Wednesday, 1st December 2021

ಪದವಿ ವಿದ್ಯಾರ್ಥಿಗಳಿಗೆ ಜೋಗತಿ ಜೀವನ ಪಠ್ಯ

ಮಂಜಮ್ಮ ಜೋಗತಿ ಆತ್ಮಕಥನ ನಡುವೆ ಸುಳಿವ ಹೆಣ್ಣು ಆಯ್ಕೆ

ಕೃತಿಯ ಶೇ.80ರಷ್ಟು ಪಠ್ಯದಲ್ಲಿ ಅಳವಡಿಕೆ

ವಿಶೇಷ ವರದಿ: ಅನಂತ ಪದ್ಮನಾಭರಾವ್

ಹೊಸಪೇಟೆ: ರಾಜ್ಯದಲ್ಲಿ ತೃತೀಯ ಲಿಂಗಿಯೊಬ್ಬರ ಆತ್ಮಕಥನ ಪದವಿ ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಮೊದಲ ಬಾರಿಗೆ ಆಯ್ಕೆ ಯಾಗಿದೆ. ಗುಲ್ಬರ್ಗಾ ವಿವಿಯ ಪದವಿ ವಿದ್ಯಾರ್ಥಿಗಳು ತೃತೀಯ ಲಿಂಗಿಯ ಆತ್ಮಕಥನದ ಕೆಲ ಭಾಗಗಳನ್ನು ಅಭ್ಯಸಿಸಲಿದ್ದಾರೆ.

ಹೌದು… ಹುಡುಗನಾಗಿ ಹುಟ್ಟಿ ಮುಂದೆ ಮನೆಯವರ ವಿರೋಧ ಕಟ್ಟಕೊಂಡು ಜೋಗತಿಯಾಗಿ, ಜೋಗತಿ ಹಾಡು ನೃತ್ಯದ ಮೂಲಕ ಕರ್ನಾಟಕದಲ್ಲಿ ಹೆಸರಾದವರು ಮಂಜಮ್ಮ ಜೋಗತಿ. ಇತ್ತೀಚೆಗೆ ಕೇಂದ್ರ ಸರಕಾರ ಇವರ ಜನಪದ ಸೇವೆಯನ್ನು ಗಮನಿಸಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದೆ. ಅಲ್ಲದೆ, ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷರಾಗಿ ಮಂಜಮ್ಮ ಜೋಗತಿ
ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಅರುಣ ಜೋಳದಕೂಡ್ಲಿಗಿ ಅವರು ನಿರೂಪಿಸಿರುವ ಮಂಜಮ್ಮ ಜೋಗತಿ ಅವರ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಕೃತಿ
ಗುಲ್ಬರ್ಗ ವಿಶ್ವವಿದ್ಯಾಲಯದ ಪದವಿ ಪಠ್ಯಕ್ಕೆ ಆಯ್ಕೆಯಾಗಿದೆ. ಈ ಭಾಗದ ಜನಪದ ಕಲಾವಿದರಲ್ಲಿ ಸಂತಸಕ್ಕೆ ಕಾರಣವಾಗಿದೆ. ಹೊಸಪೇಟೆಯ ಪಲ್ಲವ ಪ್ರಕಾಶನ ಮುದ್ರಣದ ಹೊಣೆ ಹೊತ್ತಿದೆ.

ಕೃತಿ ಪರಿಚಯ: ಪದ್ಮಶ್ರೀ ಮಂಜಮ್ಮ ಜೋಗತಿ ಅವರ ಆತ್ಮಕಥನ ಒಟ್ಟು 214 ಪುಟಗಳನ್ನು ಒಳಗೊಂಡಿದೆ. ಮುನ್ನುಡಿ
ಯನ್ನು ಬರಗೂರು ರಾಮಚಂದ್ರಪ್ಪ ಹಾಗೂ ಹಿನ್ನುಡಿಯನ್ನು ಸಬೀಹಾ ಭೂಮಿಗೌಡ ಬರೆದಿದ್ದಾರೆ. ಪುಸ್ತಕ 25ಕ್ಕೂ
ಹೆಚ್ಚು ಅಧ್ಯಾಯಗಳನ್ನು ಹೊಂದಿದ್ದು, ಮಂಜಮ್ಮ ಜೋಗತಿ ಅನುಭವಿಸಿದ ಹಲವಾರು ಕಹಿ ಘಟನೆಗಳನ್ನು ಯಥಾವ
ತ್ತಾಗಿ ಅಕ್ಷರ ರೂಪದಲ್ಲಿ ಹೊರತರಲಾಗಿದೆ. ವಿದ್ಯಾರ್ಥಿಗಳಿಗೆ ಆದರ್ಶ ಹಾಗೂ ಮಾದರಿಯಾಗಲೆಂದು ಸದ್ಯ ಪಠ್ಯಕ್ಕೆ
ಸೇರಿಸಲಾಗುತ್ತಿದೆ.

