ಬೆಂಗಳೂರು, ನ.15: ರಾಷ್ಟ್ರೋತ್ಥಾನ ಪರಿಷತ್‌ನ ಸಾಹಿತ್ಯ ವಿಭಾಗ ನಡೆಸುತ್ತಿರುವ 5ನೇ ಕನ್ನಡ ಪುಸ್ತಕ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ನ.15ರಂದು ಸಂಜೆ 6 ಗಂಟೆಗೆ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ನ ಕೇಶವಶಿಲ್ಪ ಸಭಾಂಗಣದಲ್ಲಿ ನಾಡಿನ ಖ್ಯಾತ ಗಾಯಕಿ ವಿದುಷಿ ಸಂಗೀತಾ ಕಟ್ಟಿ (Sangeetha Katti) ಹಾಗೂ ತಂಡದವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ (Bhajan Sandhya programme) ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಗೀತಾ ಕಟ್ಟಿ ಅವರು ದಾಸವಾಣಿ, ವಚನಗಳು, ಭಜನೆ ಹಾಗೂ ಅಭಂಗಕ್ಕೆ ಧ್ವನಿಯಾಗಲಿದ್ದಾರೆ.
ನೂರು ವರುಷ; ಸಾವಿರದ ಕೆಲಸ: ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆದುಬಂದ ದಾರಿ: ವಿಶೇಷ ಉಪನ್ಯಾಸ ಕಾರ್ಯಕ್ರಮ
ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬದಲ್ಲಿ ನ.15ರಂದು ಶನಿವಾರ ರಾಷ್ಟ್ರೋತ್ಥಾನ ಪರಿಷತ್‌ನ ಕೇಶವಶಿಲ್ಪ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಯಿಂದ ʼನೂರು ವರುಷ; ಸಾವಿರದ ಕೆಲಸ: ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆದು ಬಂದ ದಾರಿʼ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರಿಂದ ಉಪನ್ಯಾಸ ಇರಲಿದೆ. ಎಸ್.ವಿ. ಸುಬ್ರಹ್ಮಣ್ಯ ಗುಪ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಆರ್.ಎಸ್.ಎಸ್. 100: ಶತ ಪಥ ಸಂಚಲನ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕನ್ನಡ ಪುಸ್ತಕ ಹಬ್ಬದ ವೇದಿಕೆಯಲ್ಲಿ ಶಿಕಾರಿಪುರ ಬಳಗದ ಸಹಯೋಗದಲ್ಲಿ ‘ಆರ್.ಎಸ್.ಎಸ್. 100: ಶತ ಪಥ ಸಂಚಲನʼ ಪುಸ್ತಕ ಲೋಕಾರ್ಪಣ ಸಮಾರಂಭ ನ.16ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ಶ್ರೀ ನಂದಿಕೇಶ್ವರ ಪ್ರಕಾಶನ, ಮೂಡುಬಿದರೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಿದೆ. ಪ್ರಸಿದ್ಧ ವಿಜ್ಞಾನಿ, ತಂತ್ರಜ್ಞಾನ ಕ್ಷೇತ್ರದ ಗಣ್ಯರು ಆಗಿರುವ ಡಾ. ಎಸ್. ಶ್ರೀನಿವಾಸ ಮೂರ್ತಿ ಕಾರ್ಯಕ್ರಮದ ಅಧ್ಯಕತೆ ವಹಿಸಲಿದ್ದಾರೆ. ಹಿರಿಯ ಪತ್ರಕರ್ತರು, ಲೇಖಕ ದು. ಗು. ಲಕ್ಷ್ಮಣ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ. ಲೇಖಕ ಶಿಕಾರಿಪುರ ಈಶ್ವರ ಭಟ್ ಉಪಸ್ಥಿತರಿರಲಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ಹಡಗು ನಿರ್ಮಾಣದ ಟಾಪ್ 10 ರಾಷ್ಟ್ರಗಳಲ್ಲಿ ಭಾರತ ಒಂದಾಗಲಿದೆ: ಪ್ರಲ್ಹಾದ್ ಜೋಶಿ ವಿಶ್ವಾಸ
ಡಿ.7ರವರೆಗೆ ಪುಸ್ತಕ-ಪ್ರದರ್ಶನ ಮಾರಾಟ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ
ಕೇಶವಶಿಲ್ಪ ಸಭಾಂಗಣದಲ್ಲಿ ಡಿಸೆಂಬರ್ 7ರವರೆಗೆ ಪ್ರತಿದಿನವೂ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9ಗಂಟೆವರೆಗೆ ಪುಸ್ತಕ-ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಇಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೆ ನಾಡಿನ ಪ್ರಸಿದ್ಧ ಲೇಖಕರ ಹಾಗೂ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ ಪ್ರತಿದಿನ ಸಂಜೆ 6 ಗಂಟೆಯಿಂದ ವಿವಿಧ ಕಲಾಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯುತ್ತದೆ. ಪ್ರತಿದಿನ ನಡೆಯುವ ಕಾರ್ಯಕ್ರಮಗಳ ವಿವರವನ್ನು https://kannadapustakahabba.com/ ವೆಬ್‌ಸೈಟ್‌ನಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.