Monday, 3rd October 2022

ಅಂಕೋಲಾದ ಕೃಷಿಹಬ್ಬವೂ ಮತ್ತು ಮಣ್ಣಿನ ಸಾಂಗತ್ಯವೂ

ಇದೇ ಅಂತರಂಗ ಸುದ್ದಿ

vbhat@me.com

ಒಂದು ತಿಂಗಳ ಹಿಂದೆ, ಕಾರವಾರದ ಖ್ಯಾತ ವಕೀಲರೂ, ಆತ್ಮೀಯ ಸ್ನೇಹಿತರೂ ಆದ ನಾಗರಾಜ ನಾಯಕರು ಫೋನ್ಮಾಡಿ, ತಮ್ಮ ಊರಾದ ಅಂಕೋಲಾದ ಬಾಸಗೋಡಿನಲ್ಲಿ ‘ಕೃಷಿ ಹಬ್ಬ’ವನ್ನು ಸಂಘಟಿಸುತ್ತಿರುವುದಾಗಿಯೂ, ಅದರ ಉದ್ಘಾಟನೆಗೆ
ಬರಲೇಬೇಕೆಂದೂ ಒತ್ತಾಯಪೂರ್ವಕವಾಗಿ ವಿನಂತಿಸಿಕೊಂಡಿದ್ದರು.

ನಾನು ಮರು ಮಾತಾಡದೇ ಒಪ್ಪಿಕೊಂಡಿದ್ದೆ. ಅಂಕೋಲಾದಿಂದ ಮೂವತ್ತೈದು ಕಿಮೀ ದೂರದಲ್ಲಿ ನನ್ನೂರು, ಕುಮಟಾದ ಮೂರೂರು. ಊರಿಗೆ ಹೋಗದೇ ಬಹಳ ದಿನಗಳಾದವು, ಬಾಸಗೋಡಿನ ಕೃಷಿಹಬ್ಬದಲ್ಲಿ ಪಾಲ್ಗೊಂಡು ಊರಿನ ಕಡೆ ಸುತ್ತಾಡಿ ಬರಬಹುದು, ಜತೆಗೆ ಮಳೆಗಾಲ ಬೇರೆ, ಊರಿನ ಮಳೆಗಾಲವನ್ನೂ ಕಣ್ತುಂಬಿಸಿಕೊಳ್ಳಬಹುದು ಎಂದು ಯೋಚಿಸಿದೆ. ನಾಗರಾಜ ನಾಯಕ ಅವರು ಅದಕ್ಕೂ ಮೊದಲು, ಇನ್ನೊಂದು ಕಾರ್ಯಕ್ರಮಕ್ಕೆ ಕರೆದಿದ್ದರು. ಆದರೆ ಹೋಗಲು ಸಾಧ್ಯ ವಾಗಿರಲಿಲ್ಲ.

ಅಂಕೋಲಾ ಸಾಹಿತ್ಯ, ಸಂಸ್ಕೃತಿಗಳ ಅಭಿರುಚಿಯನ್ನು ಅಂತರ್ಗತವಾಗಿಟ್ಟುಕೊಂಡಿರುವ ಒಂದು ವಿಶಿಷ್ಟ ಊರು. ಕರ್ನಾಟಕದ ಬಾರ್ಡೋಲಿ ಎಂದು ಅಂಕೋಲಾಕ್ಕೆ ಕರೆಯುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ ಊರು. ಬಾಸಗೋಡು ಸಮೀಪ ಆ ಸತ್ಯಾಗ್ರಹಿಗಳ ನೆನಪಿನಲ್ಲಿ ಒಂದು ಹೈಸ್ಕೂಲು ಸಹ ಇದೆ. ಕರ ನಿರಾಕರಣೆಯ ಚಳವಳಿಯಲ್ಲಿ ಅಂಕೋಲಾ ಮುಂಚೂಣಿಯಲ್ಲಿತ್ತು. ಸ್ವಾತಂತ್ರ್ಯಾ ನಂತರ ದಿನಕರ ದೇಸಾಯಿ ಅಂಕೋಲಾದ ವೈಶಿಷ್ಟ್ಯವನ್ನು ಮತ್ತಷ್ಟು ಹೆಚ್ಚಿಸಿದರು.