ಆತ್ಮಕಥನದಲ್ಲಿ ಏನಿದೆ: ಶಿವಗಂಗಮ್ಮ ಎಂಬ ಚಿಕ್ಕಮ್ಮ, ಜೋಗಿ ಬಳಗ, ಕಾಗಿ ಬಳಗ, ಇಪ್ಪತ್ತೊಂದು ಜನ ಮಕ್ಳಲ್ಲಿ, ನಾನು
ಎಷ್ಟನೆಯವನೋ ಗೊತ್ತಿಲ್ಲ, ಒಳಗಣ ಹೆಣ್ಣಿನ ಮೊಳಕೆ, ಪಗ್ಮಿ ಏಜೆಂಟ್ ಮತ್ತು ಗಾಂಧಿ ಜೋಗತಿ, ನಾನು ಸಮುದ್ರದೊಳಗಿನ ಗಿಡ, ಹುಟ್ಟಿದ ಮನೆಯಿಂದ ಹೊರ ಹಾಕಿದ್ದು, ಮತ್ತೇರಿದ ಕಾಮುಕರ ಕೈಯಲ್ಲಿ ಸೆಣಸಾಟ ಸೇರಿದಂತೆ ಹಲವಾರು ಅಧ್ಯಾಯಗಳು  ತ್ಮಕಥನ ಕೃತಿಯಲ್ಲಿ ಅಡಕವಾಗಿದ್ದು, ಮಂಜಮ್ಮ ಅವರ ಸಂಪೂರ್ಣ ಜೀವನದ ಏಳು ಬೀಳುಗಳನ್ನು ಅನಾವರಣಗೊಳಿಸಿದೆ.

ಈ ಹಿಂದೆ ವಿಜಯಪುರದ ಅಕ್ಕಮಹಾದೇವಿ ಮಹಾವಿದ್ಯಾಲಯದ ಅರಿವು ಪಠ್ಯ ದಲ್ಲಿ ಮಂಜಮ್ಮ ಜೋಗತಿ ಅವರ ಜೀವನ
ಚರಿತ್ರೆ ಸೇರ್ಪಡೆಗೊಳಿಸಲಾಗಿತ್ತು. ವಿವಿಯ 5ನೇ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಆತ್ಮಕಥನವನ್ನು ಪ್ರಕಟಿಸಲಾಗಿತ್ತು. ಅರಿವು-05 ಪಠ್ಯ ಪುಸ್ತಕದ ಸಂಪಾದಕೀಯ ವಿಭಾಗದಲ್ಲಿ ಪ್ರೊ.ಮಹೇಶ, ಡಾ.ನಾಗೇಂದ್ರ ಮಸೂತಿ, ಚಿಂತಾಮಣಿ, ಡಾ. ಈಶ್ವರಯ್ಯ ಮಠ, ಡಾ. ಮೀನಾಕ್ಷಿ ಬಾಳಿ ಒಳಗೊಂಡ ತಂಡ ಕಾರ್ಯನಿರ್ವಹಿಸಿತ್ತು. ಮಂಜಮ್ಮ ಜೋಗತಿ ಆತ್ಮಕಥನದ ಅನಾವರಣ ತಲೆ ಬರಹದಲ್ಲಿ ಆ ಪಠ್ಯವಿತ್ತು. ಡಾ.ಚಂದ್ರಪ್ಪ ಸೊಬಟಿ ನಿರೂಪಣೆ ಮಾಡಿದ್ದರು.

