Sunday, 24th January 2021

ಹೊಯ್ಸಳರ ಬೆರಗು ಜಾವಗಲ್‌

ಶ್ರೀನಿವಾಸ ಮೂರ್ತಿ ಎನ್. ಎಸ್.

ಹೊಯ್ಸಳರ ದೇವಾಲಯಗಳು ನಮ್ಮ ರಾಜ್ಯದಲ್ಲಿ ನೂರಾರು ಊರುಗಳಲ್ಲಿ ಹರಡಿದ್ದು, ತಮ್ಮ ಶಿಲ್ಪಕಲಾ ವೈಭವಕ್ಕೆೆ ಪ್ರಸಿದ್ಧ ವಾಗಿವೆ. ಅವುಗಳಲ್ಲಿ ಕೆಲವು ದೇವಾಲಯಗಳು ವಾಸ್ತು, ಶೈಲಿ, ವಿಸ್ತಾರ ಮತ್ತು ಲಾಲಿತ್ಯದ ದೃಷ್ಟಿಯಲ್ಲಿ ಹೊಯ್ಸಳ ಶೈಲಿಯ
ಮೇರು ದೇವಾಲಯಗಳ ವ್ಯಾಪ್ತಿಗೆ ಸೇರುತ್ತವೆ. ಅಂತಹ ಮೇರು ದೇವಾಲಯದಲ್ಲಿ ಜಾವಗಲ್ಲಿನ ಲಕ್ಷ್ಮೀನರಸಿಂಹ ದೇವಾಲಯವೂ
ಒಂದು.

ಈ ದೇವಾಲಯ ತ್ರಿಕೂಟಾಚಲ ಎನಿಸಿದ್ದು, ಇಲ್ಲಿನ ಗರ್ಭಗುಡಿಗಳಲ್ಲಿ ವಿಷ್ಣುವಿನ ಮೂರು ಸ್ವರೂಪಗಳನ್ನು ನೋಡಬಹುದು. ಹೊಯ್ಸಳರ ಬಹುತೇಕ ದೇವಾಲಯಗಳಂತೆ ಈ ದೇವಾಲಯ ಸಹ ನಕ್ಷತ್ರಾಕಾರದ ಜಗಲಿಯ ಮೇಲೆ ನಿರ್ಮಿತವಾಗಿದ್ದು ಮೂರು ಗರ್ಭಗುಡಿ, ಅವುಗಳಿಗೆ ಹೊಂದಿಕೊಂಡಂತೆ ಒಂದೇ ಅಂತರಾಳ, ನವರಂಗ, ಮುಖಮಂಟಪ ಹೊಂದಿದೆ.

ಗರ್ಭಗುಡಿಯಲ್ಲಿ ಶ್ರೀಧರ, ಲಕ್ಷ್ಮೀನರಸಿಂಹ ಮತ್ತು ವೇಣುಗೋಪಾಲನ ಮೂರ್ತಿಗಳಿವೆ. ಇಲ್ಲಿ ಮುಖ್ಯ ದೇವರು ಶ್ರೀಧರ ನಾಗಿದ್ದರೂ (ಶಂಖಾ, ಚಕ್ರ, ಗದಾ ಹಾಗು ಪದ್ಮ), ಈಗ ಅಲ್ಲಿನ ಲಕ್ಷ್ಮೀ ನರಸಿಂಹ ಪ್ರಧಾನ ಎನಿಸಿದ್ದು, ದೇವಾಲಯ ಅದೇ ಹೆಸರನಿಂದ ಕರೆಯಲ್ಪಡುತ್ತಿದೆ. ನವರಂಗದಲ್ಲಿ ವಿತಾನದಲ್ಲಿನ ಕೆತ್ತನೆ ಕಲಾತ್ಮಕವಾಗಿದೆ. ಇಲ್ಲಿನ ಅಷ್ಟ ದಿಕ್ಪಾಲಕರ ಕೆತ್ತೆನೆ ಹಾಗು ಕಮಲದ ವಿನ್ಯಾಸ ಗಮನ ಸೆಳೆಯುತ್ತದೆ. ನವರಂಗದಲ್ಲಿ ಹೊಯ್ಸಳ ಶೈಲಯ ಸುಂದರ ನಾಲ್ಕು ಕಂಬಗಳಿದ್ದು ಸುಂದರ ವಾಗಿವೆ. ಇಲ್ಲಿ ಪಶ್ಚಿಮ ಭಾಗದ ಶಿಖರ ಮಾತ್ರ ಈಗ ಉಳಿದಿದ್ದು, ಇತರ ಶಿಖರಗಳು ನಾಶವಾಗಿವೆ. ಈ ದೇವಾಲಯಕ್ಕೆ ವಿಜಯ ನಗರದ ಅರಸರು ದೊಡ್ಡದಾದ ಪ್ರವೇಶದ್ವಾರ ನಿರ್ಮಿಸಿದ್ದಾರೆ.

