Friday, 7th May 2021

ಸಾಯೋದು ಒಳ್ಳೆಯದು…ಉಮೇಶ್ ಕತ್ತಿಯ ಅಹಂಕಾರದ ಆಡಿಯೋ ವೈರಲ್‌

ಬೆಳಗಾವಿ : ಸರ್ಕಾರದಿಂದ ಕೊಡುತ್ತಿದ್ದ ರೇಷನ್ ಅಕ್ಕಿ ಕಡಿತ ಮಾಡುವುದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ ಉಮೇಶ್ ಕತ್ತಿ, ಸಾಯೋದು ಒಳ್ಳೆಯದು ಎಂದಿರುವ ಉಡಾಫೆಯ ಉತ್ತರ, ಈಗ ವೈರಲ್ ಆಗಿದೆ.

ಇಂತಹ ಸಚಿವ ಉಮೇಶ್ ಕತ್ತಿಯ ಅಹಂಕಾರದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗದಗ ಜಿಲ್ಲೆಯ ಕುರ್ತಕೋಟೆ ಗ್ರಾಮದ ಕಾರ್ಯಕರ್ತ ಈಶ್ವರ ಆರ್ಯ ಹಾಗೂ ಸಚಿವ ಉಮೇಶ್ ಕತ್ತಿ ಮಾತನಾಡಿರುವ ಸಂಭಾಷಣೆ ಎಂದು ಹೇಳಲಾಗುತ್ತಿದೆ.

ಸಚಿವ ಉಮೇಶ್ ಕತ್ತಿಗೆ ಪೋನ್ ಮಾಡಿದ  ಈಶ್ವರ್ ಆರ್ಯ ಅವರು, 2 ಕೆಜಿ ಅಕ್ಕಿ ಮಾಡಿದ್ದೀರಾ ಸಾಲುತ್ತಾ ಎಂಬುದಾಗಿ ಪ್ರಶ್ನಿಸಿ ದ್ದಾರೆ. ಇದಕ್ಕೆ ಕತ್ತಿ 3 ಕೆಜಿ ರಾಗಿ ಕೊಡುತ್ತೀವಿ ಎಂದಿದ್ದಾರೆ. ಉತ್ತರ ಕರ್ನಾಟಕದ ಜನ ರಾಗಿ ತಿನ್ನಾತ್ತಾರಾ ಎಂದು ಮರು ಪ್ರಶ್ನಿಸಿ ದ್ದಕ್ಕೆ, 2 ಕೆಜಿ ಜೋಳ ಮಾಡಿದ್ದೀವಿ ಎಂದಿದ್ದಾರೆ. ಸಾರ್, ತಿಂಗಳಿಗೆ 2 ಕೆಜಿ ಸಾಲುತ್ತಾ ಅಂದ್ರೆ, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುತ್ತೆ ಎಂದು ಸಚಿವರು ಹೇಳಿದ್ದಾರೆ.

ಆಯ್ತು ಸಾರ್.. ಅಕ್ಕಿ, ಜೋಳ ಯಾವಾಗ ಕೊಡ್ತೀರಿ ಅಂದ ಈಶ್ವರ್ ಅವರ ಮಾತಿಗೆ, ಬರುವ ತಿಂಗಳ ಮೇ ನಲ್ಲಿ ನೀಡುತ್ತೇವೆ ಅಂತ ಸಚಿವ ಕತ್ತಿ ಹೇಳಿದ್ದಾರೆ. ಸಾರ್ ಬರುವ ತಿಂಗಳು ಕೊಡ್ತೀರಾ.. ಅಲ್ಲಿಯವರೆಗೆ ಉಪವಾಸ ಇರೋದಾ ಅಥವಾ ಸತ್ತು ಹೋಗೋದಾ ಅಂದಾಗ, ಸಚಿವ ಉಮೇಶ್ ಕತ್ತಿ ಸತ್ತು ಹೋಗೋದು ಒಳ್ಳೇದು, ಅದಕ್ಕಿಂತ ಪೋನ್ ಮಾಡುವುದು ಬಿಡಿ ಎಂದಿದ್ದಾರೆ.

ಸಾರ್ ನೀವು ಮಂತ್ರಿಗಳು, ಜನಕ್ಕೆ ಉತ್ತರಿಸಬೇಕಾದವರು ನೀವು ಹೀಗ್ ಅಂದ್ರೆ ಅಂದಿದ್ದಕ್ಕೆ ಸಚಿವರು ಪೋನ್ ಕಟ್ ಮಾಡಿದ್ದಾರೆ. ಈ ಮೂಲಕ ಅಕ್ಕಿ ಕೊಡದೇ ಇದ್ದರೇ ಸತ್ತೋಗಿ ಎಂಬುದಾಗಿ ರಾಜ್ಯದ ಜನರಿಗೆ ದರ್ಪದಿಂದ ನುಡಿದಿರೋದು, ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *