್ಟಿಕೊಂಡ ಅಪಸ್ವರ, ಅಧಿಕಾರದಲ್ಲಿ ಮುಖ್ಯಮಂತ್ರಿಗಳ ಮಗನ ಹಸ್ತಕ್ಷೇಪ. ತಾನೊಂದು ಸಂಘಟನೆ ಆಧಾರಿತ, ಶಿಸ್ತಿನ ಪಕ್ಷವೆಂದೇ ಹೇಳಿಕೊಳ್ಳುವ ಬಿಜೆಪಿಯಲ್ಲಿ ನಾಯಕತ್ವದ ಮೇಲಿನ ಆರೋಪಗಳು ಕಾಣಿಸಿಕೊಂಡಾಗಲೂ ಹೈಕಮಾಂಡ್ ತಟಸ್ತ ಧೋರಣೆ ತಳೆದಿತ್ತು.

ಆರೋಪವನ್ನು ವಿಚಾರಿಸುವತ್ತಾಗಲಿ, ಮಾಧ್ಯಮದ ಎದುರು ಆರೋಪಿಸುತ್ತಿರುವ ಶಾಸಕರನ್ನು ಶಿಸ್ತು ಕ್ರಮಕ್ಕೊಳಪಡಿಸುವಗಲಿ ಬಲಿಷ್ಠವೆನಿಸಿಕೊಂಡ ಹೈಕಮಾಂಡ್ ಮುಂದಾಗದಿದ್ದದ್ದು ಆಶ್ಚರ್ಯಕರ! ಇವೆಲ್ಲದರ ನಡುವೆ ಪದವಿ ನಂಬಿ ನೆಗೆದು ಬಂದ ಶಾಸಕರ(?) ಪಾಡಂತೂ ಅಯೋಮಯ. ಶಾಸಕರ ಸ್ವಘೋಷಿತ ನಾಯಕ ಸಿಡಿಯ ವಿಷಯದಲ್ಲಿ ಸಿಲುಕಿ ಸಿಡಿಮಿಡಿಯಾಗಿ ನೇಪಥ್ಯಕ್ಕೆ ಸರಿದಿದ್ದರೆ, ಬಾಂಬೆ ಟೀಮ್‌ನಲ್ಲಿದ್ದ ಹಳ್ಳಿ ಹಕ್ಕಿ ಮುನಿಸಿಕೊಂಡು ಸರಕಾರದ ವಿರುದ್ದದ ಒಂಟಿ ಕೂಗು ಆರಂಭಿಸಿ ಬಹುದಿನಗಳಾಗಿತ್ತು. ಇದೆಲ್ಲದರ ನಡುವೆ ನಾಯಕತ್ವದ ವಿರುದ್ದದ ಅಸಮಾಧಾನದ ಕಹಳೆ ಮೊಳಗಿಸಿ, ದಿಲ್ಲಿ ಯಾತ್ರೆಗೆ
ಮುನ್ನುಡಿ ಬರೆದಿದ್ದು, ಸರಕಾರ ರಚನೆಯಲ್ಲಿ ನನ್ನ ಅಳಿಲು ಸೇವೆ ಇದೆಯೆಂದು ಎದೆ ತಟ್ಟಿಕೊಂಡ, ಚುನಾವಣೆಯಲ್ಲಿ ಸೋತಿದ್ದರೂ ಯಡಿಯೂರಪ್ಪ ಕೃಪಾ ಶೀರ್ವಾದದಿಂದ ವಿಧಾನ ಪರಿಷತ್ತಿಗೆ ಬಂದು, ಮಂತ್ರಿ ಪದವಿಯು ಗಿಟ್ಟಿಸಿಕೊಂಡಿದ್ದ ಸೈನಿಕ. ಬಿಜೆಪಿ ರಾಜ್ಯಾಧ್ಯಕ್ಷರಂತೂ ಯಡಿಯೂರಪ್ಪನವರೇ ನಮ್ಮ ಸರ್ವೋಚ್ಚ ನಾಯಕರು, ಬದಲಾವಣೆಯ ಪ್ರಶ್ನೆ? ಇಲ್ಲವೇ ಇಲ್ಲ ಎನ್ನುತ್ತಲೇ, ತಮ್ಮ ಆಪ್ತರೊಂದಿಗೆ ತುಳುವಿನಲ್ಲಿ, ಯಾರಿಗೂ ಹೇಳ್ಬೇಡಿ!… ಪ್ರಹಸನ ಪ್ರದರ್ಶಿಸಿ ಬಿಟ್ಟಿದ್ದರು.

