ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bengaluru News: ಬೆಂಗಳೂರಿನಲ್ಲಿ ಆಟವಾಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಮಗು; ಆಘಾತಕಾರಿ ವಿಡಿಯೋ ಇಲ್ಲಿದೆ!

ಬೆಂಗಳೂರು ನಗರದ ನಾಯಂಡಹಳ್ಳಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ನವೀನ್ ಮತ್ತು ಜಯಶ್ರೀ ದಂಪತಿಯ ಒಂದೂವರೆ ವರ್ಷದ ಪುತ್ರಿ ಸಹನಾ ಆಟವಾಡುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಸದ್ಯ ಮಗುವಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಆಟವಾಡುವಾಗ 3ನೇ ಮಹಡಿಯಿಂದ ಕೆಳಗೆ ಬಿದ್ದ ಮಗು!

ಗಾಯಾಳು ಮಗು ಸಹನಾ. -

Prabhakara R
Prabhakara R Apr 9, 2026 4:48 PM

ಬೆಂಗಳೂರು: ಒಂದೂವರೆ ವರ್ಷ ಮಗು ಆಟವಾಡುತ್ತಾ 3ನೇ ಮಹಡಿಯಿಂದ ಕೆಳಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದು ನಗರದ (Bengaluru News) ನಾಯಂಡಹಳ್ಳಿಯಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನವೀನ್ ಮತ್ತು ಜಯಶ್ರೀ ದಂಪತಿಯ ಒಂದೂವರೆ ವರ್ಷದ ಪುತ್ರಿ ಸಹನಾ, ಆಟವಾಡುತ್ತಾ ಮನೆಯ ಮುಖ್ಯ ಬಾಗಿಲಿನಿಂದ ಹೊರಬಂದು ಮಹಡಿಯಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದಾಳೆ. ಏಪ್ರಿಲ್ 6 ರಂದು ಈ ಘಟನೆ ನಡೆದಿದೆ. ಮಗು ಕೆಳಕ್ಕೆ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಗಾಯಗಳಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ. ಮಗು ಬಿದ್ದಿದ್ದನ್ನು ಕಂಡ ತಾಯಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದದ್ದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ.



ಘಟನೆ ಹೇಗೆ ನಡೆಯಿತು?

ನನ್ನ ಪತ್ನಿ ಹಾಲು ಕಾಯಿಸಲು ಒಲೆಯ ಮೇಲೆ ಇಟ್ಟಿದ್ದರು. ಹಾಲಿನ ಉರಿ ಕಡಿಮೆ ಮಾಡಲು ಅಡುಗೆ ಮನೆಗೆ ಹೋದ ಕ್ಷಣದಲ್ಲಿ ಸಹನಾ ಹೊರಗೆ ಬಂದಿದ್ದಾಳೆ. ವರಾಂಡದಲ್ಲಿದ್ದ ಕುರ್ಚಿಯ ಮೇಲೆ ಆಟವಾಡುತ್ತಾ ಹತ್ತಿದಾಗ, ಸಮತೋಲನ ತಪ್ಪಿ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ ಎಂದು ಮಗುವಿನ ತಂದೆ ನವೀನ್‌ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಮಗು ಮಹಡಿಯಿಂದ ಕೆಳಗೆ ಬಿದ್ದದ್ದನ್ನು ತಾಯಿ ಜಯಶ್ರೀ ಅವರು ತೀವ್ರ ಆಘಾತದಿಂದ ರಸ್ತೆಯಲ್ಲೇ ಮೂರ್ಛೆ ಹೋಗಿದ್ದರು. ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ದಂಪತಿಗೆ ಸಹಾನಾ ಒಬ್ಬಳೇ ಮಗಳು. ಸಹನಾಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಸವನಗುಡಿಯ ರಂಗದೊರೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೆಡಿಮೇಡ್‌ ದೋಸೆ ಹಿಟ್ಟು ತಿಂದು ಇಬ್ಬರು ಮಕ್ಕಳು ಸಾವು; ಪೋಷಕರ ಸ್ಥಿತಿ ಚಿಂತಾಜನಕ!

ಮಗು ತಲೆಗೆ ಗಾಯವಾಗಿದೆ, ಆದರೆ ಅದೃಷ್ಟವಶಾತ್ ದೇಹದ ಇತರ ಭಾಗಗಳಿಗೆ ಯಾವುದೇ ತೊಂದರೆಯಾಗಿಲ್ಲ. ತಲೆಗೆ ಮೂರು ಹೊಲಿಗೆ ಹಾಕಲಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ. ಇದೊಂದು ಆಕಸ್ಮಿಕ ಘಟನೆ, ಇದರಲ್ಲಿ ಯಾರ ತಪ್ಪೂ ಇಲ್ಲ. ಮಗು ಮತ್ತು ಪತ್ನಿ ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಗುವಿನ ತಂದೆ ನವೀನ್‌ ಹೇಳಿದ್ದಾರೆ.