Sunday, 29th January 2023

ಬೇತೂರಿನಲ್ಲಿ ಮಾ.26, 27ರಂದು 11ನೇ ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ: ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.26 ಮತ್ತು 27ರಂದು ಬೇತೂರಿನಲ್ಲಿ ನಡೆಸಲು ನಿರ್ಧರಿಸ ಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜಿ.ಎಸ್‌. ಸುಶೀಲಾದೇವಿ ಆರ್‌. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಾರ್ಚ್‌ ಅಂತ್ಯದ ಒಳಗೆ ಈ ಬಾರಿಯ ಜಿಲ್ಲಾ ಸಮ್ಮೇಳನಗಳನ್ನು ಮುಗಿಸಬೇಕು ಎಂದು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಸೂಚನೆ ನೀಡಲಾಗಿದೆ.

ಜಿಲ್ಲೆಯ ಹಿರಿಯ ಮಹಿಳಾ ಸಾಹಿತಿ, ಲೇಖಕಿ, ಕಾದಂಬರಿಗಾರ್ತಿ, ಕಥೆಗಾರ್ತಿ ಜಿ.ಎಸ್. ಸುಶೀಲಾದೇವಿ ಆರ್.ರಾವ್ ಅವರನ್ನು ಸರ್ವಾನುಮತದಿಂದ ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆ ಮಾಡಿದರು.

ಸಮ್ಮೇಳನದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಪ್ರಕಟಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ‌‍ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಅವರ ಗೌರವ ಸಂಪಾದಕತ್ವದಲ್ಲಿ ಸ್ಮರಣ ಸಂಚಿಕೆ ಹೊರತರಲು ತೀರ್ಮಾನಿಸಲಾಯಿತು.

ಸಂಪಾದಕರಾಗಿ ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ, ಸಹ ಸಂಪಾದಕರಾಗಿ ಶಿಕ್ಷಕ ಜಗದೀಶ್ ಸಿ.ಜಿ. ಕೂಲಂಬಿ, ಸಂಪಾದಕ ಮಂಡಳಿ ಸದಸ್ಯರಾಗಿ ಬಾ.ಮ. ಬಸವರಾಜಯ್ಯ, ಕೆ.  ರಾಘವೇಂದ್ರ ನಾಯರಿ, ಸುಮತಿ ಜಯಪ್ಪ, ಎಸ್.ಎಂ. ಮಲ್ಲಮ್ಮ, ಜ್ಯೋತಿ ಎನ್.ಉಪಾ ಧ್ಯಾಯ, ರುದ್ರಾಕ್ಷಿ ಬಾಯಿ ಪುಟ್ಟಾನಾಯ್ಕ್ ಮತ್ತು ವೀಣಾ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ದಿನ ನಡೆಯುವ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ ತಂಡಗಳ ಆಯೋಜ ನೆಯ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರಿಗೆ ವಹಿಸಲಾಯಿತು.

ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಡಾ.ಎಚ್.ಎಸ್. ಮಂಜುನಾಥ್ ಕುರ್ಕಿ, ಎ.ಆರ್. ಉಜ್ಜನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ವಾರ್ತಾಧಿಕಾರಿ ಡಿ.ಅಶೋಕ ಕುಮಾರ್, ಗೌರವ ಕಾರ್ಯದರ್ಶಿಗಳಾದ ಬಿ.ದಿಳ್ಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಗೌರವ ಕೋಶಾಧ್ಯಕ್ಷ ಕೆ‌.ರಾಘವೇಂದ್ರ ನಾಯರಿ, ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಎಲ್‌.ಜಿ. ಮಧುಕುಮಾರ್, ಡಿ.ಎಂ. ಮಂಜುನಾಥಯ್ಯ, ಮುರಿಗೆಪ್ಪ ಗೌಡ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಎಂ. ಮಲ್ಲಮ್ಮ, ಜ್ಯೋತಿ ಎನ್‌.ಉಪಾಧ್ಯಾಯ, ರುದ್ರಾಕ್ಷಿ ಬಾಯಿ ಪುಟ್ಟಾನಾಯ್ಕ್, ಎನ್‌.ಎಸ್.ರಾಜು ಅವರೂ ಇದ್ದರು.

error: Content is protected !!