Friday, 9th December 2022

ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಕಂಭಲ್‌ಗಢ

ಅಲೆಮಾರಿಯ ಡೈರಿ

mehandale100@gmail.com

ಇದು ಜಗತ್ತಿನ ಟಾಪ್ 5 ಕೋಟೆಗಳ ಪೈಕಿ ಒಂದು.  ೨ನೇ ಅತಿಉದ್ದದ ಕೋಟೆ. ಜಗತ್ತಿನ ಅತಿ ಅಗಲದ ಮತ್ತು ಎಂಥ ಹೊಡೆತಕ್ಕೂ ನಲುಗದ ಕುಗ್ಗದ ಬಿರಿಯದ ಕೋಟೆ. ಅಷ್ಟೇ ಆಗಿದ್ದರೆ ನಾವು ನೀವು ತಲೆ ಕೆಡಿಸಿಕೊಳ್ಳಬೇಕಿರಲಿಲ್ಲ. ಇದು ಅನಾಮತ್ತು ೩೦೦ಕ್ಕೂ ಹೆಚ್ಚು ದೇವಾಲಯ ಸಮುಚ್ಚಯ ಹೊಂದಿರುವುದರ ಜತೆಗೆ, ಈಗಿನ ಕಾಲದಲ್ಲೂ ನಿರ್ಮಿಸಲಾಗದ ಟೆಕ್ನಿಕಲ್ ಸ್ಟೋನ್ ಜಾಯಿಂಟ್ ಹೊಂದಿರುವ ಏಕೈಕ ಕೋಟೆ.

ಇದರಲ್ಲಿ ಯಾವ ಬಿರುಕೂಬಂದಿಲ್ಲ, ಸುಖಾಸುಮ್ಮನೆ ‘ಸೀಪೆಜ್’ ಎಂಬ ಇತ್ತೀಚಿನ ಕಳಪೆ ಕಾಮಗಾರಿಯ ಚಿಹ್ನೆಗಳಿಲ್ಲ; ಯಾವುದೇ ಮೂಲೆಯಲ್ಲೂ ಎರಡು ಭಾರಿ ಗಾತ್ರದ ಶಿಲೆಗಳು ತಮ್ಮ ಜೋಡಣೆಯ ರಹಸ್ಯವನ್ನು ಈವರೆಗೂ ಬಿಟ್ಟುಕೊಟ್ಟಿಲ್ಲ. ಸಿಮೆಂಟ್ ಮಾದರಿಯ ಆಗಿನ ಮಿಶ್ರಣ ಇವುಗಳ ಮಧ್ಯೆ ಇದೆಯಾದರೂ ಸುಲಭಕ್ಕೆ ಜಗ್ಗದ ಎರಡು ಶಿಲೆಗಳ ಮಧ್ಯೆ ಒಂದು ಜರುಗಿಸ ಲಾಗದ ಬಂಧವನ್ನೂ ಬಿಗಿಯಲಾಗಿದೆ ಎಂದು ಗೊತ್ತಾಗುವ ಹೊತ್ತಿಗೆ ಸರಿ ಸುಮಾರು 300 ವರ್ಷಗಳೇ ಕಳೆದಿದ್ದವು.

ಹಾಗಾಗಿ ಸಾಮಾನ್ಯವಾಗಿ ರಾಜಸ್ಥಾನ ಪ್ರವಾಸಕ್ಕೆ ತೆರಳುವ ಪ್ರವಾಸಿಗರನ್ನು ಅಲ್ಲಿಯ ಜನತೆ, ಚಿತ್ತೋರ್‌ಗಢ ನಂತರ ಅವಶ್ಯವಾಗಿ ಇದಕ್ಕೂ ಒಂದು ಇಶಾರೆ ತೋರಿಸುತ್ತಾರೆ. ಅದು ಕುಂಭಲ್‌ಗಢ. ಮಹಾರಾಜ ಕುಂಭ ನಿರ್ಮಿತ ಅಭೇದ್ಯ ಕೋಟೆಗಳ ಪೈಕಿ ಒಂದು. ಹೆಸರಿಗೆ ತಕ್ಕಂತೆ ‘ಹೆವಿ’ ಆಗಿರುವ ಮಹಾರಾಜ ಏನಾದರಾಗಲಿ ಮೊದಲು ರಾಜ್ಯ ಮತ್ತು ಅರಮನೆ, ತನ್ನ ಜನ ಸೇ-ಗಿರಬೇಕು ಎಂದು ಇದನ್ನು ಕಟ್ಟಿಸಿದ.

