Wednesday, 1st February 2023

ಕ್ಯಾತ್ಸಂದ್ರದಿಂದ ಕ್ಯಾತನಮಕ್ಕಿಗೆ

ಸಿ ಜಿ ವೆಂಕಟೇಶ್ವರ

ಕಳಸದಿಂದ ಇಪ್ಪತ್ತು ಕಿಲೊಮೀಟರ್ ದೂರದಲ್ಲಿರುವ ಕ್ಯಾತನ ಮಕ್ಕಿಯಲ್ಲಿ ಸ್ವರ್ಗ ಸಮಾನ ದೃಶ್ಯಗಳು, ಹಿತವಾದ ತಂಗಾಳಿ, ಮೋಡಗಳೊಡನೆ ಆಟ.

ಇದ್ಯಾವ ಸೀಮೆ ರೋಡ್ ರೀ, ನಿಲ್ಸಿ ನಾನು ಇಳೀತೀನಿ’ ಎಂದು ಚಾಲಕನನ್ನು ಬೆಂಡೆತ್ತಿದೆ. ‘ಸಾರ್ ಈ ರಸ್ತೆ ಸಾವಿರ ಪಾಲು ಮೇಲು. ಮೊದಲು ಹೀಗಿರಲಿಲ್ಲ’ ಎಂದ ಅಖಿಲ್. ಎಲ್ಲಿದೆ ರಸ್ತೆ? ಎಂದು ಹುಡುಕಿದೆ. ಅಲ್ಲಿ ರಸ್ತೆಯೇ ಇಲ್ಲ! ಕಡಿದಾದ ಗುಡ್ಡ, ಕಲ್ಲು ಮಣ್ಣು, ಅಲ್ಲಲ್ಲಿ ಗಿಡಗಂಟೆ. ನಾವು ಕುಳಿತಿದ್ದ ನಾಲ್ಕು ಇಂಟು ನಾಲ್ಕು ಜೀಪ್.

ಚಾಲಕ ಸ್ಟೆರಿಂಗ್ ತಿರುಗಿಸಿದಾಗ ಎಡ ಸೀಟಿನ ತುದಿಯಿಂದ ಬಲ ಸೀಟಿಗೆ ಬಂದು ಬಿದ್ದಾಗ ಈ ಮೇಲಿನಂತೆ ಜೀಪ್ ಚಾಲಕನಿಗೆ ಬೈದಿದ್ದೆ. ಕ್ಯಾತ್ಸಂದ್ರದಿಂದ ಬಂದಿದ್ದ ನಾವು ಐವರು ಆ ಜೀಪ್‌ನಲ್ಲಿ ಕುಳಿತಿದ್ದೆವು!

ನಿಧಾನವಾಗಿ ಮಾತನಾಡುತ್ತಾ ಅಖಿಲ್ ಜೀಪ್ ಚಾಲನೆ ಮಾಡುತ್ತಿದ್ದ. ನನಗೆ ಅವನ ಚಾಲನೆ ಮತ್ತು ರಸ್ತೆ ನೋಡಿ ಜೀಪಿನಲ್ಲಿ
ಕುಳಿತು ಪಕ್ಕಕ್ಕೆ ನೋಡಿದೆ. ಭಯವಾಯಿತು. ಕೆಳಗಡೆ ದೊಡ್ಡ ಪ್ರಪಾತ! ಬೆಳಿಗ್ಗೆ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನ ಪಡೆದು ಬಂದ ನಾನು ಮತ್ತೆ ತಾಯಿಯನ್ನು ಬೇಡಿದೆ – ಸುರಕ್ಷಿತವಾಗಿ ನಮ್ಮ ಸ್ಥಳ ತಲುಪಿಸಲು!

ನನ್ನ ಜೊತೆಯಲ್ಲಿ ಇದ್ದ ನನ್ನ ಸಹ ಪ್ರವಾಸಿಗರ ಕಥೆಯೂ ಅದೇ ಆಗಿತ್ತು. ನಮ್ಮ ನೋಡಿ ನಗುತ್ತಲೇ ಅಖಿಲ್ ‘ಸರ್ ಭಯ ಪಡಬೇಡಿ. ಇನ್ನೂ ಕೆಲವೇ ನಿಮಿಷ ಗಟ್ಟಿಯಾಗಿ ಹಿಡಿದು ಕುಳಿತುಕೊಳ್ಳಿ. ನಾನು ನಿಮ್ಮನ್ನು ಕ್ಯಾತನಮಕ್ಕಿಗೆ ಕರೆದುಕೊಂಡು ಹೋಗುವೆ’ ಎಂದು ಧೈರ್ಯ ತುಂಬಿದ! ಅಖಿಲ್ ಮಾತನಾಡುತ್ತಾ ಗಾಡಿ ಚಲಾಯಿಸುತ್ತಿದ್ದ. ಅಲ್ಲಿನ ಕೃಷಿಯಾದ ಏಲಕ್ಕಿ ಅಡಿಕೆ ಮೆಣಸು, ಕಾಫಿ , ಮುಂತಾದವುಗಳ ಕೃಷಿ ಮತ್ತು ಆ ಕೃಷಿ ಜೀವನದ ಏರು ಪೇರುಗಳ ಬಗ್ಗೆ ಮಾತನಾಡುತ್ತಾ ಜೀಪ್‌ಅನ್ನು ಕಡಿದಾದ ಬೆಟ್ಟದ ಮೇಲೆ ಹತ್ತಿಸುತ್ತಿದ್ದ. ಕೆಲವೊಮ್ಮೆ ಹಿಂದಕ್ಕೆ ಚಲಿಸಿ ಪುನಃ ಮುಂದಕ್ಕೆ ಗೇರ್ ಹಾಕುತ್ತಿದ್ದ. ಅವನಲ್ಲದೆ ಬೇರಾರೂ ಆ ಜೀಪನ್ನು ಚಲಿಸಲು ಅಸಾಧ್ಯ ಎನಿಸಿತು, ಆ ಕ್ಷಣಕ್ಕೆ!

ಸ್ವಲ್ಪ ದೂರ ಚಲಿಸಿದ ಮೇಲೆ ಒಂದೆಡೆ ನಿಲ್ಲಿಸಿ ‘ಟಿಕೆಟ್ ತೊಗೊಳ್ಳಿ ಸರ್’ ಎಂದ. ಒಬ್ಬರಿಗೆ ಐವತ್ತು ರೂಪಾಯಿಯಂತೆ ಇನ್ನೂರೈವತ್ತು ಕೊಟ್ಟು ಐದು ಟಿಕೆಟ್ ತೆಗೆದುಕೊಂಡೆವು. ಜೀಪ್ ಮುಂದೆ ಸಾಗಿತು. ಮತ್ತದೇ ಕೊರಕಲು, ಗುಂಡಿ ಕಲ್ಲು ಮತ್ತು ರಸ್ತೆಯಲ್ಲದ ರಸ್ತೆ. ಎಂಟು ಕಿಲೋಮೀಟರ್ ಹಾದಿಗೆ ಅವನ್ಯಾಕೆ ಎರಡು ಸಾವಿರ ಕೇಳಿದ ಎಂಬುದು ಆಗ ನನಗೆ  ಮನವರಿಕೆಯಾಯಿತು.

ಸುಮಾರು ಅರ್ಧಗಂಟೆಯ ಪ್ರಯಾಸದ ಪ್ರಯಾಣದ ನಂತರ ಒಂದೆಡೆ ನಿಲ್ಲಿಸಿ ‘ಇಳೀರಿ ಸರ್, ಇದೇ ಕ್ಯಾತನಮಕ್ಕಿ, ಇಲ್ಲಿಂದ ಮುಂದೆ ನಡೆದು ಕೊಂಡು ಹೋಗಿ. ಐನೂರು ಮೀಟರ್‌ನಲ್ಲಿ ನೀವು ಸ್ವರ್ಗ ಸಮಾನ ದೃಶ್ಯ ನೋಡಬಹುದು. ನಲವತ್ತೈದು ನಿಮಿಷ ಟೈಮ್. ಬೇಗ ಬನ್ನಿ’ ಅಂದ. ಸ್ವರ್ಗ ಸಿಕ್ಕರೆ ನಲವತ್ತೈದು ನಿಮಿಷಕ್ಕೆ ಯಾರು ಬರ್ತಾರೆ ಅಂದ್ಕೊಂಡು ಕ್ಯಾತನಮಕ್ಕಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆವು.

ಬೆಳಗಿನ ಒಂಭತ್ತೂವರೆ ಗಂಟೆಯಾದ್ದರಿಂದ ಸೂರ್ಯನ ಶಾಖ ಕ್ರಮೇಣ ಏರುತ್ತಿತು. ಏದುಸಿರು ಬಿಡುತ್ತಾ ಬೆಟ್ಟ ಹತ್ತುವಾಗ
ಬೆವರು ಬರಲಾರಂಭಿಸಿತು. ದೇವಸ್ಥಾನದಲ್ಲಿ ತಿಂದ ಪ್ರಸಾದದ ಅವಲಕ್ಕಿ ಯಾವಾಗಲೋ ಕರಗಿ ಹೋಗಿತ್ತು. ಎರಡು ಬಾರಿ ಕೇಳಿ
ಹಾಕಿಸಿಕೊಂಡು ಕುಡಿದ ನನ್ನ ನೆಚ್ಚಿನ ಹೊರನಾಡ ಕಾಫಿ ಪ್ಲೇವರ್ ಮಾತ್ರ ಹಾಗೆಯೇ ಇತ್ತು.

ನಿಧಾನವಾಗಿ ಬೆಟ್ಟ ಹತ್ತಿ ಸಮತಟ್ಟಾದ ಜಾಗದ ಮೇಲೆ ನಿಂತ ನಮಗೆ ಕಂಡಿದ್ದು ನಿಜವಾಗಿಯೂ ಭೂಲೋಕದ ಸ್ವರ್ಗ! ಈ ಮನಮೋಹಕ ದೃಶ್ಯ ಕಂಡ ನಾನು ಬೆಳಿಗ್ಗೆ ಸ್ನಾನ, ಧ್ಯಾನ ಅದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ಅಮ್ಮನವರ ದರ್ಶನ ಈಗ ಕ್ಯಾತನಮಕ್ಕಿಯಲ್ಲಿ ಪ್ರಕೃತಿ ಮಾತೆಯ ಮಹಾ ದರ್ಶನ ಎಂದು ಕವಿತೆ ಕಟ್ಟಿದೆ. ನನ್ನ ಸ್ನೇಹಿತರು ಈ ಹನಿಗವನ ಮತ್ತು
ನಿಸರ್ಗದ ಸೌಂದರ್ಯ ಕಂಡು ವಾವ್… ವಾವ್ …. ಎಂದು ಹೇಳುತ್ತಲೇ ಇದ್ದರು. ನಾನು ಸಹ ಅವರ ಜೊತೆಯಲ್ಲಿ ನನಗರಿವಿಲ್ಲದೇ ವಾವ್ … ಎಂದು ಬಿಟ್ಟೆ!

ತಂಪಾದ ಗಾಳಿ ಬೆಟ್ಟ ಹತ್ತಿ ದಣಿದ ದೇಹವನ್ನು ತಂಪು ಮಾಡಿದರೆ, ಹಸಿರುಕ್ಕಿರುವ ನಯನ ಮನೋಹರ ದೃಶ್ಯಗಳು ಮನಕ್ಕೆ ಸಂತಸ ನೀಡಿದವು. ೩೬೦ ಡಿಗ್ರಿಯಲ್ಲಿ ಯಾವ ಕಡೆ ತಿರುಗಿದರೂ ಹಸಿರು ಹೊದ್ದ ಬೆಟ್ಟಗಳು, ಮೋಡದ ತೆರೆಗಳು, ನೀಲಿಗಗ. ನಾವೆಲ್ಲಿದ್ದೇವೆ ಎಂದು ನಮಗೆ ಮರೆತೇಹೋಯಿತು.

ಈ ದೃಶ್ಯ ನೋಡಿ ಮತ್ತೊಂದು ಹನಿಗವನ ಹೇಳಿದೆ:

ಸುತ್ತ ಆಕಾಶ ನೀಲಿ
ಅಲ್ಲಲ್ಲಿ ಕಾಣುತ್ತಿವೆ ಮೋಡ ಬಿಳಿ
ಎತ್ತ ನೋಡಿದರೂ ಹಸಿರು
ನೋಡಿದೆ ಈ ದೃಶ್ಯನಿರಂತರ
ಅನಿಸಿದ್ದೊಂದೇ ಭಾವ
ಸಾರ್ಥಕ ನಮ್ಮ ಈ ಉಸಿರು

ದೂರದಲ್ಲಿ ಹರಿವ ಜುಳು ಜುಳು ಝರಿಯ ನಾದವು ಸಂಗೀತದಂತೆ ನಮಗೆ ಕೇಳಿಸುತ್ತಿತ್ತು. ಅ ಸ್ವಲ್ಪ ದೂರದಲ್ಲಿ ಕೆಲವು
ಹಸುಗಳು, ಕರುಗಳು ತಮ್ಮ ಪಾಡಿಗೆ ಮೇಯುತ್ತಿದ್ದವು. ಕೆಲವು ಈಗಾಗಲೇ ಮೇಯ್ದು ಮೆಲುಕು ಹಾಕುತ್ತಾ ಮಲಗಿದ್ದವು. ನಾಡಿನ
ಸಂಪರ್ಕವಿರದ ಕಾಡಿನಲ್ಲಿ ವಾಸಿಸುವ ಈ ದನ ಕರುಗಳ ಜೀವನ ಎಷ್ಟು ಸರಳ, ಸುಂದರ ಅಲ್ಲವೆ? ನಾವೇಕೆ ನಮ್ಮ ಜೀವನವನ್ನು ಇಷ್ಟು ಸಂಕೀರ್ಣ ಮಾಡಿಕೊಂಡಿದ್ದೇವೆ ಎಂಬ ಪ್ರಶ್ನೆಗಳು ನನ್ನ ಕಾಡಿದವು.

‘ಇಲ್ಲಿ ನೋಡಿ ಸಾರ್ ಎಂತಹ ಸೀನರಿ’ ಎಂದು ಕಲಾವಿದರಾದ ಕೋಟೆ ಕುಮಾರ್‌ರವರ ಮಾತಿನಿಂದ ವಾಸ್ತವಕ್ಕೆ ಬಂದು
ನೋಡಿದರೆ, ಪ್ರಕೃತಿ ಮಾತೆಯ ಸೌಂದರ್ಯದ ಮುಂದೆ ಮಾತುಗಳೇ ಹೊರಡದಾದವು. ಮತ್ತೆ ನಮ್ಮ ಮೊಬೈಲ್‌ಗೆ ಕೆಲಸ; ಪೋಟೋ, ವೀಡಿಯೋ ಮಾಡಿಕೊಳ್ಳಲು ನಾ ಮುಂದು ತಾ ಮುಂದು ಎಂದು ಓಡಾಡುವಾಗ ‘ಹುಷಾರು, ಮುಂದೆ ಸಾಗಬೇಡಿ
ಪ್ರಪಾತ ಇದೆ’ ಎಂಬ ನಮ್ಮ ತಂಡದ ಹಿರಿಯ ಸದಸ್ಯರಾದ ಚಂದ್ರಶೇಖರಯ್ಯನವರ ಮಾತು ನಮ್ಮನ್ನು ಎಚ್ಚರಿಸಿತು.

