Sunday, 27th November 2022

ಅಮೃತ ಶಿಲೆಯ ಅಮರ ಕಲಾಕೃತಿ

ಅಲೆಮಾರಿಯ ಡೈರಿ

mehandale100@gmail.com

ನಿಂತಲ್ಲಿ ಕೂತಲ್ಲಿ ಕಲ್ಲು ಕಲ್ಲಿನ ಮೇಲೆ ಶಿಲ್ಪಕಲಾ ವೈಭವ ಮತ್ತು ನೋಡಿದಲ್ಲೆಲ್ಲಾ ಸ್ಮಾರಕ ಅಥವಾ ಅವಶೇಷಗಳು ದಕ್ಕುತ್ತವೆ. ಪ್ರವಾಸಿಗರು ತಮಗೆ ಬೇಕಾದ್ದನ್ನು ಮಾತ್ರ ಆಯ್ದು ಹುಡುಕಾಟಕ್ಕೂ ದರ್ಶನಕ್ಕೂ ಇಳಿದಲ್ಲಿ ಆಯಾ ಮನಸ್ಥಿತಿಗೆ ತಕ್ಕಂತೆ ಅಲೆಮಾರಿಗಳಿಗೆ ಉತ್ತರ ರಾಜಸ್ಥಾನ ಹಬ್ಬವೇ..

ಇಂಥದ್ದೊಂದು ಅವಿಷ್ಕಾರಗಳನ್ನು ಮತ್ತು ಅದ್ಭುತ ಎನ್ನಬಹುದಾದ ಇತಿಹಾಸ ಸೃಷ್ಟಿಸುವ ಕಾರ್ಯಗಳನ್ನು ಕೈಗೆತ್ತಿಕೊಂಡು ಮುಕ್ತಾಯಗೊಳಿಸಿ ಅದನ್ನೊಂದು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಸಾಧನೆಗೆ ಒಂದು ಜೀವಮಾನದ ಕಾಲಾ ವಧಿಯೇ ಬೇಕಾಗುತ್ತಿತ್ತು ಆಗೆಲ್ಲ. ಹಾಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ತಲೆಮಾರಿನ ಕಲಾವಿದರು ಮತ್ತು ಕಾರ್ಯ ಕುಶಲಿಗಳು ಅದರಲ್ಲೆ ಕೃತಾರ್ಥತೆಯನ್ನೂ ಹೊಂದುತ್ತಿದ್ದರು. ಹಾಗಾಗಿ ಅವರ ಕಾರ್ಯಕ್ಷಮತೆಯ ಮೂಲಕ ತಮ್ಮ ಜೀವನ ಕಾಲಾವಧಿಯಲ್ಲಿ ಮಾಡುತ್ತಿದ್ದ ಕೆಲಸ ಕೇವಲ ಏಕ ಮಾತ್ರದ್ದಾಗಿದ್ದರೂ ಅದು ಭೂಮಿಯ ಮೇಲೆ ಐಕಾನಿಕ್ ಆಗಿ ಮೆರೆಯುವ ರೀತಿಯಲ್ಲಿ ಯೋಜಿಸಲ್ಪಡುತ್ತಿತ್ತು.

ಪ್ರತಿ ನಿರ್ಮಾಣಗಳು ವಿಭಿನ್ನ ಮತ್ತು ವಿಶೇಷ ಆಗಿರಲಿ ಎಂದು ಬಯಸುತ್ತಿದ್ದ ಕಾಲಾವಧಿ ಅದು. ಅಂತಹ ಅಪರೂಪದ ರಚನೆಗಳು ಈಗಲೂ ಭಾರತದಲ್ಲಿ ಅಗಣಿತವಾಗಿವೆ. ಆದರೆ ಪೋಷಣೆ ಮತ್ತು ನಿರ್ವಹಣೆ ಇಲ್ಲದೆ ಕೆಲವು ಮೂಲೆಗುಂಪಾಗಿದ್ದರೆ, ಕೆಲವಕ್ಕೆ ಆಯಾ ಧರ್ಮದ ಸಮುದಾಯದ ಬೆಂಬಲದ ಕಾರಣ ಈಗಲೂ ಅಲೆಮಾರಿಗಳ ಬಕೆಟ್ ಲಿಸ್ಟ್ ಸೇರುತ್ತವೆ. ಆಗೀಗ ಸುದ್ದಿಗೂ, ಪ್ರವಾಸಕ್ಕೂ ಪಕ್ಕಾಗುತ್ತಲೇ ಇರುತ್ತವೆ.

