Tuesday, 27th July 2021

ಬ್ರಿಟಿಷರಿಗೆ ಅನುಮತಿ ನೀಡಿದ ಜಹಾಂಗೀರ್‌

ಸ್ವಾತಂತ್ರ‍್ಯದ ಆ ಕ್ಷಣಗಳು (ಭಾಗ – 2)

ಡಾ.ಉಮೇಶ್ ಪುತ್ರನ್

ಈಸ್ಟ್ ಇಂಡಿಯಾ ಕಂಪೆನಿಯ ರೆಡ್ ಡ್ರ್ಯಾಗನ್ ಹಡಗು ಎರಡನೇ ಬಾರಿ ಮಾರ್ಚ್ 1604 ರಂದು ಸರ್ ಹೆನ್ರಿ ಮಿಡ್ಲ್ ಟನ್ ನೇತೃತ್ವದಲ್ಲಿ ಪೂರ್ವಕ್ಕೆ ಪ್ರಯಾಣ ಬೆಳೆಸಿತು. ಈ ಬಾರಿ ಇದರ ಜೊತೆ ಅಸೆನ್ಶನ್, ಹೆಕ್ಟಾರ್ ಮತ್ತು ಸುಸಾನ್ ಎನ್ನುವ ಹಡಗುಗಳು ಇದ್ದವು. ಇವು ಮಲಕ್ಕಾ ಮತ್ತಿತರ ಪೌರಾತ್ಯ ಪ್ರದೇಶಗಳಿಂದ ಸಾಕಷ್ಟು ಸಂಪತ್ತನ್ನು ಹೊತ್ತು ತಂದವು. ಈಸ್ಟ್ ಇಂಡಿಯಾ ಕಂಪನಿಯ ಮೂರನೇಯ ಪ್ರಯಾಣವು ಇಂಗ್ಲೆಂಡ್ ದೇಶದ ಅದೃಷ್ಟವನ್ನು ಹಾಗೂ ಚರಿತ್ರೆಯನ್ನೇ ಬದಲಾಯಿಸಿತು. ಮಾರ್ಚ್ 12, 1607 ರಂದು ಮೂರು ಹಡಗು ಗಳು ಜಾವ, ಭಾರತ ಮತ್ತು ಯೆಮೆನ್‌ನ ಬಂದರು ನಗರ ಅಡೆನ್ ಕಡೆಗೆ ಹೊರಟವು. ರೆಡ್ ಡ್ರ್ಯಾಗನ್ ಹಡಗನ್ನು ವಿಲಿಯಂ ಕೀಲಿಂಗ್, ಹೆಕ್ಟಾರ್ ಹಡಗನ್ನು ವಿಲಿಯಂ ಹಾಕಿನ್ಸ್ ಹಾಗೂ ಕನ್ಸೆಂಟ್ ಎನ್ನುವ ಹಡಗನ್ನು ಡೇವಿಡ್ ಮಿಡಲ್ಟನ್ ಇವರು ಮುನ್ನಡೆಸಿ ದರು.

ವಿಲಿಯಂ ಹಾಕಿನ್ಸ್ ಆಗಮನ
ಹೆಕ್ಟಾರ್ ಹಡಗು ಆಗಸ್ಟ್ 24, 1608 ರಂದು ಗುಜರಾತಿನ ಸೂರತ್ ಬಂದರು ನಗರದ ತಟವನ್ನು ಸ್ಪರ್ಶಿಸಿತು. ಪ್ರಥಮ ಬ್ರಿಟಿಷ್ ಪ್ರಜೆ ವಿಲಿಯಂ ಹಾಕಿನ್ಸ್ ಭಾರತದ ಮಣ್ಣನ್ನು ಮೆಟ್ಟಿದ. ಆದರೆ ಆಗ ಅಲ್ಲಿದ್ದ ಪೋರ್ಚುಗೀಸರು ವಿಲಿಯಂ ಹಾಕಿನ್ಸ್‌ನನ್ನು ಸೆರೆಹಿಡಿದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಆತ ಅಂದಿನ ಮೊಘಲರ ರಾಜಧಾನಿ ಯಾದ ಆಗ್ರಾಕ್ಕೆ ಪ್ರಯಾಣ ಬೆಳೆಸಿದ. ವಿಲಿಯಂ ಹಾಕಿನ್ಸ ಸೂರತ್‌ಗೆ ಬಂದೊಡನೆ ಭಾರತದಲ್ಲಿದ್ದ ಅಗಾಧ ಸಂಪತ್ತನ್ನು ಕಂಡು ಬೆರಗು ಗೊಳ್ಳುತ್ತಾನೆ, ಬೆಚ್ಚಿ ಬೀಳುತ್ತಾನೆ.

ಎಲ್ಲೂ ಬೆಳೆದುನಿಂತ ಮೆಣಸು, ಶುಂಠಿ, ದಾಲ್ಚಿನ್ನಿ ಗಿಡಗಳಿಂದ ಹಿಡಿದು ಪಾರಿವಾಳದ ಮೊಟ್ಟೆಯಷ್ಟು ಗಾತ್ರದ ಬೆಲೆಬಾಳುವ ರೂಬಿ ಹರಳಿನವರೆಗೆ ನಮ್ಮ ನೈಸರ್ಗಿಕ ಸಂಪತ್ತು ಹರಡಿತ್ತು. ಆತನ ವ್ಯಾಪಾರಿ ಆಸೆ ಚಿಗುರುತ್ತದೆ. ಸೂರತ್ ನಿಂದ ವಿಲಿಯಂ ಹಾಕಿನ್ಸ್ ದೀರ್ಘ ಪ್ರಯಾಣ ಬೆಳೆಸಿ ಆಗ್ರಾ ತಲುಪಿದ. ಅಲ್ಲಿ ಪ್ರಪಂಚದ ಅತ್ಯಂತ ಶ್ರೀಮಂತ ಹಾಗೂ ಮೊಘಲ್ ಸಾಮ್ರಾಜ್ಯದ ನಾಲ್ಕನೇ ದೊರೆ ಜಹಾಂಗೀರ್ ನನ್ನು ಭೇಟಿಯಾ ಗುತ್ತಾನೆ. ತನ್ನ ಆಸ್ಥಾನಕ್ಕೆ ಭೇಟಿ ನೀಡಿದ ಪ್ರಥಮ ಇಂಗ್ಲೀಷ್ ಪ್ರಜೆಯಾದ ಹಾಕಿನ್ಸ್‌ನನ್ನು ಆದರದಿಂದ ಬರಮಾಡಿಕೊಳ್ಳುತ್ತಾನೆ. ಇಂಗ್ಲೆಂಡಿನಲ್ಲಿ ಅಕ್ಬರನ ಹೆಸರು ಪ್ರಚಲಿತವಿತ್ತು. ಆದರೆ ಜಹಾಂಗೀರ್‌ನ ಹೆಸರು ಕೇಳಿದವರಿಲ್ಲ.

ಬ್ರಿಟಿಷ್ ಸರಕಾರದ ಪತ್ರವನ್ನು ಪೋರ್ಚುಗೀಸ್ ಪಾದ್ರಿಯೊಬ್ಬರ ಸಹಾಯದಿಂದ ಹಾಕಿನ್ಸ್ ಜಹಾಂಗೀರನ ಆಸ್ಥಾನದಲ್ಲಿ ಓದಿ ಹೇಳುತ್ತಾನೆ. ಹಾಕಿನ್ಸ್ ಟರ್ಕಿ ಭಾಷೆಯನ್ನು ಬಲ್ಲವನಾದುದರಿಂದ ಜಹಾಂಗೀರನ ಜೊತೆ ಸ್ನೇಹ ಬೆಳೆಯಿತು. ಹಾಕಿನ್ಸ್‌ನ ವ್ಯಾಪಾರ ಯೋಜನೆಯಿಂದ ಸಂತುಷ್ಟನಾದ ಜಹಾಂಗೀರ್ ಆತನಿಗೆ ಉತ್ತರ ಬಾಂಬೆಯಲ್ಲಿ ಗೋದಾಮು ತೆರೆಯಲು ಅನುಮತಿ ನೀಡುತ್ತಾನೆ. ಆದರೆ ಪೋರ್ಚುಗಲ್ ವೈಸರಾಯ್ ಒತ್ತಡದಿಂದಾಗಿ ಕೊಟ್ಟ ಅನುಮತಿಯನ್ನು ಜಹಾಂಗೀರ್ ವಾಪಾಸು ತೆಗೆದುಕೊಳ್ಳುತ್ತಾನೆ.