ಹಿತವಾದ ಗಾಳಿ
ಹಿತವಾದ ಗಾಳಿ ಆಗಾಗ್ಗೆ ನಮ್ಮ ಮೈ ಸೋಕುತ್ತಿತ್ತು ಬಿಸಿಲಿದ್ದರೂ ತಂಗಾಳಿಯಿಂದಾಗಿ ಸೆಕೆ ಎನಿಸಲಿಲ್ಲ. ಅದಕ್ಕೇ ಈ ಪ್ರದೇಶಕ್ಕೆ
ಗಾಳಿಗುಡ್ಡ ಎಂಬ ಹೆಸರಿದೆ ಎಂದು ಸ್ಥಳೀಯರು ಹೇಳಿದರು. ಆ ಸುಂದರ ಪರಿಸರದಲ್ಲಿ ಓಡಾಡುತ್ತ ಸಮಯ ಕಳೆದದ್ದೇ ಗೊತ್ತಾಗ
ಲಿಲ್ಲ. ಇನ್ನೂ ಸ್ವಲ್ಪ ಕಾಲ ಅ ಕಾಲ ಕಳೆವ ಮನಸಾದರೂ ಅಖಿಲ್ ಹೇಳಿದ್ದ ನಲವತ್ತೈದು ನಿಮಿಷ ಕಳೆದು ಒಂದೂವರೆ ಗಂಟೆಯಾಗಿತ್ತು.

ಒಲ್ಲದ ಮನಸ್ಸಿನಿಂದ ಗುಡ್ಡ ಇಳಿದೆವು. ಮತ್ತೊಮ್ಮೆ ಈ ಸ್ವರ್ಗಕ್ಕೆ ಕುಟುಂಬದ ಸದಸ್ಯರೊಂದೆಗೆ ಬರಬೇಕೆಂದುಕೊಂಡೆವು.
ನಮ್ಮ ಪಿಕಪ್ ವಾಹನ ಏರಿ ಮತ್ತೆ ನಮ್ಮ ಮೈ ಕೈ ಕುಲುಕಿಸಿಕೊಂಡು ಹೊರನಾಡ ಕಡೆ ಹೊರಟೆವು. ಅಕ್ಕಪಕ್ಕದ ಟೀ ತೋಟ, ಕಾಫಿ ಗಿಡಗಳ ಸೌಂದರ್ಯವೂ ನಮ್ಮ ಸಂತಸವನ್ನು ಇಮ್ಮಡಿಗೊಳಿಸಿದವು. ಅಖಿಲ್ ಒಂದೆಡೆ ಜೀಪ್ ಸೈಡಿಗೆ ನಿಲ್ಲಿಸಿ ನಮ್ಮ ಅಪೇಕ್ಷೆಯ ಮೇರೆಗೆ ಏಲಕ್ಕಿ ಗಿಡ ಮತ್ತು ದರ ಬುಡದಲ್ಲಿ ಬಿಟ್ಟ ಏಲಕ್ಕಿ ಬುಡ್ಡು ತೋರಿಸಿದ.

ಸ್ನೇಹಿತರೇ, ನೀವೂ ಕ್ಯಾತನಮಕ್ಕಿ ಸೌಂದರ್ಯ ಸವಿಯಲು ಒಮ್ಮೆ ಬನ್ನಿ. ಅಲ್ಲಿನ ಪರಿಸವನ್ನು ಕಲುಷಿತಗೊಳಿಸದೇ, ನೋಡಿ,
ಬಹು ಸುಂದರವಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಇದು ಈಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಮೂಡಿಗೆರೆ ಯಿಂದ ಕ್ಯಾತನಮಕ್ಕಿ ೭೨ ಕಿ.ಮೀ. ದೂರದಲ್ಲಿದ್ದು ಮೊದಲು ಮೂಡಿಗೆರೆ ತಾಲೂಕಿನಲ್ಲಿದ್ದ ಈ ಸ್ಥಳ ಈಗ ನೂತನವಾಗಿ
ಘೋಷಣೆಯಾದ ಕಳಸ ತಾಲೂಕಿಗೆ ಬಂದಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸಮೀಪವಿದೆ. ಕಳಸದಿಂದ ಈ
ಸುಂದರ ತಾಣ ತಲುಪಲು ೨೦ ಕಿ.ಮೀ ಕ್ರಮಿಸಬೇಕು. ಬಲಿಗೆ ಜೈನ ಬಸದಿಯ ಸಮೀಪದಲ್ಲಿ ಈ ಕ್ಯಾತನಮಕ್ಕಿಯ ಸುಂದರ ತಾಣವಿದೆ. ಅಲ್ಲಲ್ಲಿ ಹೋಂ ಸ್ಟೇ ಗಳು ಸಹ ಇವೆ.

error: Content is protected !!