Wednesday, 28th July 2021

ಜೀವ್ನಾನೆ ನಾಟ್ಕ ಸಾಮಿ ಎಂದ ರಮ್ಯಾ

ಜೀವ್ನಾನೆ ನಾಟ್ಕ ಸಾಮಿ ವಿಭಿನ್ನ ಶೀರ್ಷಿಕೆಯ ಚಿತ್ರ. ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ. ಹಾಡು, ಪೋಸ್ಟರ್ ಮೂಲಕವೇ ಚಿತ್ರ ಸದ್ದು ಮಾಡುತ್ತಿದೆ.

ಚಿತ್ರದ ಪ್ರತಿ ಪಾತ್ರವನ್ನು ವಿಭಿನ್ನವಾಗಿ ಪರಿಚಯ ಮಾಡಿಕೊಡಲು ನಿರ್ದೇಶಕ ರಾಜು ಭಂಡಾರಿ ತಯಾರಿಸಿ ನಡೆಸಿದ್ದಾರೆ. ಅಂತೆಯೇ ಕೆಲವೊಂದು ಪಾತ್ರಗಳನ್ನು ಪರಿಚಯಿಸಿ ಕುತೂಹಲ ಮೂಡಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಚಿತ್ರದ ಬಗೆಗಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಅಪ್ಪಟ ಕೌಟುಂಬಿಕ ಕಥೆ. ಅಂದ ಮಾತ್ರಕ್ಕೆ ಅಷ್ಟಕ್ಕೆ ಸೀಮಿತವಾಗಿಲ್ಲ. ಇಲ್ಲಿ ಪ್ರೀತಿ ಯಿದೆ, ಹಾಸ್ಯವಿದೆ ಎಲ್ಲಕ್ಕೂ ಮಿಗಿಲಾಗಿ ಸಂಬಂಧ ಗಳ ಕಥೆಯಿದೆ. ಇಲ್ಲಿ ಬರುವ ಪ್ರತಿ ಪಾತ್ರವೂ ಮುಖ್ಯವಾಗಿವೆ, ನಮ್ಮನ್ನು ನಾವೇ ಕಂಡು ಕೊಳ್ಳುವಂತೆ ಮಾಡುತ್ತವೆ ಎನ್ನುತ್ತಾರೆ ನಿರ್ದೇಶಕರು. ಅಂತೆಯೇ ಚಿತ್ರದಲ್ಲಿ ಬರುವ ಸ್ನೇಹಾ ಪಾತ್ರ ಚಿತ್ರದಲ್ಲಿ ಪ್ರಾಮುಖ್ಯತೆ ಪಡೆದಿದೆ. ಏನನ್ನಾಧರೂ ಸಾಧಿಸಬೇಕು ಎಂದು ಹೊರಟಾಗ ನಮ್ಮ ಜೀವನದಲ್ಲಿ ಸಾಕಷ್ಟು ಸವಾಲುಗಳು ಸಮಸ್ಯೆಗಳು ಎದುರಾಗುತ್ತವೆ. ಆ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಹೇಗೆ ಪರಿವರ್ತಿಸಿಕೊಳ್ಳಬೇಕು ಎಂಬುದನ್ನು ಈ ಪಾತ್ರ ತೋರಿಸಲಿದೆಯಂತೆ. ಈ ಪಾತ್ರದಲ್ಲಿ ನವನಟಿ ಅನಿಕಾ ರಮ್ಯಾ ಅಭಿನಯಿಸಿದ್ದಾರೆ.

ಹಾಗಂತ ರಮ್ಯಾ ನಟನೆಗೆ ಹೊಸಬರೇನು ಅಲ್ಲ. ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ರಮ್ಯಾ, ಹಲವು ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೂ ಮೊದಲು ಕಿರೆತೆರೆಯ ಧಾರಾವಾಹಿಗಳು, ಕಿರುಚಿತ್ರಗಳಲ್ಲೂ ನಟಿಸಿದ್ದಾರೆ.

