Wednesday, 11th December 2024

IND vs BAN: ಸೂರ್ಯಕುಮಾರ್‌ ಸಿಕ್ಸರ್‌ ಏಟಿಗೆ ಜಾಸ್‌ ಬಟ್ಲರ್‌ ದಾಖಲೆ ಪತನ

ಗ್ವಾಲಿಯರ್‌: ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ಅವರು ಭಾನುವಾರ ನಡೆದ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 3 ಸಿಕ್ಸರ್‌ ಬಾರಿಸುವ ಮೂಲಕ ಟಿ20ಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ(Most Sixes In T20Is) ವಿಶ್ವದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು.

ಸೂರ್ಯ ಬಾರಿಸಿದ ಈ ಮೂರು ಸಿಕ್ಸರ್‌ನಿಂದ ಇಂಗ್ಲೆಂಡ್‌ ತಂಡದ ನಾಯಕ ಜಾಸ್‌ ಬಟ್ಲರ್‌(Jos Buttler) ದಾಖಲೆ ಪತನಗೊಂಡಿತು. ಬಟ್ಲರ್‌ 137 ಸಿಕ್ಸರ್‌ ಬಾರಿಸಿ ಮೂರನೇ ಸ್ಥಾನದಲ್ಲಿದ್ದರು. ಈಗ ಸೂರ್ಯ 139 ಸಿಕ್ಸರ್‌ನೊಂದಿಗೆ ಬಟ್ಲರ್‌ ಅವನ್ನು ಹಿಂದಿಕ್ಕಿದ್ದಾರೆ. ಮುಂದಿನ ಎರಡು ಪಂದ್ಯಗಳಲ್ಲಿ ಸೂರ್ಯ ಒಟ್ಟು 6 ಸಿಕ್ಸರ್‌ ಬಾರಿಸಿದರೆ ವಿಂಡೀಸ್‌ ಆಟಗಾರ ನಿಕೋಲಸ್‌ ಪೂರನ್‌(144 ಸಿಕ್ಸರ್‌) ಅವರನ್ನು ಹಿಂದಿಕ್ಕಲಿದ್ದಾರೆ. ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ದಾಖಲೆ ರೋಹಿತ್‌ ಶರ್ಮಾ ಹೆಸರಿನಲ್ಲಿದೆ. ರೋಹಿತ್‌ 205 ಸಿಕ್ಸರ್‌ ಬಾರಿಸಿದ್ದಾರೆ. ಜತೆಗೆ 200 ಸಿಕ್ಸರ್‌ ಪೂರ್ತಿಗೊಳಿಸಿದ ಏಕೈಕ ಬ್ಯಾಟರ್‌ ಕೂಡ ಆಗಿದ್ದಾರೆ.

ಇದನ್ನೂ ಓದಿ IND vs BAN 1st T20: ಅರ್ಷದೀಪ್‌ ಬೌಲಿಂಗ್‌ ದಾಳಿಗೆ ತತ್ತರಿಸಿದ ಬಾಂಗ್ಲಾ; ಭಾರತಕ್ಕೆ 7 ವಿಕೆಟ್‌ ಜಯ

ಅತ್ಯಧಿಕ ಸಿಕ್ಸರ್‌ ಬಾರಿಸಿದ ಆಟಗಾರರು

ರೋಹಿತ್‌ ಶರ್ಮಾ-205

ಮಾರ್ಟಿನ್‌ ಗಪ್ಟಿಲ್‌-173

ನಿಕೋಲಸ್‌ ಪೂರನ್‌-144

ಸೂರ್ಯಕುಮಾರ್‌ ಯಾದವ್‌-139

ಜಾಸ್‌ ಬಟ್ಲರ್‌-137

ಕೊಹ್ಲಿ ದಾಖಲೆ ಮೇಲೆ ಕಣ್ಣಿಟ್ಟ ಸೂರ್ಯ

ಸೂರ್ಯಕುಮಾರ್‌ ಒಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಅತಿ ಹೆಚ್ಚು ಬಾರಿ ಈ ಪ್ರಶಸ್ತಿಗೆ ಭಾಜನರಾದ ವಿಶ್ವದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಆಗ ವಿರಾಟ್‌ ಕೊಹ್ಲಿ(Virat Kohli) ದಾಖಲೆ ಪತನಗೊಳ್ಳಲಿದೆ.

ಸದ್ಯ ಸೂರ್ಯಕುಮಾರ್‌ 16 ಬಾರಿ ಟಿ20 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ವಿರಾಟ್‌ ಕೊಹ್ಲಿ ಜತೆ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಸೂರ್ಯ ಈ ಮೈಲುಗಲ್ಲನ್ನು ಕೇವಲ 69 ಪಂದ್ಯಗಳಿಂದ ನಿರ್ಮಿಸಿದರೆ, ಕೊಹ್ಲಿ125 ಪಂದ್ಯಗಳಿಂದ ಈ ದಾಖಲೆ ನಿರ್ಮಿಸಿದ್ದರು.

ಕಳೆದ 2 ವರ್ಷಗಳಿಂದ ಸೂರ್ಯ ಅವರು 20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲೇ ಕಾಣಿಸಿಕೊಂಡಿದ್ದಾರೆ. 72 ಟಿ20 ಪಂದ್ಯಗಳನ್ನು ಆಡಿರುವ ಸೂರ್ಯ 2461 ರನ್‌, 4 ಶತಕ ಮತ್ತು 20 ಅರ್ಧಶತಕ ಬಾರಿಸಿದ್ದಾರೆ. 117 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಏಕದಿನದಲ್ಲಿ 37 ಪಂದ್ಯಗಳಿಂದ 773 ರನ್‌ ಗಳಿಸಿದ್ದಾರೆ. ಇದುವರೆಗೆ ಏಕೈಕ ಟೆಸ್ಟ್‌ ಮಾತ್ರ ಆಡಿದ್ದಾರೆ. ಜೂನ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೂರ್ಯ ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಅಸಾಮಾನ್ಯ ಕಾಚ್‌ ಒಂದರ ನೆರವಿನಿಂದ ಭಾರತ ತಂಡ ವಿಶ್ವಕಪ್‌ ಗೆಲ್ಲುವಂತಾಯಿತು. ಈ ಕ್ಯಾಚ್‌ ಬಳಿಕ ಸೂರ್ಯ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ.