Sunday, 14th August 2022

ಇದೊಂದು ಖಾಸಗಿ ಕಾಡು ! ಸತ್ಯಂ ಶಿವಂ ಸುಂದರಂ

ಅನಿಲ್‌ ಎಚ್‌.ಟಿ

ಸುಮಾರು ಆರು ದಶಕಗಳ ಹಿಂದೆ ಟಿಬೆಟಿನಲ್ಲಿ ನಡೆದ ವಿಪ್ಲವದಿಂದ ತಪ್ಪಿಸಿಕೊಂಡು, ಭಾರತಕ್ಕೆ ಓಡಿಬಂದ ಟಿಬೆಟಿನ ಒಂದು ತಂಡ ಕುಶಾಲ ನಗರ ಸಮೀಪದ ಬೈಲುಕುಪ್ಪೆಯ ಅರಣ್ಯದಲ್ಲಿ ಆಶ್ರಯ ಪಡೆಪಿತು. ಕಾಡು ಬೆಳೆದಿದ್ದ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ. ತಲಾ ಎರಡು ಎಕರೆ ಜಮೀನಿನಲ್ಲಿದ್ದ ಕಾಡನ್ನು ಕಡಿದು ಹೊಲ, ಗದ್ದೆಗಳನ್ನು ರೂಪಿಸಿದರು, ಮನೆ ಕಟ್ಟಿಕೊಂಡರು. ಈ ಪ್ರದೇಶದಲ್ಲಿ ಹೊಸ ಕಾಡನ್ನು ಬೆಳೆಯಬೇಕು, ಆ ಮೂಲಕ ಪರಿಸರ ಸೇವೆ ಮಾಡಬೇಕು ಎಂಬ ಯೋಚನೆ ಕರ್ಮಾ ಗುರೂಜಿಯವರಲ್ಲಿ ಮೂಡಿತು. ತಾವೇ ಸ್ವತಃ ಟ್ರಾಕ್ಟರ್ ಹತ್ತಿದರು. ಭಕ್ತರು ಸಹಕಾರ ನೀಡಿದರು, ಡಾ. ಯಲ್ಲಪ್ಪ ರೆಡ್ಡಿ ಮೊದಲಾದ ಪರಿಸರ ತಜ್ಞರು ಮಾರ್ಗ ದರ್ಶನ ನೀಡಿದರು. ಆ ಪ್ರಯತ್ನದಿಂದ ಕಗ್ಯು ನಳಂದ ಧಾರ್ಮಿಕ ಮಂದಿರದ ಬಳಿ ರೂಪುಗೊಂಡದ್ದೇ ‘ಸತ್ಯಂ ಶಿವಂ ಸುಂದರಂ’ ಖಾಸಗಿ ಅರಣ್ಯ! ಬರಡಾಗಿದ್ದ ಭೂಮಿಯಲ್ಲಿ ‘ಸತ್ಯಂ ಶಿವಂ ಸುಂದರಂ’ ಅರಣ್ಯವು ಏಕೆ, ಹೇಗೆ ರೂಪುಗೊಂಡಿತು? ಓದಿ ನೋಡಿ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.

ಬೈಲುಕುಪ್ಪದಲ್ಲಿನ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಹಸಿರು ಕ್ರಾಂತಿ ನಡೆದಿದೆ. ಇಲ್ಲಿನ ಕಗ್ಯು ನಳಂದ ಧಾರ್ಮಿಕ ಮಂದಿರದ ಮುಂಬದಿಯಲ್ಲಿ ಕಂಗೊಳಿಸುತ್ತಿರುವ 100 ಎಕ್ರೆ ವಿಸ್ತಾರದ ಅರಣ್ಯ ಇದೀಗ ಧಾರ್ಮಿಕ ಮಂದಿರ ನಡೆಸುತ್ತಿರುವ ಒಂದು ವಿನೂತನ ಪ್ರಯೋಗ ಎಂಬ ಹಿರಿಮೆಗೆ ಕಾರಣ ವಾಗಿದೆ. ಇಂಥ ಸಾಧನೆಗೆ ಕಾರಣವಾದದ್ದು ಕರ್ಮಾ ಗುರೂಜಿ ಎಂಬ ಟಿಬೇಟಿಯನ್ ಗುರು.

ಪ್ರವಚನ ಕೇಳಲು ಬರುವ ಜಿಜ್ಞಾಸುಗಳಿಗೆ ಪ್ರಕೃತಿ ಪ್ರೇಮದ ಪಾಠವನ್ನು ಸಹ ಈ ಗುರುಕುಲದಲ್ಲಿ
ಹೇಳಿಕೊಡಲಾಗುತ್ತಿದೆ ಎಂಬುದು ವಿಶೇಷ. ಅದೂ ಪ್ರಾಯೋಗಿಕವಾಗಿ ಕಾಡು ಬೆಳೆಸುವ ಮೂಲಕ.
‘ಸತ್ಯಂ ಶಿವಂ ಸುಂದರಂ’ ಪರಿಕಲ್ಪನೆಯಲ್ಲಿ, ಅದೇ ಹೆಸರಿನಲ್ಲಿ ರೂಪುಗೊಂಡ ಈ ದಟ್ಟಾರಣ್ಯದ ಹಿನ್ನಲೆಯಲ್ಲಿ ಈ ಟಿಬೇಟಿಯನ್ ಗುರುವಿನ 18 ವರ್ಷಗಳ ಪರಿಶ್ರಮ ಇದೆ. ಧಾರ್ಮಿಕ ಪ್ರವಚನವನ್ನೇ ಮುಖ್ಯ ಧ್ಯೇಯವಾಗಿಸಿಕೊಂಡ ಧಾರ್ಮಿಕ ಗುರು ನಿಸರ್ಗದ ಬಗೆಗಿನ ಪ್ರೇಮದಿಂದ ಅರಣ್ಯ ಬೆಳೆದ ಪರಿಯೇ ಗಮನಾರ್ಹವಾದದ್ದು.

ಬೈಲುಕುಪ್ಪೆಯಲ್ಲಿರುವ ಕಗ್ಯು ಧಾರ್ಮಿಕ ಮಂದಿರದ ಗುರುವಾದ ಕರ್ಮಾ ಗುರೂಜಿ ಧಾರ್ಮಿಕ ಪ್ರವಚನದ ಜತೆಜತೆಯಲ್ಲಿಯೇ ಲಾಮಗಳಿಗೆ ಪ್ರಕೃತಿಯ ಆರಾಧನೆಯನ್ನೂ ಪರಿಣಾಮಕಾರಿಯಾಗಿ ಕಲಿಸತೊಡಗಿದ್ದು ಆರಂಭದ ಹೆಜ್ಜೆ. ಎಲ್ಲಾ ವಿಚಾರಗಳ ಮೂಲ ಸತ್ವ ಇರುವುದೇ ನಮ್ಮ ಸುತ್ತಲಿನ ನಿಸರ್ಗ ದಲ್ಲಿ ಎಂಬುದನ್ನು ಶಿಷ್ಯರಿಗೆ ತಿಳಿಹೇಳುವ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗಕ್ಕೆ ಮುಂದಾದರು ಕರ್ಮಾ ಗುರೂಜಿ. ಇದಕ್ಕಾಗಿ ತಮ್ಮ ಮಂದಿರದ ಮುಂದೆ ಪಾಳು ಬಿದ್ದಿದ್ದ ಜಾಗದಲ್ಲಿ ಕಾಡು ಬೆಳೆಸುವ ಪ್ರಯೋಗದಲ್ಲಿ ತೊಡಗಿಸಿಕೊಂಡರು.