ನನ್ನ ಒಬ್ಬಳು ಅಕ್ಕನ ಪತಿ ದಿವಂಗತಮಾಜಿ ಶಾಸಕರಾದ ಉಮೇಶ ಭಟ್ಟರು ಕೂಡ ಅಂಕೋಲಾದ ಭಾವಿಕೇರಿಯವರು. ಅವರ ಅಣ್ಣ ದಿವಂಗತ ರಾಮ್ ಭಟ್ಟರು ಜಿಯ ಪ್ರಸಿದ್ಧ ಜ್ಯೋತಿಷಿಯಾಗಿದ್ದರು. ಹೀಗಾಗಿ ನನಗೆ ಮೊದಲಿನಿಂದಲೂ ಅಂಕೋಲಾದ ಸೆಳೆತ. ಈಗ ಲಂಡನ್ ವಾಸಿಯಾಗಿ ರುವ ನನ್ನ ಬಾಲ್ಯ ಸ್ನೇಹಿತ ನಿರಂಜನ ನಾಯಕ ಕೂಡ ಅಂಕೋಲಾ
ದವನೇ. ನಾನು ಲಂಡನ್‌ಗೆ ಹೋದಾಗಲೆ ಅವನ ಆತಿಥ್ಯ ಸ್ವೀಕರಿಸಿ ಬರುವುದು ವಾಡಿಕೆ.

ಕರೋನಾ ಮತ್ತಿತರ ಕಾರಣಗಳಿಂದ, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅಂಕೋಲಾಕ್ಕೆ ಹೋಗಲು ಆಗಿರಲಿಲ್ಲ. ಯಾವಾಗ ನಾಗರಾಜ ನಾಯಕ ಅವರು ಕರೆದರೋ, ನಾನು ಮರು ಮಾತಾಡದೇ ಸಮ್ಮತಿಸಿದೆ. ಒಂದು ವೇಳೆ, ನನ್ನ ನೂರೆಂಟು ಕೆಲಸ-ಕಾರ್ಯಗಳ ಮಧ್ಯೆ, ಈ ಕೃಷಿ ಹಬ್ಬವನ್ನು ಭಾಗವಹಿಸದಿದ್ದರೆ ನನ್ನ ಜೀವನದಲ್ಲಿ ಒಂದು ಉತ್ತಮ ಕಾರ್ಯಕ್ರಮ ಮತ್ತು ನೂರಾರು ಸ್ನೇಹಿತರ ಸಾಂಗತ್ಯವನ್ನು ತಪ್ಪಿಸಿಕೊಂಡ ಅಪರಾಧ ಪ್ರಜ್ಞೆಯಿಂದ ವ್ಯಥೆಪಡುತ್ತಿದ್ದೆ.

ನಿಜಕ್ಕೂ ಅದು ಅಂಥದ್ದೊಂದು ಅಪರೂಪದ ಮತ್ತು ಯಾವಜ್ಜೀವ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಕಾರ್ಯಕ್ರಮ. ಈ ಕಾರ್ಯ  ಕ್ರಮಕ್ಕೆ ಹೊರಟು ನಿಂತಾಗ, ವಿದೇಶಾಂಗ ವ್ಯವಹಾರ ಸಚಿವರೂ, ಪರಿಚಿತರೂ ಆದ ವಿದೇಶಾಂಗ ವ್ಯವಹಾರ ಖಾತೆ ಸಚಿವ ಜೈಶಂಕರ ಬೆಂಗಳೂರಿಗೆ ಬರುತ್ತಿರುವುದು ಮತ್ತು ಸಂಪಾದಕರೊಂದಿಗೆ ಸಂವಾದ ನಡೆಸುವ ಕಾರ್ಯಕ್ರಮ ಇಟ್ಟುಕೊಂಡಿರು ವುದು ಗೊತ್ತಾಯಿತು. ಬಿಜೆಪಿಯ ಮಾಧ್ಯಮ ವಿಭಾಗದ ಮಿತ್ರರು ಆ ಸಂವಾದ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನವನ್ನು ನೀಡಿದ್ದರು. ನಾನು ಜೈಶಂಕರ ಅವರನ್ನು ನಾಲ್ಕೈದು ಸಲ ಭೇಟಿಮಾಡಿದ್ದುಂಟು.

ಮೊದಲ ಸಲ ಅವರನ್ನು ರಿಯೋ ಡಿ ಜನೈರೊದಲ್ಲಿ ಭೇಟಿ ಮಾಡಿದಾಗ ಅವರು ವಿದೇಶಾಂಗಸಚಿವರಾಗಿರಲಿಲ್ಲ. ಅನಂತರ ಅವರು ವಿದೇಶಾಂಗ ಸಚಿವರಾದಾಗ, ದಿಲ್ಲಿಯಲ್ಲಿ ಅವರ ಕಚೇರಿಯ ಭೇಟಿ ಯಾಗಿದ್ದೆ. ನನ್ನ ಮುಂದೆ – ಜೈಶಂಕರ ಮತ್ತು ಅಂಕೋಲಾದ ಕೃಷಿಹಬ್ಬ – ಎರಡು ಆಯ್ಕೆಗಳಿದ್ದವು. ನಾನು ಎರಡನೇಯದನ್ನೇ ಆಯ್ಕೆ ಮಾಡಿಕೊಂಡೆ. ನಾವು ಬೇರೆಯವರಿಗೆ ಕಾಯುವುದಕ್ಕಿಂತ, ನಮಗಾಗಿ ಕಾಯುವ ಸಾವಿರಾರು ಮನಸ್ಸುಗಳಿಗೆ ಬೇಸರ, ನಿರಾಸೆಯನ್ನುಂಟು ಮಾಡಬಾರದು.

