Tuesday, 17th May 2022

ಮಾವು ಬೆಳೆಗಾರರಿಗೆ ರಿಲೀಫ್‌: ಕಿಸಾನ್ ರೈಲು ಸೇವೆ ಆರಂಭ

ಕೋಲಾರ: ಕರೋನಾ ಲಾಕ್‍ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರಿಗೆ, ರೈಲ್ವೆ ಇಲಾಖೆ ಕಿಸಾನ್ ರೈಲು ಸೇವೆ ಆರಂಭಿಸುವ ಮೂಲಕ‌ ನೆರವು ನೀಡಿದೆ.

ಲಾಕ್​ಡೌನ್ ಹಿನ್ನಲೆ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರೈತರಿಗೆ ನೆರವಾ ಗಲು, ರಾಜ್ಯದಲ್ಲೇ ಮೊದಲ ಬಾರಿಗೆ ಕಿಸಾನ್ ರೈಲು ಸೇವೆಗೆ ಚಾಲನೆ ಸಿಕ್ಕಿದೆ. ದೆಹಲಿಗೆ ಮಾವು ರಫ್ತು ಮಾಡಲು ರಾಜ್ಯದ ಮೊದಲ ಕಿಸಾನ್ ರೈಲು ವ್ಯವಸ್ಥೆ ಯನ್ನು ಭಾರತೀಯ ರೈಲ್ವೆ ಇಲಾಖೆ ಮಾಡಿದೆ.

ಕೋಲಾರ ಜಿಲ್ಲೆಯ ಗಡಿಯಲ್ಲಿನ ಚಿಂತಾಮಣಿ ತಾಲೂಕಿನ ದೊಡ್ಡನತ್ತ ಗ್ರಾಮದ ರೈಲ್ವೆ ನಿಲ್ದಾಣದಿಂದ ದೆಹಲಿಯ ಆದರ್ಶ ನಗರಕ್ಕೆ ಕಿಸಾನ್ ರೈಲು ಹೊರಟಿದೆ. ಸಂಸದ ಎಸ್.ಮುನಿಸ್ವಾಮಿ, ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾ ರೆಡ್ಡಿ, ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳಾದ ಅಶೋಕ್‍ಕುಮಾರ್, ಕೃಷ್ಣಾ ರೆಡ್ಡಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಕಿಸಾನ್ ರೈಲಿಗೆ ಚಾಲನೆ ನೀಡಿದರು.

ರೈತರಿಗೆ ಸಾಗಾಣಿಕೆ ವೆಚ್ಚ ಉಳಿತಾಯ ದೊಡ್ಡನತ್ತ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕಿಸಾನ್ ರೈಲಿನಲ್ಲಿ 22 ಬೋಗಿಗಳು ಇದ್ದು, 250 ಟನ್ ತೂಕದ ಮಾವನ್ನ ಕಾಟನ್ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ರೈಲಿಗೆ ತುಂಬಿಸಲಾಗಿದೆ. ದೆಹಲಿಗೆ ರಫ್ತು ಮಾಡಲು ರೈಲು ಸೇವೆ ಆರಂಭ ಹಿನ್ನಲೆ, ಮಾವು ಸಾಗಾಣಿಕೆ ಮಾಡೋರಿಗೆ ಹಣ ಉಳಿತಾಯ ಜೊತೆಗೆ ಸಮಯವೂ ಉಳಿತಾಯ ಆಗಲಿದೆ, ರಸ್ತೆ ಸಂಚಾರ ಮೂಲಕ ಪ್ರತಿ ಕೆಜಿ ಮಾವು ಸಾಗಿಸಲು 5 ರಿಂದ 6 ರೂಪಾಯಿ ವೆಚ್ಚ ತಗುಲುತ್ತಿತ್ತು.

ವಿಶ್ವ ಮಾವು ಹಣ್ಣಿನ ನಗರವೆಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಹೆಸರುವಾಸಿ ಪಡೆದಿದ್ದು, ಪ್ರಸಕ್ತ ವರ್ಷದಲ್ಲಿ ಲಾಕ್ ಡೌನ್ ಹಿನ್ನಲೆ ಮಾವಿಗೆ ಬೇಡಿಕೆ ಕುಸಿದು, ಬೆಲೆಯೂ ಇಲ್ಲದಂತಾಗಿದೆ. ಹೀಗಾಗಿ ರೈತರು ಕಡಿಮೆ ಬೆಲೆಗೆ ಬೇರೆಡೆಯ ದಳ್ಳಾಳಿ ಗಳಿಗೆ ಮಾರಾಟ ಮಾಡಲು ಮುಂದಾದಲ್ಲಿ, ಸಾಗಾಣಿಕೆ ವೆಚ್ಚ, ಕಾರ್ಮಿಕರ ಕೂಲಿಗೆ ಶೇಕಡಾ 90ರಷ್ಟು ಹಣ ಖರ್ಚಾಗುತ್ತಿದೆ.

ಹೀಗಾಗಿ, ಸುಮಾರು ರೈತರು ಬೇಡಿಕೆ ಕಡಿಮೆಯಿರುವ ಮಾವನ್ನು ಸಿಕ್ಕ ಬೆಲೆಗೆ ಮಾರಾಟ ಮಾಡಿ ಹೋಗ್ತಿದ್ದಾರೆ. ಇದೀಗ ಕಿಸಾನ್ ರೈಲು ಸೇವೆಯನ್ನ ಸರ್ಕಾರ ಆರಂಭವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಸೇವೆಯನ್ನ ಮುಂದುವರೆಸುವುದಾಗಿ ರೈಲ್ವೆ ಇಲಾಖೆ ಯು ಭರವಸೆ ನೀಡಿದೆ.