ತರುವಾಯದಲ್ಲಿ ನಿರಂತರ 300 ವರ್ಷ ಇದರ ಮೇಲೆ ದಾಳಿ ನಡೆದರೂ ಕೋಟೆ ಅಲುಗದ ಕಾರಣ, ಅಭೇದ್ಯವೆಂದೇ ಹೆಸರಾಯಿತು. ಇದನ್ನು ವಶಪಡಿಸಿಕೊಳ್ಳಲು ಆರಾರು ತಿಂಗಳು ಕಾಲ ಮರಾಮೋಸದ ದಾಳಿಗಳು ನಡೆದರೂ ಏನೂ
ಫಲಕಾರಿ ಯಾಗದ ಅಪರೂಪದ ಇತಿಹಾಸಕ್ಕೆ ಸಾಕ್ಷಿಯಾಯಿತು ಮಾತ್ರವಲ್ಲ, ಇದೇ ಕೋಟೆಯೊಳಗೆ ಇತಿಹಾಸದ
ಪ್ರಸಿದ್ಧ ಮತ್ತು ಭರ್ಜರಿ ರಾಜಕೀಯ ಪರ್ವಕ್ಕೆ ಕಾರಣನಾದ ಮೇವಾಡದ ರಾಣಾ ಪ್ರತಾಪನ ಜನ್ಮ ಕೂಡಾ ಜರುಗಿದ್ದರಿಂದ
ಇದು ಮೇವಾಡ್ ಜನಾಂಗದ ಹಿರಿಮೆಯಾಗಿ ದಾಖಲಾಯಿತು.

ಇವತ್ತು ಜಗತ್ತಿನ ಅತ್ಯಂತ ಬಲಿಷ್ಠ ಕೋಟೆಗಳ ಪೈಕಿ ಒಂದೆಂಬ ಹಿರಿಮೆಗೆ ಪಾತ್ರವಾಗಿರುವ ಇದರ ನಿರ್ಮಾಣಕ್ಕೆ ಹಿಡಿದಿದ್ದು ಅನಾಮತ್ತು ೧೫ ವರ್ಷಗಳು. ಅಲ್ಲಿಯವರೆಗೆ ಇದಕ್ಕೆ ಬದುಕು ಮುಡಿಪಿಟ್ಟು ದುಡಿದ ಕಾರ್ಮಿಕರ ಸಂಖ್ಯೆ ಆಗಿನ ಕಾಲಕ್ಕೆ ಒಂದೂವರೆ ಸಾವಿರ (ಆಗೆಲ್ಲ ಎಷ್ಟೋ ಕಡೆಯಲ್ಲಿ ರಾಜರೆಂದರೆ ಇರುತ್ತಿದ್ದುದೇ ಒಂದು-ಒಂದೂವರೆ ಸಾವಿರ ಸೈನಿಕರು. ನಮ್ಮ ಹೆಮ್ಮೆಯ ಮಯೂರ ವರ್ಮ ಕಟ್ಟಿದ ಸೈನ್ಯದಲ್ಲಿದ್ದ ಜನರ ಸಂಖ್ಯೆ ಮೊದಮೊದಲಿಗೆ ಮುನ್ನೂರು ದಾಟಿರಲಿಲ್ಲವಂತೆ).

ಈ ಕೋಟೆಯನ್ನು ಸರಿಯಾಗಿ ನೋಡಲು 2-3 ದಿನವಾದರೂ ಬೇಕು. ಕಾರಣ 39 ಕಿ.ಮೀ. ಸುತ್ತಳತೆಯ ಈ ಕೋಟೆಯ ಗೋಡೆಯ ಅಗಲವೇ ೧೫ ಅಡಿಗಳು. ಬುಡದ ಸುತ್ತಳತೆ ೩೦ ಅಡಿಗೂ ಮಿಗಿಲು. ೬೬೨ ಎಕರೆ ವಿಸ್ತೀರ್ಣ. ಈ ಕೋಟೆ ಅರಾವಳಿ ಪರ್ವತಶ್ರೇಣಿಯ ಆಯಕಟ್ಟಿನ ಜಾಗದಲ್ಲಿದ್ದು, ರಾಜಸಮಂದ್ ಜಿಲ್ಲೆಗೆ ಸೇರುತ್ತದೆ. ಜಿಲ್ಲಾ ಕೇಂದ್ರದಿಂದ ೪೮ ಕಿ.ಮೀ., ಉದಯಪುರದಿಂದ ಸುಮಾರು ೯೦ ಕಿ.ಮೀ. ದೂರದಲ್ಲಿರುವ ಈ ಕೋಟೆ, ಜೈಸಲ್ಮೇರ್‌ಕ್ಕೆ ಪ್ರವಾಸ ಹೊರಡುವ ಮುನ್ನ ಬೇಡವೆಂದರೂ ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ಉದಯಪುರದಿಂದ ಹೊರಡುವ ಯಾವುದೇ ಪ್ರವಾಸಿ ಮಾರ್ಗದರ್ಶಿಗಳು ಇದನ್ನು ಬಿಟ್ಟು ಮುಂದಕ್ಕೆ ಹೋಗಲಾರರು.