ರಾಜಸ್ಥಾನದ ರಣಕಪುರದಲ್ಲಿರುವ ಈ ಅಮೃತಶಿಲೆಯ ದೇವಸ್ಥಾನ ನಿರ್ಮಾಣಕ್ಕೆ ತೆಗೆದುಕೊಂಡ ಕಾಲಾವಧಿ 50 ವರ್ಷಗಳು. ದುಡಿದ ಕಾರ್ಮಿಕರ ಸಂಖ್ಯೆಯೇ 2800. ಕಾಲ ಕಾಲಕ್ಕೆ ವಯಸ್ಸು ರೋಗ ರುಜಿನ ಮತ್ತು ಅಕಸ್ಮಿಕಗಳಿಂದ ಸತ್ತವರ ಸಂಖ್ಯೆ ಲೆಕ್ಕಕ್ಕಿಲ್ಲ. ಹೂಡಲಾದ ಮೊತ್ತ ಆಗಿನ ಕಾಲಕ್ಕೆ ಕೋಟಿಗಳ ಲೆಕ್ಕದಲ್ಲಿ. ಬಳಸಿದ ಅಮೃತ ಶಿಲೆಯ ಪದರುಗಳಿಗೆ ಬೆಲೆ ಕಟ್ಟಲು ಹೋದರೆ ಕ್ಯಾಲ್ಕ್ಯೂಲೆಟರ್ ಸಾಲುವುದಿಲ್ಲ. ಶಿಲಾ ಪದರುಗಳನ್ನು ತರಲು ಅದೆಷ್ಟು ಬೆಟ್ಟವನ್ನು ಬಗೆದಿದ್ದರೋ ದೇವರಿಗೇ ಗೊತ್ತು. ಅದರಲ್ಲೂ ಶತಮಾನಗಳ ಬಳಿಕವೂ ಅವೆಲ್ಲ ಸೋಜಿಗ ಎನ್ನುವಂತೆ ತುಂಬ ಉತ್ತಮ ಸ್ಥಿತಿಯಲ್ಲೂ ಸಧೃಡವಾಗಿಯೂ ಕಾಯ್ದುಕೊಳ್ಳುವ ತಂತ್ರಜ್ಞಾನ ಅದರ ನಂತರದಲ್ಲಿ ಇತರರ ಕೈಗೆಟುಕಿಲ್ಲ.

ಎಟುಕದಂತೆ ಕಾಯ್ದುಕೊಳ್ಳುವ ಸಲುವಾಗಿ ಸ್ಥಪತಿಗಳು ನಾಪತ್ತೆಯಾಗಿ ಬಿಡುವುದೋ ಅಥವಾ ತೀರಿ ಹೋಗುವುದೋ ನಡೆಯುತ್ತಿತ್ತು ಎನ್ನುವುದು ಕೂಡಾ ಇತಿಹಾಸದ ಸೋಜಿಗ. ಕಾರಣ ಬೇರಾವುದೇ ಕಾರಣಕ್ಕೂ ಆ ನಿರ್ಮಾಣಗಳ ಮೂಲ ವಿನ್ಯಾಸ ಮತ್ತು ಬಂಧಗಳು ಕೈ ಮೀರಿ ಶತ್ರುಗಳ ಕೈಗೆ ಸಿಕ್ಕಿದರೆ ಅದನ್ನು ನಾಶ ಮಾಡುವುದು ಸುಲಭವಾಗುತ್ತಿತ್ತು ಎನ್ನುವುದು ನಮ್ಮ ಇತಿಹಾಸದಲ್ಲಿ ಹಾಸು ಹೊಕ್ಕಾಗಿದೆ.

