Friday, 24th September 2021

ವೇದಾಂತ ಸಾಗರದಲ್ಲಿ ಜಯಸ್ತಂಭ ನಿಲ್ಲಿಸಿದ ಜಯತೀರ್ಥರು

ತನ್ನಿಮಿತ್ತ

ಡಾ.ನಾರಾಯಣಾಚಾರ್ಯ ಧೂಳಖೇಡ

ದ್ವೈತ ಸಿದ್ಧಾಂತದ ಇತಿಹಾಸದಲ್ಲಿ ತಮ್ಮ ಅದ್ಭುತ ಟೀಕಾ ಗ್ರಂಥಗಳಿಂದ ಜಯಸ್ತಂಭ ನಿಲ್ಲಿಸಿದ ಶ್ರೀ ಜಯತೀರ್ಥರು ಮುನಿತ್ರಯರಲ್ಲಿ ಒಬ್ಬರೆನಿಸಿದ್ದಾರೆ. ಈ ಭೂಮಿಯ ಮೇಲೆ ಅವರ ಅವತಾರ ಕಾಲ 1340-1388. ತಮ್ಮ ತಪಸ್ಸು, ವಿದ್ಯೆ, ತ್ಯಾಗ, ಅಧ್ಯಯನ-ಅಧ್ಯಾಪನ, ಗ್ರಂಥ ರಚನೆಗಳಲ್ಲಿ ಸೀಮಾ ಪುರುಷ ರಾಗಿದ್ದಾರೆ.

ಇದು ಒಂದು ಯುಗದ ಸಾಧನೆಯಲ್ಲ. ಆ ಮಹಾಮಹಿಮರ ಯುಗಾಂತಗಳ ಸಾಧನೆ. ಮಳೆ ಸುರಿಸುವ ದೇವೇಂದ್ರನೆ ತ್ರೇತಾಯುಗದಲ್ಲಿ ವಾಲಿಯಾಗಿ-ದ್ವಾಪರ ದಲ್ಲಿ ಅರ್ಜುನನಾಗಿ ಅವತರಿಸಿದ. ಶ್ರೀಕೃಷ್ಣನ ಶಿಷ್ಯನಾಗಿ ಅವನ ಮುಖದಿಂದಲೇ ಗೀತಾಮೃತವನ್ನು ಪಾನಮಾಡಿದ. “ಉಪದೇಷ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ವದರ್ಶಿನಃ” ಮುಂದೆ ಜ್ಞಾನಿಗಳೇ ನಿನಗೆ ತತ್ವೋಪದೇಶ ಮಾಡುವರು ಎಂಬ ಅನುಗ್ರಹ ಪಡೆದ. “ಹೇಪಶೋ”-ಎಂದು ರಥಸ್ತಂಭದಲ್ಲಿದ್ದ ಮಾರುತಿ ಯಿಂದ ಅರ್ಜುನನೇ ಸಂಬೋಧಿಸಲ್ಪಟ್ಟ ಶ್ರೀ ಕೃಷ್ಣ ಭೀಮರ ಅನುಗ್ರಹದ ಪರಿಣಾಮ ಕಲಿಯುಗದಲ್ಲಿ ಎತ್ತಾಗಿ ಅವತಾರ.

ಆ ವೃಷಭ ರೂಪದಲ್ಲಿ ಮಾಡಿದ್ದಾದರೂ ಏನು? “ಆನಂದ ತೀರ್ಥರು ನಿತ್ಯ ಪಠಿಸುವ ಪುಸ್ತಕ ಹೊರುತಿರಲು” ಎಂಬುದಾಗಿ ವ್ಯಾಸವಿಠಲರು ಹಾಡಿದ್ದಾರೆ. ಎತ್ತಾಗಿ ಶ್ರೀಮದಾಚಾರ್ಯರ ಗ್ರಂಥಗಳನ್ನು ಹೊತ್ತು ಸಾರ್ಥಕ ಸೇವೆಗೈದುದು ಒಂದು ಭಾಗ್ಯವಾದರೆ, ಶ್ರೀಮದಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ ಹೇಳುವಾಗ ಆ ಪಾಠವನ್ನು ಸಮಗ್ರವಾಗಿ ಹೇಳಿ ಚಿಂತನ ಮಾಡಿದರು ಮತ್ತೊಂದು ಭಾಗ್ಯ.

ಶ್ರೀಮದಾಚಾರ್ಯರ ಆಧ್ಯಾತ್ಮದ ಐಸಿರಿಯೆಲ್ಲವನ್ನು ತಮ್ಮ ತಲೆಯ ತುಂಬ ತುಂಬಿಕೊಂಡು ಚಿಂತನೆ ಮಾಡಲು ಪಶುಜನ್ಮ ತುಂಬ ಸಾಧುವಲ್ಲವೇ? ಪಾಠದ ಸಮಯದಲ್ಲಿ ಶಿಷ್ಯರು ಕೇಳಿದರು. “ಸ್ವಾಮಿ, ಅರ್ಥ ಗರ್ಭಿತವಾದ ತಮ್ಮ ಗ್ರಂಥಗಳಿಗೆ ವ್ಯಾಖ್ಯಾನ ಮಾಡುವರಾರು?” “ವ್ಯಾಖ್ಯಾಸ್ಯತಿ ಏಷ ಗೋರಾಟ್” ಎಂದರು ಆಚಾರ್ಯರು. ತಮಗಿಲ್ಲದ ಭಾಗ್ಯ ಈ ಪಶುವಿನ ಪಾಲಾಯಿತಲ್ಲ ಎಂದುಕೊಂಡ ಒಬ್ಬ ಶಿಷ್ಯ ಆ ಎತ್ತಿಗೆ ವಿಷ ಹಾಕಿದ.

ಸಂಕಟ ಪಡುತ್ತಿರುವ ಎತ್ತು ಅಶ್ರುನೇತ್ರಗಳಿಂದ ಆಚಾರ್ಯರನ್ನು ನೋಡಿತು. ತಟ್ಟನೆ ಆಚಾರ್ಯರು ಎತ್ತಿನ ಬೆನ್ನು ತಟ್ಟಿದರು. ವಿಷ ಬಾಧೆಯಿಂದ ರಕ್ಷಿಸಿದರು. ಎತ್ತು ಕೃತಜ್ಞತಾಭಾವದಿಂದ ಆಚಾರ್ಯರನ್ನು ನೋಡಿತು. ಮುಂದಿನ ಅವತಾರದಲ್ಲಿ ಶ್ರೀಕೃಷ್ಣ, ಮಧ್ವರ ಸೇವೆಯನ್ನು ಮಾಡಲು ಸಂಕಲ್ಪಿಸಿ ಸಾದಿನಾಡಿನ ದೇಶಪಾಂಡೆ ಮನೆತನದಲ್ಲಿ ಜನಿಸಿ ಧೋಂಡೋರಾಯನೆಂದು ಕರೆಸಲ್ಪಟ್ಟು, ನಂತರದಲ್ಲಿ ಹಂಸನಾಮಕ ಪರಮಾತ್ಮನ ಪೀಠದಲ್ಲಿ ಶ್ರೀಜಯತೀರ್ಥರೆಂದು ವಿರಾಜಮಾನ ರಾಗಿ ತಮ್ಮ ಗ್ರಂಥಗಳ ಮೂಲಕ ವೇದಾಂತ ತತ್ವಗಳ ಮಳೆಯನ್ನೇ ಸುರಿಸಿದರು.

ವಿಷದ ಬಾಧೆಯಿಂದ ತಮ್ಮನ್ನು ಬದುಕಿಸಿದ ಶ್ರೀಮದಾಚಾರ್ಯರನ್ನು ಮುಂದೆ “ಶ್ರೀಮತ್ಪೂರ್ಣ ಪ್ರಮತಿಗುರುಕಾರುಣ್ಯಸರಣಿಂ ಪ್ರಪನ್ನಾಮಾನ್ಯಾಸ್ಮಃ” ಎಂಬು ದಾಗಿ ಸುಂದರ ಶಬ್ದಗಳಲ್ಲಿ ಕೃತಜ್ಞತೆಯಿಂದ ನಮಿಸಿದ್ದಾರೆ. ಸಾದಿನಾಡಿನಲ್ಲಿ ಯುವರಾಜರಾಗಿ ಮೆರೆಯುತ್ತಿದ್ದ ಧಂಡೋರಾಯರು ಬೇಟೆಯಾಡಿ ದಣಿದು
ಬಂದು ಅಶ್ವಾರೋಹಿಯಾಗಿಯೇ ಭೀಮಾ ಪ್ರವಾಹಕ್ಕೆ ಬಾಯಿಹಚ್ಚಿ ನೀರು ಕುಡಿದುದನ್ನು ನದಿಯ ದಂಡೆಯಲ್ಲಿಯೇ ಕುಳಿತಿದ್ದ ಶ್ರೀಅಕ್ಷೋಭ್ಯತೀರ್ಥರು ನೋಡಿ ದರು. ‘ಕಿಂ ಪಶುಃ ಪೂರ್ವದೇಹೇ’-ಎಂದು ಎಚ್ಚರಿಸಿದರು.