ಅರ್ಮೇನಿಯಾದ ಮದುಮಗಳು
ನಂತರ ಮೂರು ವರ್ಷಗಳ ಕಾಲ ಹಾಕಿನ್ಸ್ ಜಹಾಂಗೀರನ ಆಸ್ಥಾನದಲ್ಲಿ ಉಳಿದುಕೊಳ್ಳುತ್ತಾನೆ. ಇಬ್ಬರು ಮಿತ್ರರಾಗುತ್ತಾರೆ. ಜಹಂಗೀರ್, ಹಾಕಿನ್ಸ್‌ನನ್ನು ಯಾವಾಗಲೂ ಇಂಗ್ಲೀಷ್ ಖಾನ್ ಎಂದೇ ಸಂಬೋಧಿಸುತ್ತಿದ್ದ. ಆತನ ಆಹಾರಕ್ಕೆ ಆಸ್ಥಾನದ ಮೊಘಲ್ ಸಿಬ್ಬಂದಿಗಳು ವಿಷ ಹಾಕಬಹುದು ಎಂದು ಆತನಿಗೆ
ಅರ್ಮೇನಿಯಾದ ಒಂದು ಕ್ರಿಶ್ಚಿಯನ್ ಹುಡುಗಿಯನ್ನು ಮದುವೆ ಮಾಡಿಸಿದ. ಆಕೆಯ ಹೆಸರು ಮರಿಯಮ್ ಖಾನ್. ವಿಲಿಯಂ ಹಾಕಿನ್ಸ್ ಜಹಾಂಗೀರನ ಆಸ್ಥಾನದಲ್ಲಿ ಆತನಿಗೆ ತುಂಬಾ ನಿಕಟವರ್ತಿಯಾಗಿ ಮೂರು ವರ್ಷಗಳ ಕಾಲ ಅಲ್ಲಿದ್ದ.

ಮದ್ಯಪ್ರಿಯ ಜಹಾಂಗೀರ ವಿಲಿಯಂ ಹಾಕಿನ್ಸ್‌ನನ್ನು ಆಗಾಗ್ಗೆ ತನ್ನ ಔತಣ ಕೂಟಕ್ಕೆ ಕರೆಯುತ್ತಿದ್ದ. ಆದರೂ ಕೂಡ ಸೂರತ್ ಬಂದರಿನಲ್ಲಿ ಒಂದು ಗೋದಾಮನ್ನು ತೆರೆಯಬೇಕೆಂಬ ಹಾಕಿನ್ಸ್ ನ ಬೇಡಿಕೆಗೆ ಜಹಾಂಗೀರ್ ಸ್ಪಂದಿಸಲಿಲ್ಲ. ನವೆಂಬರ್ 29, 1612 ರಂದು ಸೂರತ್ ಸಮೀಪ ಸುವಾಲಿಯಲ್ಲಿ ಪೋರ್ಚುಗಲ್ಲರ
ವಿರುದ್ಧ ನಡೆದ ನೌಕಾ ಕದನ ಈಸ್ಟ್ ಇಂಡಿಯಾ ಕಂಪನಿಯ ಇತಿಹಾಸದಲ್ಲಿ ಒಂದು ಮೈಲುಗಲ್ಲು. ಪೋರ್ಚುಗಲ್ಲರ ಸೋಲಿನಿಂದಾಗಿ ಆ ಭಾಗದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಅಧಿಪತ್ಯ ಹೆಚ್ಚಿತು. ನಂತರ ಕಂಪನಿಯು ಸೂರತ್ ನಲ್ಲಿ ಗೋದಾಮು ತೆರೆಯಿತು.

ವ್ಯಾಪಾರ ಒಂದೇ ಸಮನೆ ವೃದ್ಧಿಸಿತು. ತಿಂಗಳಿಗೆ ಎರಡು ಹಡಗುಗಳು ಇಂಗ್ಲೆಂಡಿಗೆ ಹೊರಡಲು ಆರಂಭಿಸಿದವು. ಪರ್ವತದಷ್ಟು ರಾಶಿ ರಾಶಿ ಸಾಂಬಾರು ಪದಾರ್ಥಗಳು, ಸಕ್ಕರೆ, ಕಚ್ಚಾ ರೇಷ್ಮೆ, ಮಸ್ಲಿನ್, ಹತ್ತಿ ಮತ್ತಿತರ ವಸ್ತುಗಳು ಥೇಮ್ಸ ನದಿಯ ತಟದಲ್ಲಿ ಹೋಗಿ ಬೀಳಲಾರಂಭಿಸಿದವು.

ಥಾಮಸ್ ರೋ ಆಗಮನ

ಜಹಾಂಗೀರನ ಪೂರ್ಣ ಪ್ರಮಾಣದ ಸಹಕಾರ ಸಿಗದೇ ಇರುವುದರಿಂದ, ಈಸ್ಟ್ ಇಂಡಿಯಾ ಕಂಪನಿಯು ಇಂಗ್ಲೆಂಡಿನ ರಾಜ ಒಂದನೇ ಜೇಮ್ಸ ನಲ್ಲಿ ಸರ್ ಥಾಮಸ್ ರೋ ಅವರನ್ನು ರಾಯಭಾರಿಯಾಗಿ ಆಗ್ರಾಕ್ಕೆ ಕಳುಹಿಸಲು ಮನವಿ ಮಾಡಿತು. ಸಂಸತ್ ಸದಸ್ಯ ಥಾಮಸ್ ರೋ 1615 ರಲ್ಲಿ ಆಗ್ರಾಕ್ಕೆ ಬಂದು
ಅಲ್ಲಿ ಮೂರು ವರ್ಷಗಳ ಕಾಲ ಉಳಿದುಕೊಳ್ಳುತ್ತಾನೆ.

ವ್ಯಾಪಾರಕ್ಕೆ ಸಂಬಂಧಪಟ್ಟ ರಾಜತಾಂತ್ರಿಕ ಒಪ್ಪಂದವನ್ನು ತಮ್ಮೊಂದಿಗೆ ಮಾಡಿಕೊಳ್ಳುವಂತೆ ಜೇಮ್ಸ ಬರೆದ ಪತ್ರವನ್ನು ಥಾಮಸ್ ರೋ ಜಹಾಂಗಿರನ ಆಸ್ಥಾನ ದಲ್ಲಿ ಓದಿ ಹೇಳುತ್ತಾನೆ. ಭಾರತದಿಂದ ಸಾಂಬಾರು ಪದಾರ್ಥ, ಬಟ್ಟೆ, ಬೆಲೆಬಾಳುವ ಹರಳು ಮುಂತಾದವುಗಳ ರಫ್ತಿಗಾಗಿ ತಮಗೆ ವಿಶೇಷ ಅನುಮತಿ ಯನ್ನು ನೀಡಬೇಕೆಂದೂ, ಹಾಗೂ ಇದಕ್ಕೆ ಪ್ರತಿಯಾಗಿ ಯುರೋಪಿಯನ್ ಮಾರುಕಟ್ಟೆಯಿಂದ ಅಪರೂಪದ ವಸ್ತು ಗಳನ್ನು ತಾವು ಭಾರತಕ್ಕೆ ರಫ್ತು ಮಾಡುವು ದಾಗಿಯೂ
ಪತ್ರದಲ್ಲಿ ಬರೆದಿದ್ದನು. ಥಾಮಸ್ ರೋ ಜಹಾಂಗೀರನ ಉತ್ತಮ ಸ್ನೇಹಿತನಾಗುತ್ತಾನೆ.