ಸರಿ ಸುಮಾರು 14ನೆಯ ಶತಮಾನದಿಂದ 15ರವರೆಗೂ ನಡೆದ ಈ ದೇವಾಲಯದ ಅದ್ಭುತತೆ ಎಂದರೆ ಈ ಬಗ್ಗೆ
ತಾಮ್ರ ಫಲಕವೊಂದರಲ್ಲಿ ತಾಂತ್ರಿಕ ಮಾಹಿತಿಯನ್ನು ಬರೆದಿರಿಸಿದ್ದು. ಆಗಿನ ಕಾಲದ ಮೇವಾರದ ಆಡಳಿತಗಾರ
ರಾಣಾ ಕುಂಭ ಆರಂಭಿಸಿದ್ದ ಅಗಾಧ ಶೈಲಿಯ ಕುಂಭಲಗಢ ಶೈಲಿಯಿಂದ ನಿರ್ಮಾಣ ಪ್ರೇರಿತವಾಗಿ ಅವನಿಂದಲೇ
ಆರಂಭವಾಗಿತ್ತು. ಸತತವಾಗಿ ೫೦ ವರ್ಷ ಕಾಲ ನಡೆದ ನಿರ್ಮಾಣದಲ್ಲಿ ಭಾಗಿಯಾದ ನಿರಂತರ ಕಾರ್ಮಿಕರ ಸಂಖ್ಯೆ
ಕನಿಷ್ಟ ಒಟ್ಟೂ ಲೆಕ್ಕ 8000 ದ ಮೇಲೆ.

ನಿರ್ಮಿಸಲಾದ ಕಂಬಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದ್ದು ಈಗ ಉಳಿದದ್ದು ನೂರರ ಆಸುಪಾಸಿನಲ್ಲಿದೆ. ಇದನ್ನು ನಿರ್ಮಿಸಲು ಪಣತೊಟ್ಟ ಸ್ಥಪತಿ ದೀಪಕನೆಂಬಾತ ಜೈನ ವಾಸ್ತು ಶಿಲ್ಪಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಕಾರಣ ಅಲ್ಲಿ ದ್ವೀಪ
ಎಂದು ಹೆಸರಾಗಿದ್ದು ಇದೆ. ಅದನ್ನೆಲ್ಲ ಇಲ್ಲಿನ ಕಂಬ ಶಾಸನದ ಮೂಲಕ ಸ್ಪಷ್ಟಪಡಿಸಲಾಗಿದ್ದು, ಕೇವಲ ಮೂಲ ತಳಹದಿ
ನಿರ್ಮಾಣವೇ ದಶಕಗಳ ಕಾಲ ತೆಗೆದುಕೊಂಡಿತ್ತಂತೆ. ಅದನ್ನು ಮೇಲ್ವಿಚಾರಣೆ ಮಾಡಿದ್ದು, ಆಚಾರ್ಯ ಸೋಮ ಸುಂದರ
ಸೂರಿ. ಇದರ ಸಹಜ ಎತ್ತರವೇ ೬ ಅಡಿಯಷ್ಟಿದ್ದು, ಸಹಜ ಎತ್ತರಕ್ಕಿಂತ ಮೇಲಕ್ಕೆ ಏರಿಸಲಾಗಿದೆ.