ಈ ಮಾತು ಧೋಂಡೋರಾಯರ ಮಿದುಳನ್ನು ಮೀಟಿತು, ಅಂತಃಪಟಲವನ್ನು ಕಲುಕಿತು, ಜನ್ಮಾಂತರಗಳ ಚಿತ್ರಣವೆಲ್ಲವೂ ಅವರ ಕಣ್ಣ ಮುಂದೆ ಕಟ್ಟಿ ದಂತಾಯಿತು. ತಟ್ಟನೆ ಆ ರಾಜವೇಷವನ್ನು ಬಿಟ್ಟರು. ಶ್ರೀ ಅಕ್ಷೋಭ್ಯತೀರ್ಥರ ಪಾದಗಳಲ್ಲಿ ತಲೆ ಇಟ್ಟರು. ಸನ್ಯಾಸಾಶ್ರಮ ಕೊಡಲು ಪ್ರಾರ್ಥಿಸಿದರು.
ಗುರುಗಳಿಗೆ ಪರಮಾನಂದ. ವಿಧಿ-ವಿಧಾನಗಳನ್ನು ಪೂರೈಸಿ ಸನ್ಯಾಸಾಶ್ರಮವನ್ನು ನೀಡಿದರು. ಉಪದೇಶ ಮಾಡಿದರು. ಇದನ್ನು ತಿಳಿದ ಅವರ ತಂದೆ ಮಗನನ್ನು ಒತ್ತಾಯದಿಂದ ಮನೆಗೆ ಕರೆದೊಯ್ದರು. ಅದು ಪ್ರಯೋಜನವಾಗಲಿಲ್ಲ.

ಪುನಃ ಅವರನ್ನು ಶ್ರೀ ಅಕ್ಷೋಭ್ಯತೀರ್ಥರ ಸನ್ನಿಧಿಗೆ ತಲುಪಿಸಿದರು. ಗುರುಗಳಿಂದ ಉಪಕೃತರಾದ ಶ್ರೀಜಯತೀರ್ಥರು, “ ಶ್ರೀಅಕ್ಷೋಭ್ಯತೀರ್ಥ ಶುಕವತ್‌ ಶಿಕ್ಷಿತಸ್ಯಮೇ” ಎಂದು ತಮ್ಮ ಗ್ರಂಥದಲ್ಲಿ ಗುರುಗಳನ್ನು ಕೊಂಡಾಡಿದ್ದಾರೆ. ದೈವದತ್ತವಾದ ಘಂಟಾ-ಪೂಗಿ ಫಲಗಳನ್ನು ಉಪಯೋಗಿಸಿ ಯರಗೋಳ ಗುಹೆಯಲ್ಲಿ ಕುಳಿತು ಶ್ರೀಮದಾಚಾರ್ಯರ ಭಾಷ್ಯ ಗ್ರಂಥಗಳಿಗೆ ಟೀಕೆಗಳನ್ನು ರಚಿಸಿದರು. ಶಂಖನೆಂಬ ಋಷಿಯು ಒಬ್ಬ ಬೇಟೆಗಾರನಿಗೆ ಶ್ರೀವಿಷ್ಣು ತತ್ವವನ್ನು ಉಪದೇಶಿಸಿ ಅವನು ಮೋಕ್ಷಕ್ಕೆ ಹೋಗುವಂತೆ ಮಾಡಿದ ಸ್ಥಳವೇ ಈ ಯರಗೋಳ ಗುಹೆ.

