Friday, 30th September 2022

ಕಳಸಾ ಬಂಡೂರಿ ವಿಚಾರದಲ್ಲಿ ಮತ್ತೆ ತಗಾದೆ ತೆಗೆದ ಗೋವಾ

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಮತ್ತೆ ಗೋವಾ ಸರ್ಕಾರದಿಂದ ತಗಾದೆ ಶುರುವಾಗಿದೆ. ಕಳಸಾ ಬಂಡೂರಿ ನಾಲೆಗಳ ಮೂಲಕ ನೀರು ಅಕ್ರಮವಾಗಿ ತಿರುಗಿಸಿರುವ ಆರೋಪ ಮಾಡಿರುವ ಗೋವಾ ಸರ್ಕಾರ, ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್’ಗೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಿದೆ.

ಕರ್ನಾಟಕ ನೀರು ತಿರುಗಿಸಿರುವ ವಿಡಿಯೋ ಸಾಕ್ಷ್ಯಗಳನ್ನಿಟ್ಟುಕೊಂಡು ಕೋರ್ಟ್ ಮೆಟ್ಟಿಲೇರಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿಗಾಗಿ ಹೋರಾಟ ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದಾರೆ.

ಮಹದಾಯಿ ಐತೀರ್ಪು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂತದಲ್ಲಿ ದ್ದಾಗ ನೀರು ತಿರುಗಿಸಿ ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದೆ ಎನ್ನುವ ಆರೋಪ ಮಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತೆ ಮಹದಾಯಿ ಕಿಚ್ಚು ಹೊತ್ತಿಸಿದ್ದಾರೆ.

ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿ ಐತೀರ್ಪು ನೀಡಿತ್ತು. ಅಲ್ಲದೇ ಇದರ ಆದಿ ಸೂಚನೆ ಹೊರಡಿಸಲು 2020 ರ ಫೆಬ್ರವರಿ 2 ರಂದು ಆದೇಶ ಸುಪ್ರೀಂ ಹೊರಡಿಸಿದ್ದ ಹಿನ್ನೆಲೆಯಲ್ಲಿ ಫೆ. 27 ಕ್ಕೆ ಕೇಂದ್ರ ಸರ್ಕಾರ ಗೆಜೆಟ್ ಆಧಿಸೂಚನೆ ಹೊರಡಿಸಿ ನೀರು ಬಳಕೆಗೆ ಸಮ್ಮತಿ ನೀಡಿತ್ತು. ಹೀಗಾಗಿ ಕರ್ನಾಟಕ ಮಹದಾಯಿ ನದಿ ತಿರುವು ಯೋಜನೆಗೆ ಸಿದ್ಧತೆ ಮಾಡಿಕೊಂಡಿತ್ತು. ಇದರಿಂದಾಗಿ ಮತ್ತೆ ಕ್ಯಾತೆ ತೆಗೆದು ಸುಪ್ರೀಂಕೋರ್ಟ್ ಗೆ ಗೋವಾ ಸರ್ಕಾರ ಹೋಗಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ರೈತರಿಗೆ ಅನ್ಯಾಯ ಆಗದೇ ರಾಜ್ಯ ಸರ್ಕಾರ ನೋಡಿಕೊಳ್ಳಬೇಕೆಂದು ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ.

ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇವೆ

ಈ ಕುರಿತಂತೆ ಬೆಳಗಾವಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು, ಗೋವಾ ಅರ್ಜಿಗೆ ನ್ಯಾಯಾಲಯದಲ್ಲಿ ಸೂಕ್ತ ಉತ್ತರ ನೀಡುತ್ತೇವೆ. ರಾಜ್ಯ ಸರ್ಕಾರ ಯಾವುದೇ ರೀತಿಯ ಕಾನೂನು ಮೀರಿ ನಡೆದುಕೊಂಡಿಲ್ಲ. ಪ್ರಸ್ತುತ ಗೋವಾ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿ ಕುರಿತು ತಮಗೆ  ಮಾಹಿತಿ ಇಲ್ಲ ಎಂದಿದ್ದಾರೆ.

ಆದರೆ ಗೋವಾದ ಯಾವುದೇ ಅರ್ಜಿಗೆ ಉತ್ತರ ನೀಡಲು ಸರ್ಕಾರ ಸಿದ್ಧವಿದೆ. ಕಳಸಾ-ಬಂಡೂರಿ ನಾಲಾ ಯೋಜನೆ ನಿಗದಿಯಂತೆ ಪೂರ್ಣಗೊಳ್ಳಲಿದೆ. ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸಲು ಸರ್ಕಾರ ಹಲವಾರು ಕ್ರಮ ಗಳನ್ನು ಕೈಗೊಂಡಿದೆ. ಇದಕ್ಕಾಗಿ ಬೇಕಾದ ಎಲ್ಲ ರೀತಿಯ ಅನುಮತಿಗಳನ್ನೂ ಕೇಂದ್ರ ಸರ್ಕಾರದಿಂದ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ಪಡೆಯ ಲಾಗಿದೆ ಎಂದು ಹೇಳಿದರು.

‘ಮಹದಾಯಿ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಈಗಾಗಲೇ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿರುವು ದರಿಂದ ಗೋವಾ ಸರ್ಕಾರ ಸಲ್ಲಿಸಿರುವ ಅರ್ಜಿ ತಿರಸ್ಕಾರವಾಗಲಿದೆ. ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸುವು ದಿಲ್ಲ ಎಂಬ ವಿಶ್ವಾಸ ತಮಗಿದೆ. ಮಹಾದಾಯಿ ಜಲ ವಿವಾದ  ನ್ಯಾಯಮಂಡಳಿ (MWDT)ಕರ್ನಾಟಕಕ್ಕೆ ತನ್ನ ನೀರಿನ ಪಾಲನ್ನು ನೀಡಿದೆ ಎಂದು ರಮೇಶ್ ಹೇಳಿದರು.