ತನ್ನೊಂದಿಗೆ ತಂದ ಬಿಯರ್ ಮತ್ತಿತರ ಮದ್ಯಗಳನ್ನು ಜಹಾಂಗೀರನಿಗೆ ಪರಿಚಯ ಮಾಡಿಸುತ್ತಾನೆ. ಅನೇಕ ಯುರೋ ಪಿಯನ್ ಅಲಂಕಾರಿಕ ವಸ್ತುಗಳನ್ನು ಜಹಾಂಗೀರನಿಗೆ ಕೊಡುತ್ತಾನೆ. ಮೂರು ವರ್ಷಗಳ ತರುವಾಯ ಥಾಮಸ್ ರೋ ಹೊರಡುವಾಗ ಇಂಗ್ಲೆಂಡಿನ ಒಂದನೇ ಜೇಮ್ಸ ಗೆ ಜಹಾಂಗೀರ್ ಈ ರೀತಿಯ ಪತ್ರ ಬರೆಯುತ್ತಾನೆ. ‘ಇಂಗ್ಲೆಂಡಿನಿಂದ ಆಗಮಿಸುವ ಎಲ್ಲಾ ಪ್ರಜೆಗಳು ನನ್ನ ಮಿತ್ರರು. ನನ್ನ ಅಧಿಪತ್ಯದಲ್ಲಿ ಬರುವ ಎಲ್ಲಾ ಬಂದರುಗಳ ಜನರಲ್ ಕಮಾಂಡರ್ ಗಳಿಗೆ ನಾನು ಅವರನ್ನು ಹಾರ್ದಿಕವಾಗಿ ಸ್ವಾಗತಿಸುವಂತೆ ಆದೇಶಿಸಿದ್ದೇನೆ. ಅವರು ನನ್ನ ದೇಶದಲ್ಲಿ ಎಲ್ಲಿ ಮತ್ತು ಹೇಗೆ ಬೇಕಾದರೂ ಜೀವನ ನಡೆಸಬಹುದು. ಇಲ್ಲಿಯ ಯಾವ ವಸ್ತುಗಳನ್ನು ಕೂಡ ಅವರು ತಮ್ಮ ದೇಶಕ್ಕೆ ಸಾಗಿಸಬಹುದು. ಇದಕ್ಕೆ ಪ್ರತಿಯಾಗಿ ಯುರೋಪಿನ ಬೆಲೆಬಾಳುವ ಹಾಗೂ ಅಪರೂಪದ ವಸ್ತು ಗಳನ್ನು ನನ್ನ ಆಸ್ಥಾನಕ್ಕೆ ಕಳುಹಿಸಿಕೊಡಬೇಕಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ನಮ್ಮ ನಿಮ್ಮ ಸ್ನೇಹ ಹೀಗೆ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ. – ಇತೀ ತಮ್ಮ ನೂರುದ್ದೀನ್ ಸಲೀಂ ಜಹಾಂಗೀರ್’. ಕ್ರಮೇಣ ಈಸ್ಟ್ ಇಂಡಿಯಾ ಕಂಪನಿಯು ಮಚಲೀಪಟ್ಟಣ, ತಮಿಳುನಾಡಿನ ತಿರುವಳ್ಳೂರ್ ಜಿಯ ಅರ್ಮಾಗಾಂವ್, ಗೋವಾ, ಈಗಿನ ಬಾಂಗ್ಲಾದೇಶದ ಚಿತ್ತಗಾಂಗ್ ಮುಂತಾದೆಡೆ ವ್ಯಾಪಾರ ಕೇಂದ್ರವನ್ನು ವಿಸ್ತರಿಸಿತು. ಪೋರ್ಚುಗಲ್ ರಾಣಿ ಕ್ಯಾಥರಿನ್ ಆಫ್ ಬ್ರಗಾಂಜಾ ಇಂಗ್ಲೆಂಡಿನ ಎರಡನೇ ಚಾಲ್ಸ ನನ್ನು ಮದುವೆಯಾಗುವಾಗ, ಪೋರ್ಚುಗೀಸರು ಏಳು ದ್ವೀಪಗಳ ಸಮೂಹವಾದ ಬಾಂಬೆಯನ್ನು ವರದಕ್ಷಿಣೆ ರೂಪದಲ್ಲಿ ಇಂಗ್ಲಿಷರಿಗೆ ನೀಡಿದರು. ಬಾಂಬೆಯು ಇಂಗ್ಲಿಷರ ಪಾಲಾದ ಮೇಲೆ ಇದು ವ್ಯಾಪಾರ ಕೇಂದ್ರವಾಗಿ ಬೆಳೆಯಿತು.