ಬೆಂಗಳೂರಿನಿಂದ ಅಂಕೋಲಾಕ್ಕೆ ಹೋಗಲು, ಹಿಂದಿನ ದಿನವೇ ಗೋವಾಕ್ಕೆ ವಿಮಾನದಲ್ಲಿ ಹೋಗಿ, ಅಲ್ಲಿಂದ ಕಾರವಾರ
ಮೂಲಕ ಕಾರಿನಲ್ಲಿ ಪ್ರಯಾಣ ಮಾಡಲು ನಿರ್ಧರಿಸಿ, ಕೆಂಪೇಗೌಡ ನಿಲ್ದಾಣಕ್ಕೆ ಹೋದಾಗ, ಏರ್ ಲೈನ್ ಸಿಬ್ಬಂದಿ ದುರ್ವರ್ತನೆ, ಬೇಜವಾಬ್ದಾರಿತನದಿಂದ ವಿಮಾನ ತಪ್ಪಿಸಿಕೊಂಡೆ. ಬೆಂಗಳೂರಿನಿಂದ ಮಂಗಳೂರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವ ವಿಮಾನಗಳೆ ಭರ್ತಿ. ಬೇಕಾದರೆ ಮುಂಬೈ ಮಾರ್ಗವಾಗಿ, ಗೋವಾಕ್ಕೆ ಕಳಿಸಿಕೊಡ್ತೇವೆ ಎಂದು ಏರ್‌ಲೈನ್ ಸಿಬ್ಬಂದಿ ಹೇಳಿದರು.

ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಹಾಗೆ. ಅಪಶಕುನವಾಯ್ತಲ್ಲ, ಎಂದು ವಾಪಸ್ ಮನೆಗೆ ಬಂದೆ. ಮನೆಗೆ ಬಂದಾಗ ರಾತ್ರಿ ಹನ್ನೊಂದು ಗಂಟೆ. ಮರುದಿನವೇ ಬೆಳಗ್ಗೆ ಹತ್ತು ಗಂಟೆಗೆ ಬಾಸಗೋಡಿನಲ್ಲಿ ಕಾರ್ಯಕ್ರಮ. ಏನೇ ಮಾಡಿದರೂ ಕಾರ್ಯ ಕ್ರಮಕ್ಕೆ ಹೋಗಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ, ನಾಗರಾಜ ನಾಯಕರಿಗೆ ಫೋನ್ ಮಾಡಿದೆ. ಅವರು ಅತೀವ ನಿರಾಶ ರಾದರು. ಹೇಗಾದರೂ ಮಾಡಿ ನಾಳೆ ಬರಲೇಬೇಕು, ನೀವು ಬರದಿದ್ದರೆ ನಿರಾಸೆ ಯಾಗುತ್ತದೆ ಎಂದು ಖಿನ್ನ ಮನಸ್ಕರಾಗಿ ನುಡಿದರು. ನನಗೆ ಅವರ ಮನಸ್ಸನ್ನು ನೋಯಿಸಲು ಇಷ್ಟವಿರಲಿಲ್ಲ.

ಅಷ್ಟೊತ್ತಿಗೆ ರಾತ್ರಿ ಹನ್ನೊಂದು ಮುಕ್ಕಾಲು. ವಾರದಲ್ಲಿ ನಾಲ್ಕು ದಿನ ವಿಮಾನ ದ ಇರುವ ನನ್ನ ಸ್ನೇಹಿತರಾದ ನವೀನ ಪಾಟೀಲರಿಗೆ ವಿಷಯ ತಿಳಿಸಿದೆ. ಅವರು ಅದೇನು ಜಾದು ಮಾಡಿದರೋ ಗೊತ್ತಿಲ್ಲ, ಮರುದಿನ ಮುಂಜಾನೆ ಆರೂಕಾಲು ಗಂಟೆಗೆ ಹುಬ್ಬಳ್ಳಿ ವಿಮಾನದಲ್ಲಿ ಒಂದು ಟಿಕೆಟ್ ದಯಪಾಲಿಸಿದರು. ನಾನು ತಕ್ಷಣ ಮುಸುಕೆಳೆದು ಮಲಗಿ, ಒಂದೂವರೆ ಗಂಟೆ
ಮಲಗಿದೆ. ಬೆಳಗ್ಗೆ ಎರಡು ಗಂಟೆಗೆ ದಿಗ್ಗನೆ ಎದ್ದು, ಸ್ನಾನ – ಪೂಜೆ ಮಾಡಿ, ಮೂರೂವರೆ ಗಂಟೆಗೆ ಹೊರಟು ಬಿಟ್ಟೆ. ಆ ವಿಮಾನ ವನ್ನು ಹಿಡಿದು, ಹುಬ್ಬಳ್ಳಿಯಲ್ಲಿಳಿದೆ. ನಾಗರಾಜ ನಾಯಕರು ಅಲ್ಲಿ ಕಾರಿನಲ್ಲಿ ಕಾಯುತ್ತಿದ್ದರು.

