Morne Morkel: ಭಾರತ ತಂಡ ಸೇರಿಕೊಂಡ ಬೌಲಿಂಗ್ ಕೋಚ್ ಮಾರ್ಕೆಲ್
ಮಾರ್ಚ್ 2ರಂದು 'ಎ' ಗುಂಪಿನ ಈ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಆಡಲಿದೆ. ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿವೆ. ಇದೀಗ ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಕಾದಾಟ ನಡೆಸಲಿದೆ.


ದುಬೈ: ತಂದೆಯ ನಿಧನದಿಂದಾಗಿ ಕೆಲದಿನಗಳ ಹಿಂದೆ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿದ್ದ ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತೆ ತಂಡ ಸೇರಿದ್ದಾರೆ. ಬುಧವಾರ ಸಂಜೆ ತಂಡದ ನೆಟ್ ಪ್ರಾಕ್ಟೀಸ್ ವೇಳೆ ಕಾಣಿಸಿಕೊಂಡರು. ಹೆಡ್ ಕೋಚ್ ಗೌತಮ್ ಗಂಭೀರ್ ಜೊತೆ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದು ಕಂಡುಬಂತು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತನ್ನ ಮೊದಲ ಪಂದ್ಯ ಆಡುವ ಮೊದಲು, ಫೆ. 20ರಂದು ಮಾರ್ಕೆಲ್ ಅವರು ಭಾರತ ತಂಡದ ಶಿಬಿರ ತೊರೆದು ತವರಿಗೆ ಮರಳಿದ್ದರು.
ಬುಧವಾರ ಉಪನಾಯಕ ಶುಭಮನ್ ಗಿಲ್ ಅವರು ಪ್ರಾಕ್ಟೀಸ್ ವೇಳೆ ಕಾಣಿಸಿಕೊಳ್ಳಲಿಲ್ಲ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ರಿಷಭ್ ಪಂತ್ ಅವರು ಅಭ್ಯಾಸದಲ್ಲಿ ನಿರತರಾಗಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಾಲು ನೋವಿನಿಂದ ಬಳಲಿದ್ದ ಮೊಹಮ್ಮದ್ ಶಮಿ ಬುಧವಾರ ಲವಲವಿಕೆಯಿಂದ ನೆಟ್ಸ್‌ನಲ್ಲಿ ತಮ್ಮ ಬೌಲಿಂಗ್ ಮಾಡಿದರು. ಇವರೊಂದಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಕೂಡ ಬಹಳ ಹೊತ್ತು ಬೌಲಿಂಗ್ ಅಭ್ಯಾಸ ಮಾಡಿದರು.
ಇದನ್ನೂ ಓದಿ ಹೆಬ್ಬೆರಳಿನ ಗಾಯ; ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಇಂಗ್ಲೆಂಡ್ ವೇಗಿ
ಮಾರ್ಚ್ 2ರಂದು 'ಎ' ಗುಂಪಿನ ಈ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಎರಡೂ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿವೆ. ಇದೀಗ ಅಂಕಪಟ್ಟಿಯ ಅಗ್ರಸ್ಥಾನಕ್ಕೆ ಕಾದಾಟ ನಡೆಸಲಿದೆ.
ಮತ್ತೆ ಬ್ಯಾಟಿಂಗ್ ಫಾರ್ಮ್‌ಗೆ ಮರಳಿರುವ ವಿರಾಟ್ ಕೊಹ್ಲಿ ಅವರು ಸ್ಪಿನ್ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಆಡಿದರು. ತಂಡದಲ್ಲಿರುವ ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜ ಅವರ ಬೌಲಿಂಗ್ ಎದುರು ಕೊಹ್ಲಿ ಅಭ್ಯಾಸ ಮಾಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಸ್ಪಿನ್ನರ್‌ಗಳೊಂದಿಗೆ ಆಡಿದರು.