Saturday, 23rd November 2024

IND vs AUS: ಕಪಿಲ್‌ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬುಮ್ರಾ

ಪರ್ತ್‌: ಭಾರತ(IND vs AUS) ತಂಡದ ನಾಯಕ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ11ನೇ 5 ವಿಕೆಟ್ ಗೊಂಚಲು ಪೂರ್ಣಗೊಳಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ವಿದೇಶಿ ನೆಲದಲ್ಲಿ ಒಟ್ಟು 7 ಬಾರಿ ಇನಿಂಗ್ಸ್‌ ಒಂದರಲ್ಲಿ ಐದು ವಿಕೆಟ್‌ ಕಿತ್ತ ದಿಗ್ಗಜ ಆಟಗಾರ ಕಪಿಲ್ ದೇವ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ 4 ವಿಕೆಟ್‌ ಕಿತ್ತಿದ್ದ ಬುಮ್ರಾ ಶನಿವಾರ ಅಲೆಕ್ಸ್ ಕ್ಯಾರಿಯ ವಿಕೆಟ್‌ ಕೀಳುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 11ನೇ ಐದು ವಿಕೆಟ್ ಸಾಧನೆಯನ್ನು ಪೂರ್ಣಗೊಳಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಅವರ 2ನೇ 5 ವಿಕೆಟ್ ಸಾಧನೆಯಾಗಿದೆ.

ಬುಮ್ರಾ ಬೌಲಿಂಗ್‌ ದಾಳಿಯ ನೆರವಿನಿಂದ ಭಾರತ ತಂಡವು ಆತಿಥೇಯ ಆಸ್ಟ್ರೇಲಿಯಾವನ್ನು 104 ರನ್‌ಗಳಿಗೆ ಆಲೌಟ್ ಮಾಡಿದೆ. ಇದರೊಂದಿಗೆ ಉಭಯ ತಂಡಗಳ ಮೊದಲ ಇನ್ನಿಂಗ್ಸ್‌ ಬಳಿಕ ಭಾರತ ತಂಡ 46 ರನ್‌ಗಳ ಮುನ್ನಡೆ ಸಾಧಿಸಿದೆ. ಸದ್ಯ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಭಾರತ ಚಹಾ ವಿರಾಮದ ವೇಳೆಗೆ ವಿಕೆಟ್‌ ನಷ್ಟವಿಲ್ಲದೆ 84 ರನ್‌ ಬಾರಿಸಿದೆ.

5 ವಿಕೆಟ್‌ ಕೀಳುವ ಮೂಲಕ ಬುಮ್ರಾ ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ 4 ಬೌಲರ್‌ ಎನಿಸಿಕೊಂಡರು. ಈ ವೇಳೆ ಅವರು ಮಾಜಿ ಆಟಗಾರ ಬಿಷನ್‌ ಸಿಂಗ್‌ ಬೇಡಿ(35) ಅವರನ್ನು ಹಿಂದಿಕ್ಕಿದ್ದರು. ಬುಮ್ರಾ ಈಗ 36 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ದಾಖಲೆ ಕಪಿಲ್‌ ದೇವ್‌ ಹೆಸರಿನಲ್ಲಿದೆ. ಕಪಿಲ್‌ 51 ವಿಕೆಟ್‌ ಕಿತ್ತಿದ್ದಾರೆ. ಚೊಚ್ಚಲ ಪಂದ್ಯವನ್ನಾಡುತ್ತಿರುವ ದಿಲ್ಲಿಯ ವೇಗಿ ಹರ್ಷಿತ್‌ ರಾಣಾ 3 ವಿಕೆಟ್‌ ಕಿತ್ತು ಸ್ಮರಣೀಯ ಪದಾರ್ಪಣೆ ಮಾಡಿದರು. ದ್ವಿತೀಯ ದಿನ ಅವರು 2 ವಿಕೆಟ್‌ ಕಿತ್ತರು. ಸಿರಾಜ್‌ 2 ವಿಕೆಟ್‌ ಕಿತ್ತರು.

ಇದನ್ನೂ ಓದಿ IPL AUCTION 2025: ನಾಳೆ ಮೆಗಾ ಹರಾಜು; ಸಂಪೂರ್ಣ ಮಾಹಿತಿ ಇಲ್ಲಿದೆ

ಶನಿವಾರದ ಆಟದಲ್ಲಿ ಆಸೀಸ್‌ ತಂಡಕ್ಕೆ ಆಸರೆಯಾದದ್ದು ವೇಗಿ ಮಿಚೆಲ್‌ ಸ್ಟಾರ್ಕ್‌ ಮಾತ್ರ. 6 ರನ್‌ ಗಳಿಸಿದ್ದಲ್ಲಿಂದ ಬ್ಯಾಟಿಂಗ್‌ ಮುಂದುವರಿಸದ ಸ್ಟಾರ್ಕ್‌ ಅಂತಿಮ ಹಂತದಲ್ಲಿ 26 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು 100 ಗಡಿ ದಾಟಿಸುವಲ್ಲಿ ನೆರವಾದರು. ಸ್ಟಾರ್ಕ್‌ ಅವರದ್ದೇ ಆಸೀಸ್‌ ಪರ ದಾಖಲಾದ ಗರಿಷ್ಠ ಮೊತ್ತ. 19 ರನ್‌ ಗಳಿಸಿದ್ದ ಅಲೆಕ್ಸ್‌ ಕ್ಯಾರಿ 21 ರನ್‌ಗೆ ವಿಕೆಟ್‌ ಕಳೆದುಕೊಂಡರು. ಮೊದಲ ಇನಿಂಗ್ಸ್‌ನ ಎಲ್ಲ 20 ವಿಕೆಟ್‌ಗಳು ವೇಗಿಗಳ ಪಾಲಾಯಿತು.