ಹಲವು ವರ್ಷಗಳಿಂದ ಬೆಂಗಾಡಿದ್ದ ಜಾಗದಲ್ಲಿ ಕಾಡು ಗಿಡಗಳನ್ನು ಬೆಳೆಯಗೊಟ್ಟು, ಬೇಸಿಗೆಯಲ್ಲಿ ನೀರು ಹಾಕಿದ ಪರಿಣಾಮವೇ ಈ ಜಾಗದಲ್ಲಿ ಈಗ ಹಸಿರು ಕಂಗೊಳಿಸಿದೆ. ಸುಮಾರು 100 ಎಕ್ರೆ ಭೂಮಿಯಲ್ಲಿ ಗಿಡಮರಗಳ ಹಸಿರು ಸೊಂಪು ಕಂಡು ಬರುತ್ತಿದೆ. ಈ ಕಾಡಿನಲ್ಲಿ ಆನೆ, ಜಿಂಕೆ, ಕಾಡೆಮ್ಮೆ, ಮೊಲ, ನವಿಲು ಮುಂತಾದ ಜೀವವೈವಿಧ್ಯಗಳು, ಹಲವಾರು ಪಕ್ಷಿಪ್ರಬೇಧಗಳು ಆಸರೆ ಪಡೆದಿದೆ. ಅಲ್ಲಿರುವ ಹಸಿರು ತುಂಬಿದ ಕಾಡು ಕಣ್ಣಿಗೆ ತಂಪೆರೆಯು ವಂತಿದೆ.

ಕರ್ಮಾ ಗುರೂಜಿ ಇದೇ ಬೈಲುಕುಪ್ಪೆಯಲ್ಲಿ 50 ವರ್ಷಗಳ ಹಿಂದೆ ಜನಿಸಿದವರು. ಇವರು ತನ್ನನ್ನು ‘ಇಂಡಿಯನ್ ಟಿಬೇಟಿಯನ್’ ಎಂದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬೈಲುಕುಪ್ಪೆಯ ಸುತ್ತ ಹರಿದು ಸಾಗುವ ಕಾವೇರಿ ನದಿ ತ್ಯಾಜ್ಯ ವಸ್ತುಗಳಿಂದ ಮಲೀನವಾಗುವುದನ್ನು ತಾರುಣ್ಯದಲ್ಲಿ ಗಮನಿಸಿ ಬೇಸರ ತಳೆದ ಕರ್ಮಾ ತನ್ನ ಸಹಪಾಠಿಗಳೊಂದಿಗೆ ಕಾವೇರಿ ನದಿ ಸ್ವಚ್ಚತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಲ್ಲಿಂದಲೇ ಪ್ರಕೃತಿ ಸಂರಕ್ಷಣೆಯ ಒಲವು ಕರ್ಮಾ ಅವರಲ್ಲಿ ಮೂಡಿತ್ತು.

‘ಈ ಭೂಮಿ ನಮ್ಮೆಲ್ಲರ ಕರ್ಮಭೂಮಿ. ಇದನ್ನು ಸುರಕ್ಷಿತವಾಗಿ, ಸುಂದರವಾಗಿ ಇಟ್ಟುಕೊಂಡಷ್ಟು ಅದು ನಮಗೇ ಒಳ್ಳೆಯದು. ಪ್ರಕೃತಿ  ಸುಂದರವಾಗಿ ದ್ದಷ್ಟು ನಾವೂ ಕೂಡ ಸಾಕಷ್ಟು ವರ್ಷ ಜೀವಿಸಬಲ್ಲೆವು. ಮಲಿನ ಪ್ರಕೃತಿಯಲ್ಲಿ ಮನುಷ್ಯ ಕುಲ ಹೆಚ್ಚು ವರ್ಷ ಜೀವಿಸಲು ಅಸಾಧ್ಯ. ಶುದ್ಧ ಗಾಳಿ, ಸ್ವಚ್ಚ ನೀರು ನಮಗೆ ಪರಿಶುದ್ಧವಾದ ಆಹಾರ, ಹಣ್ಣುಹಂಪಲು ನೀಡುವ ಶಕ್ತಿ ಹೊಂದಿದೆ. ಮಾನವ ಕುಲಕ್ಕೆ ಸೇರಿದ ನಾವೆಲ್ಲರೂ ನಿಸರ್ಗವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಣ ತೊಡಲೇಬೇಕಾದ ಅನಿವಾರ್ಯತೆಯ ದಿನಗಳು ಈಗಿದೆ’ ಎಂಬ ಪ್ರಬಲ ಪ್ರತಿಪಾದನೆ ಕರ್ಮಾ ಗುರೂಜಿ ಅವರದ್ದು.

