Friday, 13th December 2024

IND vs NZ: ಟೀಮ್‌ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಆಟಗಾರರು

ಮುಂಬಯಿ: ನ್ಯೂಜಿಲ್ಯಾಂಡ್‌(IND vs NZ) ವಿರುದ್ಧ ತವರಿನ ಹೀನಾಯ ಸೋಲಿನ ಬಗ್ಗೆ ಟೀಮ್‌ ಇಂಡಿಯಾವನ್ನು(Team India) ಮಾಜಿ ಆಟಗಾರರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿನ್‌ ತೆಂಡೂಲ್ಕರ್‌, ಹರ್ಭಜನ್‌ ಸಿಂಗ್‌, ಅನಿಲ್‌ ಕುಂಬ್ಳೆ, ಸುನಿಲ್‌ ಗವಾಸ್ಕರ್‌ ಸೇರಿ ಹಲವು ದಿಗ್ಗಜರು ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯವಿದೆ ಎಂದಿದ್ದಾರೆ.

ಮುಂಬೈಯಲ್ಲಿ ನಡೆದಿದ್ದ ಅಂತಿಮ ಪಂದ್ಯದಲ್ಲಿ 147 ರನ್‌ಗಳ ಸಣ್ಣ ಮೊತ್ತವನ್ನು ಗಳಿಸಲಾಗದೆ ಭಾರತ ತಂಡ 25 ರನ್‌ ಅಂತರದಿಂದ ಸೋಲು ಕಂಡಿತ್ತು. ಈ ಸೋಲಿನಿಂದ ತವರಿನಲ್ಲಿ 91 ವರ್ಷಗಳಿಂದ ಟೆಸ್ಟ್‌ ಆಡುತ್ತಿರುವ ಭಾರತ ಮೊದಲ ಬಾರಿಗೆ 0-3 ಅಂತರದಲ್ಲಿ ಸರಣಿ ಸೋಲು ಅನುಭವಿಸಿದ ಅವಮಾನ ಎದುರಿಸಿತ್ತು. ಒಟ್ಟಾರೆ ತವರಿನಲ್ಲಿ ಭಾರತ ತಂಡ ಸರಣಿ ವೈಟ್‌ವಾಶ್‌ ಆಗಿದ್ದು ಇದು ಕೇವಲ 2ನೇ ಬಾರಿ. 1999-2000ರಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಸರಣಿ ಇದಾಗಿತ್ತು.

ರೋಹಿತ್‌ ಶರ್ಮ ಪಡೆಯ ಈ ಸೋಲಿನಿಂದ ಅಭಿಮಾನಿಗಳು ಮಾತ್ರವಲ್ಲದೆ ಮಾಜಿ ಆಟಗಾರರು ಕೂಡ ಬೇಸರಗೊಂಡಿದ್ದಾರೆ. ಅಲ್ಲದೆ ಕಳಪೆ ಪ್ರದರ್ಶನದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಟೀಮ್​ ಮ್ಯಾನೇಜ್​ಮೆಂಟ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಅನಗತ್ಯವಾಗಿ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಇನ್ನಷ್ಟು ಉತ್ತಮ ಪಿಚ್​ಗಳಲ್ಲಿ ಆಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ IND vs SA T20I: ಡರ್ಬನ್‌ ತಲುಪಿದ ‘ಯಂಗ್‌ ಟೀಮ್‌ ಇಂಡಿಯಾ’; ನಾಳೆಯಿಂದ ಅಭ್ಯಾಸ

ಸೋಲಿನ ಬಳಿಕ ಟ್ವೀಟ್‌ ಮಾಡಿರುವ ಸಚಿನ್‌ ತೆಂಡೂಲ್ಕರ್‌, ‘ತವರಿನಲ್ಲೇ 0-3 ಅಂತರದ ಸೋಲು ಜೀರ್ಣಿಸಲು ಕಷ್ಟ. ಸಿದ್ಧತೆಯ ಕೊರತೆಯೇ, ಕೆಟ್ಟ ಹೊಡೆತಗಳ ಆಯ್ಕೆಯೇ ಅಥವಾ ಮ್ಯಾಚ್​ ಪ್ರ್ಯಾಕ್ಟೀಸ್​ ಕೊರತೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆʼ ಎಂದು ಬರೆದಿದ್ದಾರೆ.

ಮಾಜಿ ಸ್ಫೋಟಕ ಬ್ಯಾಟರ್‌ ವಿರೇಂದ್ರ ಸೆಹವಾಗ್‌, ʼಟೀಮ್‌ ಇಂಡಿಯಾದ ಬೆಂಬಲಿಗನಾಗಿ ತಂಡವನ್ನು ಬೆಂಬಲಿಸುವುದು ನನ್ನ ಕರ್ತವ್ಯ. ಆದರೆ, ಹೀನಾಯ ಪ್ರದರ್ಶನವನ್ನು ಖಂಡಿಸುತ್ತೇನೆ. ಆಟಗಾರರು ಸ್ಪಿನ್​ ವಿರುದ್ಧ ಆಡುವ ಕೌಶಲವನ್ನು ಸುಧಾರಿಸಿಕೊಳ್ಳಬೇಕಾದ ಅಗತ್ಯವಿದೆ. ಟಿ20ಯಂತೆ ಟೆಸ್ಟ್​ ಕ್ರಿಕೆಟ್​ನಲ್ಲಿ ಪ್ರಯೋಗಗಳನ್ನು ಮಾಡಲು ಹೋಗಬಾರದುʼ ಎಂದು ಹೇಳಿದ್ದಾರೆ.

ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್,​ ಹಿಂದಿನ ಪೀಳಿಗೆ ಆಟಗಾರರು ಇಂತಂಹ ಪಿಚ್‌ನಲ್ಲಿ ಆಡಿಲ್ಲ. ಇದು ಕೇವಲ 2 ಅಥವಾ 3 ದಿನಗಳ ಆಟಕ್ಕೆ ಸಿದ್ಧಪಡಿಸಿರುವ ಪಿಚ್‌ ಎಂದು ಟೀಕಿಸಿದ್ದಾರೆ. ನೈಜ ಕ್ರಿಕೆಟ್‌ ಆಟವಾಗಿರುವ ಟೆಸ್ಟ್‌ನಲ್ಲಿ ಬದಲಾವಣೆ ತರುವ ಪ್ರಯೋಗ ಮಾಡಿದರೆ ಇದೇ ರೀತಿ ಫಲಿತಾಂಶ ಕಾಣುತ್ತದೆ ಎಂದು ಹೇಳಿದರು.

ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ರೆಡ್​ಬಾಲ್​ ಕ್ರಿಕೆಟ್​ ಪಂದ್ಯಗಳನ್ನು ಆಡದಿರುವುದೇ ಭಾರತ ತಂಡದ ವೈಫಲ್ಯಕ್ಕೆ ಕಾರಣ ಎಂದು ಮಾಜಿ ವೇಗಿ ಇರ್ಫಾನ್​ ಪಠಾಣ್​ ದೂರಿದ್ದಾರೆ. ಭಾರತ ತವರಿನಲ್ಲಿ ತೋರಿದ ಅತ್ಯಂತ ಮುಜುಗರದ ನಿರ್ವಹಣೆ ಇದಾಗಿದೆ ಎಂದು ಹೇಳಿದ್ದಾರೆ.