ಪರ್ತ್: ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ(IND vs AUS) ಮೊದಲ ಇನಿಂಗ್ಸ್ನಲ್ಲಿ 104 ರನ್ಗೆ ಆಲೌಟ್ ಆಗಿದೆ. ಭಾರತ 46 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿ ದ್ವಿತೀಯ ಸರದಿಯ ಬ್ಯಾಟಿಂಗ್ ಆರಂಭಿಸಿದೆ. ಮೊದಲ ದಿನದಾಟದಲ್ಲಿ 7 ವಿಕೆಟ್ಗೆ 67 ರನ್ ಗಳಿಸಿದ್ದ ಆಸೀಸ್ ಪಡೆ ದ್ವಿತೀಯ ದಿನವಾದ ಶನಿವಾರ ಕೇವಲ 37 ರನ್ ಒಟ್ಟುಗೂಡಿಸಿ ಆಲೌಟ್ ಆಯಿತು.
ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಹಲವು ಏರಿಳಿತ ಕಾಣುವ ಮೂಲಕ 49.4 ಓವರ್ಗಳಲ್ಲಿ 150 ರನ್ಗೆ ಸರ್ವಪತನ ಕಂಡಿತು. ಇದಕ್ಕುತ್ತವಾಗಿ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ 51.2 ಓವರ್ಗಳಲ್ಲಿ 104 ಕ್ಕೆ ಆಲೌಟ್ ಆಯಿತು. ಇದು 2000ರದ ಬಳಿಕ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಗಳಿಸಿದ ಮೂರನೇ ಅತಿ ಕಡಿಮೆ ಮೊತ್ತವಾಗಿದೆ.
ಚೊಚ್ಚಲ ಪಂದ್ಯವನ್ನಾಡುತ್ತಿರುವ ದಿಲ್ಲಿಯ ವೇಗಿ ಹರ್ಷಿತ್ ರಾಣಾ 3 ವಿಕೆಟ್ ಕಿತ್ತು ಸ್ಮರಣೀಯ ಪದಾರ್ಪಣೆ ಮಾಡಿದರು. ದ್ವಿತೀಯ ದಿನ ಅವರು 2 ವಿಕೆಟ್ ಕಿತ್ತರು. ಸಿರಾಜ್ 2 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 5 ವಿಕೆಟ್ ಕೀಳುವ ಮೂಲಕ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ವಿಕೆಟ್ ಕಿತ್ತ 4 ಬೌಲರ್ ಎನಿಸಿಕೊಂಡರು. ಈ ವೇಳೆ ಅವರು ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ(35) ಅವರನ್ನು ಹಿಂದಿಕ್ಕಿದ್ದರು. ಬುಮ್ರಾ ಈಗ 36 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ. ಕಪಿಲ್ 51 ವಿಕೆಟ್ ಕಿತ್ತಿದ್ದಾರೆ.
ಶನಿವಾರ ಮಿಚೆಲ್ ಸ್ಟಾರ್ಕ್ ಅವರು ಅಂತಿಮ ಹಂತದಲ್ಲಿ 26 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸುವಲ್ಲಿ ನೆರವಾದರು. ಶುಕ್ರವಾರ 6 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಸ್ಟಾರ್ಕ್ ಅವರದ್ದೇ ಆಸೀಸ್ ಪರ ದಾಖಲಾದ ಗರಿಷ್ಠ ಮೊತ್ತ. 19 ರನ್ ಗಳಿಸಿದ್ದ ಅಲೆಕ್ಸ್ ಕ್ಯಾರಿ 21 ರನ್ಗೆ ವಿಕೆಟ್ ಕಳೆದುಕೊಂಡರು. ಎಲ್ಲ 20 ವಿಕೆಟ್ಗಳು ವೇಗಿಗಳ ಪಾಲಾಯಿತು.