ರಾಣಾಕುಂಭನ ಕಾಲಾವಽಯ ಮೇರೆಗೆ ಇದು ೧೫ನೇ ಶತಮಾನದ್ದು ಎನ್ನಲಾಗುತ್ತದೆ. ಆಗ ಮೂಲತಃ ಇಲ್ಲೊಂದು
ಮೇಲ್ಮುಖವಾದ ಚಿಕ್ಕಕೋಟೆ ಇದ್ದು ಅದರಲ್ಲಿ ಹೆಚ್ಚೆಂದರೆ ೧,೦೦೦ ಜನ ಆಶ್ರಯ ಪಡೆಯಬಹುದಾಗಿತ್ತು. ಅದನ್ನು
ಮತ್ಸ್ಯೇಂದ್ರ ದುರ್ಗ ಎನ್ನುತ್ತಿದ್ದರು. ರಾಣಾಕುಂಭನಿಗೂ ಮೊದಲು ಆಡಳಿತ ನಡೆಸುತ್ತಿದ್ದ ರಾಣಾಲಾಖಾ ಇಲ್ಲಿ ವಸಾಹತು ಸ್ಥಾಪಿಸಿಕೊಂಡಿದ್ದರೆ, ಅದಕ್ಕಾಗಿ ಚೌಹಾನ್‌ರು, ರಜಪೂತರು, ಮೇವಾಡ್ ಕೈವಶ ಮಾಡಿಕೊಂಡ ಬಗ್ಗೆ ಐತಿಹ್ಯಗಳಿವೆ. ಅಲ್ಲಿಗೆ ಅರಾವಳಯಲ್ಲಿ ಮುಗಿಯದ ಈ ಸಾಮ್ರಾಜ್ಯದ ವಿಸ್ತಾರಕ್ಕೆ ಮತ್ಸ್ಯೇಂದ್ರದುರ್ಗ ಕಮ್ಮಿ ಬೀಳತೊಡಗಿತು.

ಇತ್ತ ಮಹತ್ವಾಕಾಂಕ್ಷಿ ರಾಜ ರಾಣಾಕುಂಭ ಬಲಾಢ್ಯನೂ, ಸಾಮ್ರಾಜ್ಯ ವಿಸ್ತಾರ ವ್ಯಾಮೋಹಿಯೂ ಆಗಿದ್ದಕ್ಕೆ ತಕ್ಕಂತೆ ಸಾಲುಸಾಲು ರಾಜ್ಯಗಳನ್ನು ಗೆಲ್ಲುತ್ತಿದ್ದರೆ ಅವರ ಅರಾವಳಿ ಪರ್ವತದ ನೆತ್ತಿಗೆ ಬರುವವರ ಸಂಖ್ಯೆ ಒಂದೇ ಸಮನೆ ಏರತೊಡಗಿತ್ತಲ್ಲ, ರಕ್ಷಣಾ ವ್ಯವಸ್ಥೆ ಯಾವುದಕ್ಕೂ ಸಾಲದಾಯಿತು. ಆಗ ಅವನಿಗೆ ಹೊಳೆದಿದ್ದೇ ಎಲ್ಲ ಒಳಗಡೆಯೇ ಸುರಕ್ಷಿತ ವಾಗಿರುವ ಒಂದು ಬಲಾಢ್ಯ ಕೋಟೆಯ ನಿರ್ಮಾಣ, ಮತ್ಸ್ಯೇಂದ್ರ ದುರ್ಗದ ಬದಲಿಗೆ ಮತ್ತೊಂದು ಆವರಣ.

