ಬೆಂಗಳೂರು, ಮೇ 24: ಸುಮಾರು ಎಂಟು ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಅಕ್ರಮವಾಗಿ ಬಿಡುಗಡೆ ಮಾಡಿರುವ ಬೆಚ್ಚಿ ಬೀಳಿಸುವ ಪ್ರಕರಣವು ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Parappana Agrahara Central Prison) ನಡೆದಿದೆ. ಈ ಘಟನೆಯು ಜೈಲಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಸುಪ್ರೀಂ ಕೋರ್ಟ್‌ನ (Supreme Court of India) ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು, ಕೈದಿ ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶಂಕರ್ ಎ. ಎಂಬಾತ 2001ರ ಅಪಹರಣ-ಸುಲಿಗೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿತ್ತು. ನ್ಯಾಯಾಲಯದ ಆದೇಶದ ಪ್ರಕಾರ, ಆತನಿಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸಲು ಆದೇಶಿಸಲಾಯಿತು. ಎರಡು ಸೆಕ್ಷನ್‌ಗಳ ಅಡಿಯಲ್ಲಿ ತಲಾ 5,000 ರುಪಾಯಿ ದಂಡವನ್ನು ಸಹ ವಿಧಿಸಲಾಯಿತು.
ಬೆಂಗಳೂರು ಸೆಂಟ್ರಲ್ ಜೈಲಿನಿಂದ ಪತ್ನಿಗೆ ವಿಡಿಯೊ ಕಾಲ್ ಮಾಡಿದ ಕೈದಿ!
ಜೈಲು ಅಧಿಕಾರಿಗಳಿಗೆ 2018ರ ಡಿಸೆಂಬರ್ 3ರ ದಿನಾಂಕವಿರುವ ಪತ್ರ ಬಂದಿತ್ತು. ಆ ಸಮಯದಲ್ಲಿ ಸುಪ್ರೀಂ ಕೋರ್ಟ್ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿ ಈ ಪತ್ರವನ್ನು ಹೊರಡಿಸಿದೆ ಎಂದೇ ಅವರು ಭಾವಿಸಿದ್ದರು. ಹೊಸ ಎಫ್‌ಐಆರ್ ಪ್ರಕಾರ, ಆರೋಪಿಯು ಒಟ್ಟು 10,000 ರುಪಾಯಿ ದಂಡವನ್ನು ಪಾವತಿಸಿ, 2018ರ ನವೆಂಬರ್ 13ರಂದು ಬಿಡುಗಡೆಗೊಂಡಿದ್ದ.
ಕೈದಿ ಶಂಕರ್ ನಕಲಿ ದಾಖಲೆಗಳನ್ನು ಸಲ್ಲಿಸಿ ಬಿಡುಗಡೆಗೊಂಡಿದ್ದಾನೆ ಎಂಬ ಆರೋಪ ಹಲವು ವರ್ಷಗಳ ಬಳಿಕ ಹೊರಬಂದವು. ಈ ಬಗ್ಗೆ ಕರ್ನಾಟಕದ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಮಹಾನಿರ್ದೇಶಕರ ನಿರ್ದೇಶನಗಳನ್ನು ಅನುಸರಿಸಿ, ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಲಾಯಿತು. ಹೆಚ್ಚಿನ ಪರಿಶೀಲನೆಗಾಗಿ ಸಂಬಂಧಪಟ್ಟ ದಾಖಲೆಗಳನ್ನು ಬೆಂಗಳೂರಿನ ದಕ್ಷಿಣ ವಲಯದ ಕಾರಾಗೃಹಗಳ ಉಪ ಮಹಾನಿರೀಕ್ಷಕರಿಗೆ ಹಸ್ತಾಂತರಿಸಲಾಯಿತು.
ತನಿಖೆಯ ಸಮಯದಲ್ಲಿ, ಜೈಲು ಇಲಾಖೆಯು ಆದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿತು. 2018ರ ನವೆಂಬರ್ 3ರ ಆದೇಶವು ನಕಲಿ ಎಂದು ಉನ್ನತ ನ್ಯಾಯಾಲಯದ ಅಧಿಕಾರಿಗಳು ದೃಢಪಡಿಸಿದರು. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜೈಲು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಸುವಲ್ಲಿ ಶಂಕರ್‌ಗೆ ಹಲವು ವ್ಯಕ್ತಿಗಳು ಸಹಾಯ ಮಾಡಿರಬಹುದು ಎಂದು ಜೈಲು ಅಧಿಕಾರಿಗಳು ಶಂಕಿಸಿದ್ದಾರೆ.