ಕೀರ್ತಿ ತಂದುಕೊಟ್ಟ ಕಿರುಚಿತ್ರ

ರಂಗಭೂಮಿಯಲ್ಲಿ ಸಕ್ರೀಯವಾಗಿದ್ದ ರಮ್ಯಾಗೆ ನಟನೆ ಎಂದರೆ ಬಲು ಅಚ್ಚುಮೆಚ್ಚು, ಹಾಗಾಗಿ ಇವರ ಸ್ನೇಹಿತರೇ ನಿರ್ದೇಶಿಸು ತ್ತಿದ್ದ ಬ್ಲೈಂಡ್ ಗೇಮ್ ಕಿರುಚಿತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಬ್ಲೈಂಡ್ ಗೇಮ್ ರಿವೇಂಜ್ ಸ್ಟೋರಿಯ ಕಿರುಚಿತ್ರ. ಯುವತಿ ಯೊಬ್ಬಳು ತನಗಾದ ಅನ್ಯಾಯಕ್ಕೆ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಅದಕ್ಕಾಗಿ ಎಂತಹ ಉಪಾಯ ಹೆಣೆಯುತ್ತಾಳೆ ಎಂಬುದೇ ಈ ಕಿರುಚಿತ್ರದ ಸಾರ. ಇದರಲ್ಲಿ ಅನಿಕಾ ರಮ್ಯಾ ಮೆಚ್ಚುವಂತೆ ನಟಿಸಿದರು. ಈ ಕಿರುಚಿತ್ರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಅಲ್ಲಿಂದ ಮತ್ತಷ್ಟು ಕಿರುಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.

ಬಳಿಕ ಕಿರುತೆರೆಗೂ ಎಂಟ್ರಿಕೊಟ್ಟರು. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸಿಲ್ಲಿಲಲ್ಲಿ ಧಾರಾವಾಹಿಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಅಲ್ಲಿಂದ ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟರು.

ಸಾಧಕಿಯ ಕಥೆಯಲ್ಲಿ ಸ್ನೇಹಾ
ಜೀವ್ನಾನೆ ನಾಟ್ಕ ಸಾಮಿ ಚಿತ್ರದಲ್ಲಿ ಇಬ್ಬರು ನಾಯಕರು, ಈ ಇಬ್ಬರಲ್ಲಿ ಹರ್ಷ ಜತೆಯಾಗಿ ಅನಿಕಾ ರಮ್ಯಾ ಬಣ್ಣಹಚ್ಚಿದ್ದಾರೆ. ಪ್ರತಿಯೊಬ್ಬ ಪುರುಷನ ಹಿಂದೆ ಒಬ್ಬ ಯಶಸ್ವಿ ಸೀ ಇರುತ್ತಾಳೆ ಎಂಬ ಮಾತಿದೆ. ಅಂತೆಯೇ ಇಲ್ಲಿ ಸಾಧಕ ಪತಿಯ ಹಿಂದೆ ಧೈರ್ಯ ತುಂಬುವ ಪತ್ನಿಯಾಗಿ ನಟಿಸಿದ್ದಾರೆ. ಜೀವನದಲ್ಲಿ ನೂರಾರು ಸಮಸ್ಯೆಗಳು ಎದುರಾಗುತ್ತವೆ. ಅವನ್ನು ಎದುರಿಸಿ ಅಂದುಕೊಂಡ ದನ್ನು ಹೇಗೆ ಸಾಧಿಸಬೇಕು ಎಂಬುದೇ ಸ್ನೇಹಾಳ ಪಾತ್ರವಾಗಿದೆ.

ನಿರೀಕ್ಷೆ ಹೆಚ್ಚಿಸಿದ ಚೊಚ್ಚಲ ಸಿನಿಮಾ
ಜೀವ್ನಾನೆ ನಾಟ್ಕ ಸಾಮಿ ಅನಿಕಾ ರಮ್ಯಾಗೆ ಚೊಚ್ಚಲ ಸಿನಿಮಾ. ಹಾಗಾಗಿ ಸಹಜವಾಗಿಯೇ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಈ ಚಿತ್ರದಲ್ಲಿ ನಾನು ಅಂದುಕೊಂಡ ಪಾತ್ರವೇ ಸಿಕ್ಕಿದೆ. ನನಗೆ ನೀಡಿದ ಪಾತ್ರಕ್ಕೆ ಜೀವತುಂಬಿದ ತೃಪ್ತಿ ನನಗಿದೆ ಎನ್ನುತ್ತಾರೆ ರಮ್ಯಾ. ನನ್ನ ಮೊದಲ ಚಿತ್ರವನ್ನು ಬೆಳ್ಳಿಪರದೆಯಲ್ಲಿ ಕಣ್ತುಂಬಿಕೊಳ್ಳಲು ಕಾತರಳಾಗಿದ್ದೇನೆ ಎಂದು ಸಂತಸದಿಂದ ನುಡಿಯುತ್ತಾರೆ ಅನಿಕಾ ರಮ್ಯಾ. ಮೊದಲ ಚಿತ್ರ ಇನ್ನು ತೆರೆಗೆ ಬರುವ ಮೊದಲೆ, ರಮ್ಯಾಗೆ ಹಲವು ಅವಕಾಶಗಳು ಬರುತ್ತಿವೆ. ಸದ್ಯ ರಮ್ಯಾ ಹೆ ಬಜೆಟ್‌ನ ಸಿನಿಮಾವೊಂದರಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಲಾಕ್‌ಡೌನ್ ಬಳಿಕ ಚಿತ್ರ ಸೆಟ್ಟೇರಲಿದೆ.

Leave a Reply

Your email address will not be published. Required fields are marked *