Wednesday, 11th December 2024

Kash Patel: ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ CIA ಮುಖ್ಯಸ್ಥರಾಗಿ ಭಾರತೀಯ ಮೂಲದ ಕಾಶ್ ಪಟೇಲ್‌ ಆಯ್ಕೆ? ಏನಿವರ ಹಿನ್ನೆಲೆ?

Kash Patel

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ (Donald Trump) 2ನೇ ಬಾರಿಗೆ ಆಯ್ಕೆಯಾಗಿದ್ದಾರೆ (US presidential Elections 2024). ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಅವರನ್ನು ಸೋಲಿಸುವ ಮೂಲಕ ಟ್ರಂಪ್‌ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದಾರೆ. ಇದೀಗ ಅವರ ಸಂಪುಟದಲ್ಲಿ ಯಾರೆಲ್ಲ ಸ್ಥಾನ ಪಡೆದುಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಸಿಐಎ (Central Intelligence Agency)ಯ ಮುಖ್ಯಸ್ಥರನ್ನಾಗಿ ಟ್ರಂಪ್ ಅವರ ಆಪ್ತ, ಭಾರತೀಯ ಮೂಲದ ಕಾಶ್ ಪಟೇಲ್‌ (Kash Patel) ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ.

ಡೊನಾಲ್ಡ್ ಟ್ರಂಪ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಭಾರತೀಯ ಮೂಲದ ಕಾಶ್ ಪಟೇಲ್ ಟ್ರಂಪ್‌ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರು. 44 ವರ್ಷ ವಯಸ್ಸಿನ ಕಾಶ್ ಪಟೇಲ್ ಸದ್ಯ ಟ್ರಂಪ್ ಮಾಲೀಕತ್ವದ ಟ್ರೂತ್ ಸೋಷಿಯಲ್ ಎಂಬ ಸಾಮಾಜಿಕ ಜಾಲತಾಣ ವೇದಿಕೆಯ ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

ಟ್ರಂಪ್ ಅವರ ಮೊದಲ ಅವಧಿಯಲ್ಲಿ ರಕ್ಷಣಾ ಮತ್ತು ಗುಪ್ತಚರ ಇಲಾಖೆಯ ವಿವಿಧ ಉನ್ನತ ಶ್ರೇಣಿಯ ಹುದ್ದೆಯನ್ನು ನಿರ್ವಹಿಸಿರುವ ಪಟೇಲ್ ಈ ಬಾರಿ ಟ್ರಂಪ್‌ ಅವರಿಗಾಗಿ ಪ್ರಚಾರವನ್ನೂ ನಡೆಸಿದ್ದರು.

ಯಾರು ಈ ಕಾಶ್‌ ಪಟೇಲ್‌?

ವಕೀಲರಾಗಿ, ಸರ್ಕಾರಿ ಅಭಿಯೋಜಕರಾಗಿ ಹಾಗೂ ವೈಟ್ ಹೌಸ್‌ನ ಸಿಬ್ಬಂದಿಯಾಗಿ ದುಡಿದಿರುವ ಅನುಭವ ಹೊಂದಿರುವ ಕಾಶ್ ಪಟೇಲ್ ಅವರ ಮೂಲ ಹೆಸರು ಕಶ್ಯಪ್‌ ಪಟೇಲ್‌. ಪಟೇಲ್ ತಮ್ಮ ವೃತ್ತಿ ಜೀವನದುದ್ದಕ್ಕೂ ವಿವಾದಕ್ಕೆ ಸಿಲುಕಿದ್ದಾರೆ. ಟ್ರಂಪ್ ಅವರ ರಾಜಕೀಯ ದ್ವೇಷಿಗಳನ್ನ ಕಟಕಟೆಗೆ ತಂದು ನಿಲ್ಲಿಸುವ ಸವಾಲೊಡ್ಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಿಐಎ ಮುಖ್ಯಸ್ಥರಾಗಿ ನೇಮಕಗೊಳ್ಳಲು ಕಾಶ್‌ ಪಟೇಲ್ ಸೆನೆಟ್ ಮತವನ್ನು ಪಡೆಯಲು ವಿಫಲವಾದರೆ, ಟ್ರಂಪ್ ಆಡಳಿತವು ಅವರಿಗೆ ರಾಷ್ಟ್ರೀಯ ಭದ್ರತಾ ಮಂಡಳಿ (National Security Council)ಯಲ್ಲಿ ಉನ್ನತ ಸ್ಥಾನವನ್ನು ನೀಡುವ ಸಾಧ್ಯತೆಯಿದೆ.

ಹಿನ್ನೆಲೆಯೇನು?

ನ್ಯೂಯಾರ್ಕ್‌ನಲ್ಲಿ 1980ರಲ್ಲಿ ಜನಿಸಿದ ಕಾಶ್ ಪಟೇಲ್ ಅವರಿಗೆ ಈಗ 44 ವರ್ಷ ವಯಸ್ಸು. ಅವರ ಪೋಷಕರು ಗುಜರಾತ್ ಮೂಲದವರು. ಅಮೆರಿಕಗೆ ವಲಸೆ ಬಂದು ನೆಲೆಸಿದ್ದಾರೆ. ಕಾಶ್ ಪಟೇಲ್ ರಿಚ್ಮಂಡ್ ವಿವಿಯಲ್ಲಿ ಪದವಿ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಲಂಡನ್ ವಿವಿ ಕಾಲೇಜಿನ ಪ್ರಮಾಣ ಪತ್ರ ಹೊಂದಿದ್ದಾರೆ.

ಉಪಾಧ್ಯಕ್ಷರಾಗಿ ಜೆಡಿ ವಾನ್ಸ್‌ ಆಯ್ಕೆ

ಜೆಡಿ ವಾನ್ಸ್‌ ಅವರನ್ನು ಉಪಾಧ್ಯಕ್ಷರನ್ನಾಗಿ ಟ್ರಂಪ್‌ ಘೋಷಿಸಿದ್ದಾರೆ. ತಮ್ಮ ಗೆಲುವನ್ನು ಆಭೂತಪೂರ್ವ ಮತ್ತು ಶಕ್ತಿಯುತ ಜನಾದೇಶ ಎಂದು ಬಣ್ಣಿಸಿರುವ ಟ್ರಂಪ್, ಅಮೆರಿಕಾದ ಉಪಾಧ್ಯಕ್ಷರನ್ನಾಗಿ ಒಹಾಯೋ ರಾಜ್ಯದ ರಿಪಬ್ಲಿಕನ್ ಪಕ್ಷದ ಸೆನೆಟರ್ ಅಗಿದ್ದ ಜೆ.ಡಿ.ವ್ಯಾನ್ಸ್ ಅವರ ಹೆಸರನ್ನು ಘೋಷಿಸಿದ್ದಾರೆ. ವ್ಯಾನ್ಸ್ ಅವರ ಪತ್ನಿ ಉಷಾ ವ್ಯಾನ್ಸ್ ಭಾರತೀಯ ಮೂಲದವರು. ಉಷಾ ವ್ಯಾನ್ಸ್ ಅವರ ಮೂಲ ಹೆಸರು ಉಷಾ ಚಿಲ್ಕುರಿ. ಜತೆಗೆ ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅವರಿಗೂ ಉನ್ನತ ಹುದ್ದೆ ಲಭಿಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Donald Trump: ಹಿಂದೂಗಳ ಬೆಂಬಲದಿಂದ ಗೆದ್ದ ಟ್ರಂಪ್!‌