Muda case: ಇಡಿ ವಿಚಾರಣೆಯಿಂದ ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್‌ಗೆ ರಿಲೀಫ್; ಸಮನ್ಸ್‌ಗೆ ಮಧ್ಯಂತರ ತಡೆ
Muda case: ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ, ಸಮನ್ಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.


ಬೆಂಗಳೂರು: ಮುಡಾ ಪ್ರಕರಣಕ್ಕೆ (Muda case) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಸೋಮವಾರ, ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ, ಸಮನ್ಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.
ಭೈರತಿ ಸುರೇಶ್ ಪರ ವಾದಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು, ಅರ್ಜಿದಾರರು ಯಾವುದೇ ಅಧಿಸೂಚಿತ ಪ್ರಕರಣದ ಆರೋಪಿಯಲ್ಲ. ಆರೋಪಿಯಲ್ಲದಿದ್ದರೂ ಇ.ಡಿ. ಸಮನ್ಸ್ ಜಾರಿಗೊಳಿಸಿದೆ. ಸೋಮವಾರ ಬೆಳಗ್ಗೆ 11ಗಂಟೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೇ ಮಾದರಿಯ ಮತ್ತೊಂದು ಪ್ರಕರಣದಲ್ಲಿ (ಮುಡಾ ಮಾಜಿ ಆಯುಕ್ತ) ಡಾ.ನಟೇಶ್‌ಗೆ ಇ.ಡಿ. ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಅದನ್ನೇ ಅನ್ವಯಿಸಿ ಈ ಪ್ರಕರಣದಲ್ಲೂ ತಡೆಯಾಜ್ಞೆ ನೀಡಬೇಕು. ಮುಂದಿನ ವಿಚಾರಣೆವರೆಗೂ ಇಡಿಯಿಂದ ರಕ್ಷ ಣೆ ಒದಗಿಸಬೇಕು” ಎಂದು ಮನವಿ ಮಾಡಿದರು.
ಇ.ಡಿ. ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಅವರು, ಡಾ.ನಟೇಶ್ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿರಲಿಲ್ಲ. ಇಂದು ಡಾ.ನಟೇಶ್ ಪರ ಆದೇಶ ಬಂದಿದೆ. ಅದರ ವಿವರ ತಿಳಿದಿಲ್ಲ. ಹೀಗಾಗಿ, ಮಧ್ಯಂತರ ಆದೇಶ ನೀಡಬಾರದು ಎಂದು ಕೋರಿದರು.
ಸಿಎಂ ಪತ್ನಿ ಪಾರ್ವತಿ ಪರ ವಾದಿಸಿದ ಹಿರಿಯ ವಕೀಲರಾದ ಸಂದೇಶ್ ಚೌಟ ಮತ್ತು ವಿಕ್ರಮ್ ಹುಯಿಲಗೋಳ ಅವರು, 14 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸುತ್ತಿದೆ. ಹೀಗಾಗಿ, ತನಿಖೆಗೆ ತಡೆ ನೀಡಬೇಕು ಎಂದರು.
ಈ ವೇಳೆ ಪೀಠವು, ಸಿಎಂ ಪ್ರಕರಣದ ವಿಚಾರಣೆ ಇತ್ತ ಹೈಕೋರ್ಟ್‌ನಲ್ಲಿ ನಡೆಯುವಾಗ ಇದರಲ್ಲೇಕೆ ಮುಂದುವರಿಯುತ್ತೀರಾ? ಎಂದು ಇಡಿ ಪರ ವಕೀಲರನ್ನು ಪ್ರಶ್ನೆ ಮಾಡಿತು. ಅಲ್ಲದೇ ಇ.ಡಿ. ತನಿಖೆಯಿಂದ ಹೈಕೋರ್ಟ್ ಕಾಯ್ದಿರಿಸಿರುವ ಪ್ರಕರಣಕ್ಕೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲ ಎಂದು ನಾನೇ ಆದೇಶ ನೀಡಿದ್ದೇನೆ. ಈಗ ಇ.ಡಿ. ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ” ಎಂದು ಪ್ರಶ್ನಿಸಿದರು.
ಇದಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್ ಅವರು, ಪಿಎಂಎಲ್‌ಎ ಸೆಕ್ಷನ್ 50(2)ರ ಅಡಿ ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್ ಮುಂದಿರುವ ಪ್ರಕರಣಕ್ಕೆ ಅಡ್ಡಿಯಾಗುವುದಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | Bhuvaneshwari Statue: ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ವಾಪಾಸ್: ಸಿಎಂ ಸಿದ್ದರಾಮಯ್ಯ ಘೋಷಣೆ
ಆಗ ಪೀಠವು, ಹಾಜರಾಗದಿದ್ದರೆ ನೀವು ನಾಳೆ ಅವರನ್ನು ಬಂಧಿಸಬಹುದು. ಹಾಗಾಗಿ ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕಿದೆ ಎಂದು ಮಧ್ಯಂತರ ಆದೇಶವನ್ನು ನೀಡಿತು. ಅಂತಿಮವಾಗಿ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.
ಡಾ.ನಟೇಶ್ ವಿರುದ್ಧದ ಸಮನ್ಸ್ ವಜಾ
ಮುಡಾ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್‌ಗೆ ಇ.ಡಿ. ಜಾರಿಗೊಳಿಸಿದ್ದ ಸಮನ್ಸ್ ಅನ್ನು ಹೈಕೋರ್ಟ್ ವಜಾ ಮಾಡಿದೆ. ಇ.ಡಿ. ಸಮನ್ಸ್ ಪ್ರಶ್ನಿಸಿ ನಟೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಪ್ರಕರಣದಲ್ಲಿ ಎಲ್ಲೂ ತಮ್ಮನ್ನು ಆರೋಪಿ ಎಂದು ತೋರಿಸಿಲ್ಲ, ಆದರೂ ತಮ್ಮ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿಕೊಳ್ಳಲಾಗಿದೆ. ಜತೆಗೆ ಇ.ಡಿ. ನಿರ್ದೇಶನದಂತೆ ತಾನು ಹೇಳಿಕೆ ನೀಡಿದ್ದೇನೆ. ಆದರೆ, ಮತ್ತೆ ಜಾರಿ ನಿರ್ದೇಶನಾಲಯ ತಮಗೆ ಸಮನ್ಸ್ ಜಾರಿಗೊಳಿಸಿದೆ. ಹೀಗಾಗಿ ಅದನ್ನು ರದ್ದುಗೊಳಿಸುವಂತೆ ಹಾಗೂ ಇ.ಡಿ. ತಮ್ಮ ಹೇಳಿಕೆ ಪಡೆದಿರುವುದು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದರು.