ದಿಬ್ಬೂರು ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ಗ್ರಾಮದೇವತೆ ಕರಗದಮ್ಮ ದೇವಿಯ ಹೂವಿನ ಕರಗ ಮಹೋತ್ಸವ
ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ನಡೆದ ಶಕ್ತಿ ದೇವತೆ ಕರಗದಮ್ಮ ದೇವಿಯ 12ನೇ ವರ್ಷದ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.
ದಿಬ್ಬೂರು ಗ್ರಾಮದ ಶಕ್ತಿದೇವತೆ ಕರಗದಮ್ಮ ದೇವಿಯ ಹೂವಿನ ಕರಗ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. 12ನೇ ವರ್ಷದ ಕರಗಮಹೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವಿಯ ದರ್ಶನ ಪಡೆದು ಪುನೀತರಾದರು. -
ಚಿಕ್ಕಬಳ್ಳಾಪುರ: ದಿಬ್ಬೂರು ಗ್ರಾಮದ ಶಕ್ತಿದೇವತೆ ಕರಗದಮ್ಮ ದೇವಿಯ ಹೂವಿನ ಕರಗ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು. 12ನೇ ವರ್ಷದ ಕರಗಮಹೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವಿಯ ದರ್ಶನ ಪಡೆದು ಪುನೀತರಾದರು.
ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ನಡೆದ ಶಕ್ತಿ ದೇವತೆ ಕರಗದಮ್ಮ ದೇವಿಯ 12ನೇ ವರ್ಷದ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು.
ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ಸರ್ವಾಲಂಕಾರ ಭೂಷಿತೆಯಾಗಿದ್ದ ಕರಗದ ಪೂಜಾರಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಎಂ. ಬಾಲಾಜಿ ಅವರು ತಲೆಯ ಮೇಲೆ ಹೂವಿನ ಕರಗ ಹೊತ್ತು, ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಮಂತ್ರ ದಂಡ ಹಿಡಿದು ಕರಗದಮ್ಮ ದೇವಾಲಯದ ಗರ್ಭಗುಡಿಯಿಂದ ರಾತ್ರಿ 11.30ಕ್ಕೆ ಹೊರಕ್ಕೆ ಬರುತ್ತಿದ್ದಂತೆ ,ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ತಮಟೆ ವಾದನ, ಮಂಗಳ ವಾದ್ಯಗಳು ಸಹ ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ಅವರ ಹಿಂದೆ ಹೆಜ್ಜೆ ಹಾಕುವ ಮೂಲಕ ಕರಗ ಪ್ರದರ್ಶನಕ್ಕೆ ಮುನ್ನುಡಿ ಬರೆದರು.
ಇದನ್ನೂ ಓದಿ: Chikkaballapur News: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಅಶೋಕ್ ಆಯ್ಕೆ
ಮಲ್ಲಿಗೆ ಹೂವು, ಕನಕಾಂಬರದಿಂದ ಕರಗವನ್ನು ಅಲಂಕಾರ ಮಾಡಿದ್ದು ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿಯಿಂದ ಆಕರ್ಷಕವಾಗಿ ಕಂಗೊಳಿಸುತ್ತಿದ್ದ ಕರಗ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ದಾರಿಯುದ್ದಕ್ಕೂ ಭಕ್ತರನ್ನು ಪರವಶಗೊಳಿಸುತ್ತಿತ್ತು. ಬೀದಿ ಬೀದಿಗಳಲ್ಲಿ ಕರಗ ಧಾರಿಯ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಕರಗ ಬರುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.
ಕರಗ ಹೊತ್ತ ಬಾಲಾಜಿ ತಮಟೆ ಸದ್ದಿನ ಲಯಕ್ಕೆ ತಕ್ಕಂತೆ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾ ಬಂದ ಹೂವಿನ ಕರಗದ ಪ್ರದರ್ಶನವು ಭಕ್ತರನ್ನು ಮೈನವಿರೇಳಿಸುವಂತಿತ್ತು. ಜನರು ಕರಗ ಹೊತ್ತ ಪೂಜಾರಿಯ ಲಯಬದ್ಧ ನೃತ್ಯದ ದೃಶ್ಯವನ್ನು ಕಣ್ತುಂಬಿಕೊಂಡರಲ್ಲದ ಮೊಬೈಲ್ ಗಳಲ್ಲಿ ಕೂಡ ಚಿತ್ರೀಕರಿಸಿಕೊಳ್ಳಲು ಜನತೆ ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ರಾತ್ರಿ 11.30ಕ್ಕೆ ಕರಗದಮ್ಮ ದೇವಾಲಯದಿಂದ ಹೊರಬಂದ ಕರಗವು ದಿಬ್ಬೂರಿನ ಪ್ರತಿಯೊಂದು ಮನೆಯಿಂದ ಪೂಜೆ ಸ್ವೀಕರಿಸಿ, ಮಧ್ಯಾಹ್ನ ದೇವಾಲಯಕ್ಕೆ ವಾಪಸ್ಸು ಬಂದ ಕರಗ ದೇವಾಲಯದ ಮುಂದೆ ಹಾಕಿದ್ದ ಅಗ್ನಿಕುಂಡ ಹಾಯ್ದು ದೇವಾಲಯಕ್ಕೆ ಪ್ರವೇಶಿಸಿತು.
ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಊರುಗಳಿಂದ ಜನರು ಬಂದಿದ್ದು, ಆಗಮಿಸಿದ ಜನರಿಗೆ ಮನೋರಂಜನೆಗಾಗಿ ರಸಮಂಜರಿ, ಸುಪ್ರಸಿದ್ದ ವಾದ್ಯಗೋಷ್ಠಿ, ಜಾನಪದ ಕಲಾತಂಡಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗಿತ್ತು.
ದಿಬ್ಬೂರು ಬಸ್ ನಿಲ್ದಾಣದ ಸನಿಹದಲ್ಲಿ ಕರಗಮಹೋತ್ಸವದ ಭಕ್ತರು ಉಚಿತ ಅನ್ನದಾನ ವಿತರಣೆಯ ವ್ಯವಸ್ಥೆ ಮಾಡಿದ್ದರು. ಕರಗ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.