ರಣಕಪುರ ಮಂದಿರ ಎಂದೇ ಆಧುನಿಕ ಕಾಲದಲ್ಲಿ ಗುರುತಿಗೂ ಪ್ರಸಿದ್ಧಿಗೂ ಬಂದಿರುವ ಇದು 48000 ಚದರ ಅಡಿ ವಿಸ್ತಾರದ ವಿಶಾಲ ದೇವಸ್ಥಾನವಾಗಿದ್ದು ೧,೫೦೦ ಕಂಬಗಳನ್ನು ಹೊಂದಿರುವ ಏಕೈಕ ನಿರ್ಮಾಣ. ೪೨೫ ಕಾಲಂಗಳನ್ನು ಹೊಂದಿದೆ ಎಂದು ಲೆಕ್ಕಿಸಲಾಗಿದೆ. ೮೦ ಚಿಕ್ಕ ಪುಟ್ಟ ಮತ್ತು ಅಗತ್ಯಕ್ಕೆ ತಕ್ಕಂತೆ ದೊಡ್ಡ ಗುಮ್ಮಟಗಳನ್ನು ನಿರ್ಮಿಸಿ ಅದನ್ನೆ ಆಧಾರವಾಗಿಯೂ ರೂಪಿಸಲಾಗಿದೆ. ವಿಶಿಷ್ಟ ಎಂದರೆ ಯಾವ ಕಂಬಗಳೂ ಮತ್ತು ಗುಮ್ಮಟಗಳೂ ಏಕರೂಪನಾಗಿಲ್ಲ. ಎಲ್ಲವೂ ಈಗ ಲಭ್ಯವೂ ಇಲ್ಲ.

ಪ್ರತಿ ಕಂಬಗಳೂ, ಆಕಾರ, ಅಳತೆ, ಕುಸುರಿ ಕರ್ಮಚಾರಿಕೆ ಮತ್ತು ಅಗಲದಲ್ಲಿ ಭಿನ್ನ ಭಿನ್ನ ಚಿತ್ರಣ ಹೊಂದಿದ್ದು, ಒಂದಕ್ಕಿಂತ
ಒಂದು ಚೆಂದವಾಗಿದೆ. ಆದರೆ ಪ್ರಸ್ತುತದಲ್ಲಿ ಎಲ್ಲವನ್ನೂ ಉಳಿಸಿಕೊಳ್ಳಲಾಗಿರದಿದ್ದರೂ ದೇವಾಲಯದ ಪ್ರಾಂಗಣದಿಂದ ಹಿಡಿದು ಆರಂಭದ ಅಗಾಧ ಎತ್ತರದ ಪೀಠದಾದಿಯಾಗಿ ಪ್ರತಿಯೊಂದು ಕಾಪಿಡಲಾಗಿದೆ. ಅಲ್ಲಲ್ಲಿ ಮಧ್ಯೆ ನಿಲ್ಲಿಸಿರುವ ಅಮೃತ ಶಿಲೆಯ
ರಚನೆಯ ಶಿಲ್ಪ ಕಲಾಕೃತಿಗಳ ಮೆರಗು ನೀವು ನೋಡಲೇಬೇಕು. ಅದರಲ್ಲೂ ಆ ಫಿನಿಶಿಂಗ್ ಕತೆಯೇ ಬೇರೆ. ಅಷ್ಟು ನುಣುಪಾಗಿ ನಿರ್ಮಿಸಲು ಬಳಸಿದ ಸಲಕರಣೆಗಳಾದರೂ ಎಂಥದ್ದಿರಬೇಕು ಅಲ್ವೇ..?

ಉದಯಪುರದಿಂದ ಸುಮಾರು ನೂರು. ಕಿ.ಮೀ. ಕುಂಭಲಗಢದಿಂದ 30-35 ಕಿ.ಮೀ. ದೂರ ಇರುವ ರಣಕಪುರ ತನ್ನ ವಿಭಿನ್ನ ವಿಶಿಷ್ಟ ಕಲಾಕೃತಿಯಿಂದಲೇ ಮುನ್ನೆಲೆಗೆ ಬಂದಿದೆ. ನೀವು ಎಲ್ಲಿಗೇ ಹೋಗಿ ಅಲ್ಲಿನ ಒಂದಷ್ಟು ಅಹಾರ ಮತ್ತು ದಿನವಹಿ ತಿಂಡಿ ತಿನಿಸಿಗೆ ಒಂದು ಸ್ಥಳೀಯತೆಯ ಟಚ್ ಮತ್ತು ಅಸ್ಮಿತೆ ಇದ್ದೇ ಇರುತ್ತದೆ. ತಮ್ಮ ನೆಲೆಯ ಮೂಲ ಆಹಾರವಾದ ದಾಲ್ ಭಾಟಿ ಯನ್ನು ಪರಿಚಯಿಸುವಲ್ಲಿ ಆಸಕ್ತಿ ತೋರುವ ರಾಜಸ್ಥಾನದ ಆಹಾರದಲ್ಲಿ ಇದಕ್ಕೆ ವಿಶೇಷ ಸ್ಥಾನ ಮಾನವಿದೆ.

