Tuesday, 27th July 2021

ಸಂದಿಗ್ಧ ಕಾಲದಲ್ಲಿ ಸಮರ್ಥ ನಾಯಕನ ಬದಲಾವಣೆ ಮಾಡುವುದು ಸರಿಯಲ್ಲ: ಸಿದ್ಧಗಂಗಾ ಶ್ರೀ

ಬೆಂಗಳೂರು: ಸಿಎಂ ಬದಲಾವಣೆ ವದಂತಿಗೆ ಬುಧವಾರ ಕೂಡ ಮಠಾಧೀಶರು ಸಿಎಂ ನಿವಾಸಕ್ಕೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.

ಸಿದ್ಧಗಂಗಾ ಮಠದ ಸಿದ್ದಲಿಂಗ ಶ್ರೀ ನೇತೃತ್ವದಲ್ಲಿ ಮಠಾಧೀಶರ ನಿಯೋಗ ಸಿಎಂ ಯಡಿಯೂರಪ್ಪ ಭೇಟಿ ಯಾಗಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧಗಂಗಾ ಶ್ರೀ, ಕಳೆದ ಒಂದು ವಾರದಿಂದ ಸಿಎಂ ಬದಲಾವಣೆ ವಿಚಾರವಾಗಿ ಸುದ್ದಿಗಳು ಹರಡುತ್ತಿವೆ. ಯಡಿಯೂರಪ್ಪನವರಿಗೆ ಪೂರ್ಣಾವಧಿ ಪೂರೈಸಲು ಅವಕಾಶ ನೀಡಬೇಕು ಎಂಬ ಸಂದೇಶವನ್ನು ಹೈಕಮಾಂಡ್ ಗೆ ರವಾನಿಸುವ ಯತ್ನ ಮಾಡಿದ್ದೇವೆ ಎಂದರು.

ಮಳೆಗಾಲ ಆರಂಭವಾಗಿದೆ, ಕೋವಿಡ್ ಮೂರನೇ ಅಲೆಯ ಭೀತಿ ಕೂಡ ಎದುರಾಗಿದೆ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಇಂತಹ ಸಂದಿಗ್ಧ ಕಾಲದಲ್ಲಿ ಸಮರ್ಥ ನಾಯಕನ ಬದಲಾವಣೆ ಮಾಡುವುದು ಸರಿಯಲ್ಲ. ಬದಲಾವಣೆ ಮಾಡುವುದರಿಂದ ಸರ್ಕಾರ ಸುಭದ್ರವಾಗಿಯೂ ಇರಲಾರದು, ಜನರಿಗೆ ಒಳ್ಳೆಯ ಆಡಳಿತ ನೀಡಲು ಸಾಧ್ಯವಾಗಲ್ಲ. ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ. ಓರ್ವ ಪಕ್ಷಾತೀತ ನಾಯಕ ನಾಗಿದ್ದಾರೆ. ಹೀಗಾಗಿ ಯಡಿಯೂರಪ್ಪನವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು. ಮುಂದೆ ಚುನಾವಣೆ ಬಂದಾಗ ಬೇರೆಯವರು ಸಿಎಂ ಆದರೆ ಅದಕ್ಕೆ ನಮ್ಮ ಆಕ್ಷೇಪಣೆಗಳಿಲ್ಲ.

ಯಾರೇ ಮುಖ್ಯಮಂತ್ರಿಯಾದರೂ ನಮ್ಮ ಮುಖ್ಯಮಂತ್ರಿಗಳೇ ಆಗಿರುತ್ತಾರೆ. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ಪೂರ್ಣಾವಧಿ ಮುಗಿಸಲಿ ಎಂಬುದು ಮಾತ್ರ ನಮ್ಮೆಲ್ಲರ ಉದ್ದೇಶ ಎಂದು ಹೆಳಿದರು.

75 ವರ್ಷ ದಾಟಿದ ಯಾರಿಗೂ ಆಡಳಿತಕ್ಕೆ ಅವಕಾಶ ಕೊಟ್ಟಿಲ್ಲ ಆದರೆ ಪ್ರಧಾನಿ ಮೋದಿ ಹಾಗೂ ಹೈಕಮಾಂಡ್ ನಮ್ಮ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದೆ ಎಂದಷ್ಟೇ ಹೇಳಿದ್ದಾರೆ ಎಂದರು.

Leave a Reply

Your email address will not be published. Required fields are marked *