ಜೋಳದ ನುಚ್ಚನ್ನು ಮಾತ್ರ ಆಹಾರವಾಗಿ ಸ್ವೀಕರಿಸಿ ವೈರಾಗ್ಯನಿಧಿ ಎನಿಸಿದರು. 18 ಟೀಕಾಗ್ರಂಥಗಳು-2 ಸ್ವತಂತ್ರ ಗ್ರಂಥಗಳು ಶ್ರೀಜಯತೀರ್ಥರ ಗ್ರಂಥ ಕೋಶದಲ್ಲಿ ಸೇರಿವೆ. ನಾನೇಕೆ ಬರೆಯುತ್ತೇನೆ ಎಂಬ ಪ್ರಜ್ಞೆಯನ್ನು ಇಟ್ಟುಕೊಂಡು ಬರೆದ ಚೇತನ ಶ್ರೀಜಯತೀರ್ಥರು. ಹೀಗಾಗಿ ಅವರ ಶೈಲಿ ತುಂಬ ಗಾಂಭೀರ್ಯ. ಮೌಲಿಕ ಚರ್ಚೆ-ಯುಕ್ತಿಗಳ ಹಿತಮಿತ ಬಳಕೆ, ಹೃದಯಂಗಮ ಭಾಷೆ-ಪದ, ಅರ್ಥಗಳ ಸಮನ್ವಯ. “ತದುಕ್ತಂ ಭವತಿ” ಎಂದು ಹೇಳುವ ಸಂಗ್ರಹ ಕೌಶಲ್ಯ ಮುಂತಾದ ಗುಣಗಳಿಂದ ಆಕರ್ಷಣೀಯವೂ, ಅಭ್ಯಸನೀಯವೂ ಆಗಿದೆ.

ಆದ್ದರಿಂದಲೇ “ಭಾತಿಶ್ರೀಜಯತೀರ್ಥವಾಕ್” ಎಂಬ ಪ್ರಶಸ್ತಿ ಅವರಿಗೆ ಬಂದದ್ದು. ಅವರ ನಂತರ ಈ ಪರಂಪರೆಯಲ್ಲಿ ಎಲ್ಲ ಯತಿವರೇಣ್ಯರ – ವಿಧ್ವಾಂಸರು “ಜಯತೀರ್ಥವಾಕ್”ನ್ನು ಬಹುವಾಗಿ ಪ್ರಶಂಸಿಸಿದ್ದಾರೆ. ಶ್ರೀವಿದ್ಯಾಧಿರಾಜರು, ಶ್ರೀವ್ಯಾಸರಾಯರಂತಹ ಅನೇಕ ಮೇಧಾವಿಗಳು ಇವರ ಶಿಷ್ಯರು. ‘ಜಯತೀರ್ಥ’ ಈ ಹೆಸರೇ ಅವರ ಸಮಗ್ರ ಚರಿತ್ರೆಯನ್ನು ಚಿತ್ರಿಸುತ್ತದೆ. ತೀರ್ಥ ಗ್ರಂಥಗಳ ಮೇಲೆ ಜಯ ಸಾಧಿಸಿದವರು, ಕಾಮ ಕ್ರೋಧಗಳ ಮೇಲೆ ಜಯ ಸಾಧಿಸಿದವರು, ಜಯಪ್ರದ ಗ್ರಂಥ ರಚಿಸಿದವರು.

‘ಜಯ’ ಎಂದರೆ ೧೮. ಅಷ್ಟು ಸಂಖ್ಯೆಯ ಗ್ರಂಥ ರಚಿಸಿದವರು ವಿಶ್ವದ ವೇದಾಂತ ಶಾಸದಲ್ಲಿ ಇಂತಹ ಟೀಕಾಚಾರ್ಯರು ಇವರೊಬ್ಬರೆ ಎಂದು ಹೇಳಬಹುದು.
ಮಳಖೇಡದಲ್ಲಿ ಅವರ ಬೃಂದಾವನವಿದ್ದು, ಅವರ ಆರಾಧನೆಯನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ. ಆ ಮಹಾಮಹಿಮರ ಆರಾಧನಾ ಸಂದರ್ಭದಲ್ಲಿ ಆ
ದಿವ್ಯ ಚೇತನಕ್ಕೆ ಅನಂತ ನಮನಗಳು.

Leave a Reply

Your email address will not be published. Required fields are marked *