ಆದರೆ ಹಲವು ಕಡೆಯಲ್ಲಿ ಈ ವಿಭಿನ್ನ ಅಹಾರದ ರುಚಿ ನೋಡಿದ್ದೂ, ಸಿಕ್ಕಲ್ಲೆಲ್ಲ ತರಿಸಿಕೊಂಡು ತಿಂದರೂ ಈ ದಾಲ್ ಭಾಟಿ ಇವತ್ತಿಗೂ ಹಿಡಿಸಿಲ್ಲ ಮಜವೂ ಕೊಟ್ಟಿಲ್ಲ. ಅದ್ಯಾಕೋ ದರ ಹಿಟ್ಟು ಹಿಟ್ಟುತನ ಬಾಯಿಗೂ ಮನಸ್ಸಿಗೂ ಮುದ ಕೊಟ್ಟಿಲ್ಲ. ಇದರ ಹೊರತಾಗಿ ರಾಜಸ್ಥಾನದ ಹಲವು ಮಗ್ಗುಲಲ್ಲಿ ಹಲವು ರೀತಿಯಲ್ಲಿ ಸಿಕ್ಕುವ ಪರೋಟಾಗಳನ್ನು ಮಿಸ್ ಮಾಡಲೇಬಾರದು.

ಮಾಮೂಲಿನ ಆಲೂ ಪರೋಟಾದಿಂದ ಹಿಡಿದು, ಮೂಲಂಗಿ, ಗಜ್ಜರಿ ಸೇರಿದಂತೆ ಪನೀರ್ ವರೆಗಿನ ತರಹೇವಾರಿ ಪರೋಟಾ ಗಳ ಭರಾಟೆ ರಾಜಸ್ಥಾನದ ಈ ರಣಕಪುರ ಮತ್ತು ಉದಯಪುರ ರಾಜ್ಯ ಹೆದ್ದಾರಿಯ ಆಸುಪಾಸಿನ ಚಿಕ ಪುಟ್ಟ ದಾಭಾಗಳ ಲ್ಲೆಲ್ಲ ವಿಜೃಂಭಿಸಿದೆ. ರಾಜಸ್ಥಾನದಲ್ಲಿ ಸಿಹಿ ಹಾಗೂ ದಾಭಾಗಳಿಗೆ ಮಿತಿಯೇ ಇಲ್ಲ. ಪ್ರವಾಸಿಗರಿಗೂ ಹಬ್ಬ. ಹೇಳಿ ಕೇಳಿ ರಾಜಸ್ಥಾನ ಪ್ರವಾಸೋದ್ಯಮಕ್ಕೆ ಹೆಸರುವಾಸಿ.

ಉದಯಪುರ, ಜೋಧಪುರ್, ಜೈಪುರ, ಹಳದಿಘಾಟಿ, ಜೈಸಲ್ಮೇರ್ ಹೀಗೆ ಸಾಲು ಸಾಲು ಪ್ರವಾಸಿ ಆಕರ್ಷಣೆಯ ಪುರಾತನ ಕೋಟೆ ಕೊತ್ತಲಗಳ ನಾಡು. ಇಲ್ಲೆಲ್ಲ ಪ್ರತಿ ಪ್ರವಾಸದ ನಂತರದಲ್ಲೂ ಒಂದಲ್ಲ ರೀತಿಯಲ್ಲಿ ಊಟೋಪಚಾರದ ಮಾತು. ಅಲ್ಲಲ್ಲಿ ಗೈಡುಗಳು, ರಿಕ್ಷಾವಾಲಗಳು, ಸಣ್ಣ ಸಣ್ಣ ಟೀ ಅಂಗಡಿಯವರು ಸಣ್ಣ ಮಾತುಕತೆಗೆ ಸಿಕ್ಕರೂ ವಿವರಿಸುತ್ತಲೇ ಇರುತ್ತಾರೆ. ಅಲ್ಲಿನ ಅಹಾರದ ಪದ್ಧತಿ ಹಾಗೂ ಪ್ರವಾಸಿ ಊಟೋಪಚಾರದ ಬಗ್ಗೆ ಎರಡು ಮಾತಿಲ್ಲದಂತೆ ಆದರಿಸುವುದರಲ್ಲಿ ನಿಸ್ಸಿಮರು.

