Thursday, 23rd March 2023

ಮೂಡಲಪಾಳ್ಯ ವಾರ್ಡ್‍ನಲ್ಲಿ ಜ್ಞಾನಸೌಧ ಉದ್ಘಾಟನೆ

ಬೆಂಗಳೂರು: ಮೂಡಲಪಾಳ್ಯ ವಾರ್ಡ್  ಕಲ್ಯಾಣನಗರದಲ್ಲಿ ನೂತನವಾಗಿ ಸ್ಥಾಪಿಸಿರುವ ತ್ರಿವಿಧ ದಾಸೋಹಿ, ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಕಂಚಿನ ಪುತ್ಥಳಿ, ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ಕೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು.

ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಶ್ರೀ ಶಿವಕುಮಾರ ಸ್ವಾಮೀಜಿ ಸ್ಪರ್ಧಾತ್ಮಕ ಪರೀಕ್ಷೆಯ ಅಧ್ಯಯನ ಕೇಂದ್ರ ನಿರ್ಮಿಸಲಾಗಿದೆ. ಸುಮಾರು 15 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸ ಲಾಗಿರುವ ಜ್ಞಾನಸೌಧದ ಉದ್ಘಾಟನಾ ಕಾರ್ಯಕ್ರಮ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ನೆರವೇರಿತು.

ಸಂಸದರಾದ ತೇಜಸ್ವಿ ಸೂರ್ಯ, ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಚಿವ ಗೋಪಾಲಯ್ಯ, ಸಿಎಂ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್, ಸೇರಿದಂತೆ ಬಿಬಿಎಂಪಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

5023.84 ಚದರ ಮೀಟರ್ ವಿಸ್ತೀರ್ಣದ ಈ ಕಟ್ಟಡವನ್ನು 15 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮೂಡಲಪಾಳ್ಯ ವಾರ್ಡ್ ಸಂಖ್ಯೆ-127 ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಈ ಕೇಂದ್ರವನ್ನು ಮೀಸಲಿಡಲಾಗಿದೆ. ಉದ್ಯಾನವನ ನಿರ್ಮಿಸಲಾಗಿದ್ದು, ಇದರಲ್ಲಿ ಮಕ್ಕಳ ಆಟದ ಮೈದಾನ ಹಾಗೂ ವಯಸ್ಕರಿಗೆ ಜಿಮ್ ಉಪಕರಣಗಳ ಅಳವಡಿಕೆ ಮಾಡಲಾಗಿದೆ.

ಸ್ಥಳೀಯ ಪಾಲಿಕೆ ಸದಸ್ಯರ ಕಚೇರಿ, ಪ್ರತ್ಯೇಕವಾಗಿ ಮಹಿಳೆಯರ ಮತ್ತು ಪುರುಷರ ವ್ಯಾಯಾಮ ಶಾಲೆ, ಹಿರಿಯ ನಾಗರಿಕರಿಗೆ ಮತ್ತು ಇತರರಿಗೆ ಯೋಗ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಮೊದಲನೇ ಮಹಡಿಯಲ್ಲಿ ಇ-ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೌಲಭ್ಯ ಹಾಗೂ 200 ಆಸನಗಳಿರುವ ಸುಸರ್ಜಿತ ಸಭಾಂಗಣ ಸ್ಥಾಪನೆ ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಇದೆ.

error: Content is protected !!