ಅಲ್ಲಿಂದ ಎರಡೂವರೆ ಕಾರಿನಲ್ಲಿ ಕಲಘಟಗಿ, ಯಪುರ ಮಾರ್ಗವಾಗಿ ಕಾರ್ಯಕ್ರಮದ ತಾಣ ತಲುಪಿದಾಗ, ಸರಿಯಾಗಿ ಹತ್ತು ಗಂಟೆ. ರಾತ್ರಿ ಹನ್ನೊಂದು ಮುಕ್ಕಾಲರ ಹೊತ್ತಿಗೆ ನಾನು ಮರುದಿನ ಬೆಳಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮದಲ್ಲಿ ಭಾಗವಹಿಸು ತ್ತೇನೆ ಎಂಬ ಭರವಸೆ ಇರಲಿಲ್ಲ. ಸಂಕಲ್ಪ ಮತ್ತು ದೃಢನಿರ್ಧಾರವಿದ್ದರೆ ಹತ್ತಾರು ದಾರಿಗಳು ತೆರೆದುಕೊಳ್ಳುತ್ತವೆ ಎಂಬುದು ನನಗೆ ಮತ್ತೊಮ್ಮೆ ಮನವರಿಕೆಯಾಯಿತು. ಸುಸ್ತು, ಅಪಶಕುನ, ಆಯಾಸ, ಬಳಲಿಕೆ, ನಿದ್ರಾಹೀನತೆ.. ಹೀಗೆ ಏನೋ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಬಹುದಿತ್ತು. ಅದಕ್ಕೆ ಪೂರಕವಾದ ಸಕಾರಣಗಳೂ ಇದ್ದವು.

ಯಾವತ್ತೂ ಏನಾದರೂ ಕೆಲಸ ಮಾಡಬೇಕು ಎಂದಾಗ ನಮ್ಮ ಮುಂದೆ ಇರುವುದು ಒಂದೇ ಕಾರಣ – ಆ ಕೆಲಸವನ್ನು
ಮಾಡಬೇಕೆನ್ನುವುದು. ಮಾಡಬಾರದು ಎಂದು ನಿರ್ಧರಿಸಿದರೆ, ನೂರಾರು ಕಾರಣಗಳು. ಮಾಡಲೇಬೇಕು ಎಂದು ನಿರ್ಧರಿಸಿ
ದಾಗ, ಕುಂಟು ನೆಪಗಳು ಬಂದ್ ಮಾಡಿದ್ದ ಮಾರ್ಗಗಳೆ ತನ್ನಷ್ಟಕ್ಕೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಇಚ್ಛಾಶಕ್ತಿಯನ್ನು ಕಟ್ಟಿ
ಹಾಕುವ ಯಾವ ಶಕ್ತಿಯೂ ಇಲ್ಲ ಎನ್ನುತ್ತಾರಲ್ಲ, ಅದು ನೂರಕ್ಕೆ ನೂರು ನಿಜ.

ಎಷ್ಟೋ ಸಲನಾವು ಈ ಇಚ್ಛಾಶಕ್ತಿಯನ್ನು ಬಳಸುವುದೇ ಇಲ್ಲ. ಕುಂಟು ನೆಪ ಹೇಳುವ ಖಾಸಾಭದ್ರ ಕತೆಗೆ ಕಿವಿಯೊಡ್ಡುತ್ತೇವೆ. ಅದು ನಮ್ಮಿಂದ ಯಾವ ಕೆಲಸವೂ ಆಗದಂತೆ ನಿಷ್ಕ್ರಿಯರನ್ನಾಗಿ ಮಾಡಿಬಿಡುತ್ತದೆ. ಸೋಜಿಗವೆಂದರೆ, ಈ ಇಚ್ಛಾಶಕ್ತಿ ಮತ್ತು
ಕುಂಟುನೆಪಗಳೆರಡೂ ಬೇರೆ ಇರುವಂಥದ್ದಲ್ಲ. ನಮ್ಮೊಳಗೇ ಇರುವಂಥದ್ದು. ಇವೆರಡಕ್ಕೂ ನಾವೇ ಉತ್ತರದಾಯಿಗಳು. ಇವನ್ನು ನಾವು ಹೇಗೆ ಬಳಸಿಕೊಳ್ಳಬೇಕು ಎಂಬುದು ನಮಗೆ ಬಿಟ್ಟಿದ್ದು.

