ಬ್ರಿಸ್ಬೇನ್: ಇಲ್ಲಿನ ಗಾಬಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ(AUS vs IND) ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮೊದಲ ದಿನದಾಟ ಮಳೆಯ ಕಾರಣದಿಂದ ಕೇವಲ 13.2 ಓವರ್‌ಗೆ ಸ್ಥಗಿತಗೊಂಡಿದೆ. ಇದೀಗ ಉಳಿದ 4 ದಿನಗಳ ಆಟದಲ್ಲಿ ನಷ್ಟವಾದ ಮೊದಲ ದಿನದ ಆಟವನ್ನು ಸರಿದೂಗಿಸುವ ಸಲುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಎರಡನೇ ದಿನದಾಟವನ್ನು ಬೇಗನೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಎರಡನೇ ದಿನದಾಟ ಅರ್ಧ ಗಂಟೆ ಮುಂಚಿತವಾಗಿ ಅಂದರೆ 5.50ಕ್ಕೆ ಬದಲಾಗಿ 5.20ಕ್ಕೆ ಆರಂಭವಾಗಲಿದೆ. ಇಷ್ಟೇ ಅಲ್ಲದೆ ಎರಡನೇ ದಿನದ ಸೆಷನ್ಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಆ ಪ್ರಕಾರ ಮೊದಲ ಸೆಷನ್ ಬೆಳಗ್ಗೆ 5:20 ರಿಂದ 7:50 ರವರೆಗೆ ನಡೆಯಲಿದ್ದು, ಎರಡನೇ ಸೆಷನ್ ಬೆಳಗ್ಗೆ 8:30 ರಿಂದ 10.30 ರವರೆಗೆ ನಡೆಯಲಿದೆ. ಇದಲ್ಲದೆ, ಮೂರನೇ ಸೆಷನ್ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10:50 ರಿಂದ ಮಧ್ಯಾಹ್ನ 12:50 ರವರೆಗೆ ನಿಗದಿಪಡಿಸಲಾಗಿದೆ. ಶನಿವಾರ ಆರಂಭಗೊಂಡ ಪಂದ್ಯ 4 ಗಂಟೆ ಕಾಲ ಕಳೆದರೂ ಮಳೆ ನಿಲ್ಲದ ಸೂಚನೆ ಸಿಗದ ಕಾರಣ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಸದ್ಯ ಆಸೀಸ್ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿದೆ.
ಇದನ್ನೂ ಓದಿ AUS vs IND: ಭಾರೀ ಮಳೆ; 13.2 ಓವರ್‌ಗೆ ದಿನದಾಟ ಅಂತ್ಯ
ಮಳೆ ಎಚ್ಚರಿಕೆ
ಮುಂದಿನ 4 ದಿನಗಳ ಕಾಲವೂ ಬ್ರಿಸ್ಬೆನ್ನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಭಾರತಕ್ಕೆ ಆತಂಕ ಉಂಟು ಮಾಡಿದೆ. ಒಂದೊಮ್ಮೆ ಮಳೆಯಿಂದ ಪಂದ್ಯ ಫಲಿತಾಂಶ ಕಾಣದೆ ಅಂತ್ಯಗೊಂಡರೇ ಆಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಭಾರತಕ್ಕೆ ಭಾರೀ ಹೊಡೆತ ಬೀಳಲಿದೆ. ದ್ವಿತೀಯ ಪಂದ್ಯದಲ್ಲಿ ಸೋಲು ಕಂಡ ಕಾರಣ ಭಾರತ ಅಗ್ರಸ್ಥಾನದಿಂದ ಕುಸಿದು 57.29 ಶೇಕಡವಾರು ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ: ಉಸ್ಮಾನ್ ಖ್ವಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್.
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿ.ಕೀ), ರೋಹಿತ್ ಶರ್ಮಾ(ನಾ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.