ಗಿಡಕ್ಕೆ ನೀರು ಸಿಂಪಡಿಸಿದ ಸನ್ಯಾಸಿ
ಪ್ರಾರಂಭದಲ್ಲಿ ಕರ್ಮಾ ಗುರೂಜಿ ದೇವಾಲಯದಲ್ಲಿ ಪ್ರವಚನ ಮುಗಿಸಿದ ಕೂಡಲೇ, ಕಾಡು ಬೆಳೆಯುತ್ತಿದ್ದ ಸ್ಥಳಕ್ಕೆ ತೆರಳಿ ಸಸಿಗಳಿಗೆ ನೀರು ಸಿಂಪಡಿಸು ತ್ತಿದ್ದಾಗ ಅನೇಕರು ವ್ಯಂಗ್ಯವಾಡಿದ್ದರಂತೆ. ‘ಈ ಗುರುವಿಗೆ ಇದೇನಿದು ಹುಚು! ಪಾಠ ಹೇಳುತ್ತಾ, ಉಪನ್ಯಾಸ ನುಡಿಯುತ್ತಾ ಕೂರುವುದು ಬಿಟ್ಟು ಬಿಸಿಲಿ ನಲ್ಲಿ ಬೆವರು ಸುರಿಸುತ್ತಾ ಕಾಡು ಬೆಳೆಸುವ ಹುಚ್ಚು ಪ್ರಯತ್ನ’ ಎಂದು ಹೇಳುತ್ತಿದ್ದರಂತೆ.

‘ಸನ್ಯಾಸಿಯಾದವನಿಗೆ ಇದೆಲ್ಲಾಬೇಕಾ?’ ಎಂಬ ಟೀಕೆಗಳೂ ಕೇಳಿಬಂದಿದ್ದವಂತೆ. ಇದಕ್ಕೆಲ್ಲಾ ಕಿವಿಗೊಡದೇ ಸಸಿ ಸಂರಕ್ಷಣೆಯಲ್ಲಿ ಸಕ್ರಿಯರಾದ ಕರ್ಮಾ
ಪ್ರಯತ್ನ ಮುಂದುವರೆದಂತೆ ಅವರ ಶಿಷ್ಯಂದಿರು ಕೂಡ ತಮ್ಮ ಗುರುಗಳ ಜತೆ ಕೈಜೋಡಿಸತೊಡಗಿದರು. ಕರ್ಮಾ ಗುರೂಜಿ, ತಾವೇ ಸ್ವತಃ ಟ್ರಾಕ್ಟರ್ ಚಾಲಿಸುತ್ತಾ ಭೂಮಿ ಹಸನುಗೊಳಿಸಿ, ಗುಂಡಿ ತೋಡಿ ಗಿಡ ನೆಟ್ಟು, ದಿನಾ ನೀರೆರೆಯುತ್ತಾ ಪಟ್ಟ ಪರಿಶ್ರಮದ -ಲವೇ ಈಗ ಕಂಗೊಳಿಸುತ್ತಿರುವ ಹಸಿರು ಪರಿಸರ ಎಂಬುದು ಎಲ್ಲರಿಗೂ ಅರಿವಾಯಿತು.

