Tuesday, 21st March 2023

ನೀವೂ ವಿದೇಶ ಪ್ರವಾಸ ಮಾಡಬೇಕೆ ?

ಸುರೇಶ ಗುದಗನವರ

ಪ್ರತಿ ದಿನದ ಗಳಿಕೆಯಲ್ಲಿ ರೂ.300 ಉಳಿತಾಯ ಮಾಡಿ, ವಿದೇಶಗಳಿಗೆ ಪ್ರವಾಸ ಮಾಡಿರುವ ಈ ದಂಪತಿಯು, ಎಲ್ಲರಿಗೂ ಸ್ಫೂರ್ತಿ ತುಂಬ ಬಲ್ಲರು!

ಜ್ಞಾನಾರ್ಜನೆಗೆ ಬೇರೊಂದು ಹೆಸರು ಪ್ರವಾಸ. ಇಂದು ಪ್ರವಾಸ ಬಹು ದೊಡ್ಡ ಹವ್ಯಾಸವಾಗಿದೆ. ಅದಕ್ಕೆ ಸಮಯ, ತಾಳ್ಮೆ, ಗುರಿ, ಕೈಯಲ್ಲಿ ಹಣ ಇರ ಬೇಕಾಗುತ್ತದೆ. ಭಾಷೆಯ ಅರಿವಿದ್ದರೆ ಒಳಿತು, ಇಲ್ಲವಾದರೆ ನಾಲ್ಕಾರು ಪ್ರವಾಸ ನಡೆಸಿ, ಕಣ್ಣು ತೆರೆದು ಓಡಾಡಿದರೆ ಭಾಷೆ ಅರಿವಾಗುತ್ತದೆ.

ಪ್ರವಾಸ ಮಾಡುವ ಮನಸ್ಸು ಇದ್ದರೆ ಹಣದ ಕೊರತೆ ದೊಡ್ಡ ವಿಷಯವೇ ಅಲ್ಲ ಎಂಬುದನ್ನು ಸಾಬೀತುಪಡಿಸಿ, ಅವರು ಈಗಾಗಲೇ ೨೫ ದೇಶಗಳನ್ನು ಸುತ್ತಿ ಅಚ್ಚರಿ ಮೂಡಿಸಿದವರು, ಕೇರಳದ ವೃದ್ಧ ಜೋಡಿಗಳಾದ ಕೆ. ಆರ್. ವಿಜಯನ್ ಮತ್ತು ಮೋಹನಾ. ಇವರು ಕೇರಳ ರಾಜ್ಯದ ಕೊಚ್ಚಿನ್‌ನವರು. ಗಾಂಧಿ ನಗರದಲ್ಲಿ ಜೀವನೋಪಾಯಕ್ಕಾಗಿ ಬಾಲಾಜೀ ಕಾಫಿ ಹೌಸ್ ಎಂಬ ಸಣ್ಣ ಹೋಟೆಲ್ ನಡೆಸುತ್ತಿದ್ದಾರೆ. ವಿಜಯನ್ ಅವರಿಗೆ ೭೧ ವಯಸ್ಸು, ಮೋಹನಾ ಅವರಿಗೆ ೬೯ ವಯಸ್ಸು. ಮದುವೆಯಾಗಿ ೪೫ ವರ್ಷಗಳಾಗಿವೆ.

೧೯೬೩ರಲ್ಲಿ ಕೊಚ್ಚಿನ್ ಪೇಟೆಯಲ್ಲಿ ಬೀದಿ ಬೀದಿಯಲ್ಲಿ ತಿರುಗಾಡಿ ಟೀ ಮಾರಿದ ವಿಜಯನ್ ನಂತರ ಸಣ್ಣ ಹೊಟೇಲ್ ಪ್ರಾರಂಭಿಸಿದರು. ಹೊಟೇಲ್‌ ನಲ್ಲೂ ಇವರೇ ಎಲ್ಲಾ ಕೆಲಸ ಮಾಡುತ್ತಾರೆ. ಹೊಟೇಲನಿಂದ ಬರುವ ಆದಾಯ ಸಣ್ಣದು. ಈ ದಂಪತಿ ಮಿತವ್ಯಯಿ. ತಮ್ಮ ಆದಾಯದಲ್ಲಿ ದಿನಕ್ಕೆ ೩೦೦
ರೂಪಾಯಿಗಳನ್ನು ಉಳಿಸುತ್ತಾರೆ ಮತ್ತು ಆ ಹಣದೊಂದಿಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿದ್ದಾರೆ.

ಇಪ್ಪತ್ತೈದು ದೇಶ ಸುತ್ತಿದರು!
ಈ ಜೋಡಿ ಈಗಾಗಲೇ ೨೫ ದೇಶಗಳಿಗೆ ತಿರುಗಾಡಿ ಬಂದಿದ್ದಾರೆ. ಮನಸ್ಸಿದ್ದರೆ ಮಾರ್ಗ. ನಮ್ಮಲ್ಲಿ ಹಲವರಿಗೆ ಆರೋಗ್ಯ, ವಯಸ್ಸು, ಹಣ ಎಲ್ಲವೂ ಇದ್ದರೂ ಊರು ಬಿಟ್ಟು ಎಲ್ಲಿಗೂ ಹೋಗುವದಿಲ್ಲ. ಸದಾ ಕಾಲ ಗಳಿಸುವದು ಅವರ ಕೆಲಸ. ಅಷ್ಟೇ ಅವರ ಜೀವನ. ಆದರೆ ವಿಜಯನ್ ದಂಪತಿಗಳ ಜೀವ ನೋತ್ಸಾಹ ಬಹು ದೊಡ್ಡದು. ೧೯೮೮ರಲ್ಲಿ ಹಿಮಾಲಯ ಯಾತ್ರೆಯಿಂದ ಅವರ ಪ್ರವಾಸಗಾಥೆ ಆರಂಭವಾಯಿತು.

೨೦೦೭ರಲ್ಲಿ ಕೂಡಿಟ್ಟು ಹಣದಲ್ಲಿ ಸ್ವಾಮಿ ಸಂದೀಪ ಚೈತನ್ಯ ಅವರೊಂದಿಗೆ ೧೮ ದಿನಗಳ ಕಾಲ ಇಸ್ರೇಲ್‌ಗೆ ಭೇಟಿ ನೀಡಿದರು. ಆ ನಂತರ ಹಲವು ದೇಶಗಳನ್ನು ಸುತ್ತಯಿದ್ದಾರೆ. ಈಗಾಗಲೇ ಸಿಂಗಾಪುರ, ಸ್ವಿಜರ್‌ಲ್ಯಾಂಡ್, ಯು.ಎಸ್., ಅರ್ಜೆಂಟಿನಾ, ಪೇರು, ಬ್ರೆಜಿಲ್, ಚಿಲಿ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಮುಂತಾದ ೨೫ ದೇಶಗಳನ್ನು ನೋಡಿದ್ದಾರೆ.

ಆಯಾ ದೇಶದ ಜನರ ಸಂಸ್ಕೃತಿ, ಆಚಾರ ವಿಚಾರ ಮತ್ತು ಅಲ್ಲಿಯ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಳ್ಳುತ್ತಾ, ಸಂತಸಪಡುವುದೇ ಅವರ ಪ್ರವಾಸದ ಉದ್ದೇಶ. ಜತೆಗೆ ಮಾನಸಿಕ ನೆಮ್ಮದಿ ಸಿಗುತ್ತದೆ.