ಕೃಷಿ ಹಬ್ಬದ ಆಶಯ
ಸುಮಾರು ಎರಡು ದಶಕಗಳ ಹಿಂದೆ, ಬೆಂಗಳೂರಿನಲ್ಲಿ ನಡೆದ ಕೃಷಿಮೇಳದಲ್ಲಿ ನಾನು ಭಾಗವಹಿಸಿದ್ದೆ. ಆ ಕೃಷಿಮೇಳವನ್ನು ನೋಡಿ ಎಲ್ಲರಂತೆ ನಾನೂ ದಂಗಾಗಿದ್ದೆ. ಆ ಯೋಚನೆ ಯಾರಿಗೋ ಬಂದಿತ್ತೋ ಕಾಣೆ. ಕಾರಣ ಆ ಕೃಷಿ ನಡೆದಿದ್ದು ಬೆಂಗಳೂರಿನ ಐಷಾರಾಮಿ ಪಂಚತಾರಾ ಹೋಟೆಲಿನಲ್ಲಿ. ಮೂರು ದಿನಗಳ ಕಾಲ ನಡೆದ ಈ ಮೇಳದಲ್ಲಿ ಕೃಷಿಕರು ಬೆಳೆದ ಬೆಳೆಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ದೇಶ ಮತ್ತು ಆಯೋಜನೆ ಸಮರ್ಪಕವಾಗಿತ್ತು. ಆದರೆ ಕಾರ್ಯಕ್ರಮ ನಡೆದ ಸ್ಥಳ, ಕೃಷಿಕರನ್ನು ಅಣಕಿಸು ವಂತಿತ್ತು, ಅವಮಾನಿಸುವಂತಿತ್ತು. ಆ ಬಗ್ಗೆ ತೀವ್ರ ವಿರೋಧ ಮತ್ತು ಟೀಕೆಗಳು ಕೇಳಿ ಬಂದವು. ಅಂಥ ಒಳ್ಳೆಯ ಕಾರ್ಯಕ್ರಮ ವನ್ನು ಎಲ್ಲಿ, ಯಾವಪರಿಸರದಲ್ಲಿ ಏರ್ಪಡಿಸಬೇಕು ಎಂಬ ವಿವೇಕ ಸಂಘಟಕರಿಗೆ ಇರಬೇಕು. ಇಲ್ಲದಿದ್ದರೆ ಮೂಲ ಆಶಯಕ್ಕೆ ಕುಟಾರಘಾತಹಾಕಿದಂತಾಗುತ್ತದೆ.

ಅಂಕೋಲಾದ ಬಾಸಗೋಡಿನಲ್ಲಿ ನಡೆದ ನಡೆದ ಕೃಷಿ ಹಬ್ಬವನ್ನು ಸಂಘಟಕರು ಪಕ್ಕಾ ಅರಲುಗದ್ದೆ ಅಥವಾ ಕೆಸರು
ಗzಯಲ್ಲಿ ಏರ್ಪಡಿಸಿದ್ದರು. ಅಲ್ಲಿ ಪುಟ್ಟ, ಅಚ್ಚುಕಟ್ಟಾದ ವೇದಿಕೆ. ಅದರ ಮೇಲೆ ಕುರ್ಚಿಗಳೂ ಇರಲಿಲ್ಲ. ಕಾಲನ್ನು ಕೆಸರು ಗದ್ದೆಗೆ ಇಳಿಬಿಟ್ಟುಕೊಂಡು ಕುಳಿತುಕೊಳ್ಳಬೇಕು. ನೇಗಿಲ ಹಾಡಿನ ಮೂಲಕ ಕಾರ್ಯಕ್ರಮ ಆರಂಭ. ಮೊದಲಿಗೆ ರಾಷ್ಟ್ರ ಧ್ವಜಕ್ಕೆ ವಂದನೆ. ಕಾರ್ಯಕ್ರಮದಲ್ಲಿ ಶಾಲಿನ ಬದಲು ಅತಿಥಿಗಳಿಗೆಲ್ಲ ಕಂಬಳಿ ಕೊಪ್ಪೆ. ನೊಗಕ್ಕೆ ಕಟ್ಟಿದ ಜೋಡೆತ್ತುಗಳಿಂದ,
ನೇಗಿಲಿನಿಂದ ಉಳುವ ಮೂಲಕ ಉದ್ಘಾಟನೆ. ನಂತರ ಗಣ್ಯರಿಂದ ಮಾತು.