ಹೀಗಾಗಿ ಈಗ ಕಗ್ಯು ಧಾರ್ಮಿಕ ಮಂದಿರದ ಕಾಡು ಎಲ್ಲರ ಅಚ್ಚುಮೆಚ್ಚಿನ ಪರಿಸರ ತಾಣವಾಗಿ ಪರಿವರ್ತಿತವಾಗಿದೆ. ಮಳೆ ನೀರಿನ ಸಂಗ್ರಹಕ್ಕಾಗಿ, ಕಾಡಿನ ಮಧ್ಯೆ ನಿರ್ಮಿಸಿರುವ ಪುಟ್ಟ ಸರೋವರ ಕೂಡ ಅರಣ್ಯದ ಸೊಬಗು ಹೆಚ್ಚಿಸಿದೆ. ಇಲ್ಲಿ ನೀರು ಕುಡಿಯಲು ನೂರಾರು ಪಕ್ಷಿ, ಪ್ರಾಣಿಗಳು ಬರುತ್ತಿದೆ.
ಪ್ರಾರಂಭದಲ್ಲಿ ಕೆಲವು ಬೇಟೆಗಾರರ ಕಾಟವಿತ್ತು. ‘ಈಗ ಅಪರಿಚಿತರನ್ನು ಕಾಡಿನ ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸದಂತೆ ನಿರ್ಭಂಧಿಸಲಾಗಿದೆ. ಅಲ್ಲಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದೆ.

ಹೀಗಾಗಿ ಈ ಕಾಡು ಸುರಕ್ಷಿತವಾಗಿದೆ’ ಎಂದು ಕರ್ಮಾ ಗುರೂಜಿ ಹೇಳಿದರು. ಕಠಿಣ ಪರಿಶ್ರಮ ಎಂದೂ ವ್ಯರ್ಥವಾಗುವುದಿಲ್ಲ. ಒಂದಲ್ಲ ಒಂದು ದಿನ ಪಟ್ಟ ಕಷ್ಟಕ್ಕೆ ಸೂಕ್ತ ಮೌಲ್ಯ ದೊರಕುತ್ತದೆ ಎಂಬುದು ನಿಜವಾಗಿದೆ. ಪ್ರಕೃತಿ ಸಂರಕ್ಷಣೆಯೇ ನಿಜವಾದ ಧರ್ಮ ಎಂಬುದು ಇಲ್ಲಿ ನಿರೂಪಿತವಾಗಿದೆ ಎಂದೂ ಹೇಳಿದ ಕರ್ಮಾ, ಕುಪೇಂದ್ರರೆಡ್ಡಿ, ಯಲ್ಲಪ್ಪರೆಡ್ಡಿ ಮತ್ತು ಮೈಸೂರಿನ ಪ್ರೊ. ರವಿಕುಮಾರ್, ಡಾ. ಚಂದ್ರಶೇಖರ್ ಮೊದಲಾದವರು ನೀಡಿದ ಮಾರ್ಗದರ್ಶನ ಈ ಕಾಡು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ಕೆಲವೇ ವರ್ಷಗಳ ಹಿಂದೆ ಬೆಂಗಾಡಾಗಿದ್ದ ಪ್ರದೇಶ ಈಗ ಹಸಿರಿನಿಂದ ತುಂಬಿದೆ. ವನ್ಯಜೀವಿಗಳ ಸುರಕ್ಷಿತ ಸಂಚಾರ ತಾಣವಾಗಿದೆ. ಓರ್ವ ಗುರು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ‘ಸತ್ಯಂ ಶಿವಂ ಸುಂದರಂ’ ಒಂದು ಉದಾಹರಣೆ. ಕಗ್ಯು ನಳಂದ ಗುರುಕುಲ ಶಾಂತಿ ಸಂದೇಶ
ದೊಂದಿಗೆ, ನಿಸರ್ಗ ಸಂರಕ್ಷಣೆಯ ಜಾಗೃತಿ ಸಂದೇಶವನ್ನೂ ಪರಿಣಾಮಕಾರಿಯಾಗಿ ಸಾರಿದೆ.

