ಸಂವಿಧಾನ ಆಶೋತ್ತರದಂತೆ ಇನ್ನೂ ಸಮಾನತೆ ತರಬೇಕಿದೆ : ಶಾಸಕ ಎಸ್.ಆರ್.ಶ್ರೀನಿವಾಸ್
ಅಂಬೇಡ್ಕರ್ ಅವರ ಆಶಯದಂತೆ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಅಧಿಕಾರ ಎನ್ನುವುದು ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದಲ್ಲಿ ಮಾತ್ರ ಸಂವಿಧಾನ ಸಾರ್ಥಕತೆ ಪಡೆಯುತ್ತದೆ. ಈ ಕೆಲಸಕ್ಕೆ ಉತ್ತಮ ಶಿಕ್ಷಣ ಒದಗಿ ಸುವ ಕೆಲಸ ಆಗಬೇಕು ಎಂದರು


ಗುಬ್ಬಿ: ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ತರುವಲ್ಲಿ ನಾವೆಲ್ಲರೂ ಇನ್ನೂ ಬದ್ಧತೆ ಬೆಳೆಸಿ ಕೊಳ್ಳಬೇಕಿದೆ. ಅಂಬೇಡ್ಕರ್ ಅವರ ಸಂವಿಧಾನ ಆಶೋತ್ತರದಂತೆ ಸಮಾನತೆ ತರಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ 76 ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು ದೇಶದ ಪ್ರಜಾಪ್ರಭುತ್ವ ಗಣರಾಜ್ಯ ಮೂಲಕ ಸಾಮಾಜಿಕ ನ್ಯಾಯ ಬದ್ಧತೆಯ ದಿನ ಸಮಾ ಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಸನ್ಮಾನಿಸಿ ಗೌರವಿಸುವ ಕೆಲಸ ಮಾಡಬೇಕು ಎಂದರು.
ಸಂವಿಧಾನದಂತೆ ಕೆಲಸ ಮಾಡುವ ಮೂರು ಪ್ರಮುಖ ಅಂಗಗಳು ಇನ್ನೂ ಮೇಲು ಕೀಳು, ಬಡವ ಶ್ರೀಮಂತ ತೊಡೆದು ಹಾಕಲು ಸಾಧ್ಯವಾಗಿಲ್ಲ. ಅಂಬೇಡ್ಕರ್ ಅವರ ಆಶಯದಂತೆ ನವ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಅಧಿಕಾರ ಎನ್ನುವುದು ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದಲ್ಲಿ ಮಾತ್ರ ಸಂವಿಧಾನ ಸಾರ್ಥಕತೆ ಪಡೆಯುತ್ತದೆ. ಈ ಕೆಲಸಕ್ಕೆ ಉತ್ತಮ ಶಿಕ್ಷಣ ಒದಗಿಸುವ ಕೆಲಸ ಆಗಬೇಕು ಎಂದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಬಿ.ಆರತಿ ಸಂದೇಶ ನೀಡಿ ಭಾರತೀಯರು ದೇಶದ ಗಣ್ಯರನ್ನು ಸ್ಮರಿಸಬೇಕು. ತ್ಯಾಗ ಬಲಿದಾನ ನೀಡಿದ ಸೈನಿಕರು ಹಾಗೂ ದೇಶದ ಪ್ರಗತಿಗೆ ಸಹಕಾರಿ ಯಾದ ವಿಜ್ಞಾನಿಗಳಿಗೆ ಈ ದಿನ ಗೌರವ ಸಲ್ಲಬೇಕು. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಒಂದು ಉತ್ತಮ ಆಡಳಿತ ನೀಡಿ ದೇಶದ ಉನ್ನತಿಗೆ ಶ್ರಮಿಸುತ್ತವೆ. ಮೂರು ಅಂಗಗಳ ಜೊತೆ ನಾಗರೀಕ ತನ್ನ ಕರ್ತವ್ಯ ಅಚ್ಚುಕಟ್ಟಾಗಿ ಪಾಲಿಸಬೇಕು ಎಂದರು.
ಉಪನ್ಯಾಸಕ ತಿಮ್ಮೇಗೌಡ ಮಾತನಾಡಿ 1950 ಜನವರಿ 26 ರಂದು ಗಣರಾಜ್ಯ ರೂಪಿಸಿ ಸಂವಿಧಾನ ಜಾರಿ ಮಾಡಿಕೊಂಡು ನಮ್ಮ ದೇಶದ ಆಡಳಿತ ಆರಂಭಿಸಿದೆವು. ಬ್ರಿಟಿಷರ ಆಳ್ವಿಕೆಯಲ್ಲಿ ನಮ್ಮ ದೇಶದಲ್ಲಿ ನಾವೇ ತೃತೀಯ ಪ್ರಜೆಗಳಾಗಿ ಇದ್ದು ಸ್ವಾತಂತ್ರ್ಯ ಹೋರಾಟ ಮೂಲಕ ಸ್ವಾತಂತ್ರ್ಯ ಪಡೆದು ನಂತರ ವಿವಿಧ ರಾಜ್ಯಗಳನ್ನು ಒಗ್ಗೂಡಿಸಿ ಸಂವಿಧಾನ ಜಾರಿಗೆ ತರಲಾಯಿತು. ಹೀಗೆ ದೇಶದ ಅಭಿವೃದ್ದಿ ಹಂತ ಹಂತವಾಗಿ ಸಾಗಿ ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನ ಎನಿಸಿಕೊಂಡಿದ್ದೇವೆ. ಹೀಗೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವರ ಕೊಡುಗೆ ಇದೆ. ಅವರನ್ನೆಲ್ಲಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಪೋಲಿಸ್, ಗೃಹರಕ್ಷಕ ದಳ, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸ ಲಾಯಿತು.
ವೇದಿಕೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ ಸೇರಿದಂತೆ ಎಲ್ಲಾ ಸದಸ್ಯರು, ತಾಪಂ ಇಓ ಶಿವಪ್ರಕಾಶ್, ಬಿಇಓ ನಟರಾಜ್, ಸಿಪಿಐ ಗೋಪಿನಾಥ್, ಪ್ರಾಚಾರ್ಯ ಪ್ರಸನ್ನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿಂದುಮಾಧವ, ಪಪಂ ಮುಖ್ಯಾಧಿಕಾರಿ ಮಂಜುಳಾ ದೇವಿ ಇತರರು ಇದ್ದರು.