ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Akshay S L: ಕ್ರಿಕೆಟ್‌ ಆಡುತ್ತಿದ್ದಾಗಲೇ ಹೃದಯಾಘಾತ; ಶಿವಮೊಗ್ಗ ಮೂಲದ ರಣಜಿ ಆಟಗಾರ ಅಕ್ಷಯ್ ಎಸ್‌.ಎಲ್ ನಿಧನ

ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದ ವೇಳೆ ಅಕ್ಷಯ್ ನಾಲ್ಕು ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ಅಸ್ವಸ್ಥಗೊಂಡ ಅವರು ಮೈದಾನದಿಂದ ಹೊರಬಂದಿದ್ದರು. ಬಳಿಕ ನೀರು ಕುಡಿಯುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಮೃತ ಕ್ರಿಕೆಟಿಗ ಅಕ್ಷಯ್ ಎಸ್‌.ಎಲ್.

ಬೆಂಗಳೂರು: ಕೆಎಸ್‌ಸಿಎ ಆಯೋಜಿಸಿದ್ದ ನಸ್ಸೂರ್ ಮೆಮೋರಿಯಲ್ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ವೇಳೆ ಹೃದಯಾಘಾತದಿಂದ ಕ್ರಿಕೆಟಿಗರೊಬ್ಬರು ಮೃತಪಟ್ಟಿರುವ ದುರ್ಘಟನೆ ನಗರದಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಅಕ್ಷಯ್ ಎಸ್‌.ಎಲ್ (Akshay S L) (36) ಮೃತ ಆಟಗಾರರಾಗಿದ್ದಾರೆ.

ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಅಕ್ಷಯ್ ನಾಲ್ಕು ಓವರ್ ಬೌಲಿಂಗ್ ಮಾಡಿದ್ದರು. ಈ ವೇಳೆ ಅಸ್ವಸ್ಥಗೊಂಡ ಅವರು ಮೈದಾನದಿಂದ ಹೊರಬಂದಿದ್ದರು. ಬಳಿಕ ನೀರು ಕುಡಿಯುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರಣಜಿ ಪಂದ್ಯಾವಳಿಗಳಲ್ಲೂ ಆಡಿದ್ದ ಅನುಭವ ಹೊಂದಿದ್ದ ಅಕ್ಷಯ್ ಅವರ ನಿಧನ ಕ್ರೀಡಾ ವಲಯದಲ್ಲಿ ಶೋಕ ಮೂಡಿಸಿದೆ.

ಸಂತೇಬೆನ್ನೂರು ಲೋಕೇಶ್ ಅಕ್ಷಯ್ ಅವರು ಶಿವಮೊಗ್ಗದ ದುರ್ಗಿ ಗುಡಿ ಕ್ರಿಕೆಟ್ ಕ್ಲಬ್ ಮೂಲಕ ಬೆಳಕಿಗೆ ಬಂದ ಪ್ರತಿಭೆಯಾಗಿದ್ದಾರೆ. 2015ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ತಮಿಳುನಾಡು ತಂಡವನ್ನು ಮಣಿಸಿ ರಣಜಿ ಟ್ರೋಫಿ ಗೆದ್ದ ಕರ್ನಾಟಕ ತಂಡದ ತಂಡದ ಸದಸ್ಯರಾಗಿದ್ದಾರೆ.

2011ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪಂದ್ಯದ ಮೂಲಕ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಇವರು, 2011ರಿಂದ 2012ರ ನಡುವೆ ಕರ್ನಾಟಕ ಪರ ಆರು ರಣಜಿ ಪಂದ್ಯಗಳನ್ನಾಡಿದ್ದರು. 2014-15ನೇ ಸಾಲಿನ ರಣಜಿ ಟೂರ್ನಿಯಲ್ಲಿ ಹೆಚ್ಚುವರಿ ಬೌಲರ್ ಆಗಿ ಕರ್ನಾಟಕ ತಂಡದಲ್ಲಿದ್ದರು.

ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಲೆವೆಲ್‌ 1 ಎನ್‌ಸಿಎ (BCCI) certified ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸಿದ್ದ ಅಕ್ಷಯ್, ಕರ್ನಾಟಕ ಅಂಡರ್-19 ತಂಡದ ಕೋಚ್ ಆಗಿದ್ದರು. 2024ರಲ್ಲಿ ಕರ್ನಾಟಕ U-19 ತಂಡ ರಾಜ್ಯ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ ಕೂಚ್ ಬೆಹಾರ್ ಟ್ರೋಫಿ ಗೆದ್ದು ಚರಿತ್ರೆ ಬರೆದಾಗ ಆ ತಂಡದ ಬೌಲಿಂಗ್ ಕೋಚ್ ಆಗಿದ್ದವರು ಇದೇ ಅಕ್ಷಯ್. ನಿವೃತ್ತಿಯ ನಂತರ ಕ್ರಿಕೆಟ್ ಕೋಚಿಂಗ್’ನಲ್ಲಿ ಬದುಕು ಕಟ್ಟಿಕೊಂಡಿದ್ದ ಅಕ್ಷಯ್, ಸಣ್ಣ ವಯಸ್ಸಲ್ಲೇ ಬದುಕಿನ ಪ್ರಯಾಣ ಮುಗಿಸಿದ್ದಾರೆ.