ಪರಿಸರ ಪ್ರೇಮಿ ಉದ್ಯಾನವನ
ಮುಂದಿನ ದಿನಗಳಲ್ಲಿ ಈ ಕಾಡನ್ನು ಆಸಕ್ತ ಪರಿಸರಪ್ರೇಮಿಗಳ ವೀಕ್ಷಣೆಗೆ ಮುಕ್ತವಾಗಿಸಬೇಕು. ವಾಕಿಂಗ್ ಪಾತ್ ರೂಪಿಸಿ ಸಸ್ಯಗಳನ್ನು ಗುರುತು
ಹಿಡಿಯುತ್ತಾ ಪರಿಸರ ಜ್ಞಾನ ಬೆಳೆಸಿಕೊಳ್ಳುತ್ತಾ ಜನ ಇಲ್ಲಿ ನಡೆದಾಡಬೇಕು. ಇಲ್ಲಿ ಜೇನು ಸಾಕಾಣೆಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ವಿಶಾಲ ವಾದ ಗೋಶಾಲೆ ನಿರ್ಮಿಸಬೇಕು. ವಯಸ್ಸಾದ ಜಾನುವಾರುಗಳಿಗೆ ಕಗ್ಯು ಮಂದಿರ ಆಶ್ರಯ ತಾಣವಾಗಬೇಕು. ‘ಸತ್ಯಂ ಶಿವಂ ಸುಂದರಂ’ ಕಾಡನ್ನು ಜೀವವೈವಿಧ್ಯತೆಯ ಸಂಶೋಧನಾ ತಾಣವಾಗಿ ರೂಪುಗೊಳಿಸುವ ಪ್ರಯತ್ನ ನಡೆದಿದೆ ಎಂದು ಕರ್ಮಾ ಗುರೂಜಿ ಹೇಳಿದರು.

ಕಡಿದ ಕಾಡಿನ ಮರುಸೃಷ್ಟಿ!
1959 ರಲ್ಲಿ ಚೀನಾದ ಅತಿಕ್ರಮಣ, ದೌರ್ಜನ್ಯದಿಂದಾಗಿ ಸಾವಿರಾರು ಟಿಬೇಟಿಯನ್ನರು ಹಿಮಾಲಯ ದಾಟಿ ಭಾರತಕ್ಕೆ ಆಶ್ರಯ ಕೋರಿ ಬಂದರು. ನಿರಾಶ್ರಿತ ಟಿಬೇಟಿಯನ್ನರಿಗೆ ದೇಶದ ಬೇರೆ ಬೇರೆ ಕಡೆ ನೆಲೆ ನೀಡಲಾಯಿತು. ಕೊಡಗು – ಮೈಸೂರು ಜಿಲ್ಲೆಗಳ ಗಡಿಯಾದ ಬೈಲುಕುಪ್ಪೆಯ ಹರವೇ ಎಂಬ ಅರಣ್ಯ ಪ್ರದೇಶದಲ್ಲೂ ಅವರು ನಿಂತರು. ಸರಕಾರದಿಂದ ತಲಾ ೨ ಎಕರೆಗಳಷ್ಟು ಕಾಡು ಜಮೀನು ಪಡೆದ ಟಿಬೇಟಿಯನ್ನರು, ಕಾಡನ್ನು ಕಡಿದು ಅಲ್ಲಿ ಮನೆ ನಿರ್ಮಿಸಿ, ಕೃಷಿ ಜಮೀನು ರೂಪಿಸಿಕೊಂಡರು.