ನನಗೆ ಕವಿತಾ ಮಿಶ್ರಾ ಅವರನ್ನು ಕಂಡರೆ ಅಪಾರ ಗೌರವ. ನಾನು ಅವರನ್ನು ಬೆಂಬಿಡದೇ ಅವರಿಂದ ‘ವಿಶ್ವವಾಣಿ’ಯಲ್ಲಿ
ಅಂಕಣ ಬರೆಯಿಸಿz. ಕಂಪ್ಯೂಟರ್ ಕೃಷಿಯನ್ನು ಬಿಟ್ಟು ಕೃಷಿ ಯನ್ನೇ ಖುಷಿಯಿಂದ ಆಯ್ದುಕೊಂಡ ಒಬ್ಬ ಅಪರೂಪದ ಗೃಹಿಣಿ ಅವರು. ಇಂದಿನ ಅನೇಕ ಮಹಿಳೆಯರಿಗೆ ಆದರ್ಶ ಪ್ರಾಯರಾದ, ಪ್ರೇರಕಶಕ್ತಿಯಾದ ಮಹಾತಾಯಿ. ರಾಯಚೂರಿನ ಬರಡು, ಬಿಸಿ ನೆಲದಲ್ಲಿ ಶ್ರೀಗಂಧ ಬೆಳೆದು ರೈತರೂ ಕೋಟಿ ಹಣ ಗಳಿಸಬಹುದು ಎಂಬುದನ್ನು ಸಾಬೀತು ಮಾಡಿದ ಅಪ್ರತಿಮ ಸಾಧಕಿ. ಬದುಕಿನಲ್ಲಿ ತಾವು ಎದುರಿಸಿದ ಕಷ್ಟ, ಅಪಮಾನ, ಮೂದಲಿಕೆ, ಟೀಕೆ, ನಕಾರಾತ್ಮಕ ಮಾತುಗಳನ್ನು ಕೇಳುತ್ತಾ, ಅವನ್ನೆ ಮೆಟ್ಟಿ ನಿಂತು, ತಾವು ಆಯ್ದುಕೊಂಡ ಕೃಷಿಯನ್ನೇ ಉಸಿರಾಗಿಸಿ, ಸಾಧನೆಯ ಮಾರ್ಗದಲ್ಲಿ ನೂರಾರು ಸಂಕಷ್ಟಗಳನ್ನು ಎದುರಿಸಿಯೂ ವಿಮುಖರಾಗದೇ, ಸಾಧನೆಗೆ ಮುಖ ಮಾಡಿ, ತಮ್ಮ ಹೋರಾಟದ ಹಲವು ಮಜಲುಗಳನ್ನು ವಿವರಿಸಿದ್ದು ಇಡೀ ಕಾರ್ಯಕ್ರಮಕ್ಕೆ ಕಳೆಕಟ್ಟುವಂತಿತ್ತು.

ಕವಿತಾ ಮಿಶ್ರಾ ಮಾತುಗಳನ್ನು ಕೇಳಿ ನೂರಾರು ಮಹಿಳೆಯರು, ತಮ್ಮ ಗಂಡನೊಂದಿಗೆ, ತೋಟ-ಗದ್ದೆ-ಹೊಲದ ಕಡೆಗೆ ಹೆಜ್ಜೆ ಹಾಕಿದ್ದನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ. ವ್ಯವಸಾಯ ಅಂದ್ರೆ ಉದಾಸೀನ ಮಾಡುತ್ತಿದ್ದ ಮಹಿಳೆಯರು ಕವಿತಾ ಮಿಶ್ರಾ ಅವರ ಮಾತುಗಳನ್ನು ಕೇಳಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ತಮ್ಮ ಗಂಡಂದಿರನ್ನು ಮತ್ತಷ್ಟು ಗೌರವದಿಂದ, ಮರ್ಯಾದೆಯಿಂದ ಕಾಣುವುದನ್ನು ಕಾಣುವುದನ್ನು ಸಹ ನೋಡಿದ್ದೇನೆ.

ಅವರ ಮಾತಿನಲ್ಲಿ ಅಂಥ ಮಾಂತ್ರಿಕ ಶಕ್ತಿಯಿದೆ. ಅಷ್ಟಕ್ಕೂ ಅವರು ಹೇಳುವುದು ತಮ್ಮ ಕಥೆಯನ್ನೇ. ಆ ಸಾಹಸಗಾಥೆಗೆ ಸಮಾಜವನ್ನು ಪರಿವರ್ತಿಸುವ ತಾಕತ್ತಿದೆ. ಇಂದು ಅವರ ಹೊಲ ಮತ್ತು ಶ್ರೀಗಂಧ ತೋಟ ಒಂದು ಭವ್ಯ ಪ್ರಯೋಗಾಲಯ ವಾಗಿದೆ. ಅದನ್ನು ನೋಡಲು ದೇಶದ ಎಲ್ಲಿಂದಲೋ ಜನ ಬರುತ್ತಾರೆ. ಕೃಷಿ ವಿಶ್ವವಿದ್ಯಾಲಯ, ಸರಕಾರ ಮಾಡ ಬೇಕಾದ ಕೆಲಸವನ್ನು ಒಬ್ಬಳು ಹೆಣ್ಣು ಮಗಳು ಮಾಡುತ್ತಿರುವುದು ಸಣ್ಣ ವಿಷಯವಲ್ಲ.

