Friday, 27th May 2022

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡದಿದ್ದರೆ ದಯಾಮರಣ ನೀಡಿ

ತುಮಕೂರು: ಅತಿಥಿ ಉಪನ್ಯಾಸಕರಿಗೆ ನೀಡುತ್ತಿದ್ದ ವೇತನವನ್ನು ಹೆಚ್ಚಿಸುವ ನೆಪದಲ್ಲಿ ಅರ್ಧದಷ್ಟು ಉಪನ್ಯಾಸಕರಿಗೆ ಕೆಲಸವಿಲ್ಲದಂತೆ ಮಾಡಿ, ಸರಕಾರ ಇದುವರೆಗೂ ಕೆಲಸ ಮಾಡಿದ ಅತಿಥಿ ಉಪನ್ಯಾಸಕರನ್ನು ಸಾವಿನ ದವಡೆಗೆ ತಳ್ಳಿದೆ. ಅದಕ್ಕಾಗಿ ಎಲ್ಲಾ ಶಿಕ್ಷಕರು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅಂಚೆ ಮೂಲಕ ಪತ್ರ ರವಾನೆ ಮಾಡಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಳೆದ 22 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣ ಸಚಿವರಾದ ಅಶ್ವಥನಾರಾಯಣ ಅವರು, ಏಕಾಎಕಿ ಸುದ್ದಿಗೋಷ್ಠಿ ನಡೆಸಿ,ಡಾ.ಕುಮಾರನಾಯ್ಕ್ ವರದಿ ಆಧರಿಸಿ, ಅತಿಥಿ ಉಪನ್ಯಾಸಕರ ವೇತನವನ್ನು ಈಗ ನೀಡುತ್ತಿರುವುದಕ್ಕಿಂತ ಮೂರು ಪಟ್ಟು ಹೆಚ್ಚಿಸ ಲಾಗಿದೆ. ಕಾರ್ಯಾಗಾರವನ್ನು 8 ಗಂಟೆಯಿಂದ 15 ಗಂಟೆಗಳಿಗೆ ನಿಗಧಿಗೊಳಿಸಿರುವುದಾಗಿ ತಿಳಿಸಿದ್ದಾರೆ. ಸರಕಾರಕ್ಕೆ ಒಂದು ಆಯೋಗ ವರದಿ ಸಲ್ಲಿಸಿದ ನಂತರ, ಅದು ಅಧಿವೇಶನದಲ್ಲಿ ಚರ್ಚೆಯಾಗಬೇಕು.

ಸಂಬಂಧಪಟ್ಟವರ ಜತೆ ಸಾಧಕ, ಭಾಧಕಗಳ ಕುರಿತು ಚರ್ಚೆ ನಡೆಸಬೇಕು.ಆದರೆ ಇದ್ಯಾವುದನ್ನು ಮಾಡದೆ ಏಕಾಏಕಿ ಹೇಳಿಕೆ ನೀಡಿರುವುದರ ಹಿಂದೆ 7500 ಜನ ಅತಿಥಿ ಉಪನ್ಯಾಸಕರನ್ನು ಮನೆಗೆ ಕಳುಹಿಸುವ ಕೆಟ್ಟ ಹುನ್ನಾರವಿದೆ.ಹಾಗಾಗಿ ಅತಿಥಿ ಉಪನ್ಯಾಸಕರು ಸರಕಾರದ ಈ ಪರಿಹಾರವನ್ನು ಒಪ್ಪಲು ಸಾಧ್ಯವಿಲ್ಲ.ವೇತನ ಹೆಚ್ಚಳದೊಂದಿಗೆ, ಕಾರ್ಯಭಾರ ವನ್ನು ಈ ಹಿಂದಿನಂತೆಯೇ 8 ಗಂಟೆಗೆ ನಿಗಧಿಗೊಳಿಸಬೇಕು ಹಾಗೂ ಹೊಸ ದಾಗಿ ಅನ್ಲೈನ್ ಮೂಲಕ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಕೈಬಿಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರಕಾರಕ್ಕೆ ನಿಜವಾಗಿಯೂ ಅತಿಥಿ ಉಪನ್ಯಾಸಕರ ಬಗ್ಗೆ ಕಾಳಜಿಯಿಲ್ಲ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 14460 ಜನರನ್ನು ಖಾಯಂ ಮಾಡುವು ದರಿಂದ ಸರಕಾರಕ್ಕೆ ವಾರ್ಷಿಕ 800-900ಕೋಟಿ ರೂಗಳ ಹೆಚ್ಚುವರಿಯಾಗಬಹುದು.2.60 ಲಕ್ಷ ಕೋಟಿ ಬಜೆಟ್ನಲ್ಲಿ 1 ಸಾವಿರ ಕೋಟಿ ದೊಡ್ಡದಲ್ಲ. ಸರಕಾರ ಕೂಡಲೇ ಇವರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಾಗಣ್ಣ, ಡಾ.ಶಿವಣ್ಣ ತಿಮ್ಮಲಾಪುರ, ಮಂಜಣ್ಣ,ಡಾ.ಕುಮಾರ್, ರಂಗಧಾಮಯ್ಯ,ಗಂಗಾಂಭಿಕೆ,ಗುಡ್ಡಣ್ಣ, ಅಂಬಿಕಾ, ಸುನಿಲ್, ಹರೀಶ್,ಸುನಿಲ್ ಕುಮಾರ್, ಡಾ.ರಮೇಶ್,ಮೂರ್ತಿ, ರಾಧಾಮಣಿ, ಪುಷ್ಪಲತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.