‘ಇಲ್ಲಿದ್ದ ಕಾಡನ್ನು ಕಡಿದು ಕೃಷಿ ಜಮೀನು ಮಾಡಿದ್ದೀರಿ ಎಂದು ಅನೇಕ ಬಾರಿ ಟೀಕಿಸುತ್ತಿದ್ದೆ. ಇದು ಕರ್ಮಾ ಗುರೂಜಿ ಮನದಲ್ಲಿ ಪರಿಣಾಮ ಬೀರಿತು. ‘ನೋಡ್ತಾ ಇರಿ, ನಾವೂ ಕಾಡು ಬೆಳೆದು ತೋರಿಸುತ್ತೀವಿ’ ಎಂದು ಛಲ, ಹಠದಿಂದ ೧೮ ವರ್ಷಗಳ ಹಿಂದೆ ಕಾಡು ಬೆಳೆಸುವ ಪ್ರಯತ್ನಕ್ಕೆ ಮುಂದಾದರು. ಅದರ -ಲವಾಗಿ ೬೩ ವರ್ಷಗಳ ಹಿಂದೆ ಅರಣ್ಯ ಇದ್ದ ಪ್ರದೇಶದಲ್ಲಿ ಈಗ ಮತ್ತೆ ಕಾಡು ಬೆಳೆದಿದೆ. ಇಲ್ಲೀಗ ೨೫೫ ಜಾತಿಯ ಮರಗಳಿವೆ. ಡಾ.ಯಲ್ಲಪ್ಪರೆಡ್ಡಿ
ಚಿಂತನೆ, ಮಾರ್ಗದರ್ಶನದ ಫಲವಾಗಿ ಈ ಕಾಡಿನಲ್ಲಿ ಎಲ್ಲಿಯಾವ ಮರ, ಸಸಿ ಇದೆ ಎಂದು ಸುಲಭವಾಗಿ ಪತ್ತೆ ಹಚ್ಚಲುಸಾಧ್ಯವಾಗಿದೆ’ ಎಂದು ಬೋಧಿ ಸತ್ವ ಟ್ರಸ್ಟ್ ನಿರ್ದೇಶಕ ಎ.ಜೆ. ಬಸವೇಗೌಡ ಹೇಳಿದರು.

ಕಾಡಾನೆಗಳಿಗೂ ಖುಷಿ!
ಟಿಬೇಟಿಯನ್ನರು ನೆಲೆಸಿರುವ ಬೈಲುಕುಪ್ಪೆಯ ಮಣ್ಣು ನಿಜಕ್ಕೂ ಸಸ್ಯರಾಶಿ ಬೆಳವಣಿಗೆಗೆ ಅತ್ಯಂತ ಸೂಕ್ತವಾಗಿದೆ. ಸತ್ಯಂ ಶಿವಂ ಸುಂದರಂ ಎಂಬ ಖಾಸಗಿ ಕಾಡಿನ ಪರಿಕಲ್ಪನೆಯೇ ಅದ್ಭುತ. ಒಬ್ಬ ಧಾರ್ಮಿಕ ಗುರು ಇಂಥ ಕಲ್ಪನೆಯನ್ನು ಅಪೂರ್ವ ರೀತಿಯಲ್ಲಿ ಜಾರಿಗೆ ತರುತ್ತಾರೆ ಎಂಬುದು ವಿಸ್ಮಯ. ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಿಸರ್ಗದ ಸೃಷ್ಟಿ. ಅದೇ ಸತ್ಯಂ, ಶಿವನ ಕೃಪೆಯಿಲ್ಲದೇ ಯಾರೋರ್ವರೂ ಒಂದು ಬೀಜವನ್ನೂ ಸೃಷ್ಟಿಸಲು ಸಾಧ್ಯವಿಲ್ಲ.

ಅದೇ ಶಿವಂ. ನಿಸರ್ಗದ ಸುಂದರತೆ ಕಣ್ಣಿಗೆ ಕಾಣಿಸುವಂತಿದ್ದರೆ ಅದುವೇ ಸುಂದರಂ. ಇವೆಲ್ಲದರ ಸಂಗಮವೇ ಸತ್ಯಂ, ಶಿವಂ, ಸುಂದರಂ ಆಗಿದೆ.
‘ಕಾಡಾನೆಗಳು ಇಲ್ಲಿ ಸುತ್ತಾಡುತ್ತಿದ್ದರೂ ಒಂದೇ ಒಂದು ಮರಕ್ಕೂ ಹಾನಿಮಾಡಿಲ್ಲ. ನನಗೆ ಇದು ನಿಜಕ್ಕೂ ಅಚ್ಚರಿಯ ಸಂಗತಿ. ನೀವು ಈ ಅರಣ್ಯ ಬೆಳೆಸಿದ್ದು ನಮಗಾಗಿಯೇ ಎಂದು ಸಂದೇಶ ನೀಡಿದಂತಿದೆ.’ ಎಂದಿದ್ದಾರೆ ಡಾ. ಯಲ್ಲಪ್ಪ ರೆಡ್ಡಿ. ಇವರು ಸತ್ಯಂ ಶಿವಂ ಸುಂದರಂ ಅರಣ್ಯ ಯೋಜನೆಯ
ಮಾರ್ಗದರ್ಶಿಯೂ ಹೌದು.