ನದಿ, ದೇವಸ್ಥಾನ, ಜನ-ಜಾನುವಾರು, ಸರಕು, ಬೇಸಾಯ, ಸರೋವರ ಹೀಗೆ ಏನುಂಟು ಏನಿಲ್ಲ, ಎಲ್ಲವನ್ನೂ ಒಂದು ಕೈಯಳತೆಯ ನಿಗಾದಲ್ಲಿರುವಂತೆ ರಾಜ್ಯಭಾರ ಸುಗಮ ಮಾಡಿಕೊಳ್ಳಲು ಯೋಚಿಸಿದಾಗ ರಚನೆಯಾದದ್ದೇ ಕುಂಭಲ್‌ಗಢ. ಮೂಲತಃ ಮೇವಾಡ ಮನೆತನ ಎಂದೇ ಕರೆಸಿಕೊಳ್ಳುವ ರಜಪೂತ ಕುಲದ ರಾಣಾಕುಂಭ ಇದಕ್ಕಾಗಿ ಆಗಿನ ಖ್ಯಾತ ಸ್ಥಪತಿ ಮಂದನ್‌ನನ್ನು ನಿಯಮಿಸಿ ಜನರನ್ನು ಕಲೆಹಾಕಲು ಸೂಚಿಸಿದ. ದೊಡ್ಡ ಯೋಜನೆಯ ಭಾರ ಹೊತ್ತ ಮಂದನ್ ತನ್ನ ಮೇಸಿಗಳನ್ನೆಲ್ಲ ಒಗ್ಗೂಡಿಸಿದ್ದಲ್ಲದೆ ಸರಿಸುಮಾರು ೧,೦೦೦ಕ್ಕೂ ಹೆಚ್ಚಿನ ಕಾರ್ಮಿಕರ ದಂಡು ಕಟ್ಟಿಕೊಂಡು ಕಾರ್ಯರೂಪಕ್ಕೆ ತರಲು ಶ್ರಮಿಸಿದ. ಆಗಿನ ಕಾಲದ ವಿಖ್ಯಾತ ಕಠಿಣ ಶಿಲಾಸಮೂಹದಿಂದ ಆಯ್ದ ಭಾರಿ ಬಂಡೆಗಳಿಂದ ಬುನಾದಿ ಎಬ್ಬಿಸಿದ.

ಬರುಬರುತ್ತ ಕುಂಭಲ್‌ಗಢ ಚಹರೆಯೇ ಬದಲಾಯಿತು. ಮೊದಲು ರಾಜಮನೆತನ ಮತ್ತು ಸೈನ್ಯಕ್ಕಷ್ಟೇ ಮೀಸಲಾಗಿದ್ದ
ಕೋಟೆಯನ್ನು ಜನಸಾಮಾನ್ಯರ ರಕ್ಷಣೆ ಮತ್ತು ಜೀವನಕ್ಕೂ ವಿಸ್ತರಿಸಿದ ಕಾರಣ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ
ಹೋಯಿತು. ಮೂಲತಃ ಆರಂಭದ ವೃತ್ತದ ಕೋಟೆಗೋಡೆ ಕ್ರಮೇಣ ಒಂದೊಂದಾಗಿ ಜನವಸತಿ ಪ್ರದೇಶವನ್ನು ಒಳಗೊಳ್ಳುವ ನಕ್ಷೆಯಾಗಿ ಬದಲಾಗಿ, ಮುಕ್ತಾಯದ ಹಂತಕ್ಕೆ ಬಂದಾಗ ಪರಿಽ ೩೯ ಕಿ.ಮೀ.ನಷ್ಟು ದೊಡ್ಡದಾಗಿತ್ತು.

