ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mamatheya Thottilu: ಪರಿತ್ಯಕ್ತ ಮಗುವಿಗಾಗಿ ಬೆಂಗಳೂರಿನಲ್ಲಿ ಮಮತೆಯ ತೊಟ್ಟಿಲು

ಹೆತ್ತವರಿಗೆ ಬೇಡದ ಕೂಸು ಕಸದ ಬುಟ್ಟಿ, ಚರಂಡಿ, ರಸ್ತೆ ಬದಿ, ಗುಡ್ಡಗಾಡು ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಅವುಗಳ ಜೀವಕ್ಕೆ ಅಪಾಯ ಬಂದೊದಗುತ್ತವೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಂತಹ ಘಟನೆಗಳು ಕೆಲವೊಮ್ಮೆ ಮನ ಕಲಕುವಂತೆ ಮಾಡುತ್ತದೆ. ಇಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಇದೀಗ ಮಮತೆಯ ತೊಟ್ಟಿಲನ್ನು ಪ್ರಾರಂಭಿಸಲಾಗಿದ್ದು, ಇದು ನವಜಾತ ಶಿಶುಗಳಿಗೆ ಸುರಕ್ಷತೆಯ ತೊಟ್ಟಿಲಾಗಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆತ್ತವರು ತಮಗೆ ಬೇಡದ ಮಗುವನ್ನು ಕಸದ ಬುಟ್ಟಿ, ಚರಂಡಿ, ರಸ್ತೆ ಬದಿ, ಗುಡ್ಡಗಾಡು ಪ್ರದೇಶಗಳಲ್ಲಿ ಬಿಟ್ಟು ಹೋಗುವ ಬದಲು ಇನ್ನು ಮುಂದೆ ಮಮತೆಯ ತೊಟ್ಟಿಲಿಗೆ (Mamatheya Thottilu) ಹಾಕಿ ಹೋಗಬಹುದು. ಇದರಿಂದ ಮಗುವಿಗೆ ಸುರಕ್ಷಿತವಾದ ಆಶ್ರಯ (safe cradle) ಕೊಟ್ಟಂತಾಗುತ್ತದೆ. ಬೆಂಗಳೂರಿನಲ್ಲಿ (Bengaluru) ಕಳೆದ ವರ್ಷವೇ ಪ್ರಾರಂಭಿಸಲಾಗಿರುವ ‘ಮಮತೆಯ ತೊಟ್ಟಿಲು’ ಶಿಶುಗಳ ತ್ಯಜಿಸುವಿಕೆ ತಡೆಯಲು ಕೈಗೊಂಡಿರುವ ಕ್ರಮವಾಗಿದೆ. ಈ ಬಾರಿ ಇದನ್ನು ಮತ್ತಷ್ಟು ಪರಿಣಾಮಕಾರಿ ಯೋಜನೆಯನ್ನಾಗಿ ಮಾಡಲಾಗಿದೆ. ಈ ಯೋಜನೆಯಲ್ಲಿ ಶಿಶುವಿನ ಪೋಷಕರು ಯಾವುದೇ ಭಯವಿಲ್ಲದೆ ಮಗುವನ್ನು ಸುರಕ್ಷಿತ ತೊಟ್ಟಿಲಿಗೆ ಹಾಕಿ ಹೋಗಬಹುದು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪ್ರಾರಂಭಿಸಿರುವ ‘ಮಮತೆಯ ತೊಟ್ಟಿಲು’ ಕಾರ್ಯಕ್ರಮದ ಪ್ರಯುಕ್ತ ಬೆಂಗಳೂರು ನಗರದ 42 ಸ್ಥಳಗಳಲ್ಲಿ ತೊಟ್ಟಿಲುಗಳನ್ನು ಇರಿಸಲಾಗಿದೆ. ಇವುಗಳಲ್ಲಿ ಅಧಿಕಾರಿಗಳು ಅಥವಾ ಪೊಲೀಸರ ಭಯವಿಲ್ಲದೆ ಪೋಷಕರು ಮಗುವನ್ನು ಬಿಟ್ಟು ಹೋಗಬಹುದಾಗಿದೆ.

ಇದನ್ನೂ ಓದಿ: RRB Recruitment: 8,860 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೆಚ್ಚಿನ ವಿವರ ಇಲ್ಲಿದೆ

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಪೂರ್ವದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮೀನಾಕ್ಷಿ ಎಸ್. ಕಬೇಡಿ, ಪೋಷಕರು ಮಗು ಬೇಡವೆಂದು ಎಲ್ಲೆಲ್ಲಿ ಬಿಟ್ಟು ಹೋಗುತ್ತಾರೆ. ಇದು ಸುರಕ್ಷತೆಯ ಅಪಾಯವನ್ನು ಎದುರಿಸುವಂತೆ ಮಾಡುತ್ತದೆ. ಇದರಿಂದ ಮಗುವಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೇಡದ ಮಗುವನ್ನು ಪೋಷಕರು ಮಮತೆಯ ತೊಟ್ಟಿಲಲ್ಲಿ ಹಾಕಿ ಹೋದರೆ ಪ್ರತಿಯೊಂದು ಮಗುವೂ ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ ದತ್ತು ವ್ಯವಸ್ಥೆಯಲ್ಲಿ ಸೇರಿಕೊಳ್ಳುತ್ತದೆ ಎಂದರು.