ಆಮೇಲೇನೋ, ಎಲ್ಲರಂತೆ ನಾನವನಲ್ಲ, ಆ ಧ್ವನಿ ನನ್ನದಲ್ಲ ಎಂದರು ಬಿಡಿ. ಈ ಎಲ್ಲ ಪ್ರಹಸನಗಳ ನಡುವೆ ಬಳಲಿ ಬೆಂಡಾಗಿದ್ದು ಕರ್ನಾಟಕ. ಇವರೆಲ್ಲರಿಗೂ
ಬೇಕಾಗಿರುವುದು ಅವರವರ ಅಧಿಕಾರ ಮತ್ತು ಥೈಲಿ ತುಂಬಿಸಬಲ್ಲ ಪದವಿಗಳಷ್ಟೇ. ಸಮಾಜಸೇವೆ, ಜನಹಿತ, ಜನಸೇವೆಗಳದ್ದು ಬರೀ ಮುಖವಾಡ. ಇವರೂ ಅವರಂತೆಯೇ ಎಂಬ ತೀರ್ಮಾನಕ್ಕೆ ನೊಂದು ತಲುಪಿರುವುದು ಕರ್ನಾಟಕದ ಜನತೆ. ಇವತ್ತಿನ ಬಿಜೆಪಿ ಹೈಕಮಾಂಡ್, ಬಲಿಷ್ಠ, ಚಾಣಕ್ಯ ಮತಿಗಳನ್ನು ಒಳಗೊಂಡ ಚತುರ ಹೈಕಮಾಂಡ್.

ಸಂಪೂರ್ಣ ಬಹುಮತ ಬರದ ಹಲವು ರಾಜ್ಯಗಳಲ್ಲಿ, ವಿರೋಧಿ ಪಾಳಯದ ಶಾಸಕರನ್ನೇ ಮಣಿಸಿ, ಅಧಿಕಾರ ಹಿಡಿಯುವಲ್ಲಿ ತೆರೆಮರೆಯ ಸೂತ್ರಧಾರ ಕೂಡ ಇದೆ ಹೈಕಮಾಂಡ್. ಸದ್ಯ ಹಲವು ರಾಜ್ಯಗಳಲ್ಲಿ ತಮ್ಮದೇ ಸರಕಾರಗಳಿದ್ದುದರಿಂದ, ಕರ್ನಾಟಕದ ಸರಕಾರದ ಮೇಲೆ ತುಂಬಾ ಅವಲಂಬಿತವಾಗಿಯೂ ಇಲ್ಲ. ಹಾಗಾಗಿಯೇ ಇರಬಹುದು ಯಡಿಯೂರಪ್ಪನವರ ಸರಕಾರ ಸ್ಥಾಪಿಸುವಾಗಲೂ ಹೈಕಮಾಂಡ್ ತಟಸ್ಥ ಧೋರಣೆಯ ನಿರ್ಲಿಪ್ತತೆ ತೋರಿದಂತಿದ್ದುದು. ಇಂತಹ ಸುಸ್ಥಿರ, ಬಲಿಷ್ಠ ಹೈಕಮಾಂಡ್ ಕರ್ನಾಟಕದ ಮಟ್ಟಿಗೆ ಬಾಲಿಶವಾಗಿ ನಡೆದುಕೊಂಡಿದ್ದು ವಿಪರ್ಯಾಸ.

ಯಡಿಯೂರಪ್ಪನವರ ಮಂತ್ರಿ ಮಂಡಲ ರಚನೆಯ ವೇಳೆಗೆ ಮೂವರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸಿ ಪರ್ಯಾಯ ನಾಯಕತ್ವ ಇಂದಿನಿಂದಲೇ ಬೆಳೆಸುತ್ತೇವೆ ಎಂಬ ಸಂದೇಶ ಕೊಡ ಹೊರಟ ಹೈಕಮಾಂಡ್, ಆಯ್ದುಕೊಂಡಿದ್ದು ಮಾತ್ರ ಕರ್ನಾಟಕದಾದ್ಯಂತ ಅಷ್ಟೊಂದು ಜನಪ್ರಿಯವಲ್ಲದ ನಾಯಕರನ್ನೇ. ಮೂರು ಪ್ರಬಲ ಜಾತಿಗಳಲ್ಲಿನವರಿಗೆ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ಹೈಕಮಾಂಡ್ ನಡೆ ಚಾಣಾಕ್ಷ ನೀತಿ ಎಂದು ಕರೆಸಿಕೊಂಡಿತಾದರೂ, ಆ ಸ್ಥಾನ ಗಳನ್ನು ಸಮರ್ಥ, ಸಚ್ಚಾರಿತ್ರ್ಯ ಇರುವವರಿಗೆ ಅನುಗ್ರಹಿಸುವಲ್ಲಿ ಎಡವಿತ್ತು. ಆಗಲೂ ಹೈಕಮಾಂಡ್ ನೀತಿ ಪಕ್ಷದ ಬೆಳೆವಣಿಗೆ ಬಿಟ್ಟು ಯಡಿಯೂರಪ್ಪ ನವರನ್ನು ನಿಯಂತ್ರಿಸುವತ್ತಲೇ ಇತ್ತೆನಿಸುತ್ತೆ. ಅನಂತರ ಕೆಲ ಸಂದರ್ಭಗಳಲ್ಲಿ ಯಡಿಯೂರಪ್ಪನವರು ಸರಕಾರದ, ರಾಜ್ಯದ ಕುರಿತಾದ ಸಹಾಯ ಕೋರಲು ದೆಹಲಿಗೆ ತೆರಳಿದರೂ, ಭೇಟಿಯಾಗಲಾಗದಷ್ಟು ಬ್ಯುಸಿಯಾಗಿತ್ತು ಬಿಜೆಪಿ ಹೈಕಮಾಂಡ್!

ಅಂದಿನಿಂದ ಇಂದಿನವರೆಗೆ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ನಿಯಂತ್ರಿಸುವತ್ತ ಲಕ್ಷ್ಯವಹಿಸತ್ತೇ ಹೊರತು, ಉತ್ತಮ ಆಡಳಿತ ಕೊಡುವತ್ತವಾಗಲಿ, ಪಕ್ಷ ಬೆಳೆಸುವತ್ತವಾಗಲಿ ಆಸಕ್ತಿ ತೋರಲೇ ಇಲ್ಲ. ಯಡಿಯೂರಪ್ಪನವರ ಮಗನಿಗೆ ಕೊನೆ ಕ್ಷಣದಲ್ಲಿ ವಿಧಾನಸಭೆಯ ಟಿಕೆಟ್ ನಿರಾಕರಿಸಿದ ಹೈಕಮಾಂಡ್ ದಿಟ್ಟ ನಡೆ, ಯಡಿಯೂರಪ್ಪನವರಿಗೆ ಮತ್ತವರ ಸರಕಾರಕ್ಕೆ ತಕ್ಕಷ್ಟು ಸಹಾಯ ದೊರಕದಿರುವಂತೆ ನೋಡಿಕೊಳ್ಳುವುದರ ಮಟ್ಟಿಗಷ್ಟೇ ಸೀಮಿತ ವಾಯಿತು. ಕರೋನಾ ಸಂದಿಗ್ದದಲ್ಲಿ ಲಸಿಕೆ, ಮದ್ದು, ಆಮ್ಲಜನಕ ಪೂರೈಕೆಯಾದಿಯಾಗಿ ಎಲ್ಲ ವಿಷಯಗಳಲ್ಲೂ ಕರ್ನಾಟಕಕ್ಕೇ ಕಾಲಕಾಲಕ್ಕಾದ ಅನ್ಯಾಯ ಇದಕ್ಕೆ ಸಾಕ್ಷಿ. ತಮ್ಮದೇ ಪಕ್ಷದ ಯಡಿಯೂರಪ್ಪನವರ ಆಡಳಿತ ವೈಫಲ್ಯವೆಂದು ಬಿಂಬಿಸುವ ಹುನ್ನಾರವೋ? ಕಿರುಕುಳ ಕೊಟ್ಟು ನನಗಿನ್ನೂ ಸಾಧ್ಯವಿಲ್ಲವೆಂದು ಅವರೇ ಬಿಟ್ಟು ಹೋಗುವಂತೆ ಮಾಡುವ ತಂತ್ರಗಾರಿಕೆಯೋ? ಕರ್ನಾಟಕವೇನಿದ್ದರೂ ನಮ್ಮದೇ ಎಂಬ ನಿರ್ಲಕ್ಷ್ಯವೋ? ದೇವರೇ ಹೇಳಬೇಕು.

