Tuesday, 9th August 2022

ಲಂಚಕ್ಕೆ ಕೈಯೊಡ್ಡುವ ಅಧಿಕಾರಿಗಳಿಗೆ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ

ಹಾವೇರಿ: ‘ರೇಷ್ಮೆ ಬೆಳಗಾರರಿಂದ ಕೆಲವು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ. ಕಮಿಷನ್‌ ನೀಡದೇ ಇದ್ದರೆ ರೇಷ್ಮೆ ಹುಳು ಸಾಕಾಣಿಕೆ ಮನೆಯನ್ನೇ ಮಂಜೂರು ಮಾಡುತ್ತಿಲ್ಲ. ಅಂಥವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾತನಾಡಿ, ಹನಿ ನೀರಾವರಿ ಸೌಲಭ್ಯಕ್ಕೂ ಕಮಿಷನ್‌ ಕೇಳುತ್ತಿದ್ದಾರೆ. ಇಲಾಖೆಯಲ್ಲಿ ಅನುದಾನ ವಿದ್ದರೂ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಕಳೆದ ವರ್ಷ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೆ. ಲಂಚ ಕೇಳುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡುತ್ತೇನೆ ಎಂದು ಗುಡುಗಿದರು.

2022ರ ಮಾರ್ಚ್‌ನಲ್ಲಿ 11 ದಿನ ರಾಜ್ಯದಲ್ಲಿ ‘ಕ್ರೀಡಾಮೇಳ’ ಆಯೋಜನೆ ಮಾಡಲಿದ್ದು, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ 7 ಸಾವಿರ ಕ್ರೀಡಾಪಟು ಗಳು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕ್ರೀಡಾಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ’ ಎಂದು ಕ್ರೀಡಾ ಸಚಿವರು ಹೇಳಿದರು.

75 ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರ ದತ್ತು ಪಡೆದಿದ್ದು, 2024ರ ಒಲಿಂಪಿಕ್ಸ್‌ಗೆ ಕಳುಹಿಸಲು ವಿಶೇಷ ತರಬೇತಿ ನೀಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಸುಮಾರು ₹30 ಲಕ್ಷ ಖರ್ಚು ಬರುತ್ತದೆ. 150 ಖಾಸಗಿ ಕಂಪನಿಗಳನ್ನು ಕರೆಸಿ, ಅವರಿಗೂ ಜವಾಬ್ದಾರಿ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಅರ್ಹರಿಗೆ ಕ್ರೀಡಾ ತರಬೇತಿ ನೀಡಲು ಕ್ರಮ ಕೈಗೊಂಡಿದ್ದೇವೆ. ಸಿಬ್ಬಂದಿ ಮತ್ತು ಕ್ರೀಡಾ ತರಬೇತುದಾರರ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳುತ್ತೇನೆ ಎಂದರು.