ಇಂಥವರು ಕೃಷಿ ಹಬ್ಬಕ್ಕೆ ನಿಜಕ್ಕೂ ಭೂಷಣ. ಅವರು ತಮ್ಮ ಅನುಭವಗಳನ್ನು ಹೇಳಿದರೆ ಸಾಕು, ಎಂಥವರಿಗಾದರೂ ಕೃಷಿಯಲ್ಲಿ ತೊಡಗಿದವರ ಬಗ್ಗೆಯೇ ಒಂದು ಹಿಡಿ ಪ್ರೀತಿಮೂಡುತ್ತದೆ. ಈ ಕಾರ್ಯಕ್ರಮದಲ್ಲಿ ನಾನು ಗೌರವಿಸುವ, ಇಷ್ಟ ಪಡುವ, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಮತ್ತೂರಿನ ಭಾನುಪ್ರಕಾಶ ಸಹ ಭಾಗಸಿವಹಿದ್ದು ವಿಶೇಷ ವಾಗಿತ್ತು. ನಮ್ಮ ರಾಜಕಾರಣದಲ್ಲಿ ಭಾನುಪ್ರಕಾಶ ಅವರಂಥ ಸಾತ್ವಿಕರು, ಸಂಪನ್ನರು ಇದ್ದಾರೆ ಎಂಬುದು ಸಮಾಧಾನದ ವಿಷಯ.

ಇಂಥವರ ಧ್ವನಿ ಕ್ಷೀಣವಾಗಬಾರದು. ಇಂದಿಗೂ ಸಂಘಟನೆಯಲ್ಲಿ ಅವರು ಪ್ರೇರಕಶಕ್ತಿಯಾಗಿದ್ದಾರೆ. ಅವರು ಹೇಳಿದ
ಸೂರ್ತಿಯ ಮಾತುಗಳು ಕಾರ್ಯಕ್ರಮಕ್ಕೆ ಆಪ್ತವಾಗಿತ್ತು. ಕೃಷಿ ಹಬ್ಬದಲ್ಲಿ ಜೇನುಕೃಷಿಯಲ್ಲಿ ತೊಡಗಿದವರನ್ನೂ ಸನ್ಮಾಸಿದ್ದು
ಅರ್ಥಪೂರ್ಣವಾಗಿತ್ತು. ಜೇನುಹುಳು, ಎರೆಹುಳುಗಳಿಲ್ಲದೇ ಕೃಷಿ ಮಾಡಲು ಸಾಧ್ಯವೇ? ಆದರೆ ಇವೆರಡೂ ಉಪೇಕ್ಷೆಗೆ
ಒಳಗಾಗಿರುವುದು ಆಶ್ಚರ್ಯವೇ ಸರಿ.

ಕೃಷಿ ಚಟುವಟಿಕೆಯೆಂದರೆ ಅದು ಗಂಡಸರ ಸ್ವತ್ತಲ್ಲ ಎಂಬುದನ್ನು ಕವಿತಾ ಮಿಶ್ರಾ ಈಗಾಗಲೇ ಸಾಬೀತು ಮಾಡಿದ್ದಾರೆ. ಹಾಗೆಯೇ, ತನ್ನ ಗಂಡ ಮತ್ತು ಮಗನನ್ನು ಕಳೆದುಕೊಂಡ ಅಂಕೋಲಾದ ಹಾಲಕ್ಕಿ ಮಹಿಳೆ ತುಳಸಿ ಗೌಡ ನೇಗಿಲು ಹಿಡಿದು,
ಭತ್ತದ ಕೃಷಿಯಲ್ಲಿ ತೊಡಗಿದ ವಿಡಿಯೋ ತುಣುಕು ಕೆಲದಿನಗಳ ಹಿಂದೆ ವೈರಲ್ ಆಗಿತ್ತು. ಕೃಷಿ ಹಬ್ಬಕ್ಕೆ ಆ ಮಹಿಳೆಯನ್ನು
ಆಮಂತ್ರಿಸಿ, ಸನ್ಮಾಸಿದ್ದು ಸಹ ಹೃದಯಸ್ಪರ್ಶಿಯಾಗಿತ್ತು.

ನಂತರ ಭತ್ತದ ಗzಯಲ್ಲಿ ನಾಟಿ ಮಾಡಿದ್ದು ನನಗೆ ಹಿಡಿಸಿದ ಕಾರ್ಯಕ್ರಮಗಳಂದು. ಹೈಸ್ಕೂಲು ದಿನಗಳಲ್ಲಿ ನಾಟಿಮಾಡಿದ್ದೇ ನನ್ನಲಿ ಉಳಿದ ಕೊನೆಯ ನೆನಪು. ಅನಂತರ ಆ ಅವಕಾಶವೇ ಒದಗಿ ಬಂದಿರಲಿಲ್ಲ. ಇದು ನನ್ನಲ್ಲಿ ಮಣ್ಣಿನಿಂದ ದೂರವಾಗಿದ್ದರ ಪಾಪಪ್ರಜ್ಞೆ ಮತ್ತು ಅನಾಥಪ್ರಜ್ಞೆಯನ್ನು ಒಂದು ಕ್ಷಣ ಮೂಡಿಸಿದ್ದು ಸುಳ್ಳಲ್ಲ. ಭತ್ತದ ಗzಗೆ ಇಳಿಯದೇ, ಭತ್ತದ ಸಸಿ ನೆಟ್ಟು ನಾಟಿ ಮಾಡದೇ ಅವೆಷ್ಟೋ ವರ್ಷಗಳೇ ಆಗಿದ್ದವು. ನಮ್ಮ ಊಟದ ತಾಟಿನಲ್ಲಿ ಅನ್ನಸುಲಭವಾಗಿ ಬಂದು ಬೀಳುವುದಿಲ್ಲ.

