Saturday, 20th August 2022

ಕುಲದೀಪ್‌ ಬಿಷ್ಣೋಯಿ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಹರಿಯಾಣ ಕಾಂಗ್ರೆಸ್‌ನ ಮಾಜಿ ನಾಯಕ ಕುಲದೀಪ್‌ ಬಿಷ್ಣೋಯಿ ಅವರು ತಮ್ಮ ಪತ್ನಿ ರೇಣುಕಾ ಬಿಷ್ಣೋಯಿ ಅವರೊಂದಿಗೆ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರ ಸಮ್ಮುಖದಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಯಾದರು.

ಮಾಜಿ ಮುಖ್ಯಮಂತ್ರಿ ಭಜನ್‌ ಲಾಲ್‌ ಅವರ ಪುತ್ರ ಕುಲದೀಪ್‌ ಬಿಷ್ಣೋಯಿ, ನಾಲ್ಕು ಬಾರಿ ಶಾಸಕರಾಗಿ ಮತ್ತು ಎರಡು ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರ ಪತ್ನಿ ರೇಣುಕಾ ಕೂಡ ಮಾಜಿ ಶಾಸಕಿ.

ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಷ್ಣೋಯಿ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಮುಖ್ಯಮಂತ್ರಿ ಖಟ್ಟರ್‌, ಬಿಷ್ಣೋಯಿ ಸೇರ್ಪಡೆ ಸಂಘಟನೆಗೆ ಬಲ ತುಂಬಲಿದೆ ಎಂದು ಹೇಳಿದರು.

ಬಿಷ್ಣೋಯಿ ಅವರು ಕಾಂಗ್ರೆಸ್‌ ಶಾಸಕರಾಗಿದ್ದರೂ, ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು. ಅವರು ಪ್ರಧಾನಮಂತ್ರಿ ನಾಯಕತ್ವ ವನ್ನು ಬೆಂಬಲಿಸುತ್ತಿದ್ದಾರೆ ಎಂದೂ ಖಟ್ಟರ್ ಉಲ್ಲೇಖಿಸಿದ್ದಾರೆ.

ಮೋದಿ ‘ಶ್ರೇಷ್ಠ ಪ್ರಧಾನಿ’ ಎಂದು ಶ್ಲಾಘಿಸಿದ ಬಿಷ್ಣೋಯಿ, ದೇಶ ಮತ್ತು ಬಡವರ ಕಲ್ಯಾಣದ ಬಗ್ಗೆ ಚಿಂತಿಸುವ ಅವರನ್ನು ‘ಭಾರತದ ಅತ್ಯುತ್ತಮ ಪ್ರಧಾನಿ’ ಎಂದು ವರ್ಣಿಸಿದರೆ ತಪ್ಪಾಗುವುದಿಲ್ಲ ಎಂದು ಹೊಗಳಿದ್ದಾರೆ.