***

ಮಂಜಮ್ಮ ಜೋಗತಿ ಅವರ ಆತ್ಮಕಥನ ‘ನಡುವೆ ಸುಳಿವ ಹೆಣ್ಣು’ ಗುಲ್ಬರ್ಗಾ ವಿವಿ ಪದವಿ ತರಗತಿಗೆ ಪಠ್ಯವಾಗಿದೆ. ಇದೊಂದು ಅಪರೂಪದ ಕೃತಿಗೆ ಚಿಂತಕರಾದ ಬರಗೂರು ರಾಮ ಚಂದ್ರಪ್ಪ ಮುನ್ನುಡಿ ಬರೆದಿದ್ದು, ಈ ಕೃತಿ ಪ್ರಕಾಶ ಮಾಡಿರುವುದು ಹೆಮ್ಮೆಯ ಸಂಗತಿ.
– ಎಂ.ರಾಜೇಶ್ವರಿ ಪ್ರಕಾಶಕರು, ಪಲ್ಲವ ಪ್ರಕಾಶನ, ಹೊಸಪೇ

ಗುಲ್ಬರ್ಗಾ ವಿವಿಯಿಂದ 2021-22ನೇ ಸಾಲಿಗೆ ಪದ್ಮಶ್ರೀ ಹಾಗೂ ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರ ಆತ್ಮಕಥನವಾದ ‘ನಡುವೆ ಸುಳಿವ ಹೆಣ್ಣು’ ಪದವಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಯೋಗ್ಯವಾಗಿರುವ ಶೇ.80ರಷ್ಟು ಅಂಶಗಳನ್ನು ಒಳಗೊಂಡಿದೆ. ಇದು ಪದವಿ ವಿದ್ಯಾರ್ಥಿಗಳಿಗೆ ಯೋಗ್ಯ ಪುಠ್ಯವಾಗಲಿದೆ.
– ಎಚ್.ಟಿ.ಪೋತೆ ಪ್ರಾಧ್ಯಾಪಕರು ಮತ್ತು ನಿರ್ದೇಶಕರು, ಪ್ರಸಾರಾಂಗ ವಿಭಾಗ, ಗುಲ್ಬರ್ಗ ವಿವಿ

****

ತೆಲುಗು ದಿನಪತ್ರಿಕೆಯಲ್ಲಿ ಧಾರಾವಾಹಿ
ನೆರೆ ಆಂಧ್ರಪ್ರದೇಶದ ಮಾಸಿಕ ಪತ್ರಿಕೆಯೊಂದರಲ್ಲಿ ಜೋಗತಿ ಮಂಜಮ್ಮ ಎಂಬ ತಲೆಬರಹದಡಿ ಆತ್ಮಕಥನ ಧಾರಾವಾಹಿ ರೂಪದಲ್ಲಿ ಪ್ರಕಟವಾಗುತ್ತಿದೆ. ಆ ಭಾಗದ ಓದುಗರು ಧಾರಾವಾಹಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಚಿಕ್ಕ ಮನೆಯೊಂದರಲ್ಲಿ ಪದ್ಮಶ್ರೀ ಜೋಗತಿ ಮಂಜಮ್ಮ ಅವರು ಕಳೆದ ಹಲವು ವರ್ಷ ಗಳಿಂದ ವಾಸಿಸುತ್ತಿದ್ದಾರೆ.

ಅವರೊಂದಿಗೆ ವಿದ್ಯಾವಮ್ಮ ಮತ್ತು ಗೌರಮ್ಮ ಜೋಗತಿ ಎಂಬುವರು ವಾಸವಾಗಿದ್ದಾರೆ. ಸದ್ಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಮಂಜಮ್ಮ ಜೋಗತಿ, ಸರಕಾರದ ಯೋಜನೆಗಳನ್ನು ಬಳಸಿಕೊಂಡು ತಮ್ಮ ಜಾಗದಲ್ಲಿಯೇ ಮನೆಯನ್ನು ನಿರ್ಮಿಸುತ್ತಿದ್ದು, ಇನ್ನು ಪೂರ್ಣಗೊಂಡಿಲ್ಲ. ಇಂತಹ ಪರಿಸ್ಥಿತಿ ಯಲ್ಲಿಯೂ ಅವರಿಗೆ ಪದ್ಮಶ್ರೀ ಜತೆಗೆ ಆತ್ಮಕಥನವು ಪಠ್ಯದಲ್ಲಿ ಅಳವಡಿಕೆಯಾಗುತ್ತಿರುವುದು ಜನಪದ ಕಲಾವಿದರು, ಅವರ ಆತ್ಮೀಯರಿಗೆ ಸಂತಸ ತಂದಿದೆ.