Muder Case: ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಗೆಳತಿಯನ್ನೇ ಕೊಂದ ಪಾಗಲ್ ಪ್ರೇಮಿ
ಮದುವೆಯಾಗು ಎಂದು ಒತ್ತಾಯಿಸಿದ ಮಹಿಳೆಯನ್ನು ಪ್ರೇಮಿಯೊಬ್ಬ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾತನಾಡಬೇಕು ಬಾ ಎಂದು ರೇಣುಕಾಳನ್ನ ಕರೆದಿದ್ದ ಆರೋಪಿ, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆ ಬಳಿ ಆಕೆಗೆ ಎಂಟು ಬಾರಿ ಚಾಕುವಿನಿಂದ ಇರಿದಿದ್ದ. ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ.
-
Vishakha Bhat
Nov 2, 2025 9:17 AM
ಬೆಂಗಳೂರು: ಮದುವೆಯಾಗು ಎಂದು ಒತ್ತಾಯಿಸಿದ ಮಹಿಳೆಯನ್ನು ಪ್ರೇಮಿಯೊಬ್ಬ ಚಾಕು ಇರಿದು ಕೊಲೆ (Murder Case) ಮಾಡಿರುವ ಘಟನೆ ಬೆಂಗಳೂರಿನ (Bengaluru) ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರೇಣುಕಾ ಎಂದು ಗುರುತಿಸಲಾಗಿದೆ. ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾ ತನ್ನ ಪತಿಯಿಂದ ದೂರ ಇದ್ದಳು. ಆಕೆಗೆ ಒಂದು ಮಗು ಸಹ ಇತ್ತು. ಬ್ಯಾನರ್ ಪ್ರಿಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದ ಕುಟ್ಟಿ ಎಂಬಾತನ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗುವಂತೆ ಕುಟ್ಟಿಯನ್ನ ರೇಣುಕಾ ಒತ್ತಾಯಿಸಿದ್ದಳು.
ಕೆಲವು ದಿನಗಳಿಂದ ರೇಣುಕಾ ಕುಟ್ಟಿ ಬಳಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ನಿನ್ನ ಬಳಿ ಮಾತನಾಡಬೇಕು ಬಾ ಎಂದು ರೇಣುಕಾಳನ್ನ ಕರೆದಿದ್ದ ಆರೋಪಿ, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆ ಬಳಿ ಆಕೆಗೆ ಎಂಟು ಬಾರಿ ಚಾಕುವಿನಿಂದ ಇರಿದಿದ್ದ. ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಆರೋಪಿ ಕುಟ್ಟಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಮನೆಗೆ ಬರುತ್ತಿದ್ದ ಪ್ರಿಯಕರ ಮತ್ತು ಸ್ನೇಹಿತರ ಬಗ್ಗೆ ಪ್ರಶ್ನಸಿದ್ದಕ್ಕೆ ಸಿಟ್ಟಾದ 17 ವರ್ಷದ ಮಗಳೇ ತನ್ನ ತಾಯಿಯನ್ನು ಕೊಂದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ. ಮೃತ ಮಹಿಳೆಯನ್ನು ಬೆಂಗಳೂರಿನ ಸುಬ್ರಮಣ್ಯಪುರ ಬಳಿಯ ಉತ್ತರಹಳ್ಳಿ ನಿವಾಸಿ ನೇತ್ರಾವತಿ (34) ಎಂದು ಗುರುತಿಸಲಾಗಿದೆ. ಮೃತ ನೇತ್ರಾವತಿ 'ವಿ ನೆಸ್ಟ್' ಎಂಬ ಸಾಲ ವಸೂಲಾತಿ ಕಂಪನಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು.
ತಾಯಿಯ ಎಚ್ಚರಿಕೆಯಿಂದ ಕೋಪಗೊಂಡ ಮಗಳು, ಪ್ರಿಯಕರ ಮತ್ತು ಸ್ನೇಹಿತರೊಂದಿಗೆ ಸೇರಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ನೇತ್ರಾವತಿಯ ಬಾಯಿಯನ್ನು ಬಲವಂತವಾಗಿ ಮುಚ್ಚಿ, ಟವೆಲ್‌ನಿಂದ ಕುತ್ತಿಗೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ, ಆತ್ಮಹತ್ಯೆ ಎಂದು ಬಿಂಬಿಸಲು, ನೇತ್ರಾವತಿಯ ಕುತ್ತಿಗೆಗೆ ಸೀರೆಯನ್ನು ಬಿಗಿದು ಫ್ಯಾನ್‌ಗೆ ನೇಣು ಹಾಕಿ, ಮಗಳು ಸೇರಿದಂತೆ ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.