ಶಿಲ್ಪ ಸೌಂದರ್ಯ

ಇಡೀ ದೇವಾಲಯದ ಹೊರಭಿತ್ತಿ ಶಿಲಾ ಕೆತ್ತೆನೆಯಿಂದ ತುಂಬಿಕೊಂಡಿದ್ದು, ಹೊಯ್ಸಳ ಶೈಲಿಯ ಕಲಾತ್ಮಕತೆಯೆ ವೈಭವವನ್ನು ಸಾರುತ್ತದೆ. ಗಜ, ಅಶ್ವ, ಲತಾಪಟ್ಟಿಕೆಗಳು ಕೆಳಸಾಲಿನಲ್ಲಿದ್ದು ನಂತರ ರಾಮಾಯಣದ ಕೆತ್ತನೆ ಗಮನ ಸೆಳೆಯುತ್ತದೆ. ನಂತರದ ಸಾಲಿನಲ್ಲಿ ಸುಂದರ ಶಿಲ್ಪಗಳ ಕೆತ್ತೆನೆ ಇದ್ದು, ಇವುಗಳಲ್ಲಿ ದಶಾವತಾರದ ಕೆತ್ತೆೆನೆ,  ಕಾಳಿಂಗ ಮರ್ಧನ, ಮತಸ್ಯ ಭೇಧನ, ಶೇಷಶಯನ, ಗಣಪತಿ, ಚತುರ್ವಿಂಶತಿ ವಿಷ್ಣುವಿನ ಮೂರ್ತಿಗಳು, ಪರವಾಸುದೇವ, ವೇಣುಗೋಪಾಲನ ಮೂರ್ತಿ ತಮ್ಮ ಕಲಾ ಚಾತುರ್ಯದಿಂದ ನೋಡುಗರ ಮನ ಸೆಳೆಯುತ್ತವೆ. ಇಲ್ಲಿ ಕೆತ್ತಲಾಗಿರುವ ರಾಮಾಯಣ ಕಥನ ಕುತೂಹಲವಾಗಿದ್ದು ಲಂಕೆ ಯಲ್ಲಿ ಹನುಮಂತ ಸೀತೆಯನ್ನು ದುರ್ಬೀನನಲ್ಲಿ ಹುಡುಕುತ್ತಿರುವಂತೆ ಭಾಸವಾಗುವ ಶಿಲ್ಪ ಗಮನ ಸೆಳೆಯುತ್ತದೆ.

ಶಿಲ್ಪಿಗಳು

ಈ ದೇವಾಲಯದ ನಿರ್ಮಾಣದಲ್ಲಿ ಹೊಯ್ಸಳ ಶೈಲಿಯ ಖ್ಯಾತ ಶಿಲ್ಪಿ ಮಲ್ಲಿ ತಮ್ಮನ ಹೆಸರು ಕಾಣಸಿಗುವ ಕಾರಣ ನಿರ್ಮಾಣ ಕಾಲವನ್ನು ಸುಮಾರು 13 ನೇ ಶತಮಾನಕ್ಕೆ ಸೇರಿಸಲಾಗಿದೆ. ಹೊಯ್ಸಳ ರಾಜ ವೀರ ಸೋಮೇಶ್ವರನ ಕಾಲದಲ್ಲಿ ಸಾ.ಶ.1250ರಲ್ಲಿ ಈ ದೇಗುಲದ ನಿರ್ಮಾಣವಾಯಿತು. ಜಾವಗಲ್ ಪಟ್ಟಣವು ಹೊಯ್ಸಳರ ಕಾಲದ ಪ್ರಮುಖವಾದ ಸ್ಥಳ ಎನಿಸಿದ್ದು, ಇಲ್ಲಿ ಗಂಗಾಧರ ದೇವಾಲಯವೂ ಇದೆ.

ಹೊಯ್ಸಳರ ಕಾಲದ ಜೈನ ಬಸದಿಯಿದ್ದು ಹಾಸನ ಜಿಲ್ಲೆಯಲ್ಲಿ ಕಾಣಬರುವ ಹೊಯ್ಸಳ ಬಸದಿಗಳ ಸಾಲಿನಲ್ಲಿ ನಿಲ್ಲುತ್ತದೆ. ಹೊಯ್ಸಳರ ಕಾಲದ ನಂತರ ವಿಜಯಯನಗರ ಕಾಲದಲ್ಲಿ ಈ ದೇವಾಲಯಕ್ಕೆ ಸ್ಥಳೀಯ ಪಾಳೇಗಾರರು ನಿರ್ಮಿಸಿದ ಒಂದು
ಮಂಟಪ ಹಾಗು ವಿಜಯನಗರ ಅರಸರು ನಿರ್ಮಿಸಿದ ಪ್ರವೇಶ ದ್ವಾರವಿದೆ. ಭೈರವನೆಂಬ ಸ್ಥಳಿಯ ಮಾಂಡಲೀಕ ನಿರ್ಮಿಸಿದ ಬೃಹತ್ ಕೆರೆ ಇಲ್ಲಿದೆ ಮತ್ತು ಆತ ಇಲ್ಲಿನ ಕೋಟೆ ಹಾಗು ಉರಿನ ಹೆಬ್ಬಾಗಿಲನ್ನು ನಿರ್ಮಿಸಿದ್ದ.

ಹೊಯ್ಸಳ ಶೈಲಿಯ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ಇದು ಹಾಸನ ಜಿಲ್ಲೆಯ ಅರಸೀಕೆರೆಯ ತಾಲ್ಲೂಕಿನಲ್ಲಿದ್ದು ಹಳೇ ಬೀಡು ಬಾಣಾವರ ಮಾರ್ಗದಲ್ಲಿ ಹಳೇಬೀಡಿನಿಂದ ಸುಮಾರು 20 ಕಿ ಮೀ ದೂರದಲ್ಲಿದೆ.

Leave a Reply

Your email address will not be published. Required fields are marked *