ಅದರೊಳಗೆ ಇತ್ತ ಮಂದನ್ ರಕ್ಷಣಾ ಗೋಡೆಯ ಉಸ್ತುವಾರಿ ವಹಿಸಿಕೊಂಡು ಶ್ರಮಿಸುತ್ತಿದರೆ, ಒಳಗಿದ್ದ ಶಿಲ್ಪಿಗಳು ರಾಣಾನ
ಅಪೇಕ್ಷೆಯಂತೆ ಹಲವು ದೇವಸ್ಥಾನ ರಚನೆಗೆ ಮುಂದಾಗಿದ್ದರು. ಪ್ರತಿ ಊರಿನ ದೇವಸ್ಥಾನಗಳಿಗೂ ಪ್ರಾಶಸ್ತ್ಯ ನೀಡಿದ ಪರಿಣಾಮ ದೊಡ್ಡದು-ಸಣ್ಣದು ಸೇರಿ ಸುಮಾರು ೩೦೦ ದೇವಸ್ಥಾನಗಳ ಸಮುಚ್ಚಯವೇ ಇಲ್ಲಿದೆ. ಸುಮಾರು ೭ ಕಡೆ ಪ್ರವೇಶದ್ವಾರಗಳನ್ನು ನಿರ್ಮಿಸಲಾಗಿದ್ದು ಯಾವ ಯುದ್ಧ/ದಾಳಿಯಲ್ಲೂ ಅವನ್ನು ಶತ್ರುಗಳಿಗೆ ತೆರೆಯಲಾಗಿಲ್ಲ ಎಂಬುದು ವಿಶೇಷ. ರಾಮ್ ಪೊಲ್, ಹನುಮಾನ್ ಪೊಲ್, ಭೈರನ್ ಪೊಲ್, ನಿಂಬೂ ಪೊಲ್, ವಿಜಯ್ ಪೊಲ್ ಹೀಗೆ ಆಯಾ ದ್ವಾರಗಳಿಗೆ ವಿಭಿನ್ನ ಹೆಸರಿವೆ. ನೀಲಕಂಠ ಮಹಾದೇವ ದೇವಾಲಯ ಮೊದಲು ನಿರ್ಮಾಣವಾಯಿತು.

ನಂತರ ಜೈನ ದೇವಾಲಯಗಳು, ಈಶ್ವರನ ಹಲವು ದೇವಸ್ಥಾನಗಳು ನಿರ್ಮಾಣವಾಗಿ ಒಳಗೆ ೩೦೦ ದೇವಾಲಯಗಳಿದ್ದ ಬಗ್ಗೆ ಐಹಿಹ್ಯಗಳಿದ್ದು ಈಗ ೮೦ಕ್ಕೂ ಹೆಚ್ಚು ಅತ್ಯುತ್ತಮ ಸ್ಥಿತಿಯಲ್ಲಿವೆ. ಶತಮಾನಗಳು ಉರುಳಿದ್ದರೂ ಶಿಲೆಗಳು ಮಕ್ಕಾಗಿಲ್ಲ.
ಸಂಪೂರ್ಣ ಕೋಟೆಯ ದರ್ಶನ ಬೇಕೆಂದರೆ ನೀವು ರಾಮ್ ಪೊಲ್ ದ್ವಾರವನ್ನು ಏರಬೇಕು. ಅದರ ಮೇಲಿನ ಶಿಖರ ತುದಿ
ಯಿಂದ ಕುಂಭಲ್‌ಗಡದ ಸಂಪೂರ್ಣ ಚಿತ್ರಣ ಸಿಗುತ್ತದೆ.

ಹೆಚ್ಚಿನ ನಿರ್ಮಾಣಗಳು ಈಗಲೂ ಸುಸ್ಥಿತಿಯಲ್ಲಿವೆ- ಬಳಸಲಾದ ಬಂಡೆಗಳ ಗುಣಮಟ್ಟ ಮತ್ತು ಸಡಿಲಾಗದ ಪುರಾತನ
ಬಂಧದ ತಾಂತ್ರಿಕತೆಯೇ ಇದಕ್ಕೆ ಕಾರಣ. ಮೊಘಲರ ದಾಳಿ ಆರಂಭವಾಗುತ್ತಿದ್ದಂತೆ ಮೊದಲಿಗೆ ದೆಹಲಿಯ ಅಹಮದ್ ಶಾ ಇದರ ಮೇಲೆ ಅಕ್ರಮಣಕ್ಕೆ ಕರೆಯಿತ್ತು ಕೋಟೆಯ ೭ ದ್ವಾರಗಳ ಪ್ಪೈಕಿ ಮೂರನ್ನು ಆಕ್ರಮಿಸಿದ. ನಿರಂತರವಾಗಿ ಸೈನಿಕರನ್ನು ಮುಂದೆ ಬಿಟ್ಟು ಕೋಟೆ ಗೋಡೆ ಏರಲು, ಬಾಗಿಲು ತೆರೆದು ದಾಳಿಮಾಡಲು ಯತ್ನಿಸಿದ.