1620 ರ ಹೊತ್ತಿಗೆ ಡಚ್ ಈಸ್ಟ್ ಇಂಡಿಯಾ ಕಂಪನಿಯು ಪ್ರಪಂಚದ ಅತ್ಯಂತ ಶ್ರೀಮಂತ ಕಂಪನಿ ಆಗಿತ್ತು. ಅದು ಪ್ರಪಂಚದಾದ್ಯಂತ 50000 ನೌಕರರನ್ನು ಹಾಗೂ 200 ಬೃಹತ್ ನೌಕೆಗಳನ್ನು ಹೊಂದಿತ್ತು. ಇಂಗ್ಲೀಷರಿಗೆ ಡಚ್ಚರಿಂದ ತೀವ್ರ ಪೈಪೋಟಿ ಇದ್ದಿತ್ತು. ನಾಲ್ಕು ಪಟ್ಟು ಆದಾಯ ಬರುವ ಸಾಂಬಾರು ಪದಾರ್ಥ ಗಳ ರಫ್ತಿಗಾಗಿ ಇಂಗ್ಲೀಷರು ಮತ್ತು ಡಚ್ಚರ ನಡುವೆ ನಾಲ್ಕು ಬಾರಿ ಕದನ ಏರ್ಪಟ್ಟಿತ್ತು. 1642 ರಲ್ಲಿಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ 23 ಗೋದಾಮು ಗಳನ್ನು ತೆರೆಯಿತು. ಪ್ರತಿ ಗೋದಾಮಿಗೆ ಒಬ್ಬ ಮುಖ್ಯಸ್ಥ ಹಾಗೂ 90 ಜನ ನೌಕರರು ಇದ್ದಿದ್ದರು. ಮುಂದಿನ ದಿನಗಳಲ್ಲಿ ಈಸ್ಟ್ ಇಂಡಿಯಾ ಕಂಪನಿಯು ರಫ್ತು ತೆರಿಗೆಯಿಂದ ವಿನಾಯಿತಿ ಪಡೆಯಿತು.

ಎರಡನೇ ಚಾಲ್ಸ 1670 ರಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ವಿಶೇಷ ಅಧಿಕಾರವನ್ನು ನೀಡಿದ. ಈ ವಿಶೇಷ ಅಧಿಕಾರವು ಈಸ್ಟ್ ಇಂಡಿಯಾ ಕಂಪನಿಗೆ ಭಾರತದ ಭೂ ಪ್ರದೇಶವನ್ನು ವಶಪಡಿಸಿಕೊಳ್ಳುವ, ತನ್ನದೇ ಆದ ಹಣವನ್ನು ಮುದ್ರಿಸುವ, ಬಂದರು ನಗರಗಳನ್ನು ನಿಯಂತ್ರಿಸುವ, ಸ್ಥಳೀಯ ರಾಜರೊಂದಿಗೆ ಮೈತ್ರಿ ಮಾಡಿಕೊಳ್ಳುವ, ತಮ್ಮದೇ ಆದ ಸೇನೆಯನ್ನು ಕಟ್ಟುವ, ಅಗತ್ಯ ಬಿದ್ದರೆ ಯುದ್ಧ ಅಥವಾ ಶಾಂತಿಯನ್ನು ಸ್ಥಾಪಿಸುವ ಹಾಗೂ ನ್ಯಾಯಾಲಯಗಳನ್ನು ನಿರ್ಮಿಸಿ ನ್ಯಾಯದಾನ ಮಾಡುವ ವಿಶೇಷ ಅಧಿಕಾರ ನೀಡಿತು.

Leave a Reply

Your email address will not be published. Required fields are marked *