ಪೋಕ್ಸೊ ಪ್ರಕರಣಗಳಲ್ಲಿ ಹೆಚ್ಚಿನವರಿಗೆ ತಾವು ಗರ್ಭ ಧರಿಸಿರುವುದು ತಡವಾಗಿ ಗೊತ್ತಾಗುತ್ತದೆ. ಮರ್ಯಾದೆ ಮತ್ತು ಕಾನೂನಿಗೆ ಹೆದರಿ ಅವರು ಮಗುವನ್ನು ತ್ಯಜಿಸುತ್ತಾರೆ. ಇಂತಹ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳು ಇರುತ್ತವೆ. ಅಂತಹ ಮಕ್ಕಳನ್ನು ಈ ತೊಟ್ಟಿಲುಗಳಲ್ಲಿ ಬಿಡಬಹುದು ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನ ಪೂರ್ವ ವಲಯದ ಏಳು ಪ್ರದೇಶಗಳಲ್ಲಿ ಸಿಸಿಟಿವಿ ಇಲ್ಲದೆ ತೊಟ್ಟಿಲುಗಳನ್ನು ಇರಿಸಲಾಗಿದೆ. ಇವುಗಳಲ್ಲಿ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ, ವರ್ತೂರು, ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸೇಂಟ್ ಮೈಕೆಲ್ಸ್ ಹೋಮ್ ಕಾನ್ವೆಂಟ್, ಶಿಶು ಮಂದಿರ ಮತ್ತು ತಾಲೂಕು ಆಸ್ಪತ್ರೆ, ಕೆ.ಆರ್. ಪುರಂನಲ್ಲಿರುವ ಡಿಸಿಪಿಒ ಸೇರಿವೆ ಎಂದು ಹೇಳಿದರು.

ಇನ್ನು ತಾಯಂದಿರು 1098 ಅಥವಾ 112ಗೆ ಕರೆ ಮಾಡಿ ಕೂಡ ಮಾಹಿತಿ ನೀಡಬಹುದು. ಇದರಲ್ಲಿ ಶಿಶುವನ್ನು ಗೌಪ್ಯವಾಗಿ ಸಂಗ್ರಹಿಸಲಾಗಿದೆಯೇ ಎಂಬುದನ್ನು ಕೂಡ ಖಚಿತಪಡಿಸಿಕೊಳ್ಳಲಾಗುತ್ತದೆ. ಮಗುವಿನ ದತ್ತು ಸ್ವೀಕಾರಕ್ಕಿಂತ ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷದಲ್ಲಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ 25 ಶಿಶುಗಳನ್ನು ಕೈಬಿಡಲಾಗಿತ್ತು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಯೋಜನಾ ನಿರ್ದೇಶಕಿ ಹಲೀಮಾ ತಿಳಿಸಿದ್ದಾರೆ.

ಇದನ್ನೂ ಓದಿ: Dharmendra Discharged: ನಟ ಧರ್ಮೇಂದ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್; ಮನೆಯಲ್ಲಿಯೇ ಚಿಕಿತ್ಸೆ

ಕಳೆದ ವರ್ಷವೇ ಮಮತೆಯ ತೊಟ್ಟಿಲು ಕಾರ್ಯಕ್ರಮವನ್ನು ಆರಂಭಿಸಲಾಗಿತ್ತು. ಈವರೆಗೆ ಕೇವಲ ಒಂದು ಮಗು ಮಾತ್ರ ತೊಟ್ಟಿಲಲ್ಲಿ ಸಿಕ್ಕಿದೆ. ಇದು ಕೇವಲ ಸಾಮಾನ್ಯ ಮಕ್ಕಳಿಗೆ ಮಾತ್ರವಲ್ಲ ಭಿನ್ನ ಸಾಮರ್ಥ್ಯದ ಮಕ್ಕಳನ್ನು ಕೂಡ ಸುರಕ್ಷಿತವಾಗಿ ಮಾಡಲು ಮಾಡಿಕೊಂಡಿರುವ ಯೋಜನೆಯಾಗಿದೆ. ಇವುಗಳನ್ನು ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ನೋಡಿಕೊಳ್ಳಬಹುದು. 21 ಜಿಲ್ಲೆಗಳಲ್ಲಿ 21 ಸರ್ಕಾರಿ ಮತ್ತು 24 ಖಾಸಗಿಯಾಗಿ ದತ್ತು ಸಂಸ್ಥೆಗಳಿವೆ. ಇಲ್ಲಿಯವರೆಗೆ ಇಲ್ಲಿಂದ ಒಟ್ಟು 190 ಮಕ್ಕಳನ್ನು ದತ್ತು ನೀಡಲು ಅವಕಾಶ ಮಾಡಿಕೊಳಲಾಗಿದೆ. ಇವರಲ್ಲಿ ಇಬ್ಬರು ಮಕ್ಕಳನ್ನು ವಿದೇಶಿಯರು ದತ್ತು ಸ್ವೀಕರಿಸಲು ಮುಂದೆ ಬಂದಿದ್ದಾರೆ ಎಂದರು.

ಮಮತೆಯ ತೊಟ್ಟಿಲು ಕಾರ್ಯಕ್ರಮವನ್ನು ಜಾರಿಗೆ ತಂದ ಮೊದಲ ರಾಜ್ಯ ತಮಿಳುನಾಡು. ಬಳಿಕ ಇದು ಕೇರಳ, ಕರ್ನಾಟಕದಲ್ಲಿ ಪ್ರಾರಂಭಿಸಲಾಗಿದೆ ಎಂದು ಹಲೀಮಾ ಹೇಳಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author