ಬೆಂಗಳೂರು, ಮೇ 27: ಕಲೆ, ಸಂಸ್ಕೃತಿ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಕಲಾ ಪ್ರದರ್ಶನಗಳ ಮೂಲಕ ಅನ್ವೇಷಿಸುವ ನಿಟ್ಟಿನಲ್ಲಿ 'ಪರಮ್ ಕಲ್ಚರ್' ವತಿಯಿಂದ ಮತ್ತೊಂದು ನವೀನ ಕಾರ್ಯಕ್ರಮ ಆಯೋಜಿಸಲಾಗಿದೆ ಸಾರ್ವಜನಿಕ ವೇದಿಕೆಯ ಸರಣಿ ಕಾರ್ಯಕ್ರಮಗಳ ಭಾಗವಾಗಿ 'ಕಲಾ ಸಂವಾದ 05' ಕಾರ್ಯಕ್ರಮವು ಮೇ 31ರಂದು ಭಾನುವಾರ ಸಂಜೆ ಬೆಂಗಳೂರಿನ 'ಮೀನಾಕ್ಷಿ ರಂಗಮಂಚ' ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಈ ಬಾರಿಯ ಸಂವಾದವು ʼಶಾಸ್ತ್ರದಿಂದ ಪ್ರಯೋಗ: ನಡುವಿನ ಸೃಜನಾತ್ಮಕ ಸೇತುʼ (Shastra to Prayoga : The space in between) ಎಂಬ ವಿಶಿಷ್ಟ ವಿಷಯದ ಅಡಿಯಲ್ಲಿ ಮೂಡಿಬರಲಿದ್ದು, ಶಾಸ್ತ್ರೀಯ ನೃತ್ಯವನ್ನು ಕೇವಲ ಪ್ರದರ್ಶನವಾಗಿ ಮಾತ್ರವಲ್ಲದೆ ಕಥಾವಾಚನ ಮತ್ತು ಸಾಂಸ್ಕೃತಿಕ ಆವಿಷ್ಕಾರದ ಪ್ರಭಾವಿ ಮಾಧ್ಯಮವಾಗಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲಿದೆ.
ನೃತ್ಯ ರೂಪಕಗಳ ಸೃಷ್ಟಿಯ ಒಳನೋಟ
ವಿಶ್ವದಾದ್ಯಂತ ಅಪಾರ ಪ್ರಶಂಸೆ ಗಳಿಸಿರುವ 'ಭಾಣಿಕಾ', 'ಅಭಿಮನ್ಯು' ಮತ್ತು 'ಶಕುಂತಲಾ'ದಂತಹ ಬೃಹತ್ ನೃತ್ಯ ರೂಪಕಗಳ (Large-scale Dance Musicals) ಸೃಷ್ಟಿಯ ಹಿಂದಿರುವ ಕಥೆ, ಚಿತ್ರಕಥೆ, ಸಂಗೀತ, ನೃತ್ಯ ಸಂಯೋಜನೆ, ವೇಷಭೂಷಣ, ರಂಗವಿನ್ಯಾಸ, ಬೆಳಕು ಹಾಗೂ ಧ್ವನಿ ಸಂಯೋಜನೆಯ ರೋಚಕ ಜಗತ್ತನ್ನು ಕಲಾಪ್ರೇಮಿಗಳಿಗೆ ಹತ್ತಿರದಿಂದ ಪರಿಚಯಿಸುವುದು ಈ ಸಂವಾದದ ಮುಖ್ಯ ಉದ್ದೇಶವಾಗಿದೆ.
ವೇದಿಕೆಯಲ್ಲಿ ದಿಗ್ಗಜರ ಮುಖಾಮುಖಿ
ಪ್ರಸಿದ್ಧ ಕಲಾ ದಂಪತಿಗಳಾದ ನಿರುಪಮಾ ರಾಜೇಂದ್ರ ಮತ್ತು ಟಿ.ಡಿ. ರಾಜೇಂದ್ರ ಅವರೊಂದಿಗೆ ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್, ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಗಂಭೀರ ಚಿಂತನ-ಮಂಥನವನ್ನು ಖ್ಯಾತ ನಟ ಹಾಗೂ ರಂಗಕರ್ಮಿ ಪ್ರಕಾಶ್ ಬೆಳವಾಡಿ ನಿರ್ವಹಣೆ ಮಾಡಲಿದ್ದಾರೆ. ಈ ದಿಗ್ಗಜರು ತಮ್ಮ ಕಲಾತ್ಮಕ ಪ್ರಯಾಣದ ಸವಾಲುಗಳು ಮತ್ತು ಕಲಾ ಸೃಷ್ಟಿಯ ಸೌರಭಗಳ ಬಗ್ಗೆ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ.
18 ವರ್ಷ ಪೂರೈಸಿದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಂಚೆ ಇಲಾಖೆಯಿಂದ ಸಿಕ್ತು ವಿಶೇಷ ಗೌರವ
ಅಭಿನವ ಪ್ರೊಡಕ್ಷನ್ಸ್ ವೇಷಭೂಷಣಗಳ ಭವ್ಯ ಪ್ರದರ್ಶನ
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಂಜೆ 6 ಗಂಟೆಯಿಂದಲೇ 'ಅಭಿನವ ಪ್ರೊಡಕ್ಷನ್ಸ್'ನ ಹೆಮ್ಮೆಯ ಕಲಾಕೃತಿಗಳ ಪ್ರದರ್ಶನ (Exhibition) ಆರಂಭವಾಗಲಿದೆ. ಇದರಲ್ಲಿ ನೃತ್ಯ ರೂಪಕಗಳಿಗೆ ಬಳಸಲಾದ ಭವ್ಯ ವೇಷಭೂಷಣಗಳು (Costumes), ಕಲಾತ್ಮಕ ಕಿರೀಟಗಳು (Headgears) ಮತ್ತು ಅಪರೂಪದ ಆಭರಣಗಳನ್ನು (Accessories) ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.