ಹೆಸರು ರೂಪುಗೊಂಡ ಬಗೆ
‘ಸತ್ಯಂ ಶಿವಂ ಸುಂದರಂ’ ಎಂಬ ಹೆಸರನ್ನು ಈ ಕಾಡಿಗೆ ಇರಿಸಿದ ಹಿನ್ನಲೆಯೂ ಸ್ವಾರಸ್ಯವಾಗಿದೆ. ಕರ್ಮಾ ಗುರೂಜಿ ತಮ್ಮ ಅರಣ್ಯಕ್ಕೆ ಹೆಚ್ಚಿನ ಗಿಡಗಳಿ ಗಾಗಿ ಹೆಸರಾಂತ ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ಅವರನ್ನು ಸಂಪರ್ಕಿಸಿದ್ದರು. ಗುರೂಜಿಯೊಬ್ಬರ ಹೊಸ ಪ್ರಯೋಗದ ಬಗ್ಗೆ ಆಸಕ್ತಿ ತಳೆದ ಯಲ್ಲಪ್ಪ ರೆಡ್ಡಿ ಬೈಲುಕುಪ್ಪೆಗೆ ಭೇಟಿ ನೀಡಿ ಕಾಡು ಬೆಳೆದ ರೀತಿ ಕಂಡು ಸಂತೋಷಗೊಂಡರು. ಇಲ್ಲಿ ದೈವ ನೆಲಸಿದೆ. ನಿಸರ್ಗ ಮಾತೆಯ ನೆಲೆಯಿದೆ. ಕಣ್ಣಿಗೆ ಸೊಬಗು ಉಂಟಾಗುತ್ತಿದೆ. ‘ಸತ್ಯಂ, ಶಿವಂ, ಸುಂದರಂ’ ಎಂಬುದು ಈ ಪರಿಸರದಲ್ಲಿ ನಿತ್ಯ ಸತ್ಯವಾಗಿದೆ ಎಂದು ಯಲ್ಲಪ್ಪರೆಡ್ಡಿ ಇದೇ ಹೆಸರನ್ನು ಕಾಡಿಗೆ ಇಟ್ಟರಂತೆ.

***

1995 ರಲ್ಲಿ 50 ಸಸಿ ನೆಟ್ಟಿದ್ದೆ. ಈಗ ಆ ಸಸಿಗಳೇ ಹೆಮ್ಮರವಾಗಿ ಬೆಳೆದು ನಿಂತಿದೆ. ಟಿಬೇಟಿಯನ್  ಧಾರ್ಮಿಕ ಮುಖಂಡರಾದ ದಲೈಲಾಮ ಮತ್ತು ಕರ್ಮಪ ಅವರ ಪ್ರಕೃತಿ ಪ್ರೀತಿಯ ಸೆಲೆಯಲ್ಲಿಯೇ ಈ ಕಾಡು ರೂಪುಗೊಂಡಿದೆ. ಇಂತಹ ಅರಣ್ಯ ನಮ್ಮ ಭಕ್ತರಲ್ಲಿ ಹೊಸ ಉತ್ಸಾಹ, ಹೊಸ ಶಕ್ತಿಯನ್ನು ಮೂಡಿಸಿದೆ ಎಂದು ಮನತೃಪ್ತಿಯಿಂದ ಹೇಳಬಲ್ಲೆ.
– ಕರ್ಮಾ ಗುರೂಜಿ