ಅಂತೂ ಎಪ್ಪತೈದು (ವಯಸ್ಸಿನ ಮಿತಿ),ಇಪ್ಪತೈದು (ಸಂಸದರು) ರ ನಡುವೆ ಬಡವಾಗಿದ್ದು ಮಾತ್ರ ಕರ್ನಾಟಕ! ಅನಂತಕುಮಾರ ನಿಧಾನಾನಂತರ ಅವರ ಪತ್ನಿಗೆ ಟಿಕೆಟ್ ನಿರಾಕರಿಸಿ, ನಾವು ಕೌಟುಂಬಿಕ ರಾಜಕಾರಣಕ್ಕೆ ಮಣೆ ಹಾಕುವುದಿಲ್ಲ ಎಂಬ ಸ್ಪಷ್ಟಸಂದೇಶವೇನೋ ಬಿಜೆಪಿ ಹೈಕಮಾಂಡ್ ರವಾನಿಸಿತು. ಜೊ ದಂಪತಿಗಳಿಗೆ ಶಾಸಕ, ಸಂಸದ ಚುನಾವಣೆಯ ಟಿಕೆಟ್ ನೀಡಿ, ಶ್ರೀಮತಿ ಜೊಯವರನ್ನು ಮಂತ್ರಿಯೂ ಮಾಡಿ, ಒಲ್ಲದ ಮನಸಿನಿಂದ ದುಃಖದಲ್ಲಿದ್ದ ಮಂಗಳಾ ಅಂಗಡಿಯವರಿಗೆ ಟಿಕೆಟ್ ನೀಡಿ ತನ್ನ ಮಾತಿಗೆ ತಾನೇ ವಿರುದ್ಧ ನಡೆದುಕೊಂಡಿತು.

ನಮ್ಮದೇನಿದ್ದರೂ ಅಭಿವೃದ್ಧಿ ಕಳಂಕರಹಿತ ಆಡಳಿತದ ಪರವೆಂಬ ಹೈಕಮಾಂಡ್ ಕರ್ನಾಟಕ ಸರಕಾರದ ಮೇಲೆ ಸ್ವಪಕ್ಷೀಯರಿಂದಲೇ ಭ್ರಷ್ಟಾಚಾರದ ಆರೋಪ ಕೇಳಿಬಂದಾಗಲೂ ತಟಸ್ಥವೇ ಆಗಿತ್ತು. ಶಿಸ್ತು,ಸಂಘಟನೆ ಆಧಾರಿತ ಸುಸಂಸ್ಕೃತರ ಪಕ್ಷವೆನ್ನುವ ಬಿಜೆಪಿ ತಮ್ಮದೇ ಸರಕಾರದ ಮೇಲೆ, ಸ್ವಪಕ್ಷದ ಶಿಸ್ತಿನ ಸಿಪಾಯಿ ಗಳು ಹಾದಿಬೀದಿಯಲ್ಲಿ ಮಾತನಾಡಿದಾಗ ಸುಮ್ಮನಿದ್ದು ತಾವೇನೂ ಇತರರಿಗಿಂತ ಭಿನ್ನರಲ್ಲ ಎನಿಸಿಕೊಂಡಾಗಿದೆ.

ಇವೆಲ್ಲ ಬೆಳವಣಿಗೆ ನೋಡಿದರೆ, ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ತಮ್ಮನ್ನು ಅಧಿಕಾರಕ್ಕೆ ತಂದ ಏಕೈಕ ರಾಜ್ಯ ಕರ್ನಾಟಕದಲ್ಲೂ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವ ಹಂಬಲ ಇರುವಂತಿಲ್ಲ. ತಮ್ಮ ತಮ್ಮೊಳಗಿನ ಬಲಾಬಲ ಪ್ರಾಬಲ್ಯ ಮೆರೆಯುವಲ್ಲಿ ಪಕ್ಷವನ್ನು ಕರ್ನಾಟಕದಲ್ಲಂತೂ ದುರ್ಬಲಗೊಳಿಸಿ ಯಾಗಿದೆ. ಚುನಾಯಿತ ಶಾಸಕರೇ ಅವರ ನಾಯಕನನ್ನು ಸಂವಿಧಾನ ಬದ್ದವಾಗಿ ಆಯ್ದುಕೊಳ್ಳಲಿzರೆ ಎಂಬ ಶೀರ್ಷಿಕೆಯಲ್ಲಿ, ದೆಹಲಿಯಿಂದ ಬಂದ ಲಕೋಟೆಯ ಮೂಲಕವೋ, ಹೈಕಮಾಂಡ್ ಇಂಗಿತವನ್ನು ತಮ್ಮ ಮಾತಾನಾಡುವ ಗೊಂಬೆಗಳ ಬಾಯಲ್ಲಿ ಕೂಗಿಸಿಯೋ ಹೊಸ ನಾಯಕನನ್ನು ಸಾಂವಿಧಾನಿಕವಾಗಿ (?) ಇನ್ನೇನು ಆರಿಸಲಿದೆ.

