Monday, 5th December 2022

ಜೆಡಿಎಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ

ಮಧುಗಿರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧುಗಿರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈಯಕ್ತಿಕ ಕಾರಣಾಂತರಗಳಿ0ದ ಮತ್ತೊಮ್ಮೆ ಸ್ಪರ್ಧಿಸುವುದು ಬೇಡ ಎಂದು ನಿರ್ಧರಿಸಿದ್ದೆ. ಆದರೆ ಪಕ್ಷದ ವರಿಷ್ಠರ ಒತ್ತಾಯ ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎಲ್ಲಾ ಗೊಂದಲಗಳಿಗೂ ಅಂತ್ಯ ಹಾಡಿ, ಮತ್ತೇ ಚುನಾವಣೆಗೆ ಸ್ಪರ್ಧಿ ಸಲು ತೀರ್ಮಾನಿಸಿದ್ದು, ಗೆಲ್ಲುವ ವಿಶ್ವಾಸವಿದೆ ಎಂದರು.

ನನ್ನ ನಿರ್ಧಾರದಿಂದ ಕ್ಷೇತ್ರದಲ್ಲಿ ಕೆಲವು ಅಕಾಂಕ್ಷಿಗಳು ಟಿಕೆಟ್ ಪಡೆಯಲು ಪ್ರಯತ್ನಿಸಿ ದ್ದು, ಅವರೆಲ್ಲರನ್ನೂ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಕೆಲ ಕಾರ್ಯಕರ್ತರ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಮಧುಗಿರಿ ಕ್ಷೇತ್ರವನ್ನು ಅಭಿವೃದ್ದಿಗೊಳಿಸುವುದಾಗಿ ಹಾಗೂ ಮಧುಗಿರಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕರ್ತರು ಇನ್ನು ಮುಂದೆ ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಪಕ್ಷ ಸಂಘಟನೆಗೆ ಒತ್ತು ನೀಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಪಡಬೇಕು. ಬಿಜೆಪಿ ಪಕ್ಷದ ಸರ್ಕಾರದ ಮಲತಾಯಿ ಧೋರಣೆಯಿಂದ ಕ್ಷೇತ್ರ ಅಭಿವೃದ್ದಿಯಲ್ಲಿ ಹಿನ್ನಡೆ ಸಾಧಿಸಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ರೈತರ ಸಾಲ ಮನ್ನಾ, ಎತ್ತಿನಹೊಳೆ ಯೋಜನೆ ಹಾಗೂ ಪಂಚರತ್ನ ಯೋಜನೆ ಜಾರಿ ಆಗುವುದರ ಜೊತೆಗೆ ಕ್ಷೇತ್ರವೂ ಅಭಿವೃದ್ದಿ ಹೊಂದಲಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಜು, ಸದಸ್ಯರಾದ ಎಂ.ಎಸ್.ಚ0ದ್ರಶೇಖರ್ ಬಾಬು, ಕೆ.ನಾರಾಯಣ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು, ದೊಡ್ಡೇರಿ ಹೋಬಳಿ ಅಧ್ಯಕ್ಷ ವಿಜಯಕುಮಾರ್, ಎಸ್.ಸಿ ಘಟಕದ ಅಧ್ಯಕ್ಷ ಗುಂಡಗಲ್ಲು ಶಿವಣ್ಣ, ಮುಖಂಡರುಗಳಾದ ಗೋವಿಂದರೆಡ್ಡಿ, ಬಿಜವರ ಶ್ರೀನಿವಾಸ್, ಆರ್.ಎಲ್.ಎಸ್ ರಮೇಶ್, ನಾಸೀರ್, ಶಿವಪ್ಪ ನಾಯಕ, ಶಿವಕುಮಾರ್, ಬಸ್ ಮಂಜು, ಶೈಲಿ ರವೀಶ್, ನಾಗಭೂಷಣ್, ತಿಮ್ಮಣ್ಣ, ಪ್ರಭು ಹಾಗೂ ಮುಂತಾದವರು ಇದ್ದರು.