ರಣಕಪುರದಿಂದ ಜೈಸಲ್ಮೇರ ಸುತ್ತ ಮುತ್ತ ಎಲ್ಲೆ ಸಂಚರಿಸಿ ನಿಮಗೆ ಅಹಾರದ ಬಗ್ಗೆ ಹೆಚ್ಚಿನ ವ್ಯತ್ಯಾಸ ಮತ್ತು ತೊಂದರೆ
ಅಗಲಾರದು. ಇನ್ನು ಇದೇ ಆವರಣದ ಆಚೆಗೆ ಕೂಗಳತೆಯ ದೂರದಲ್ಲಿ ಒಂದು ಸೂರ್ಯ ದೇವಾಲಯವಿದ್ದು, ರಣಕಪುರ ದೇವಸ್ಥಾನ ನೋಡುವವರು ಇದನ್ನು ಸಂದರ್ಶಿಸದೆ ಬರುವುದೇ ಹೆಚ್ಚು. ಹಾಗೆ ಮಾಡದೆ ಮರೆಯದೆ ಈ ಪುಟ್ಟ ಸೂರ್ಯ ದೇಗುಲ ನಿಮ್ಮ ಲಿಸ್ಟ್ ನಲ್ಲಿರಲಿ. ರಣಕಪುರ ಉತ್ಸವ ಎನ್ನುವ ದೊಡ್ಡ ಮಟ್ಟದ ಸಾಂಸ್ಕೃತಿಕ ಉತ್ಸವವೆಲ್ಲ ಜರುಗುವುದು ಈ ಸೂರ್ಯ ದೇವಾಲಯದಲ್ಲೆ.

ಇಲ್ಲೆ ಒಂದು ಓಪನ್ ಥಿಯೆಟರ್ ಕೂಡಾ ಇದೆ. ಲೆಕ್ಕದಲ್ಲಿ ಪಕ್ಕದ ದೇವ ಸಮುಚ್ಛಯಕ್ಕಿಂತ ಪುರಾತನ. ಹಾಗಾಗಿ ಕಲ್ಲಿನ
ಶಿಲ್ಪಕಲಾ ಬಂಧ ಮತ್ತು ರಚನೆ ವಿಭಿನ್ನವಾಗೂ ಇದೆ. ದೇಶದ ವಿವಿಧ ಭಾಗಗಳ ನೆರಳು ಬೆಳಕಿನ ವಿನ್ಯಾಸವನ್ನು ಅಭ್ಯಸಿಸಿ
ಇದನ್ನು ನಿರ್ಮಿಸಲಾಗಿದೆ. ಆ ಸೂರ್ಯ ದೇವಾಲಯ 13ನೆಯ ಶತಮಾನಕ್ಕೆ ಸೇರಿದ್ದಾದರೂ ೧೫ರಲ್ಲಿ ಇದನ್ನು ಮರು ನಿರ್ಮಿಸಲಾಗಿದೆ.