ಸ್ವತಃ ಯಡಿಯೂರಪ್ಪನವರನ್ನೇ ಪುನಃ ಮುಂದುವರಿಸಿದರೂ ಈಗಾಗಲೇ ಆದ ಹಾನಿ ಸರಿ ಪಡಿಸುವುದು ಕಷ್ಟವೆನಿಸುತ್ತದೆ. ಏನೇ ಆದರೂ, ಮುಂದಿನ ಬಾರಿ ಬಿಜೆಪಿ ಕರ್ನಾಟಕದಲ್ಲಿ ಅಽಕಾರದ ಚುಕ್ಕಾಣಿ ಸ್ವಸಾಮರ್ಥ್ಯದಿಂದ ಹಿಡಿಯುವುದು ಕಷ್ಟಕರವೇ. ಪ್ರಸ್ತುತ ಆಡಳಿತದ ನಿಷ್ಕ್ರಿಯತೆ ಜತೆಗೆ, ಇವತ್ತಿನ ತನಕದ ಬಿಜೆಪಿ ಹೈಕಮಾಂಡ್ ನೀತಿಯೇ ವೈಫಲ್ಯಕ್ಕೆ ಪ್ರಮುಖ ಕಾರಣವಾಗಲಿದೆ. ಇನ್ನೇನಿದ್ದರೂ, ಈಗಾಗಲೇ ಬಲಹೀನಗೊಂಡು ತಮ್ಮೊಳಗೆ ಬಡಿದಾಡುತ್ತಿರುವ ವಿರೋಧ ಪಕ್ಷಗಳು ಒಳಗುದ್ದಾಟದಲ್ಲಿ ಸೊರಗುವ ಆಧಾರದ ಮೇಲೆ ಬಿಜೆಪಿಯ ಗೆಲುವು ನಿಂತಿದೆಯಷ್ಟೆ!

ಹೀಗಿರುವಾಗ ಬಿಜೆಪಿಯ ಹೈಕಮಾಂಡ್ ನೆನಪಿಸುವುದು, ಹಿಂದೆ ಹಲವು ದಶಕಗಳ ಕಾಲ ಚಾಲ್ತಿಯಲ್ಲಿದ್ದ ಪ್ರಭಾವಿ ಕಾಂಗ್ರೆಸ್ ಹೈಕಮಾಂಡ್! ಲಕೋಟೆಗಳ ರಾಜ್ಯದ ನಾಯಕರನ್ನು ಆರಿಸುತ್ತಿದ್ದ, ತಮಗೆ ಸರಿಯಿಲ್ಲವೆಂಬ ಕಾರಣಕ್ಕೆ ಸಮರ್ಥರನ್ನು ಕ್ಷಣಾರ್ಧದಲ್ಲಿ ಮೂಲೆಗುಂಪಾಗಿಸತ್ತಿದ್ದ, ಸಾಮರ್ಥ್ಯ, ಭಾವಗಳಿಗೂ ಮೀರಿ ನಿಷ್ಠರಿಗೇ ಮಣೆ ಹಾಕಿ ಜೀರ್ಣಿಸಿಕೊಳ್ಳುತ್ತಿದ್ದದು ಕಾಂಗ್ರೆಸ್ ಹೈಕಮಾಂಡ್. ಇವತ್ತಿನ ಬಿಜೆಪಿ ಹೈಕಮಾಂಡ್ ಕೂಡ ಈ ಹಾದಿಯಲ್ಲಿ ಹೊರಟಿದೆ ಅನಿಸುತ್ತಿಲ್ಲವೇ? ಹಾಗಾಗಿ ಮೂಡಿದ ಪ್ರಶ್ನೆ, ಶಿಸ್ತು, ಆಂತರಿಕ ಪ್ರಜಾಪ್ರಭುತ್ವದ ತಳಹದಿಯ ಪಕ್ಷ ಎಂದು ಬಿಂಬಿಸಿಕೊಂಡಿದ್ದ ಇವರೂ, ಅವರೇ ಆಗುತ್ತಿದ್ದಾರಾ?

Leave a Reply

Your email address will not be published. Required fields are marked *