ಸಾಕ್ಷ್ಯಚಿತ್ರ
ವಿಜಯನ್ ದಂಪತಿಗಳ ಸಾಹಸದ ಕಥೆಯನ್ನು ಅಮೇರಿಕಾದ ಪ್ರವಾಸಿಗ ಡ್ರ್ಯೂ ಬಿನ್ಸ್ಕಿ ಅವರು ಸಾಕ್ಷ್ಯ ಚಿತ್ರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವರು. ಇದನ್ನು ಗಮನಿಸಿದ ಉದ್ಯಮಿ ಆನಂದ ಮಹೀಂದ್ರ ಅವರು, ಎರಡು ವರ್ಷಗಳ ಹಿಂದೆ ಈ ದಂಪತಿಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಪ್ರಾಯೋಜಿಕತ್ವ ವಹಿಸಿಕೊಂಡಿದ್ದರು. ನಿರ್ದೇಶಕ ಹರಿ ಎಂ.ಮೋಹನನ್ ಈ ಜೋಡಿಯ ಮೇಲೆ ಮಾಡಿದ ‘ಇನ್ವಿಸಿಬಲ್ ವಿಂಗ್ಸ್’ ಎಂಬ ಡಾಕ್ಯುಮೆಂಟರಿ ಫಿಲ್ಮ ಫಾರ್ ಬಹುಮಾನ ಪಡೆದಿದೆ.

ವಿಜಯನ್ ಅವರು ತಮ್ಮ ಹೊಟೇಲ್‌ನಲ್ಲಿ ಗ್ಲೋಬ್ ಇಟ್ಟುಕೊಂಡಿದ್ದು, ತಾವು ಸುತ್ತಿರುವ ದೇಶ ಯಾವದು, ಸುತ್ತಬೇಕಾಗಿರುವ ದೇಶ ಯಾವದು ಎಂದು ಹೇಳುತ್ತಾರೆ. ಹೊಟೇಲ್ ಗೋಡೆಗಳಲ್ಲಿ ತಾವು ಹೋಗಿ ಬಂದಿರುವ ದೇಶಗಳ ಮಾಹಿತಿಯನ್ನು, ಆ ದೇಶಗಳ ನೋಟುಗಳನ್ನು ಫ್ರೇಂ ಹಾಕಿ ತೂಗು ಹಾಕಿದ್ದಾರೆ. ಎರಡು ವರ್ಷಗಳ ವಿರಾಮದ ನಂತರ ಅವರು ೨೬ನೆಯ ದೇಶವಾಗಿ ರಷ್ಯಾಕ್ಕೆ ಪ್ರವಾಸ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಒಂದು ಪ್ರಮುಖ ಪ್ರಯಾಣ ಸಂಸ್ಥೆ ಮತ್ತು ವಿಮಾ ಕಂಪನಿಯು ಈ ದಂಪತಿಯನ್ನು ಬ್ರ್ಯಾಂಡ್ ಅಂಬಾಸಿಡರ್‌ಗಳಾಗಿ ಆಯ್ಕೆ ಮಾಡಿದೆ. ಈ ಪ್ರಯಾಣವನ್ನು ಅವರ ಮಕ್ಕಳಾದ ಶಶಿಕಲಾ ಪ್ರಭು, ಉಷಾ ಪ್ರಭು ಮತ್ತು ಅಳಿಯ ಜಯರಾಮ ಹಾಗೂ ಮುರಳಿಧರನ್ ಪೈ ಬೆಂಬಲಿಸಿದ್ದಾರೆ.

ವಿದೇಶ ಪ್ರವಾಸ ಮಾಡಲು ಆಸೆ ಇದ್ದರೆ, ಹಣವು ಒಂದು ಸಮಸ್ಯೆ ಅಲ್ಲ ಎಂಬುದನ್ನ ವಿಜಯನ್ ದಂಪತಿ ತೋರಿಸಿಕೊಟ್ಟಿದ್ದಾರೆ. ನೀವೂ ವಿದೇಶ ಪ್ರವಾಸ ಮಾಡಬೇಕೆ? ಈ ದಂಪತಿಯ ಉದಾಹರಣೆಯನ್ನು ಅನುಕರಿಸಿ!

error: Content is protected !!