ಆದರೆ ತಿಂಗಳಾನುಗಟ್ಟಲೆ ಯತ್ನಿಸಿದರೂ ಕುಂಭಲ್‌ಗಢ ಗಢವನಂತೆ ನಿಂತೇ ಇತ್ತು. ತರುವಾಯದಲ್ಲಿ ಮಹಮ್ಮದ್
ದಾಳಿ ಮಾಡಿ ಕೋಟೆ ವಶಪಡಿಸಿಕೊಳ್ಳಲು ನೋಡಿದರೂ ೨ ಬಾರಿ ವಿ-ಲನಾಗಿ ಯೋಜನೆ ಕೈಬಿಟ್ಟ. ಕುಂಭಲ್‌ಗಢ ಕೈಗೆಟುಕುತ್ತಿಲ್ಲ ಎಂಬ ಸುದ್ದಿ ಅಕ್ಬರ್ ವರೆಗೂ ತಲುಪಿ ಅವನ ಸೇನಾಪತಿ ಶಾಬಾಜ್ ಖಾನ್ ಸ್ವತಃ ರಂಗಕ್ಕಿಳಿದಿದ್ದ. ಆತ ಸತತ ೬ ತಿಂಗಳು ಮುತ್ತಿಗೆ ಹಾಕಿ ಎಲ್ಲ ಸಂಪರ್ಕ ಕತ್ತರಿಸಿದ ಪರಿಣಾಮ, ಕುಂಭಲ್‌ಗಢ ಕೋಟೆ ಅವನ ವಶವಾಯಿತು. ಶಾಬಾಜ್ ಖಾನನಿಗೆ ಆದರೆ ಆ ಭಾಗ್ಯ ತುಂಬ ದಿನ ಇರಲಿಲ್ಲ. ಆರೇ ತಿಂಗಳಲ್ಲಿ ರಾಣಾಪ್ರತಾಪ ಕುಂಭಲ್‌ಗಢವನ್ನು ಮರುವಶ
ಮಾಡಿಕೊಂಡು ಮೇವಾಡ್ ಧ್ವಜವನ್ನು ಊರಿದ್ದ. ನಿರಂತರ ಇಂಥ ದಾಳಿ ಎದುರಿಸಲೆಂದು ಸದಾ ಸಿದ್ಧವಿರುವ ಪಡೆಯನ್ನೇ ಶಾಶ್ವತವಾಗಿಡಲು ಸಂನ್ಯಾಸಿಗಳ ಸೈನ್ಯವನ್ನು ಮೊದಲಿಗೆ ತಯಾರುಮಾಡಿದ ಖ್ಯಾತಿ ರಾಣಾನದ್ದು.

ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೂ ಸೇರಿದ ಪರಿಣಾಮವಾಗಿ ಸುರಕ್ಷತೆ ಮತ್ತು ನಿರ್ವಹಣೆಯ ದೃಷ್ಟಿಯಿಂದ
ಸುಸ್ಥಿತಿಯಲ್ಲಿರುವ ಕುಂಭಲ್‌ಗಢ, ಇತ್ತೀಚಿನ ದಿನಗಳಲ್ಲಿ ಕುಂಭೋತ್ಸವದ ಮೂಲಕ ಹೆಸರು ಮಾಡುತ್ತಿದೆ. ಈ ಸಂದರ್ಭದಲ್ಲಿ ಇಲ್ಲಿ ೩ ದಿನಗಳ ಭಾರಿ ಸಂಭ್ರಮದ ಜಾತ್ರೆ ನಡೆಯುತ್ತದೆ, ವಿಖ್ಯಾತ ೭ ಕೋಟೆಗಳ ವಿಶೇಷ ದರ್ಶನ ಪ್ಯಾಕೇಜ್‌ನ ವ್ಯವಸ್ಥೆ ಇರುತ್ತದೆ. ಅಂಬರ್ ಪೋರ್ಟ್, ಚಿತ್ತೋರ್ ಗಢ, ಗಗ್ರೋನ ಪೋರ್ಟ್, ಜೈಸಲ್ಮೇರ್, ರಣಥಂಬೋರ್ ಕೋಟೆಗಳ ಸರಣಿ ಪ್ರವಾಸ ಈ ಹೊತ್ತಿನಲ್ಲಿ ಅಗ್ಗ ಮತ್ತು ಸಲೀಸು. ಅಲೆಮಾರಿಯಾಗಿ ಒಮ್ಮೆ ತಿರುಗಿಬಿಡಿ, ಅಪರೂಪದ ಇತಿಹಾಸ ನಿಮ್ಮ ಕೈ ಸೇರದಿದ್ದರೆ ಕೇಳಿ…