ಅದರ ಹಿಂದೆ ಕೃಷಿಕನ ಬೆವರಗಾಥೆಯಿರುತ್ತದೆ, ಕಣ್ಣೀರ ಕಥೆ ಇರುತ್ತದೆ. ಆದರೆ ಅನ್ನವನ್ನು ಕಲಸುವಾಗ ಆತ ನೆನಪೇ ಆಗುವು
ದಿಲ್ಲ. ಅದು ನಮ್ಮ ಆದ್ಯತೆಯನ್ನು ತೋರಿಸುತ್ತದೆ. ಇದು ಅತ್ಯಂತ ದುರದೃಷ್ಟಕರ. ಅನ್ನ ಕೊಡುವ ಕೈಗಳನ್ನು ಮರೆಯ
ಬಾರದು. ಇದನ್ನು ಪದೇ ಪದೆ ನೆನಪಿಸುವುದೇ ಇಂಥ ಹಬ್ಬಗಳ ಆಶಯ.

ಅಷ್ಟಕ್ಕೂ ನಮ್ಮ ಬದುಕಿನ ತಾಯಿಬೇರಿರುವುದು ಮಣ್ಣಿನಲ್ಲಿ. ಆದಿ-ಅಂತ್ಯವಿರುವುದೂ ಮಣ್ಣಿನ. ಆದರೆ ಹುಟ್ಟುವ ಮಗುವಿನ ಮೈಗೆ ಮಣ್ಣನ್ನು ತಾಕಿಸದೇ, ಧೂಳನ್ನು ಸೋಂಕಿಸದೇ ಬೆಳೆಸುತ್ತೇವೆ. ಅದರಲ್ಲೂ ಅಪಾರ್ಟಮೆಂಟಿನಲ್ಲಿರುವವರು ಮಣ್ಣನ್ನು ಮರೆತು, ಮಣ್ಣಿಗಿಂತ ಎತ್ತರದಲ್ಲಿ ಬದುಕುತ್ತಾರೆ. ಅವರಿಗೆ ಮಣ್ಣು ಅಲರ್ಜಿ, ಧೂಳು ಅಂದ್ರೆ ಸೀನು. ಅಲ್ಲಿ ಬೆಳೆಯುವ ಮಕ್ಕಳು ಮಣ್ಣಿನ ಹಂಗಿಲ್ಲದೇ ಬೆಳೆಯುತ್ತಾರೆ.

ಅಂಥ ಮಕ್ಕಳು ಅಪ್ಪಿತಪ್ಪಿ ಮೈಕೈಗಳನ್ನು ಮಣ್ಣು ಮಾಡಿಕೊಂಡರೆ, ತಂದೆ-ತಾಯಿಗಳು ಗದರುತ್ತಾರೆ. ಮಕ್ಕಳು ಮಣ್ಣಿನಲ್ಲಿ
ಆಡುವುದನ್ನು ಯಾವ ತಂದೆ-ತಾಯಿಯೂ ಇಷ್ಟಪಡುವುದಿಲ್ಲ. ಡರ್ಟಿ ಫೆಲೋ, ಕೊಳಕು ಮನುಷ್ಯ ಎಂದು ಜರೆಯುತ್ತಾರೆ.
ಆರಂಭದಿಂದಲೇ ಮಣ್ಣಿನ ಬಗ್ಗೆ ಒಂದು ತಾತ್ಸರ, ಕೆಟ್ಟ ಭಾವನೆಯೊಂದಿಗೇ ಮಕ್ಕಳನ್ನು ಬೆಳೆಸುವುದನ್ನು ನೋಡುತ್ತಿದ್ದೇವೆ.
ನನಗೆ ಈ ಕೃಷಿ ಹಬ್ಬ ‘ಮರಳಿ ಮಣ್ಣಿಗೆ’ ಎಂಬ ಮಾತಿನಲ್ಲಿರುವ ಅಂತಃಸತ್ವವನ್ನು ನಿಚ್ಚಳವಾಗಿ ನೆನಪಿಸಿತು. ಮನಸ್ಸಿನಲ್ಲಿ ನಾಗರಾಜ ನಾಯಕರಿಗೆ ನೂರು ನಮಸ್ಕಾರ ಹಾಕಿದೆ.