ಬೆಂಗಳೂರು: ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ (Digital Arrest) ಮಾಡಿ ಸೈಬರ್ ವಂಚಕರು ವೃದ್ಧೆ ಬಳಿ 24 ಕೋಟಿ ರೂ. ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಾಜಿನಗರ ನಿವಾಸಿಯಾಗಿರುವ ವೃದ್ಧೆ ಲಕ್ಷ್ಮೀ ರಾಮಮೂರ್ತಿಗೆ (Cyber Crime) ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಆಸ್ತಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇವರೆಗೆ ಮನಿ ಲಾಂಡರಿಂಗ್ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ.
24 ಕೋಟಿ ಕೊಟ್ಟರೂ ಇನ್ನೂ ಹಣ ಕೊಡಬೇಕು ಎಂದು ವಂಚಕರು ತಾಕೀತು ಮಾಡಿಕೊಂಡಿದ್ದರು. ಹೀಗಾಗಿ ವೃದ್ಧೆ ಮನೆಯಲ್ಲಿದ್ದ 1.30 ಕೆಜಿ ಚಿನ್ನದ ಒಡೆವೆ ಅಡ ಇಡಲು ಬ್ಯಾಂಕ್‌ಗೆ ಬಂದಿದ್ದರು. ಅಡ ಇಟ್ಟು ಹಣವನ್ನ ವಂಚಕರಿಗೆ ನೀಡಲು ಬಂದಿದ್ದರು. ಇದನ್ನು ಗಮನಿಸಿದ್ದ ಕಂಟೋನ್ಮೆಂಟ್ ಬ್ರಾಂಚ್ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬ್ಯಾಂಕ್‌ಗೆ ತೆರಳಿದ್ದ ಸಿಸಿಬಿ ಸೈಬರ್ ಪೊಲೀಸರ ತಂಡ ಬ್ಯಾಂಕ್‌ನಲ್ಲಿ ವೃದ್ಧೆ ಲಕ್ಷ್ಮೀ ರಾಮಮೂರ್ತಿಯನ್ನು ವಿಚಾರಿಸಿದ್ದಾರೆ. ಆಗಲೂ ವೃದ್ಧೆ ಘಟನೆ ಬಗ್ಗೆ ಹೇಳಿರಲಿಲ್ಲ. ಕೊನೆಗೂ ವಿಚಾರಿಸಿದಾಗ ಬಾಯಿ ಬಿಟ್ಟಿದ್ದಾರೆ.
ಬಳಿಕ ನೊಂದ ವೃದ್ದೆಯಿಂದ ದೂರು ಪಡೆದು ಕೇಸ್ ದಾಖಲಿಸಿದ್ದ ಸಿಸಿಬಿ ಸೈಬರ್ ಪೊಲೀಸರು ವಿದೇಶದಲ್ಲಿರುವ ವೃದ್ಧೆ ಮಕ್ಕಳಿಗೆ ಡಿಜಿಟಲ್ ಅರೆಸ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈ, ಅಲಹಬಾದ್, ದೆಹಲಿ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಗೌರವ್ ಕುಮಾರ್, ಓಂ ಪ್ರಕಾಶ್ ರಾಜಪೂತ್ ಸೇರಿದಂತೆ ಐದು ಮಂದಿಯನ್ನು ಸೈಬರ್ ಪೊಲೀಸರು ಅರೆಸ್ಟ್ ಮಾಡಿ ತನಿಖೆ ಮುಂದುವರೆಸಿದ್ದಾರೆ. ಸೈಬರ್ ಖದೀಮರು 22 ಅಕೌಂಟ್‌ಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದುವರೆಗೂ 60 ಲಕ್ಷ ಹಣ ಇರುವ ಬ್ಯಾಂಕ್ ಅಕೌಂಟ್ ಸೀಜ್ ಮಾಡಲಾಗಿದೆ.
ದೂರು ಸಲ್ಲಿಕೆ ಹೇಗೆ?
ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಗೃಹ ಸಚಿವಾಲಯದ ಎನ್.ಸಿ.ಆರ್.ಪಿನಲ್ಲಿ ದೂರುಗಳನ್ನು ದಾಖಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ದೂರುಗಳನ್ನು ದಾಖಲಿಸಿದ ನಂತರ ಈ ಪೋರ್ಟಲ್ ಮುಖಾಂತರ ಪಡೆದುಕೊಂಡು ತನಿಖೆಯನ್ನು ಕೈಗೊಂಡಿರುತ್ತದೆ.
ಸೈಬರ್ ಅಪರಾಧ ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಾದ ನ್ಯಾಯಾಲಯವನ್ನು ಸೃಜನೆ ಮಾಡಲಾಗಿರುತ್ತದೆ. ಪ್ರತಿ ಸೈಬರ್ ಠಾಣೆಯಲ್ಲಿ ಸೈಬರ್ ಕ್ರೈಂ ಗೆ ಸಂಬಂಧಿಸಿದಂತೆ ಪ್ರಕರಣಗಳ ತನಿಖೆಯಯನ್ನು ಕೈಗೊಳ್ಳಲು ಪೊಲೀಸ್ ಇನ್ಸಪೆಕ್ಟರ್ ಹುದ್ದೆಯನ್ನು ಡಿವೈಎಸ್ಪಿ/ಎಸಿಪಿ ಹುದ್ದೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ಅಪರಾಧ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಪತ್ತೆಹಚ್ಚುವ ಸಂಬಂಧ ಸೈಬರ್ ಕಮಾಂಡರ್ ಯೂನಿಟ್ ರಚನೆಯಾಗಿರುತ್ತದೆ. ಬ್ಯಾಂಕ್‌ಗಳ ನೋಡಲ್ ಅಧಿಕಾರಿಗಳಿಗೆ ಮಾಸಿಕ ಸಭೆಗಳನ್ನು ತೆಗದುಕೊಂಡು ಸೈಬರ್ ಪ್ರಕರಣಗಳಲ್ಲಿ ಭಾಗಿಯಾಗುವ ಖಾತೆಗಳ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿರುತ್ತದೆ. ಡಿಜಿಟಲ್ ಅರೆಸ್ಟ್ ಮತ್ತು ಸೈಬರ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಐಟಿ ಕಾಯ್ದೆ ಹಾಗೂ BNSನ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುತ್ತಿದೆ.