ನಾಗರ ಶೈಲಿಯ ಸುಣ್ಣದ ಕಲ್ಲಿನ ಮರು ನಿರ್ಮಿತ ದೇವಾಲಯ ಈಗಲೂ ಅಕರ್ಷಕ. ಹಿಂದೂ ವಾಸ್ತು ಶಿಲ್ಪ ಮತ್ತು ಎತ್ತರದ ವೇದಿಕೆಯ ಮೇಲಿನ ನಿರ್ಮಾಣದ ಕಾರಣ ಭಿನ್ನ ಅನುಭವ ನೀಡುತ್ತದೆ. ಚಿತ್ರಗಳ ಶೂಟಿಂಗ್‌ಗೆ ಹೇಳಿ ಮಾಡಿಸಿದ ಲೊಕೇಶನ್. ಕೋಟೆಯಿಂದ ಕೇವಲ 350 ಮೀ. ದೂರದ ಸೂರ್ಯದೇವಾಲಯ ದೇಶದ ಪ್ರಮುಖ ಸರಣಿ ದೇವಾಲಯಗಳಾದ ಕೋನಾರ್ಕ್, ಕರ್ಪಮಲ್, ಗಯಾ, ಪಹಾರ್, ಸೂರ್ಯನಾರ್, ಅರ್ಸ್ವಾಲಿ, ಮಾರ್ತಾಂಡ್ ಕಾಶ್ಮೀರ್, ಗ್ವಾಲಿಯರ್, ರಾಂಚಿಯ ಸೇರಿದಂತೆ ಮೊದೆರಾ ಜೊತೆ ಇದು ಗುರುತಿಸಿಕೊಂಡಿದೆ.

ಅಷ್ಟ ಭುಜಾಕೃತಿಯ ವೇದಿಕೆಯ ಮೇಲೆ ಸುಣ್ಣದ ಕಲ್ಲಿನ ರಚನೆ ಇವೆಂಟ್ ಶೂಟಿಂಗ್‌ಗಳ ಹಾಟ್ ಸ್ಪಾಟ್ ಕೂಡಾ. ರಣಕಪುರ ದಲ್ಲಿರುವ ಏಕಲಿಂಗ ಜೀ ಟ್ರಸ್ಟ್ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಇದನ್ನು ಅರ್ಧ ಶತಮಾನದ ಹಿಂದೆ ಮಹಾರಾಜ ಶ್ರೀ ಭೂಪಾಲ್ ಸಿಂಗ್ ಸ್ಥಾಪಿಸಿದರಲ್ಲದೆ ಆರ್ಥಿಕವಾಗಿಯೂ ಪೋಷಿಸಿದ್ದರಿಂದ ಈಗಲೂ ಉಚ್ಛ್ರಾಯ ಸ್ಥಿತಿಯಲ್ಲಿದೆ. ಹೇಳಿ ಕೇಳಿ ಮೊದಲೇ ರಾಜಸ್ಥಾನ ಇಂಥ ಕೋಟೆ ಕೊತ್ತಲಗಳ ರಾಜ್ಯ. ಹಾಗಾಗಿ ನೀವು ನಿಂತಲ್ಲಿ ಕೂತಲ್ಲಿ ಕಲ್ಲು ಕಲ್ಲಿನ ಮೇಲೆ ಶಿಲ್ಪಕಲಾ ವೈಭವ ಮತ್ತು ನೋಡಿದಲ್ಲೆಲ್ಲಾ ಸ್ಮಾರಕ ಅಥವಾ ಅವಶೇಷಗಳು ದಕ್ಕುತ್ತವೆ.

ಪ್ರವಾಸ ಮತ್ತು ಆಫ್ ಬೀಟ್ ಪ್ರವಾಸಿಗರು ತಮಗೆ ಬೇಕಾದ್ದನ್ನು ಮಾತ್ರ ಆಯ್ದು ಹುಡುಕಾಟಕ್ಕೂ ದರ್ಶನಕ್ಕೂ ಇಳಿದಲ್ಲಿ ಆಯಾ ಮನಸ್ಥಿತಿಗೆ ತಕ್ಕಂತೆ ಅಲೆಮಾರಿಗಳಿಗೆ ಉತ್ತರ ರಾಜಸ್ಥಾನ ಹಬ್ಬವೇ.. ಮತ್ಯಾಕೆ ತಡ ನೀವು ಒಂದು ಬಕೆಟ್ ಲಿಸ್ಟ್ ಮಾಡಿಕೊಳ್ಳಿ.