Monday, 5th December 2022

ಹಾಲಿನ ದರ ಏರಿಕೆ: ಅಳೆದೂ ಸುರಿದೂ ತೀರ್ಮಾನ

ಕರ್ನಾಟಕ ಹಾಲು ಮಹಾಮಂಡಳಿಗೆ (ಕೆಎಂಎಫ್) ಹಾಲು ಮತ್ತು ಮೊಸರಿನ ದರ ಏರಿಸಲು ಕೊನೆಗೂ ಸರಕಾರ ಹಸಿರು ನಿಶಾನೆ ತೋರಿದೆ. ಕಳೆದ ವಾರವೇ ದರ ಏರಿಕೆ ನಿರ್ಧಾರ ಪ್ರಕಟವಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕೆಎಂಎಫ್ ನಿರ್ಧಾರಕ್ಕೆ ಖುದ್ದುತಡೆ ಹಾಕಿದ್ದರು.

ಹಾಗಾಗಿ ತಾತ್ಕಾಲಿಕವಾಗಿ ಏರಿಕೆ ಸ್ಥಗಿತವಾಗಿತ್ತು. ಗ್ರಾಹಕರೂ ನಾಲ್ಕೈದು ದಿನಗಳ ಮಟ್ಟಿಗೆ ಬೀಸುವ ದೊಣ್ಣೆಯಿಂದ ಪಾರಾ ಗಿದ್ದರು. ಮೊದಲು ಲೀಟರ್‌ಗೆ 3 ರೂ ದರ ಏರಿಕೆ ಮಾಡಲು ಕೆಎಂಎಫ್ ನಿರ್ಧರಿಸಿ ದ್ದರೂ ಮುಖ್ಯಮಂತ್ರಿಗಳ ಮಧ್ಯಪ್ರವೇಶ ದಿಂದ ಪುನರ್ ಪರಿಶೀಲನೆ ನಡೆಸಿ ಇದೀಗ ತನ್ನ ಎಲ್ಲಾ ಬ್ರಾಂಡ್‌ನ ಹಾಲು ಲೀಟರ್‌ಗೆ 2 ರುಪಾಯಿ ಏರಿಕೆ ಮಾಡಲು ತೀರ್ಮಾನಿಸಿದೆ.

ಹಾಲು, ನೀರು, ವಿದ್ಯುತ್ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಬೆಲೆಯಲ್ಲಿ ಸಣ್ಣ ಪ್ರಮಾಣದ ಏರಿಕೆಯಾದರೂ ಜನ ಜೀವನದ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಸದ್ಯವೇ ಚುನಾವಣೆ ಬೇರೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಜನತೆಗೆ ಹೊರೆಯಾಗ ದಂತೆ ದರ ಏರಿಸಲು ಸರಕಾರ ತೀರ್ಮಾನ ಕೈಗೊಂಡಿದೆ. ಈ ದರ ಏರಿಕೆಯಿಂದ ಬರುವ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿರುವುದು ಹಾಲು ಉತ್ಪಾದಕರಿಗೆ ತುಸು ಸಮಾಧಾನ ತರಬಹುದು.

ಹಾಲು ಉತ್ಪಾದಕರಿಗೆ ಪ್ರಸ್ತುತ ಪ್ರತಿ ಲೀಟರ್ ಹಾಲಿಗೆ 29 ರುಪಾಯಿ ಸಿಗುತ್ತಿತ್ತು. ಇನ್ನು ಮುಂದೆ ಸರಾಸರಿ 31 ರಿಂದ 32 ರು. ವರೆಗೆ ಸಿಗಲಿದೆ. ಹಾಲಿನ ದರ ಏರಿಕೆ ಸಂಬಂಧ 15 ದಿನಗಳಿಂದ ಸರಕಾರ ಮತ್ತು ಕೆಎಂಎಫ್ ನಡುವೆ ನಡೆ ಯುತ್ತಿದ್ದ ಹಗ್ಗ ಜಗ್ಗಾಟ ಈ ಮೂಲಕ ಕೊನೆಗೊಂಡಿದೆ. ಗ್ರಾಹಕರ ಪಾಲಿಗೆ ಈ ಏರಿಕೆಯಲ್ಲೂ ಸ್ವಲ್ಪ ಇಳಿಕೆ ಮಾಡಿರುವುದು ಮೈಮೇಲೆ ಬಿಸಿ ಬರೆ ಎಳೆದು ಬಳಿಕ ಮುಲಾಮು ಹಚ್ಚಿದಂತಾಗಿದೆ.

ಚುನಾವಣಾ ವರ್ಷವಾದ್ದರಿಂದ ಸರಕಾರ ಹಾಲು ಉತ್ಪಾದಕರಿಗೂ ಅನ್ಯಾಯವಾಗದಂತೆ, ಗ್ರಾಹಕರಿಗೂ ಹೆಚ್ಚು ಹೊರೆ ಯಾಗದಂತೆ ಸಾಕಷ್ಟು ಅಳೆದೂ ಸುರಿದು ಮಧ್ಯಮ ಮಾರ್ಗದ ತೀರ್ಮಾನ ಕೈಗೊಂಡಿರುವುದು ಜನಸಾಮಾನ್ಯರಿಗೂ ವೇದ್ಯ ವಾಗುತ್ತದೆ.